ಇನ್ನುಮುಂದೆ ಇದೆಯಂತೆ ಊರ ಹಬ್ಬ; 'ಕ್ರಾಂತಿ' ವಿರುದ್ಧ ಶುರು ಬಾಯ್‌ಕಾಟ್ ಟ್ರೆಂಡ್!
ಕ್ರಾಂತಿ ಚಿತ್ರದ ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ ಚಿತ್ರತಂಡ ಒಂದೆಡೆ ಹಾಡುಗಳನ್ನು ಬಿಡುಗಡೆಗೊಳಿಸುತ್ತಾ ಚಿತ್ರದ ಮೇಲಿನ ಹೈಪ್ ಹೆಚ್ಚಿಸುವ ಕೆಲಸವನ್ನು ಮಾಡುತ್ತಿದ್ದರೆ, ಮತ್ತೊಂದೆಡೆ ಸ್ವತಃ ಚಾಲೆಂಜಿಂಗ್ ದರ್ಶನ್ ಅವರೇ ಸಂದರ್ಶನಗಳಲ್ಲಿ ಪಾಲ್ಗೊಂಡು ಚಿತ್ರದ ಪ್ರಚಾರ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಹೀಗೆ ಸಂದರ್ಶನಗಳಲ್ಲಿ ಭಾಗವಹಿಸುತ್ತಿರುವ ದರ್ಶನ್ ಅವರು ಕೆಲ ಸಂದರ್ಶನಗಳಲ್ಲಿ ನೀಡಿದ ಒಂದು ನಿರ್ದಿಷ್ಟ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ಎದುರಿಸುತ್ತಿದೆ.
ಹೌದು, ಚಿತ್ರರಂಗದಲ್ಲಿ ನಿರ್ಮಾಪಕರು ಸಿಗುವುದು ಕಷ್ಟ, ಅಂತಹ ಅವಕಾಶ ಸಿಕ್ಕಾಗ ಬಿಡಬಾರದು ಎಂಬುದನ್ನು ಹೇಳಲು ಅದೃಷ್ಟ ದೇವತೆ ಹೆಸರನ್ನು ಬಳಸಿದ ದರ್ಶನ್ "ಅದೃಷ್ಟ ದೇವತೆ ಬಾಗಿಲು ತಟ್ಟುವುದು ಅತಿ ಅಪರೂಪ, ಅಂತ ಸಮಯದಲ್ಲಿ ಬಾಗಿಲು ತೆಗೆದು, ಆಕೆಯನ್ನು ಹಿಡಿದು ರೂಮ್‌ಗೆ ಕರೆದುಕೊಂಡು ಬಟ್ಟೆ ಬಿಚ್ಚಿ ಕೂರಿಸಿಕೊಂಡುಬಿಡಬೇಕು. ಬಟ್ಟೆ ಕೊಟ್ರೆ ತಾನೇ ಅವಳು ಬೇರೆಯವರ ಮನೆಗೆ ಹೋಗ್ತಾಳೆ?" ಎಂದು ಹೇಳಿಕೆಯನ್ನು ನೀಡಿದ್ದಾರೆ.
ಎರಡು ಯುಟ್ಯೂಬ್ ಚಾನೆಲ್‌ಗಳಲ್ಲಿ ನಟ ದರ್ಶನ್ ಈ ರೀತಿಯ ಹೇಳಿಕೆಯನ್ನು ನೀಡಿದ್ದು ಸದ್ಯ ಇದು ವಿವಾದದ ರೂಪ ಪಡೆದುಕೊಂಡಿದೆ. ಹಲವಾರು ನೆಟ್ಟಿಗರು ಇದರ ವಿರುದ್ಧ ಕಿಡಿಕಾರಿದ್ದರೆ, ದರ್ಶನ್ ಅಭಿಮಾನಿಗಳು ಮಾತ್ರ ನಮ್ಮ ನಟ ಈ ಹೇಳಿಕೆ ನೀಡಿರುವುದು ನಿರ್ಮಾಪಕರ ಬಗ್ಗೆ ಮಾತನಾಡುವಾಗ ಹಾಗೂ ಅದೃಷ್ಟದ ಬಗ್ಗೆಯೇ ಹೊರತು ದೇವರಿಗೆ ಇಲ್ಲಿ ಅವಮಾನವಾಗಿಲ್ಲ ಎನ್ನುತ್ತಿದ್ದಾರೆ. ಆದರೆ ಹಿಂದೂ ಪರ ಹೋರಾಟಗಾರರು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಈ ಹೇಳಿಕೆಯನ್ನು ಖಂಡಿಸಿದ್ದು, ಕ್ರಾಂತಿ ಚಿತ್ರವನ್ನು ಬಾಯ್‌ಕಾಟ್ ಮಾಡೋಣ ಎಂದು ಟ್ರೆಂಡ್ ನಡೆಸುತ್ತಿದ್ದಾರೆ.

