ಅವರಲ್ಲ ದರ್ಶನ್ ಹೃದಯ ಗೆದ್ದ ಮುದ್ದು ರಾಕ್ಷಸಿ ಇವರು..!
ದಾಂಪತ್ಯದಲ್ಲಿ ಚಿಕ್ಕ-ಚಿಕ್ಕ ವಿರಸಗಳು ಸಾಂಗತ್ಯದ ಅರ್ಥವನ್ನು ಗಟ್ಟಿ ಮಾಡುತ್ತವೆ. ಇಬ್ಬರ ನಡುವಿನ ಹೊಂದಾಣಿಕೆಯನ್ನು ಹೆಚ್ಚಿಸುತ್ತವೆ. ಇಬ್ಬರ ನಡುವೆ ಇರುವ ತಪ್ಪು ಅಭಿಪ್ರಾಯಗಳನ್ನು-ಗ್ರಹಿಕೆಗಳನ್ನು ಸರಿಪಡಿಸಿಕೊಂಡು ಹೋಗುವುದರಲ್ಲಿಯೇ ದಾಂಪತ್ಯದ ಅರ್ಥ ಅಡಗಿದೆ ಎನ್ನುವುದಕ್ಕೆ ಜ್ವಲಂತ ಉದಾಹರಣೆಯಂತೆ ಇರುವವರು ದರ್ಶನ್ ಮತ್ತು ವಿಜಯಲಕ್ಷ್ಮಿ.
ಒಮ್ಮೆ ಬೈದಾಡಿಕೊಂಡು ಆ ನಂತರ ಮತ್ತೆ ಒಂದಾಗಿ ಇನ್ಯಾವತ್ತೋ ಇನ್ಯಾವುದೋ ಕಾರಣಕ್ಕೆ ಮುನಿಸಿಕೊಳ್ಳುತ್ತಾ ಮತ್ತೆ ಒಂದಾಗುತ್ತಾನೇ ದರ್ಶನ್ ಜೊತೆ 22 ವರ್ಷ ಕಳೆದ ವಿಜಯಲಕ್ಷ್ಮಿ ಕಳೆದ ವರ್ಷ ತಮ್ಮ ಗಂಡನನ್ನು ಜೈಲಿಂದ ಹೊರ ತರಲು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ದರ್ಶನ್ ಜೈಲು ಪಾಲಾದ ಕ್ಷಣದಿಂದ ಹಿಡಿದು ಹೊರ ಬರುವ ತನಕ ವಿರಮಿಸದ ವಿಜಯಲಕ್ಷ್ಮಿ ಕೊಲ್ಲೂರಿಂದ ಹಿಡಿದು ಅಸ್ಸಾಂನ ಕಾಮಾಕ್ಯ ದೇವಸ್ಥಾನದವರೆಗೆ ಸುತ್ತಾಡಿದರು. ಪ್ರಾರ್ಥನೆ ಸಲ್ಲಿಸಿದರು. ಹರಕೆಯನ್ನು ಹೊತ್ತರು.

ಇಂಥಾ ವಿಜಯಲಕ್ಷ್ಮಿ ಅವರನ್ನು ದರ್ಶನ್ ಪ್ರೀತಿಯಿಂದ ಮುದ್ದು ರಾಕ್ಷಸಿ ಎಂದು ಕರೆಯುತ್ತಾರೆ. ಖುದ್ದು ದರ್ಶನ್ ಈ ವಿಚಾರವನ್ನು ಹೇಳಿದ್ದು, ತಮ್ಮ ನೆಚ್ಚಿನ ನಾಯಕನ ಬಾಯಲ್ಲಿ ತಮ್ಮ ಅತ್ತಿಗೆಯ ಗುಣಗಾನ ಕೇಳಿ ದರ್ಶನ್ ಅಭಿಮಾನಿ ಬಳಗ ಸದ್ಯ ಸಂಭ್ರಮ ಪಡುತ್ತಿದೆ. ಮತ್ಯಾವ ಕೆಟ್ಟ ದೃಷ್ಟಿ ದರ್ಶನ್ ಮತ್ತು ವಿಜಯಲಕ್ಷ್ಮಿ ಮೇಲೆ ಬೀಳದಿರಲಿ ಎಂದು ಪ್ರಾರ್ಥನೆ ಮಾಡುತ್ತಿದೆ.
