ಸಂಗೊಳ್ಳಿ ರಾಯಣ್ಣ ಶೂಟಿಂಗ್ ಗುಟ್ಟು ಬಿಚ್ಚಿಟ್ಟ ದರ್ಶನ್
ಸಂತೋಷಕೂಟದಲ್ಲಿ ಮಾತನಾಡುವ ವೇಳೆ ಚಿತ್ರಕ್ಕೆ ಶೂಟಿಂಗ್ ಮಾಡಿದ ಗುಟ್ಟೊಂದನ್ನು ಬಿಚ್ಚಿಟ್ಟ ದರ್ಶನ್ "ಚಿತ್ರೀಕರಣ ಮಾಡುವಾಗ ನಾವು ಸುಲಭದ ದೃಶ್ಯವನ್ನು ಮೊದಲು ಚಿತ್ರೀಕರಿಸಿಕೊಂಡು ನಂತರ ಕಷ್ಟಕರವಾದ ದೃಶ್ಯಗಳನ್ನು ಚಿತ್ರಿಸಿಕೊಂಡೆವು ಎಂದಿದ್ದಾರೆ. ಈ ಮೂಲಕ ಭಾರಿ ಕಷ್ಟಪಟ್ಟು ಮಾಡಬೇಕಿದ್ದ ಚಿತ್ರವನ್ನು ಸುಲಭಸಾಧ್ಯ ಮಾಡಿಕೊಂಡ ಚಿತ್ರತಂಡ, ಎಲ್ಲಿಯೂ ತೀರಾ ಕಷ್ಟಪಡದೇ ಲೀಲಾಜಾಲವಾಗಿ ಚಿತ್ರೀಕರಣ ಮುಗಿಸಿದ್ದಲ್ಲದೇ ಚಿತ್ರವನ್ನು ಚೆನ್ನಾಗಿ ತೆರೆಗೆ ತಂದಿದೆ.
ಇನ್ನು ಚಿತ್ರದ ಬಗ್ಗೆ ಈ ಮೊದಲೂ ಕೂಡ ಭಾರೀ ನಿರೀಕ್ಷೆ ಹಾಗೂ ಮಹತ್ವಾಕಾಂಕ್ಷೆ ಹೊಂದಿದ್ದ ದರ್ಶನ್, ಈ ಚಿತ್ರವನ್ನು ನೋಡಿ, ಹರಿಸಿ, ಹಾರೈಸಿರುವ ಸಿನಿಪ್ರೇಕ್ಷಕರು ಹಾಗೂ ಅಭಿಮಾನಿಗಳು ಬಗ್ಗೆ ಮೆಚ್ಚಿ ಮಾತನಾಡಿದ್ದಾರೆ. ಚಿತ್ರ ಚೆನ್ನಾಗಿದ್ದರೆ ಜನರು ಮಳೆ, ಕ್ರಿಕೆಟ್ ಅಥವಾ ಇನ್ಯಾವುದನ್ನೂ ಲೆಕ್ಕಿಸದೇ ಸನಿಮಾ ನೋಡಲು ಬಂದೇ ಬರುತ್ತಾರೆ. ಈ ಸಂಗತಿ 'ಸಂಗೊಳ್ಳಿ ರಾಯಣ್ಣ' ಚಿತ್ರದ ಮೂಲಕ ಸಾಬೀತಾಗಿದೆ" ಎಂದಿದ್ದಾರೆ.
