'ಡೆವಿಲ್' ಕಥೆಯೇನು? ದರ್ಶನ್ ಕೈಯಲ್ಲಿ ಕೆಂಪು, ಹಸಿರು ಮಾತ್ರೆ ಯಾಕೆ? ಕುರ್ಚಿಗಾಗಿ ಹೇಗಿರುತ್ತೆ ಚದುರಂಗದಾಟ?
ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಸದ್ಯ ಟ್ರೈಲರ್ ಹಿಟ್ ಆಗಿ ಸಿನಿಮಾ ಬಗ್ಗೆ ಬಹಳ ಕುತೂಹಲ ಮೂಡಿಸಿದೆ. ಕಥೆಯ ಸುಳಿವು ಬಿಟ್ಟು ಕೊಡದೇ ಟ್ರೈಲರ್ ಕಟ್ ಮಾಡಿ ಚಿತ್ರತಂಡ ಗೆದ್ದಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಮೊದಲ ದಿನ ಭಾರೀ ಓಪನಿಂಗ್ ನಿರೀಕ್ಷಿಸಲಾಗುತ್ತಿದೆ.
ತಾರಕ್ ಬಳಿಕ ದರ್ಶನ್ ಹಾಗೂ ಪ್ರಕಾಶ್ ಕಾಂಬಿನೇಷನ್‌ನಲ್ಲಿ ಬರ್ತಿರೋ ಸಿನಿಮಾ ಇದು. ಮೇಕಿಂಗ್ ಹಂತದಲ್ಲೇ ಭಾರೀ ಸದ್ದು ಮಾಡಿತ್ತು. ಅಂತೂ ಇಂತೂ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ. ಟ್ರೈಲರ್‌ನಲ್ಲಿ ಭಿನ್ನ ವಿಭಿನ್ನ ಶೇಡ್‌ಗಳಲ್ಲಿ ದರ್ಶನ್ ನಟಿಸಿರುವುದು ಗೊತ್ತಾಗುತ್ತಿದೆ. ಡೆವಿಲ್ ಹಾಗೂ ಧನುಷ್ ಆಗಿ ಚದುರಂಗದ ಆಟ ಆಡಿದ್ದಾರೆ ದರ್ಶನ್. ಸಿನಿಮಾ ಕಥೆ ಏನು? ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಗುರುವಾರ ತೆರೆಮೇಲೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

ಟ್ರೈಲರ್ ಮೊದಲ ನೋಟದಲ್ಲಿ 'ಡೆವಿಲ್' ಚಿತ್ರದ ಕಥೆ ಬಗ್ಗೆ ಯಾವುದೇ ಅಂದಾಜು ಸಿಗಲ್ಲ. ಆದರೆ ಪದೇ ಪದೆ ನೋಡಿದ್ರೆ, ಸೂಕ್ಷ್ಮವಾಗಿ ಗಮನಿಸಿದರೆ ಸಾಕಷ್ಟು ಸಂಗತಿಗಳಿವೆ. ಇದೇ ವಿಚಾರವನ್ನು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಹೇಳುತ್ತಿದ್ದಾರೆ. ಬುಕ್‌ಮೈ ಶೋನಲ್ಲಿ ಕೂಡ ಕಥೆಯನ್ನು ಹೆಚ್ಚು ಬಿಟ್ಟುಕೊಟ್ಟಿಲ್ಲ. ಅಧಿಕಾರ, ಪ್ರತಿಕಾರ ಹಾಗೂ ನಿಜವಾದ ಪ್ರೀತಿಯ ಕಥೆ ಎಂದು ಮಾತ್ರ ಮಾಹಿತಿ ನೀಡಲಾಗಿದೆ.
ಇದೊಂದು ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ ಎನ್ನುವುದು ಟ್ರೈಲರ್ ನೋಡಿದರೆ ಅರ್ಥವಾಗುತ್ತದೆ. ಕರುನಾಡ ಪ್ರಜಾಪಕ್ಷದ ನಾಯಕನಾಗಿ ಮುಂದೆ ಮುಖ್ಯಮಂತ್ರಿಯಾಗಿ ಮಹೇಶ್ ಮಂಜ್ರೇಕರ್ ಬೆಳೆಯುತ್ತಾರೆ. "ನಾನ್ ಕೂತಿದ್ ಚೇರ್ ಅಲ್ಲಿ ಬೇರೆ ಯಾರು ಕೂತ್ಕೋಬಾರ್ದು" ಎನ್ನುವ ಡೈಲಾಗ್ ಇದೆ. ಆದರೆ ಕೆಲ ಸಮಯದ ನಂತರ ಅವರ ಆಪ್ತನಾಗಿದ್ದ ಅಚ್ಯುತ್ ಕುಮಾರ್ ಆ ಚೇರ್‌ನಲ್ಲಿ ಕೂರುವ ಸನ್ನಿವೇಶ ಇದೆ. ಅಂದರೆ ಅಚ್ಯುತ್ ಕುಮಾರ್ ಪಾತ್ರ ಅಧಿಕಾರಕ್ಕಾಗಿ ಬೆನ್ನಿಗೆ ಚೂರಿ ಹಾಕುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ಚಿತ್ರದಲ್ಲಿ ಮಹೇಶ್ ಮಂಜ್ರೇಕರ್ ಮಗನ ಪಾತ್ರದಲ್ಲಿ ದರ್ಶನ್ ನಟಿಸಿದ್ದಾರೆ ಎನ್ನಲಾಗ್ತಿದೆ. ಸನ್ಮಾನ್ಯ ಮುಖ್ಯಮಂತ್ರಿ ಧನುಷ್ ರಾಜಶೇಖರ್ ಎಂದು ಬರೆದ ಬ್ಯಾನರ್ ಇರುವ ಫೋಟೊ ವೈರಲ್ ಆಗಿದಿದ್ದು ಗೊತ್ತೇಯಿದೆ. ಹಾಗಾಗಿ ಮಹೇಶ್ ಮಂಜ್ರೇಕರ್ ಬಳಿಕ ದರ್ಶನ್ ಸಿಎಂ ಪಟ್ಟ ಏರುತ್ತಾರಾ? ಅದಕ್ಕೆ ಅಚ್ಯುತ್ ಕುಮಾರ್ ಅಡ್ಡಗಾಲು ಆಗುತ್ತಾರಾ? ಮುಂದೇನು ಎನ್ನುವ ಕಥೆ ಚಿತ್ರದಲ್ಲಿ ಇರಬಹುದು ಎಂದು ಊಹಿಸಲಾಗ್ತಿದೆ.
