'ಡೆವಿಲ್' ಟ್ರೈಲರ್‌ಗೆ ಕೌಂಟ್‌ಡೌನ್; ಹಳೇ ಸಿನಿಮಾಗಳ ದಾಖಲೆ ಲೆಕ್ಕ ಹಾಕುತ್ತಾ ಕುಂತ ದರ್ಶನ್ ಫ್ಯಾನ್ಸ್
ಚಿತ್ರರಂಗದಲ್ಲಿ ದಾಖಲೆಗಳು ಇರುವುದೇ ಮುರಿಯೋದಕ್ಕೆ. ಯಾವುದೋ ಸಿನಿಮಾ ಅಥವಾ ನಟ, ನಟಿ ಬರೆದ ದಾಖಲೆಗಳನ್ನು ಮತ್ತೊಂದು ಸಿನಿಮಾ, ನಟ, ನಟಿ ಮುರಿಯುತ್ತಾರೆ. ಇತ್ತೀಚೆಗೆ ಅಭಿಮಾನಿಗಳು ದಾಖಲೆಗಳನ್ನು ಬರೆಯಲು ಟೊಂಕ ಕಟ್ಟಿ ನಿಂತಿದ್ದಾರೆ. 'ಡೆವಿಲ್' ಟ್ರೈಲರ್ ದೊಡ್ಡದಾಗಿ ಹಿಟ್ ಮಾಡಲು ದರ್ಶನ್ ಅಭಿಮಾನಿಗಳು ಸಿದ್ಧರಾಗುತ್ತಿದ್ದಾರೆ.
ಸದ್ಯ ದರ್ಶನ್ ಸಂಕಷ್ಟಕ್ಕೆ ನಿಲುಕಿದ್ದಾರೆ. ಇಂತಹ ಸಮಯದಲ್ಲಿ ಅನಿವಾರ್ಯವಾಗಿ 'ಡೆವಿಲ್' ಸಿನಿಮಾ ಬಿಡುಗಡೆ ಮಾಡಬೇಕಿದೆ. ಮೊದಲಿನಿಂದಲೂ ನೆಚ್ಚಿನ ನಟನನ್ನು ಬೆಂಬಲಿಸುತ್ತಿರುವ ಅಭಿಮಾನಿಗಳು ಈ ಬಾರಿ ಸಿನಿಮಾ ಗೆಲ್ಲಿಸಿ ಉಡುಗೊರೆ ನೀಡುವ ಲೆಕ್ಕಾಚಾರದಲ್ಲಿದ್ದಾರೆ. ದೊಡ್ಡಮಟ್ಟದಲ್ಲಿ ಪ್ರಮೋಷನ್, ಸೆಲೆಬ್ರೇಷನ್ ಮಾಡಿ 'ಡೆವಿಲ್' ಚಿತ್ರವನ್ನು ಸ್ವಾಗತಿಸಲು ಅಣಿಯಾಗಿದ್ದಾರೆ.

ಡಿಸೆಂಬರ್ 5ರಂದು(ಶುಕ್ರವಾರ) 'ಡೆವಿಲ್' ಸಿನಿಮಾ ಟ್ರೈಲರ್ ಬಿಡುಗಡೆ ಆಗಲಿದೆ. ಅಂದು ಬೆಳಗ್ಗೆ 10.05 ನಿಮಿಷಕ್ಕೆ 'ಡೆವಿಲ್' ದರ್ಶನ್ ಆರ್ಭಟದ ಝಲಕ್ ರಿವೀಲ್ ಆಗಲಿದೆ. ಅದನ್ನು ದೊಡ್ಡಮಟ್ಟದಲ್ಲಿ ಹಿಟ್ ಮಾಡಲು ಮುಂದಾಗಿದ್ದಾರೆ. ಈ ಹಿಂದೆ ಕನ್ನಡ ಸಿನಿಮಾ ಟ್ರೈಲರ್ ಬರೆದ ದಾಖಲೆಗಳನ್ನು ದರ್ಶನ್ ಅಭಿಮಾನಿಗಳು ಲೆಕ್ಕ ಹಾಕುತ್ತಿದ್ದಾರೆ. ಅದನ್ನೆಲ್ಲಾ ಮೀರಿಸಿ ಈ ಬಾರಿ ಹೊಸ ಮೈಲಿಗಲ್ಲು ಸಾಧಿಸಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆರಂಭಿಸಿದ್ದಾರೆ.
24 ಗಂಟೆಗಳಲ್ಲಿ ಅತಿ ಹೆಚ್ಚು ವೀವ್ಸ್ ಹಾಗೂ ಲೈಕ್ಸ್ ಗಿಟ್ಟಿಸಿದ ಕನ್ನಡ ಸಿನಿಮಾ ಟ್ರೈಲರ್ ಯಾವುದು? ಯಾರ ಹೆಸರಿನಲ್ಲಿ ಈ ಹಿಂದಿನ ದಾಖಲೆಗಳು ಎಂದು ಲೆಕ್ಕ ಹಾಕುತ್ತಿದ್ದಾರೆ. ಈ ಪಟ್ಟಿಯಲ್ಲಿ ಯಶ್ ನಟನೆಯ 'KGF- 2' ಚಿತ್ರದ ಟ್ರೈಲರ್ ಮೊದಲ ಸ್ಥಾನದಲ್ಲಿದೆ. 3 ವರ್ಷಗಳ ಹಿಂದೆ ಬಂದಿದ್ದ ಟ್ರೈಲರ್ ಮೊದಲ 24 ಗಂಟೆಗಳಲ್ಲಿ 1.8 ಕೋಟಿ ವೀವ್ಸ್ ಹಾಗೂ 7 ಲಕ್ಷದ 78 ಸಾವಿರ ಲೈಕ್ಸ್ ಗಿಟ್ಟಿಸಿತ್ತು. ಇನ್ನು ಟಾಪ್ 5 ಲಿಸ್ಟ್‌ನಲ್ಲಿ ದರ್ಶನ್ ನಟನೆಯ 2 ಸಿನಿಮಾ ಟ್ರೈಲರ್‌ಗಳಿವೆ.

