ದರ್ಶನ್ ಮಗ ವಿನೀಶ್ ಮೇಕಪ್ ಸೀಕ್ರೆಟ್ ಏನು? 'ಡೆವಿಲ್' ಚಿತ್ರದಲ್ಲಿ ಯಾವ ಪಾತ್ರ?
ಮಿಲನಾ ಪ್ರಕಾಶ್ ನಿರ್ದೇಶನದ 'ಡೆವಿಲ್' ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡುತ್ತಿದೆ. ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಎರಡು ಹಾಡುಗಳನ್ನು ಮಾತ್ರ ಸೆರೆ ಹಿಡಿಯಬೇಕಿದೆ. ಇತ್ತೀಚೆಗೆ ಮೇಕಿಂಗ್ ವೀಡಿಯೋ ಹೊರಬಂದು ಸಖತ್ ಸದ್ದು ಮಾಡ್ತಿದೆ. ಇನ್ನು ಚಿತ್ರದಲ್ಲಿ ದರ್ಶನ್ ಪುತ್ರ ವಿನೀಶ್ ಕೂಡ ನಟಿಸಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.
ವಿನೀಶ್ ಮೇಲೆ ದರ್ಶನ್ ಅಭಿಮಾನಿಗಳು ಅಭಿಮಾನ ತೋರುವುದು ಗೊತ್ತೇಯಿದೆ. ಹಾಗಾಗಿ ಮೇಕಿಂಗ್ ವೀಡಿಯೋದಲ್ಲಿ ಆತ ಮೇಕಪ್ ಮಾಡಿಕೊಳ್ಳುವುದನ್ನು ನೋಡಿ ಯಾವ ಪಾತ್ರ ಎಂದು ಊಹಿಸುತ್ತಿದ್ದಾರೆ. ರಾಜಸ್ಥಾನ ಹೋಟೆಲ್‌ವೊಂದರಲ್ಲಿ ಚಿತ್ರದ ಬಹುಮುಖ್ಯ ಸನ್ನಿವೇಶಗಳನ್ನು ಶೂಟ್ ಮಾಡಲಾಗಿತ್ತು. ಅದರ ಝಲಕ್ ಅನ್ನು ಮೇಕಿಂಗ್ ವೀಡಿಯೋದಲ್ಲಿ ನೋಡಿದ್ದೇವೆ. ಇನ್ನು ಚಿತ್ರೀಕರಣಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ಕೂಡ ಹೋಗಿದ್ದರು.

ಈ ಹಿಂದೆ 'ಐರಾವತ' ಹಾಗೂ 'ಯಜಮಾನ' ಚಿತ್ರದ ಸಣ್ಣ ಸಣ್ಣ ಝಲಕ್‌ನಲ್ಲಿ ತಂದೆ ಜೊತೆ ವಿನೀಶ್ ಮಿಂಚಿದ್ದ. 'ಯಜಮಾನ' ಸಿನಿಮಾ ಬಿಡುಗಡೆ ಹೊತ್ತಲ್ಲಿ ಅಭಿಮಾನಿಗಳು ಥಿಯೇಟರ್ ಮುಂದೆ ಆತನ ಕಟೌಟ್ ಹಾಕಿ ಸಂಭ್ರಮಿಸಿದ್ದರು. ದರ್ಶನ್ ಕೂಡ ಮುಂದೆ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುವುದಾಗಿ ಹೇಳಿದ್ದಾರೆ. ದರ್ಶನ್ ಅಕ್ಕನ ಮಗ ಚಂದು ಸಹ ಚಿತ್ರರಂಗಕ್ಕೆ ಬರುವ ಸುಳಿವು ಸಿಗುತ್ತಿದೆ. ದಿನಕರ್ ಕಥೆ ಸಿದ್ಧಪಡಿಸುತ್ತಿದ್ದಾರೆ.
ಅಂದಹಾಗೆ ವಿನೀಶ್ 'ಡೆವಿಲ್' ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಹೇಳಲಾಗ್ತಿದೆ. ಬಲ್ಲ ಮೂಲಗಳ ಪ್ರಕಾರ ದರ್ಶನ್ ಪುತ್ರ ಈ ಸಿನಿಮಾದಲ್ಲಿ ನಟಿಸಿಲ್ಲ, ಸುಮ್ಮನೆ ಸೆಟ್‌ನಲ್ಲಿ ಇದ್ದಾಗ ಮೇಕಪ್ ಮಾಡಿಸಿಕೊಂಡಿದ್ದಾನೆ. ಅದರ ಸಣ್ಣ ಝಲಕ್ ಮಾತ್ರ ಮೇಕಿಂಗ್ ವೀಡಿಯೋದಲ್ಲಿ ತೋರಿಸಿದ್ದಾರಂತೆ. ಸದ್ಯಕ್ಕೆ ವಿನೀಶ್ ಸಿನಿಮಾದಲ್ಲಿ ಬಣ್ಣ ಹಚ್ಚುವ ಸಾಧ್ಯತೆ ಇಲ್ಲ. ಮುಂದಿನ ದಿನಗಳಲ್ಲಿ ಯಾವುದಾದರೂ ಸಿನಿಮಾದಲ್ಲಿ ನಟಿಸಬಹುದು ಎನ್ನಲಾಗ್ತಿದೆ. ಈಗ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾನೆ.