ಇನ್ನು ಚಿತ್ರದಲ್ಲಿ ಪದೇ ಪದೇ ದರ್ಶನ್ ಕೆಂಪು ಬಣ್ಣದ ಮಾತ್ರೆ ಹಾಗೂ ಹಸಿರು ಬಣ್ಣದ ಮಾತ್ರೆ ತಿನ್ನುವ ಸನ್ನಿವೇಶಗಳಿವೆ. ಚಿತ್ರದಲ್ಲಿ ಧನುಷ್ ಡ್ರಗ್ ಅಡಿಕ್ಟ್ ಆಗಿರ್ತಾನಾ? ಅದಕ್ಕೆ ಕಾರಣ ಏನು? ಕೆಂಪು ಮಾತ್ರೆ ಅಂದ್ರೆ ಡೆವಿಲ್, ಹಸಿರು ಮಾತ್ರೆ ಅಂದ್ರೆ ಧನುಷ್ ಇರಬಹುದಾ? ಎಂದು ಕೆಲವರು ಭಾವಿಸುತ್ತಿದ್ದಾರೆ. 'ಅವ್ನ ಕ್ಯಾರೆಕ್ಟರ್ ಅಸಾಸಿನೇಶನ್ ಮಾಡ್ಬೇಕು' ಎಂದು ಪಾತ್ರವೊಂದು ಹೇಳುವ ಮಾತಿದೆ. ಅಂದರೆ ನಾಯಕನನ್ನು ವಾಮಮಾರ್ಗದಲ್ಲಿ ಅಣಿಯುವ ಕೆಲಸ ವಿರೋಧಿಗಳು ಮಾಡ್ತಾರಾ? ಕಾದು ನೋಡಬೇಕಿದೆ.
ನಾಯಕಿ ಹೇಳುವ "ಕ್ಷಣಕ್ಕೊಂದು ಬಣ್ಣ ಗಳಿಗೆ ಒಂದು ವೇಷ.. ಅಲ್ಲಾ ನಾನ್ ನಿನ್ನ ನಿಜ ರೂಪ ನೋಡೆ ಇಲ್ವಲೋ" ಎನ್ನುವ ಡೈಲಾಗ್ ಕೂಡ ದರ್ಶನ್ ಪಾತ್ರದ ಬಗ್ಗೆ ಕುತೂಹಲ ಮೂಡಿಸುತ್ತದೆ. ನಾಯಕಿಯನ್ನು 'ಡೆವಿಲ್' ಅಪಹರಣ ಮಾಡುವಂತಹ ಸನ್ನಿವೇಶ ಕೂಡ ಚಿತ್ರದಲ್ಲಿರುವಂತೆ ಕಾಣ್ತಿದೆ. ಇನ್ನು ಕೋರ್ಟ್‌ನಲ್ಲಿ ಪ್ರಕರಣವೊಂದರ ವಿಚಾರಣೆ ನಡೆಯುವ ಸನ್ನಿವೇಶ ಇದೆ. ಈ ವೇಳೆ ಮಹೇಶ್ ಮಂಜ್ರೇಕರ್ ಹಾಗೂ ಅಚ್ಯುತ್ ಎದುರಾಳಿಗಳಾಗಿರುವಂತೆ ಕಾಣ್ತಿದೆ. ಇದೇ ವೇಳೆ "ಆಸೆಪಟ್ಟರೆ ಕೇಳ್ಬೇಕು, ಕೊಡ್ತಿದ್ರೆ ಕಿತ್ಕೊಬೇಕು" ಎನ್ನುವ ಡೈಲಾಗ್ ಕೂಡ ಬರುತ್ತದೆ.
ಇನ್ನು ಪೆಟ್ರೋಲ್ ಬಂಕ್‌ನಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದ್ಯಾರು? ಒಂದು ಫ್ರೇಮ್‌ನಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ನಟನೆಯ 'ನಾಗರಹಾವು' ಸಿನಿಮಾ ಪೋಸ್ಟರ್ ಸಹ ಬರುತ್ತದೆ. ಅದೆಲ್ಲವನ್ನು ಅಭಿಮಾನಿಗಳು ಗುರ್ತಿಸಿ ಚಿತ್ರದ ಕಥೆ ಏನಿರಬಹುದು ಎಂದು ಊಹಿಸುತ್ತಿದ್ದಾರೆ. ದರ್ಶನ್ ಕನ್ವರ್‌ಲಾಲ್ ಗೆಟ್ ಯಾಕೆ? ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡ್ತಿದೆ. ಆದರೆ ಖಚಿತ ಉತ್ತರ ಮಾತ್ರ ಯಾರಿಗೂ ಸಿಗುತ್ತಿಲ್ಲ. ಹಾಗಾಗಿ ಡಿಸೆಂಬರ್ 11ರವರೆಗೆ ಎಲ್ಲರೂ ಕಾಯಲೇಬೇಕು.


Click it and Unblock the Notifications











