'ಡೆವಿಲ್' ಫಸ್ಟ್ ಸಾಂಗ್ ರಿಲೀಸ್ ಡೇಟ್ ಘೋಷಣೆ; ಅದೇ ದಿನ ಕಾದಿದೆ ಸರ್‌ಪ್ರೈಸ್
ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಶೀಘ್ರದಲ್ಲೇ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ. ಅಕ್ಟೋಬರ್ ಬದಲು ಡಿಸೆಂಬರ್‌ನಲ್ಲಿ ಸಿನಿಮಾ ಬಿಡುಗಡೆ ಆಗಬಹುದು ಎನ್ನುವ ಗುಸುಗುಸು ಶುರುವಾಗಿದೆ. 'ಇದ್ರೇ ನೆಮ್ದಿಯಾಗ್ ಇರ್ಬೇಕ್' ಸಾಂಗ್ ರಿಲೀಸ್‌ಗೆ ಹೊಸ ಮುಹೂರ್ತ ಫಿಕ್ಸ್ ಆಗಿದೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್ 15ರಂದು ಈ ಸಾಂಗ್ ಹೊರಬರಬೇಕಿತ್ತು. ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಸಿಕ್ಕಿತ್ತು. ನಟ ದರ್ಶನ್ ಕೂಡ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಆರಂಭಿಸಿದ್ದರು. ಅಷ್ಟರಲ್ಲೇ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಮತ್ತೆ ಜೈಲು ಸೇರುವಂತಾಯಿತು. ಹಾಗಾಗಿ ಸಾಂಗ್ ರಿಲೀಸ್ ಮುಂದೂಡಿದ್ದರು.

ಆಗಸ್ಟ್ 24ರಂದು ಅಂದರೆ ಇದೇ ಭಾನುವಾರ ಬೆಳಗ್ಗೆ 10 ಗಂಟೆ 5 ನಿಮಿಷಕ್ಕೆ 'ಡೆವಿಲ್' ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಲಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ. ನಟ ದರ್ಶನ್ ತಾವು ಜೈಲಿನಲ್ಲಿ ಇದ್ದರೂ ಸಿನಿಮಾ ಮಾಡಿರುವ ತಂಡಕ್ಕೆ ಯಾವುದೇ ಸಮಸ್ಯೆ ಆಗಬಾರದು. ಸಿನಿಮಾ ಕೆಲಸಗಳು ಮುಂದುವರೆಯಲಿ ಎಂದು ಹೇಳಿದ್ದರು. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ವಿಜಯಲಕ್ಷ್ಮಿ ದರ್ಶನ್ ಹಂಚಿಕೊಂಡಿದ್ದರು.
ದರ್ಶನ್ ಮಾತನಾಡಿದ್ದಾರೆ ಎನ್ನಲಾಗಿದ್ದ ಆಡಿಯೋವೊಂದು ಹಿಂದೆ ವೈರಲ್ ಆಗಿತ್ತು. ಅದರಲ್ಲಿ ದರ್ಶನ್ 'ಇದ್ರೇ ನೆಮ್ದಿಯಾಗ್ ಇರ್ಬೇಕ್' ಎಂದು ಹೇಳಿದ್ದರು. ಅದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಅದೇ ಸಾಲು ಬಳಸಿಕೊಂಡು ಪ್ರಕಾಶ್ ತಮ್ಮ ಚಿತ್ರದಲ್ಲಿ ಹಾಡು ಸಿದ್ಧಪಡಿಸಿದ್ದಾರೆ. ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ದಾರೆ. ಯಾರು ಹಾಡಿದ್ದಾರೆ? ಯಾರು ಸಾಹಿತ್ಯ ಬರೆದಿದ್ದಾರೆ ಎನ್ನುವುದು ಇನ್ನು ಸಸ್ಪೆನ್ಸ್ ಆಗಿಯೇ ಉಳಿದಿದೆ.