24 ಗಂಟೆಗಳಲ್ಲಿ ಅತಿಹೆಚ್ಚು ವೀವ್ಸ್, ಲೈಕ್ಸ್ ಗಿಟ್ಟಿಸಿದ ಕನ್ನಡ ಸಿನಿಮಾ ಟ್ರೈಲರ್‌ಗಳು
1. KGF- 2 1.8 ಕೋಟಿ ವೀವ್ಸ್ 7 ಲಕ್ಷದ 78 ಸಾವಿರ ಲೈಕ್ಸ್
2. ಕಾಟೇರ 1.3 ಕೋಟಿ ವೀವ್ಸ್ 3 ಲಕ್ಷದ 79 ಸಾವಿರ ಲೈಕ್ಸ್
3. ಯಜಮಾನ 1 ಕೋಟಿ ವೀವ್ಸ್ 2 ಲಕ್ಷಕ್ಕೂ ಅಧಿಕ ಲೈಕ್ಸ್
4. ಗಂಧದಗುಡಿ 80.1 ಲಕ್ಷ ವೀವ್ಸ್ 3 ಲಕ್ಷದ 94 ಸಾವಿರ ಲೈಕ್ಸ್
5. ಕ್ರಾಂತಿ 80 ಲಕ್ಷ ವೀವ್ಸ್ 3 ಲಕ್ಷದ 95 ಸಾವಿರ ಲೈಕ್ಸ್
6. ಕಾಂತಾರ-1 76 ಲಕ್ಷ ವೀವ್ಸ್ 4 ಲಕ್ಷದ 69 ಸಾವಿರ ಲೈಕ್ಸ್
ಹೀಗೆ ಕನ್ನಡ ಸಿನಿಮಾ ಟ್ರೈಲರ್‌ಗಳು ಬರೆದ ದಾಖಲೆಗಳ ಪಟ್ಟಿ ಮಾಡಿ ಅದನ್ನೆಲ್ಲಾ ಮೀರಿಸಿ 'ಡೆವಿಲ್' ಟ್ರೈಲರ್ ದಾಖಲೆ ಬರೆಯಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಈಗಾಗಲೇ ಅದ್ಧೂರಿಯಾಗಿ ಚಿತ್ರವನ್ನು ಸ್ವಾಗತಿಸಲು ಸಿದ್ದತೆ ನಡೆಸಿದ್ದಾರೆ. ನರ್ತಕಿ ಸೇರಿ ರಾಜ್ಯಾದ್ಯಂತ ಹಲವು ಕಡೆಗಳಲ್ಲಿ ಏಕಕಾಲಕ್ಕೆ ಸಿನಿಮಾ ಬಿಡುಗಡೆ ಆಗುತ್ತಿದೆ. ಬೆಳ್ಳಂ ಬೆಳಗ್ಗೆ 6 ಗಂಟೆಗೆ ಫ್ಯಾನ್ಸ್ ಶೋ ಆರಂಭವಾಗಲಿದೆ.
ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ 'ಡೆವಿಲ್' ಚಿತ್ರತಂಡದ ಬೆನ್ನಿಗೆ ನಿಂತಿದೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದೆ ಚಿತ್ರತಂಡ. ಡಿಸೆಂಬರ್ 6ರಂದು ಸಂಜೆ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಲಿದೆ. ದರ್ಶನ್ ಜೊತೆ ರಚನಾ ರೈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಸುಧಾಕರ್ ರಾಜ್ ಛಾಯಾಗ್ರಹಣ, ಕಾಂತರಾಜ್ ಸಂಭಾಷಣೆ ಚಿತ್ರಕ್ಕಿದೆ. ಡಿಸೆಂಭರ್ 11ರಂದು ಸಿನಿಮಾ ಬಿಡುಗಡೆ ಆಗಲಿದೆ.


Click it and Unblock the Notifications