ವಾಮನ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ನಂತರ ಮಾತನಾಡಿರುವ ದರ್ಶನ್, ವಾಮನ ಚಿತ್ರದಲ್ಲಿ ನನಗೆ ಮುದ್ದು ರಾಕ್ಷಸಿ ಹಾಡು ತುಂಬಾ ಇಷ್ಟ. ಎಲ್ಲಿಂದ ಈ ಹಾಡನ್ನು ಹುಡುಕಿ ತಂದೆ ಅಪ್ಪಿ ತುಂಬಾ ಚೆನ್ನಾಗಿದೆ ಅಂತ ನಾನೇ ಧನ್ವೀರ್‌ಗೆ ಕೇಳ್ತಾ ಇರ್ತಿನಿ ಎಂದು ಹೇಳಿದ್ದಾರೆ. ನನ್ನ ಹೆಂಡತಿ ಕೋಪ ಮಾಡಿಕೊಂಡಾಗ ನಾನು ಮುದ್ದು ರಾಕ್ಷಸಿ ಥರ ಇದ್ದೀಯಾ ಕಣೇ ನೀನು ಅಂತ ರೇಗಿಸುತ್ತಿರುತ್ತೇನೆ ಎಂದು ಹೇಳಿದ್ದಾರೆ.
ಅಂದ್ಹಾಗೇ ದರ್ಶನ್ ಹೃದಯ ಗೆದ್ದ ಮುದ್ದು ರಾಕ್ಷಸಿ ಹಾಡು ವರ್ಷದ ಹಿಂದೆ ಬಿಡುಗಡೆಯಾಗಿತ್ತು. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದ ಈ ಹಾಡನ್ನು ಡಾ.ವಿ.ನಾಗೇಂದ್ರ ಪ್ರಸಾದ್ ಬರೆದಿದ್ದು, ವಿಜಯ್ ಪ್ರಕಾಶ್ ಮತ್ತು ಹರ್ಷಿಕಾ ದೇವನಾಥ್ ಹಾಡಿದ್ದಾರೆ. ಭೂಷಣ್ ಮಾಸ್ಟರ್ ನೃತ್ಯ ನಿರ್ದೇಶನ ಈ ಹಾಡಿಗೆ ಇದೆ. ವಿಶೇಷ ಅಂದರೆ ಅವತ್ತು ಈ ಮುದ್ದು ರಾಕ್ಷಸಿ ಹಾಡನ್ನು ಅಭಿಷೇಕ್ ಅಂಬರೀಶ್ ಬೆಂಗಳೂರಿನ ಮಂತ್ರಿ ಮಾಲ್‌ನಲ್ಲಿ ಬಿಡುಗಡೆ ಮಾಡಿದ್ದರು. ಸದ್ಯ ವಾಮನ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಎರಡು ವಾರದ ಹಿಂದೆ ಇದೇ ಚಿತ್ರದ ಕಂದ ಕನಸ ರೂಪ ತಾಯಿ ಹಾಡನ್ನು ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಬಿಡುಗಡೆ ಮಾಡಿದ್ದರು. ಚಿತ್ರದ ಪ್ರಚಾರಕ್ಕೆ ಈ ಮೂಲಕ ಕೈ ಜೋಡಿಸಿದ್ದರು.
ಇನ್ನುಳಿದಂತೆ ಶಂಕರ್ ರಾಮನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇನ್ನು ಹಿರಿಯ ನಟಿ ತಾರಾ ಚಿತ್ರದಲ್ಲಿ ಧನ್ವೀರ್ ಅವರ ತಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ನಾಯಕಿಯ ಪಾತ್ರಕ್ಕೆ ರೀಶ್ಮಾ ನಾಣಯ್ಯ ಬಣ್ಣ ಹಚ್ಚಿದ್ದಾರೆ. ಚೇತನ್ ಗೌಡ ಚಿತ್ರದ ನಿರ್ಮಾಪಕರು. ಭೂಗತಲೋಕದ ಹಿನ್ನೆಲೆಯಲ್ಲಿ ಸಾಗುವ ಚಿತ್ರದಲ್ಲಿ ಧನ್ವೀರ್, ರೀಶ್ಮಾ ಮತ್ತು ತಾರಾ ಅವರನ್ನು ಹೊರತು ಪಡಿಸಿದರೆ , ಸಂಪತ್ ರಾಜ್, ಅವಿನಾಶ್, ಅಚ್ಯುತ್ ಕುಮಾರ್, ಶಿವರಾಜ್ ಕೆಆರ್ ಪೇಟೆ ಮತ್ತು ಕಾಕ್ರೋಚ್ ಸುಧಿ ಸೇರಿದಂತೆ ಹಲವರು ಇದ್ದಾರೆ. ಚಿತ್ರಕ್ಕೆ ಮಹೇನ್ ಸಿಂಹ ಛಾಯಾಗ್ರಹಣ ಇದೆ. ಇದೇ ಏಪ್ರಿಲ್ 10ರಂದು ಚಿತ್ರ ತೆರೆಗೆ ಬರಲಿದೆ.


Click it and Unblock the Notifications











