ನವೆಂಬರ್ ನಿಂದ ಚಿತ್ರೀಕರಣದಲ್ಲಿ ದರ್ಶನ್: ಯಾವ ಸಿನಿಮಾ ಮೊದಲು ಪ್ರಾರಂಭಿಸಲಿದ್ದಾರೆ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇನ್ನೂ ಚಿತ್ರೀಕರಣ ಪ್ರಾರಂಭ ಮಾಡಿಲ್ಲ. ಲಾಕ್ ಡೌನ್ ಬಳಿಕ ಬಹುತೇಕ ಸಿನಿಮಾಗಳು ಚಿತ್ರೀಕರಣದಲ್ಲಿ ನಿರತವಾಗಿವೆ. ಅಲ್ಲದೆ ಸಾಕಷ್ಟು ಸಿನಿಮಾಗಳ ಚಿತ್ರೀಕರಣ ಸಹ ಮುಗಿದಿದೆ. ಆದರೆ ಡಿ ಬಾಸ್ ಇನ್ನೂ ಅಖಾಡಕ್ಕೆ ಇಳಿದಿಲ್ಲ.
ಅಂದ್ಹಾಗೆ ದರ್ಶನ್ ಲಾಕ್ ಡೌನ್ ಗೂ ಮೊದಲು 'ರಾಜವೀರ ಮದಕರಿ ನಾಯಕ' ಸಿನಿಮಾದ ಚಿತ್ರೀಕರಣದಲ್ಲಿದ್ದರು. ಚಿತ್ರದ ಮೊದಲ ದೃಶ್ಯವನ್ನು ಕೇರಳದಲ್ಲಿ ಚಿತ್ರೀಕರಣ ಮಾಡಿದ್ದ ಸಿನಿಮಾತಂಡ, ಮುಂದಿನ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿತ್ತು. ಆದರೆ ಆಗಲೇ ಲಾಕ್ ಡೌನ್ ನಿಂದ ಶೂಟಿಂಗ್ ಸ್ಥಗಿತವಾಗಿತ್ತು.
ಲಾಕ್ ಡೌನ್ ಬಳಿಕ ಇದೀಗ ದರ್ಶನ್, ರಾಜವೀರ ಮದಕರಿ ನಾಯಕ ಮತ್ತು ಸಿಂಧೂರ ಲಕ್ಷ್ಮಣ ಇವುಗಳಲ್ಲಿ ಯಾವ ಸಿನಿಮಾ ಮೊದಲು ಪ್ರಾರಂಭಿಸಲಿದ್ದಾರೆ ಎನ್ನುವ ಚರ್ಚೆ ನಡೆಯುತ್ತಿದೆ. ಅಲ್ಲದೆ ಮೊದಲು ಸಿಂಧೂರ ಲಕ್ಷ್ಮಣ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ, ಮದಕರಿ ನಾಯಕ ಸಿನಿಮಾ ಮುಂದಕ್ಕೆ ಹೋಗಲಿದೆ ಎನ್ನುವ ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಿದೆ.

ಮೂಲಗಳ ಪ್ರಕಾರ ದರ್ಶನ್ ಮೊದಲು ರಾಜವೀರ ಮದಕರಿ ನಾಯಕ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದ್ಹಾಗೆ ನವೆಂಬರ್ 15ರಿಂದ ಅಥವಾ ನವೆಂಬರ್ ತಿಂಗಳ ಕೊನೆಯಲ್ಲಿ ರಾಜವೀರ ಮದಕರಿ ನಾಯಕ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ.
ಸಿಂಧೂರ ಲಕ್ಷ್ಮಣ ಲಾಕ್ ಡೌನ್ ನಲ್ಲಿ ಅಪ್ಪಿಕೊಂಡ ಸಿನಿಮಾವಿದು. ಈ ಸಿನಿಮಾಗೆ ಉಮಾಪತಿ ಬಂಡವಾಳ ಹೂಡುತ್ತಿದ್ದಾರೆ. ಅಂದ್ಹಾಗೆ ರಾಬರ್ಟ್ ಚಿತ್ರತಂಡವೇ ಸಿಂಧೂರ ಲಕ್ಷ್ಮಣ ಸಿನಿಮಾದಲ್ಲೂ ಕೆಲಸ ಮಾಡುತ್ತಿದೆ. ಸದ್ಯ ಈ ಎರಡು ಸಿನಿಮಾಗಳಲ್ಲಿ ಮೊದಲು ಯಾವ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.
ಸದ್ಯ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು. ಆದರೀಗ ಸಿನಿಮಾದ ಹೊಸ ರಿಲೀಸ್ ಡೇಟ್ ಕೇಳಿ ಬರುತ್ತಿದೆ. ಸಿನಿಮಾ ಈ ವರ್ಷದ ಕೊನೆಯಲ್ಲಿ ಅಂದರೆ ಕ್ರಿಸ್ಮಸ್ ಗೆ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಸಿನಿಮಾತಂಡ ಇನ್ನೂ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ.


Click it and Unblock the Notifications











