ಮುಂದಿನ ವಾರ ತೆರೆ ಮೇಲೆ 'ಸಂಗೊಳ್ಳಿ ರಾಯಣ್ಣ'
ಇನ್ನು ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ಆನಂದ್ ಅಪ್ಪುಗೋಳ್, "ಚಿತ್ರದಲ್ಲಿ ಎರಡು ಶಬ್ಧಗಳನ್ನು ಮಾತ್ರ ಮ್ಯೂಟ್ ಮಾಡುವಂತೆ ಸೆನ್ಸಾರ್ ಮಂಡಳಿ ಸೂಚನೆ ನೀಡಿದೆ. ಚಿತ್ರ ನೋಡಿದ ನಂತರ ಸೆನ್ಸಾರ್ ಮಂಡಳಿ ಚಿತ್ರದ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದೆ. ದೇಶಭಕ್ತಿಯ ಕಥೆ ಹೊಂದಿರುವ ಈ ಚಿತ್ರಕ್ಕೆ ಸಾಕಷ್ಟು ಪ್ರಶಂಸೆ, ಸೆನ್ಸಾರ್ ಮಂಡಳಿ ಕಡೆಯಿಂದ ವ್ಯಕ್ತವಾಗಿದೆ. ಇನ್ನು ಪ್ರೇಕ್ಷಕರ ಅಭಿಪ್ರಾಯ ಮಾತ್ರ ಬಾಕಿ, ಅದನ್ನು ನಾವು ಕಾದು ನೋಡಬೇಕಿದೆ" ಎಂದಿದ್ದಾರೆ.
ನಾಳೆ, ಅಂದರೆ ಅಕ್ಟೋಬರ್ 19, 2012 ರಂದು ಬಿಡುಗಡೆ ಆಗಬೇಕಿದ್ದ ಈ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರವು ಒಂದು ವಾರ ತಡವಾಗಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಅಂದುಕೊಂಡಂತೆ ನಡೆದರೆ, ಬಹುನಿರೀಕ್ಷೆಯ ಈ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರವು 26ಕ್ಕೆ, ಅಂದರೆ 26 ಅಕ್ಟೋಬರ್ 2012 ರಂದು ತೆರೆಗೆ ಬರಲಿದೆ. ಚಿಂಗಾರಿ ಚಿತ್ರದ ನಂತರ ದರ್ಶನ್ ನಾಯಕತ್ವದ ಯಾವುದೇ ಚಿತ್ರವೂ ಬಾರದಿರುವುದರಿಂದ ಸಹಜವಾಗಿಯೇ ದರ್ಶನ್ ಅಭಿಮಾನಿಗಳು ಕಾಯುತ್ತಿದ್ದಾರೆ.
ಅಂದಹಾಗೆ, ದೇಶಭಕ್ತ ಸಂಗೊಳ್ಳಿ ರಾಯಣ್ಣ ಕುರಿತಾದ ಈ ಚಿತ್ರವನ್ನು ರಾಯಣ್ಣರ ಮಹಾ ಅಭಿಮಾನಿ ಆನಂದ್ ಅಪ್ಪುಗೋಳ್ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಅವರು ಬರೋಬ್ಬರಿ ರು. 32 ಕೋಟಿ ಹಣ ಹಾಕಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ನಿರ್ಮಿಸಲಾಗಿರುವ 'ಅದ್ದೂರಿ' ಚಿತ್ರವೆಂಬ ಪಟ್ಟವನ್ನು ಈ 'ಸಂಗೊಳ್ಳಿ ರಾಯಣ್ಣ' ಚಿತ್ರ ಪಡೆದುಕೊಂಡಿದೆ. 'ಚಿಂಗಾರಿ' ಚಿತ್ರದ ನಂತರ ತೆರೆಗೆ ಬರುತ್ತಿರುವ ದರ್ಶನ್ ನಟನೆಯ ಚಿತ್ರ ಸಂಗೊಳ್ಳಿ ರಾಯಣ್ಣ.
ಚಿತ್ರದ ಬಗ್ಗೆ ಮಾತನಾಡಿರುವ ಆನಂದ್ ಅಪ್ಪುಗೋಳ್ "ಸಂಗೊಳ್ಳಿ ರಾಯಣ್ಣ ಅಭಿಮಾನಿಗಳಿಗೆ ಹಾಗೂ ದೇಶಭಕ್ತರಿಗಾಗಿಯೇ ಈ ಸಿನಿಮಾ ಮಾಡಿದ್ದೇನೆ. ಸಿನಿಮಾ ಗೆಲ್ಲುತ್ತೋ ಬಿಡುತ್ತೋ ಗೊತ್ತಿಲ್ಲ. ಹಾಕಿದ ಬಜೆಟ್ ಬಗ್ಗೆ ಯಾವುದೇ ಚಿಂತೆಯೂ ನನಗಿಲ್ಲ. ಹಣ ವಾಪಸ್ ಬಾರದಿದ್ದರೆ ಚಿಂತೆಯಾಗದು. ಚಿತ್ರದಿಂದ ನೂರು ಕೋಟಿ ರೂಪಾಯಿ ಲಾಭ ಬಂದರೂ ಸಂತಸವಾಗದು. ರಾಯಣ್ಣನ ಚಿತ್ರ ಮಾಡಬೇಕೆಂಬ ಕನಸಿತ್ತು, ಮಾಡಿದ್ದೇನೆ ಅಷ್ಟೇ" ಅಂದಿದ್ದಾರೆ
'ಸಂಗೊಳ್ಳಿ ರಾಯಣ್ಣ' ಚಿತ್ರವನ್ನು ಕರ್ನಾಟಕದಲ್ಲಿ ಮಾತ್ರವಲ್ಲದೇ, ಮುಂಬೈ, ಪುಣೆ, ಗೋವಾಗಳಲ್ಲಿಯೂ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ ನಿರ್ಮಾಪಕ ಅಪ್ಪುಗೋಳ್. ಇನ್ನು ಅವರ ಗೆಳೆಯರು ಇದನ್ನು ಬ್ರಿಟನ್, ಅಮೆರಿಕಾ ಹಾಗೂ ಆಸ್ಟ್ರೇಲಿಯಾಗಳಲ್ಲೂ ಕೂಡ ಬಿಡುಗಡೆ ಮಾಡಲಿದ್ದಾರಂತೆ. ಆದರೆ ಎಲ್ಲೆಲ್ಲಿ ಎಷ್ಟೆಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆ ಎಂಬ ಮಾಹಿತಿ ಸದ್ಯಕ್ಕಿಲ್ಲ. ಅಂದಹಾಗೆ, 3 ನಿಮಿಷಗಳ 'ಸಂಗೊಳ್ಳಿ ರಾಯಣ್ಣ ಟ್ರೇಲರ್' ಬಿಡುಗಡೆಯಾಗಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