'ಡೆವಿಲ್' ಚಿತ್ರದಲ್ಲಿ ದರ್ಶನ್ ಭಿನ್ನ ವಿಭಿನ್ನ ಶೇಡ್‌ಗಳಿರುವ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಟೀಸರ್‌ನಲ್ಲಿ ನೋಡಿರುವಂತೆ ನೆಗೆಟಿವ್ ಶೇಡ್ ಇರುವಂತಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಇನ್ನು ರಾಜ್ಯದ ಸಿಎಂ ಧನುಶ್ ರಾಜಶೇಖರ್ ಪಾತ್ರದಲ್ಲಿ ಕೂಡ ನಟಿಸಿದ್ದಾರೆ ಎನ್ನುವ ಊಹಾಪೋಹ ಇದೆ. ಈ ಹಿಂದೆ ಸೆಟ್‌ನಿಂದ ಲೀಕ್ ಆಗಿದ್ದ ಫೋಟೊವೊಂದು ಈ ಬಗ್ಗೆ ಸುಳಿವು ಕೊಟ್ಟಿತ್ತು. ಎಷ್ಟೇ ಮುನ್ನೆಚ್ಚರಿಕೆ ವಹಿಸಿ ಚಿತ್ರೀಕರಣ ನಡೆಸಿದರೂ ಆ ಫೋಟೊ ಲೀಕ್ ಆಗಿ ಚಿತ್ರತಂಡಕ್ಕೆ ಶಾಕ್ ಆಗಿತ್ತು.
ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ಅವಿನಾಶ್, ಶರ್ಮಿಳಾ ಮಾಂಡ್ರೆ ಹಾಗೂ ಚಂದನ್ ಗೌಡ ಬಣ್ಣ ಹಚ್ಚಿದ್ದಾರೆ. ರಚನಾ ರೈ ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ಮಿಂಚಿದ್ದಾರೆ. ಉದಯಪುರದ ರಾಫೆಲ್ಸ್ ಹೋಟೆಲ್‌ನಲ್ಲಿ ಚಿತ್ರ ಮುಖ್ಯ ಸನ್ನಿವೇಶಗಳನ್ನು ಸೆರೆ ಹಿಡಿಯಲಾಗಿತ್ತು. ಅದಕ್ಕೂ ಮುನ್ನ ಮೈಸೂರಿನಲ್ಲಿ ಸಣ್ಣ ಶೆಡ್ಯೂಲ್ ನಡೆದಿತ್ತು. ಕಳೆದ ವರ್ಷ ಬೆಂಗಳೂರಿನಲ್ಲಿ ಆಕ್ಷನ್ ಸನ್ನಿವೇಶ ಸೆರೆ ಹಿಡಿಯಲಾಗಿತ್ತು. ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಪಬ್ ಸೆಟ್ ಹಾಕಿ ಶೂಟಿಂಗ್ ನಡೆಸಲಾಗಿತ್ತು. ಅದೇ ಸನ್ನಿವೇಶ ಟೀಸರ್‌ನಲ್ಲಿ ತೋರಿಸಲಾಗಿತ್ತು.
ಸೆಪ್ಟೆಂಬರ್ ಕೊನೆ ವಾರದಲ್ಲಿ ದಸರಾ ಹಬ್ಬದ ಹಿನ್ನಲೆಯಲ್ಲಿ 'ಡೆವಿಲ್' ಸಿನಿಮಾ ಬಿಡುಗಡೆ ಪ್ಲ್ಯಾನ್ ನಡೀತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಅಜನೀಶ್ ಲೋಕನಾಥ್ ಸಂಗೀತ, ಸುಧಾಕರ್ ರಾಜ್ ಛಾಯಾಗ್ರಹಣ ಚಿತ್ರಕ್ಕಿದೆ. ಸ್ವತಃ ಮಿಲನಾ ಪ್ರಕಾಶ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಲು ಕಾಯುತ್ತಿದ್ದಾರೆ.


Click it and Unblock the Notifications