ದರ್ಶನ್ ಹೇಳಿಕೆಗೆ ನೆಟ್ಟಿಗ ಗರಂ
ಮಧುಗಿರಿ ಮೋದಿ ಎಂದು ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿಕೊಂಡಿರುವ ನೆಟ್ಟಿಗನೋರ್ವ ಕ್ರಾಂತಿ ಚಿತ್ರವನ್ನು ಬಾಯ್‌ಕಾಟ್ ಮಾಡಬೇಕು ಎಂದು ಸರಣಿ ಟ್ವೀಟ್ ಮಾಡಿದ್ದಾರೆ. ಇದರ ಕುರಿತು ವಿಶೇಷ ವಿಡಿಯೊವೊಂದನ್ನೂ ಸಹ ಹಂಚಿಕೊಂಡಿರುವ ಇವರು ಈ ವಿಡಿಯೊದಲ್ಲಿ ದರ್ಶನ್ ಬಗ್ಗೆ ಏಕವಚನದಲ್ಲಿ ಹಾಗೂ ಕೆಳಮಟ್ಟದ ಪದಗಳನ್ನು ಬಳಸಿ ಮಾತನಾಡಿದ್ದಾರೆ. ಅದೃಷ್ಟ ದೇವತೆ ಬಟ್ಟೆ ಬಿಚ್ಚಬೇಕು ಎನ್ನುವ ನಿಮ್ಮನ್ನು ಜನರೇ ಬೆತ್ತಲು ಮಾಡುತ್ತಾರೆ ಎಂದು ಮಧುಗಿರಿ ಮೋದಿ ಎಂಬಾತ ದರ್ಶನ್ ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ.

ವಿನಾಶ ಕಾಲೇ ವಿಪರೀತ ಬುದ್ಧಿ
'ವಿನಾಶ ಕಾಲೇ ವಿಪರೀತ ಬುದ್ಧಿ' ಎಂದು ಟ್ವೀಟ್ ಮಾಡಿರುವ ನೆಟ್ಟಿಗನೋರ್ವ ದರ್ಶನ್ ಹಿಂದೂ ದೇವರಾದ ಅದೃಷ್ಟ ಲಕ್ಷ್ಮಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ, ಅಂತಹ ನಟನ ಚಿತ್ರವನ್ನು ನೋಡಬಾರದು ಎಂದು ಬಾಯ್‌ಕಾಟ್ ಕ್ರಾಂತಿ ಹ್ಯಾಷ್‌ಟ್ಯಾಗ್ ಅಡಿಯಲ್ಲಿ ಬರೆದುಕೊಂಡಿದ್ದಾರೆ.

