ದರ್ಶನ್ 'ಡೆವಿಲ್' ಸಿನಿಮಾ ಪರ ನಿಂತ ತಾರೆಯರು ಯಾರ್ಯಾರು? ತಡವಾಗಿ ನೆನಪಾಗಿದ್ದು ಯಾರಿಗೆ?
ಪ್ರಕಾಶ್ ವೀರ್ ನಿರ್ಮಿಸಿ ನಿರ್ದೇಶಿಸಿರುವ 'ಡೆವಿಲ್' ಸಿನಿಮಾ ಬಿಡುಗಡೆಯಾಗಿ ಸದ್ದು ಮಾಡ್ತಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. 13 ವರ್ಷಗಳ ಹಿಂದೆ 'ಸಾರಥಿ' ಸಿನಿಮಾ ರಿಲೀಸ್ ಸಮಯದಲ್ಲಿ ಎದುರಾಗಿದ್ದ ಪರಿಸ್ಥಿತಿ ಮತ್ತೆ ನಿರ್ಮಾಣವಾಗಿದೆ. ದರ್ಶನ್ ಅನುಪಸ್ಥಿತಿಯಲ್ಲಿ 'ಡೆವಿಲ್' ಸಿನಿಮಾ ತೆರೆಗೆ ಬಂದಿದೆ.
ಅಭಿಮಾನಿಗಳು ಮೊದಲಿನಿಂದ ದರ್ಶನ್ ಪರ ನಿಂತಿದ್ದಾರೆ. ರೇಣುಕಾಸ್ವಾಮಿ ಪ್ರಕರಣದ ಬಳಿಕ ಕೂಡ ಅಭಿಮಾನ ಕಮ್ಮಿ ಆಗಿಲ್ಲ. ಬಹಳ ದೊಡ್ಡಮಟ್ಟದಲ್ಲಿ ಸಂಭ್ರಮಾಚರಣೆ ಮಾಡಿ 'ಡೆವಿಲ್' ಸಿನಿಮಾ ಸ್ವಾಗತಿಸಿದ್ದಾರೆ. ಬೆಳ್ಳಂ ಬೆಳಗ್ಗೆ 6 ಗಂಟೆಗೆ ಕೆಲವೆಡೆ ಸಿನಿಮಾ ಪ್ರದರ್ಶನ ಆರಂಭವಾಗಿದೆ. ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್ ಕೂಡ ಮೊದಲ ದಿನ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ್ದಾರೆ.

ರೇಣುಕಾಸ್ವಾಮಿ ಪ್ರಕರಣದ ವಿಚಾರದಲ್ಲಿ ಕೆಲ ಸೆಲೆಬ್ರೆಟಿಗಳು ಆಪ್ತರು ದರ್ಶನ್ ಪರ ನಿಂತರು. ಮತ್ತೆ ಕೆಲವರು ತಟಸ್ಥರಾಗಿಬಿಟ್ಟರು. ಸದ್ಯ 'ಡೆವಿಲ್'ದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿ ಕೆಲ ತಾರೆಯರು ಬೆಂಬಲಿಸಿದ್ದಾರೆ. ರಕ್ಷಿತಾ ಪ್ರೇಮ್, ಸುಮಲತಾ ಅಂಬರೀಶ್, ಪುತ್ರ ಅಭಿಷೇಕ್ ಅಂಬರೀಶ್, ರಚಿತಾ ರಾಮ್ ಸೇರಿ ಹಲವು 'ಡೆವಿಲ್' ಚಿತ್ರಕ್ಕೆ ಶುಭ ಹಾರೈಸಿದ್ದಾರೆ.
ಒಂದ್ಕಾಲದಲ್ಲಿ ಸುಮಲತಾ, ದರ್ಶನ್ ತಾಯಿ ಮಗನಂತೆ ಇದ್ದವರು. ಕೆಲ ದಿನಗಳಿಂದ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಊಹಾಪೋಹ ಶುರುವಾಗಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿ ಸುಮಲತಾ ಅವರನ್ನು ದರ್ಶನ್ ಅನ್‌ಫಾಲೋ ಮಾಡಿದ್ದೇ ಇದ್ದಕ್ಕೆ ನಿದರ್ಶನ. ಆದರೆ ಇತ್ತೀಚೆಗೆ 'ಡೆವಿಲ್' ಚಿತ್ರಕ್ಕೆ ಶುಭವಾಗಲಿ ಎಂದು ಸುಮಲತಾ ಅಂಬರೀಶ್ ಹೇಳಿದ್ದರು.