ಫಸ್ಟ್ ಸಾಂಗ್ ಮೂಲಕ ಸಿನಿಮಾ ಪ್ರಚಾರ ಶುರುವಾಗುತ್ತಿದೆ. ಈಗಾಗಲೇ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ದರ್ಶನ್ ಡಬ್ಬಿಂಗ್ ಕೂಡ ಕಂಪ್ಲೀಟ್ ಮಾಡಿದ್ದಾರೆ. ರಚನಾ ರೈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಬೆಂಗಳೂರು, ಮೈಸೂರು ಹಾಗೂ ರಾಜಸ್ಥಾನದಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಒಂದು ಸಾಂಗ್ ಅನ್ನು ಮಾತ್ರ ಥಾಯ್ಲೆಂಡ್‌ನಲ್ಲಿ ಸೆರೆಹಿಡಿಯಲಾಗಿತ್ತು.
'ತಾರಕ್' ಬಳಿಕ ದರ್ಶನ್ ಹಾಗೂ ಪ್ರಕಾಶ್ ಮತ್ತೆ ಒಟ್ಟಾಗಿ ಕೆಲಸ ಮಾಡಿರುವ ಸಿನಿಮಾ ಇದು. ಹಾಗಾಗಿ ನಿರೀಕ್ಷೆ ಹೆಚ್ಚಿದೆ. ಒಂದೊಳ್ಳೆ ತಂಡ ಕಟ್ಟಿಕೊಂಡು ಸಿನಿಮಾ ತೆರೆಗೆ ತರುತ್ತಿದ್ದಾರೆ. ಕಳೆದ ವರ್ಷವೇ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿ ಚಿತ್ರೀಕರಣ ತಡವಾಗಿತ್ತು. ಕಳೆದ ವರ್ಷ ಅಕ್ಟೋಬರ್ 30ರಂದು ಜಾಮೀನು ಪಡೆದು ಬಿಡುಗಡೆ ಆಗಿದ್ದರು. ಕೆಲ ತಿಂಗಳು ವಿಶ್ರಾಂತಿ ಪಡೆದು ಬಳಿಕ 'ಡೆವಿಲ್' ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು.
ದರ್ಶನ್ ಜೈಲಿನಲ್ಲಿ ಇರುವಾಗಲೇ 'ಡೆವಿಲ್' ಸಿನಿಮಾ ಬಿಡುಗಡೆ ಆಗುತ್ತಾ ಕಾದು ನೋಡಬೇಕಿದೆ. ಸುಪ್ರೀಂ ಕೋರ್ಟ್‌ನಲ್ಲೇ ಜಾಮೀನು ರದ್ದಾಗಿದೆ. ಹಾಗಾಗಿ ಅಷ್ಟು ಸುಲಭವಾಗಿ ಮತ್ತೆ ಜಾಮೀನು ಸಿಗಲ್ಲ ಎನ್ನಲಾಗ್ತಿದೆ. ಇನ್ನು ಸಿನಿಮಾ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆ ಆಗಿಲ್ಲ. ಅಕ್ಟೋಬರ್ ಕೊನೆ ವಾರದಲ್ಲಿ 'ಡೆವಿಲ್' ದರ್ಶನ ಆಗಬಹುದು ಎನ್ನಲಾಗ್ತಿತ್ತು. ಆದರೆ ಕೊಂಚ ತಡವಾಗಿ ಡಿಸೆಂಬರ್‌ನಲ್ಲಿ ಸಿನಿಮಾ ಬಿಡುಗಡೆಗೆ ಚಿತ್ರತಂಡ ಮನಸ್ಸು ಮಾಡಿದೆ ಎನ್ನುವ ಊಹಾಪೋಹ ಶುರುವಾಗಿದೆ. ಫಸ್ಟ್ ಸಾಂಗ್ ಜೊತೆ ರಿಲೀಸ್ ಡೇಟ್ ಘೋಷಣೆ ಆದರೂ ಅಚ್ಚರಿಪಡಬೇಕಿಲ್ಲ.


Click it and Unblock the Notifications