ಇನ್ನುಮುಂದೆ ಇದೆ ಊರಹಬ್ಬ
ಅವಿ ಮಲೆನಾಡು ಎಂಬ ನೆಟ್ಟಿಗ ದರ್ಶನ್ ನೀಡಿರುವ ಹೇಳಿಕೆಯ ವಿರುದ್ಧ ಟ್ವಿಟರ್‌ನಲ್ಲಿ ಕಿಡಿಕಾರಿದ್ದು ನಟ ದರ್ಶನ್ ಅವರ ಖಾತೆಯನ್ನು ಉಲ್ಲೇಖಿಸಿ "ಹಿಂದೂ ದೇವತೆಯ ಬಗ್ಗೆ ಹೇಳಿಕೆ ಕೊಡುವ ಮೊದ್ಲು ಯೋಚಿಸಬೇಕಿತ್ತು ಇನ್ನು ಮುಂದೆ ಇದೆ ಊರಹಬ್ಬ, ಹಿಂದೂಗಳ ಶಕ್ತಿ ಗೊತ್ತಾಗತ್ತೆ" ಎಂದು ಬರೆದುಕೊಂಡು ಬಾಯ್‌ಕಾಟ್ ಕ್ರಾಂತಿ ಹ್ಯಾಷ್‌ಟ್ಯಾಗ್ ಅಡಿಯಲ್ಲಿ ಟ್ವೀಟ್ ಮಾಡಿದ್ದಾರೆ. ಈ ಖಾತೆಗಳಲ್ಲಿ ಮಾತ್ರವಲ್ಲದೇ ಇನ್ನೂ ಹಲವಾರು ಹಿಂದೂ ಪರ ಪುಟಗಳು ಕ್ರಾಂತಿ ಚಿತ್ರವನ್ನು ಬಾಯ್‌ಕಾಟ್ ಮಾಡಬೇಕು ಎಂದು ಫೇಸ್‌ಬುಕ್ ಖಾತೆಗಳಲ್ಲಿಯೂ ಬರೆದುಕೊಂಡಿವೆ. ಹೀಗೆ ದೊಡ್ಡದಾಗುತ್ತಾ ಸಾಗಿರುವ 'ಬಾಯ್‌ಕಾಟ್ ಕ್ರಾಂತಿ' ಟ್ರೆಂಡ್ ಎಲ್ಲಿಗೆ ಹೋಗಿ ಮುಟ್ಟಲಿದೆಯೋ..

ದರ್ಶನ್ ಸ್ಟಾರ್‌ಡಮ್ ಮುಂದೆ ಬಾಯ್‌ಕಾಟ್ ಟ್ರೆಂಡ್ ನಿಲ್ಲುತ್ತಾ?
ಸದ್ಯ ಕ್ರಾಂತಿ ಚಿತ್ರದ ವಿರುದ್ಧ ಬಾಯ್‌ಕಾಟ್ ಅಭಿಯಾನವೇನೋ ಶುರುವಾಗಿದೆ ನಿಜ. ಆದರೆ ಇದೆಲ್ಲಾ ದರ್ಶನ್‌ಗೆ ಇರುವ ಸ್ಟಾರ್‌ಡಮ್ ಮುಂದೆ ನಿಲ್ಲುತ್ತಾ ಎಂಬುದೇ ಈಗ ದೊಡ್ಡ ಪ್ರಶ್ನೆಯಾಗಿದೆ. ಏಕೆಂದರೆ ದರ್ಶನ್ ಹೇಳಿಕೆ ವಿರುದ್ಧ ವಿರೋಧ ಒಂದು ಕಡೆ ವ್ಯಕ್ತವಾಗುತ್ತಿದ್ದರೆ, ತಮ್ಮ ನೆಚ್ಚಿನ ನಟನ ಹೇಳಿಕೆಯಲ್ಲಿ ತಪ್ಪಿಲ್ಲ ಎಂದು ವಹಿಸಿಕೊಳ್ಳುತ್ತಿರುವ ಅಭಿಮಾನಿ ಬಳಗ ಮತ್ತೊಂದೆಡೆ ಇದೆ. ಹೀಗಾಗಿ ಬಾಯ್‌ಕಾಟ್ ಅಲೆ ದೊಡ್ಡದಾಗುತ್ತಾ, ಇಲ್ಲ ದರ್ಶನ್ ಸ್ಟಾರ್‌ಡಮ್ ಮುಂದೆ ತಣ್ಣಗಾಗುತ್ತಾ ಎಂದು ಕಾದು ನೋಡಬೇಕಿದೆ.


Click it and Unblock the Notifications