ಸದ್ಯ 'ಡೆವಿಲ್' ಸಿನಿಮಾ ಬಿಡುಗಡೆ ಬೆನ್ನಲ್ಲೇ "ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ 'ಡೆವಿಲ್' ತಂಡಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು.. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಮತ್ತು ಅಭಿಮಾನಿಗಳ ಹೃದಯಗಳಲ್ಲಿ ಗರ್ಜಿಸಲಿ" ಎಂದು ಮಾಜಿ ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಶ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಭಿಷೇಕ್ ಅಂಬರೀಶ್ ಕೂಡ ಒಂದು ದಿನ ಮುನ್ನ 'ಡೆವಿಲ್' ಚಿತ್ರಕ್ಕೆ ಶು ಕೋರಿದ್ದರು.
ನಿರ್ದೇಶಕ ತರುಣ್ ಸುಧೀರ್, ನಟಿ ರಕ್ಷಿತಾ ಪ್ರೇಮ್, ನಟಿ ಶ್ರುತಿ, ನಟಿ ಮೇಘನಾ ರಾಜ್ ಸೇರಿದಂತೆ ಹಲವರು 'ಡೆವಿಲ್' ಚಿತ್ರದ ಪೋಸ್ಟರ್ ಹಂಚಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶುಭ ಹಾರೈಸಿದ್ದಾರೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಕೂಡ 'ಡೆವಿಲ್' ಚಿತ್ರಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದರು. ಆದರೆ ಕೊಂಚ ತಡವಾಗಿ ಪ್ರತಿಕ್ರಿಯಿಸಿದ್ದಕ್ಕೆ ದರ್ಶನ್ ಅಭಿಮಾನಿಗಳು ಬೇಸರಗೊಂಡಿದ್ದರು.
ಕಳೆದ ಶುಕ್ರವಾರ(ಡಿಸೆಂಬರ್ 5) 'ಡೆವಿಲ್' ಚಿತ್ರದ ಟ್ರೈಲರ್ ರಿಲೀಸ್ ಆಗಿತ್ತು. ಆಗ ರಿಷಬ್ ಶೆಟ್ಟಿ ಮೌನವಾಗಿದ್ದರು. ಬಳಿಕ ಭಾನುವಾರ(ಡಿಸೆಂಬರ್ 7)ಸುದೀಪ್ ನಟನೆಯ 'ಮಾರ್ಕ್' ಚಿತ್ರದ ಟ್ರೈಲರ್ ಬಂದಿದ್ದು ಗೊತ್ತೇಯಿದೆ. 'ಡೆವಿಲ್' ಚಿತ್ರದ ಟ್ರೈಲರ್ ಬಗ್ಗೆ ಪ್ರತಿಕ್ರಿಯಿಸದ ರಿಷಬ್ 'ಮಾರ್ಕ್' ಟ್ರೈಲರ್ ಮೆಚ್ಚಿ ಪೋಸ್ಟ್ ಮಾಡಿದ್ದರು. ಇದು ಸಹಜವಾಗಿಯೇ ದರ್ಶನ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಕೊನೆಗೂ 'ಡೆವಿಲ್' ಚಿತ್ರಕ್ಕೆ ಶುಭ ಕೋರಿದ್ದಾರೆ. ರಿಷಬ್ ಪತ್ನಿ ಪ್ರಗತಿ ಕೂಡ ಚಿತ್ರದ ಪೋಸ್ಟರ್ ಹಂಚಿಕೊಂಡು ಬೆಂಬಲ ಸೂಚಿಸಿದ್ದಾರೆ.
'ಡೆವಿಲ್' ಚಿತ್ರಕ್ಕೆ ಅಭಿಮಾನಿಗಳಿಂದ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಅಡ್ವಾನ್ಸ್ ಬುಕ್ಕಿಂಗ್‌ನಿಂದ್ಲೇ ಸಿನಿಮಾ 7 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಹಾಗಾಗಿ ಮೊದಲ ದಿನ ಭಾರೀ ಓಪನಿಂಗ್ ನಿರೀಕ್ಷಿಸಲಾಗ್ತಿದೆ. ದರ್ಶನ್ ಪರ್ಫಾರ್ಮನ್ಸ್ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರ್ತಿದೆ. ಸಾಕಷ್ಟು ಟ್ವಿಸ್ಟ್‌ಗಳನ್ನು ಇಟ್ಟು ಪ್ರಕಾಶ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ.


Click it and Unblock the Notifications