ದೇಶಭಕ್ತ, ಸ್ವಾತಂತ್ರ್ಯಯೋಧ ಸಂಗೊಳ್ಳಿ ರಾಯಣ್ಣ ಹುಟ್ಟಿದ್ದು ಆಗಸ್ಟ್ 15. ಅವರನ್ನು ಗಲ್ಲಿಗೇರಿಸಿದ್ದು ಜನವರಿ 26. ಅವರ ಕುರಿತಾದ ಚಿತ್ರ 'ಸಂಗೊಳ್ಳಿ ರಾಯಣ್ಣ' ಬಿಡುಗಡೆಯಾಗಿದ್ದು ನವೆಂಬರ್ 1. ಹೀಗೆ, ಮಹತ್ವದ ದಿನಗಳೇ ಸಂಗೊಳ್ಳಿ ರಾಯಣ್ಣನಿಗೆ ಎಲ್ಲಾ ಕಡೆ ಎದುರಾಗಿದೆ. ಇದು ವಿಶೇಷವಲ್ಲದೇ ಇನ್ನೂನೂ ಅಲ್ಲ! ಈಗಂತೂ 'ಸಂಗೊಳ್ಳಿ ರಾಯಣ್ಣ'ರ ಕುರಿತಾದ ಈ ಐತಿಹಾಸಿಕ ಹೊಸ ದಾಖಲೆ ಮೆರೆಯುವ ದಾರಿಯಲ್ಲಿದೆ.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ನಾಗಣ್ಣ ಹಾಗೂ ನಿರ್ಮಾಪಕ ಆನಂದ್ ಅಪ್ಪುಗೋಳ್ ಅವರು ಸಹಜವಾಗಿ ತಮಗಾದ ವಿಪರೀತ ಆನಂದವನ್ನು ಹಂಚಿಕೊಂಡರು. ಮೊದಲೇ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತಾದರೂ ಈ ಮಟ್ಟಿಗೆ ಚಿತ್ರ ದಾಖಲೆ ರೂಪದಲ್ಲಿ ಯಶಸ್ಸು ಕಾಣುವುದೆಂದು ತಾವು ಆಶಿಸಿರಲಿಲ್ಲ. ಚಿತ್ರವನ್ನು ಎಲ್ಲಾ ವರ್ಗದ ಜನರೂ ಇಷ್ಟಪಟ್ಟಿದ್ದಾರೆ. ಚಿತ್ರೋದ್ಯಮ ಹಾಗೂ ಮಾಧ್ಯಮದವರೂ ಮೆಚ್ಚಿ ಬೆನ್ನು ತಟ್ಟಿದ್ದಾರೆ" ಎಂದರು.
ಚಿತ್ರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರದಲ್ಲಿ ನಟಿಸಿ ಮೆಚ್ಚುಗೆಗೆ ಪಾತ್ರರಾದ ಹಿರಿಯ ನಟಿ ಜಯಪ್ರದಾ ಈ ಬಗ್ಗೆ ತುಂಬಾ ಹೆಮ್ಮೆಪಟ್ಟು ಮಾತನಾಡಿದರು. "ನಾನು ಈ ಚಿತ್ರವನ್ನು ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರಿಗೆ ತೋರಿಸಲಿದ್ದೇನೆ. ರಾಷ್ಟ್ರಪತಿ, ಪ್ರಧಾನಿ ಹಾಗೂ ಸೋನಿಯಾ ಗಾಂಧಿ ಅವರನ್ನೂ ಚಿತ್ರ ನೋಡಲು ಆಹ್ವಾನಿಸಲಿದ್ದೇನೆ. ನನಗೆ ನಾನು ಈ ಹಿಂದೆ ಅಭಿನಯಿಸಿದ್ದ 'ಕವಿರತ್ನ ಕಾಳಿದಾಸ' ಚಿತ್ರ ನೆನಪಾಯಿತು" ಎಂದರು. ಒಟ್ಟಿನಲ್ಲಿ 'ಸಂಗೊಳ್ಳಿ ರಾಯಣ್ಣ' ಎಂಬ ಐತಿಹಾಸಿಕ ಚಿತ್ರ ಇತಿಹಾಸ ಸೃಷ್ಟಿಸಲಿರುವುದು ಗ್ಯಾರಂಟಿ. (ಒನ್ ಇಂಡಿಯಾ ಕನ್ನಡ)


Click it and Unblock the Notifications











