ನಮ್ಮ ನಿರ್ಮಾಪಕರನ್ನು ನಾನು ಬಿಟ್ಟುಕೊಡಲ್ಲ: ಉಮಾಪತಿ ಪರ ದರ್ಶನ್ ಬ್ಯಾಟಿಂಗ್
ನಿನ್ನೆ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ದರ್ಶನ್, ತಮ್ಮ ಹೆಸರು ಬಳಸಿ 25 ಕೋಟಿ ರು ಹಣ ವಂಚನೆ ಮಾಡಿದ ಪ್ರಕರಣದಲ್ಲಿ ಎಲ್ಲೆಡೆ ನಿರ್ಮಾಪಕ ಉಮಾಪತಿ ಹೆಸರು ಕೇಳಿಬರುತ್ತಿದೆ ಎಂದು ಉಮಾಪತಿ ಮೇಲೆ ಗುಮಾನಿ ಇರುವ ರೀತಿ ಮಾತನಾಡಿದ್ದರು.
ಆದರೆ ಇಂದು ಉಮಾಪತಿ ಅವರು ಸುದ್ದಿಗೋಷ್ಠಿ ನಡೆಸಿದ ಬಳಿಕ ನಾನು ಉಮಾಪತಿ ಅವರನ್ನು ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ.
ಮನೆಯ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ನಟ ದರ್ಶನ್, ''ನಮ್ಮ ನಿರ್ಮಾಪಕರು ಎಂದಿಗೂ ನಮ್ಮ ನಿರ್ಮಾಪಕರೇ. ನಾನು ನಮ್ಮ ನಿರ್ಮಾಪಕರನ್ನು ಬಿಟ್ಟುಕೊಡುವುದಿಲ್ಲ. ನಿನ್ನೆ ಎಲ್ಲ ನಾವು ತೋರಿಸಿದ್ದೀವಿ. ಚೆಂಡು ಅವರ ಅಂಗಳದಲ್ಲಿ ಇತ್ತು. ಇಂದು ಅವರೂ ಮಾತನಾಡಿದ್ದಾರೆ. ಇಲ್ಲಿಗೆ ಎಲ್ಲವನ್ನೂ ಮುಗಿಸೋಣ'' ಎಂದಿದ್ದಾರೆ ದರ್ಶನ್.

''ಈಗಾಗಲೇ ಈ ಪ್ರಕರಣದ ಬಗ್ಗೆ ಎರಡು ದಿನದಿಂದ ಮಾತನಾಡುತ್ತಲೇ ಇದ್ದೀವಿ. ಇದೇನು ನಿಲ್ಲುವಂಥಹಾ ಕೇಸಾ? ಗುದ್ದಾಡಲು. ಸಾಕು ಬಿಟ್ಟುಬಿಡೋಣ. ಇದೊಂದು ಸಣ್ಣ ವಿಷಯ. ಆದರೆ ಇದು ಏಕೆ ಬಂತು ಎಂಬ ಕುತೂಹಲ ನಮಗೆ ಇತ್ತು ಹಾಗಾಗಿ ನಾವು ಮಾತನಾಡಿದೆವು. ಈಗ ಎಲ್ಲ ಮುಗಿದಿದೆ'' ಎಂದಿದ್ದಾರೆ ದರ್ಶನ್.
ಉಮಾಪತಿ ಅವರು ನಿಮ್ಮ ಜೊತೆ ಸಂಪರ್ಕದಲ್ಲಿದ್ದಾರಾ? ಎಂಬ ಪತ್ರಕರ್ತರ ಪ್ರಶ್ನೆಗೆ, ''ಸಂಪರ್ಕದಲ್ಲಿದ್ದಾರೆ. ನಾವು ಮಾತನಾಡುತ್ತಲೇ ಇದ್ದೀವಿ'' ಎಂದರು. ಮುಂದುವರೆದು, ''ಇದೇನು ಮಕ್ಕಳಾಟವಾ, ನೀನು ಚಾಕ್ಲೆಟ್ ಕೊಟ್ಟಿಲ್ಲ ಬರಬೇಡ ಎಂದು ಹೇಳಲು, ನನಗೆ 43 ವರ್ಷ ವಯಸ್ಸು ಈಗಲೂ ಹೀಗೆಲ್ಲ ಮಕ್ಕಳಂತೆ ವರ್ತಿಸಲು ಸಾಧ್ಯವಾ?'' ಎಂದು ಪ್ರಶ್ನಿಸಿದ್ದಾರೆ ದರ್ಶನ್.
ಇಂದು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಮಾಪತಿ, ''ದರ್ಶನ್ ಗೆಳೆಯರು ಕೆಲವರು ಅವರ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಆ ಮಹಿಳೆ ಮೂಲಕ ನನಗೆ ಗೊತ್ತಾದಾಗ ನಾನು ಅದನ್ನು ದರ್ಶನ್ ಗಮನಕ್ಕೆ ತಂದೆ. ಆದರೆ ಈಗ ನನ್ನನ್ನೇ ಆರೋಪಿ ಸ್ಥಾನದಲ್ಲಿ ಕೂರಿಸುವ ಪ್ರಯತ್ನ ಮಾಡಲಾಗುತ್ತಿದೆ'' ಎಂದಿದ್ದಾರೆ ಉಮಾಪತಿ.
Recommended Video
ದರ್ಶನ್ ಗೆಳೆಯರಾದ ರಾಕೇಶ್ ಪಾಪಣ್ಣ, ಹರ್ಷ ಮೆಲೆಂಟಾ ಮೇಲೆ ಆರೋಪ ಮಾಡಿರುವ ಉಮಾಪತಿ, ಅವರುಗಳು ನನ್ನ ತೇಜೋವಧೆ ಮಾಡಲು ಯತ್ನಿಸಿದ್ದಾರೆ ಅಲ್ಲದೆ ಆ ಮಹಿಳೆ ಅರುಣ ಕುಮಾರಿಗೂ ಬೆದರಿಕೆ ಹಾಕಿದ್ದಾರೆ ಎಂದಿದ್ದಾರೆ. ಈ ಪ್ರಕರಣ ನ್ಯಾಯಾಲಯದಲ್ಲಿಯೇ ಇತ್ಯರ್ಥವಾಗಲಿ ಎಂದಿದ್ದಾರೆ.


Click it and Unblock the Notifications











