ಜೀವನದ ವಿಶೇಷ ದಿನಕ್ಕೆ ದರ್ಶನ್ ಮಹತ್ವದ ಬೇಡಿಕೆ; ಕಾರಾಗೃಹದ ಎಸ್‌ಪಿಗೆ ಪತ್ರ ಬರೆದು ಮನವಿ
ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ನಟ ದರ್ಶನ್‌ಗೆ ಪದೇ ಪದೆ ಹಿನ್ನಡೆ ಆಗುತ್ತಿದೆ. ಇತ್ತೀಚಿಗೆ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರೂ ಪ್ರಯೋಜನವಾಗಲಿಲ್ಲ. ಕುಟುಂಬ ಸದಸ್ಯರು, ಆಪ್ತರು, ಅಭಿಮಾನಿಗಳು ದರ್ಶನ್ ಬಿಡುಗಡೆಗೆಗಾಗಿ ಕಾಯುತ್ತಿದ್ದಾರೆ. ಇದೆಲ್ಲದರ ನಡುವೆ ದರ್ಶನ್ ಜೀವನದ ವಿಶೇಷ ದಿನ ಬಂದಿದೆ.
ನಾಳೆ (ಮೇ 19) ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಜೀವನದಲ್ಲಿ ಮರೆಯಲಾಗದ ದಿನ. 23 ವರ್ಷಗಳ ಹಿಂದೆ ಇದೇ ದಿನ ಇಬ್ಬರ ಮದುವೆ ನಡೆದಿತ್ತು. ಮದುವೆ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಕಾರಾಗೃಹದ ಎಸ್‌ಪಿಗೆ ದರ್ಶನ್ ಪತ್ರ ಬರೆದು ವಿಶೇಷ ಮನವಿ ಮಾಡಿದ್ದಾರೆ. ಮತ್ತೊಂದು ಕಡೆ ಪತಿಯ ನೆನಪಿನಲ್ಲಿ ಕೊರಗುತ್ತಿರುವ ವಿಜಯಲಕ್ಷ್ಮಿ ಪದೇ ಪದೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ದರ್ಶನ್ ಫೋಟೊ ಜೊತೆ ಹಾರ್ಟ್ ಬ್ರೇಕ್ ಎಮೋಜಿ ಹಾಕಿದ್ದರು. ಇದನ್ನು ನೋಡಿ ಅಭಿಮಾನಿಗಳು ಬೇಸರಗೊಂಡಿದ್ದಾರೆ.

ವಿವಾಹ ವಾರ್ಷಿಕೋತ್ಸವಕ್ಕೂ ಮುನ್ನ ಜಾಮೀನು ಸಿಗಬಹುದು ಎಂದು ನಿರೀಕ್ಷಿಸಿದ್ದ ದರ್ಶನ್‌ಗೆ ಶಾಕ್ ಕಾದಿತ್ತು. ಇನ್ನು ಒಂದು ವರ್ಷ ಕನಸು ಮನಸ್ಸಿನಲ್ಲಿ ಕೂಡ ದರ್ಶನ್ ಜೈಲಿನಿಂದ ಹೊರ ಬರುವುದನ್ನು ಎಣಿಸುವುದಕ್ಕೆ ಸಾಧ್ಯವಾಗದಂತಾಗಿದೆ. ಬೇಗ ಪ್ರಕರಣದ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೂಚಿಸಿದೆ. ವರ್ಷದ ಬಳಿಕ ದರ್ಶನ್ ಜಾಮೀನು ಅರ್ಜಿ ಸಲ್ಲಿಸಿದರೆ ಆ ಬಗ್ಗೆ ಆಲೋಚಿಸುವುದಾಗಿ ಹೇಳಿದೆ. ಅಂದರೆ ಒಂದು ವರ್ಷ ಜಾಮೀನು ಸಿಗುವುದಿಲ್ಲ. ಆ ಬಳಿಕ ಸಿಕ್ಕರೂ ಸಿಗಬಹುದು ಎನ್ನುವಂತಾಗಿದೆ. ಇದೆಲ್ಲದರ ಬೆನ್ನಲ್ಲೇ ಪತ್ನಿ ಹಾಗೂ ಮಗನ ಭೇಟಿಗೆ ಅವಕಾಶ ಮಾಡಿ ಕೊಡುವಂತೆ ದರ್ಶನ್ ಪತ್ರ ಬರೆದು ಮನವಿ ಮಾಡಿದ್ದಾರೆ.
ವಿವಾಹ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಪತ್ನಿ ಹಾಗೂ ಮಗನನ್ನು ಒಳಗೆ ಭೇಟಿ ಮಾಡಲು ಅವಕಾಶ ಮಾಡಿಕೊಡುವಂತೆ ದರ್ಶನ್ ಬೇಡಿಕೆ ಇಟ್ಟಿದ್ದಾರೆ. ಜೈಲಿನಲ್ಲಿ ಕುಟುಂಬಸ್ಥರು ಜೈಲಿನಲ್ಲಿ ಭೇಟಿಗೆ ಬಂದರೂ ಸರಿಯಾಗಿ ಸಂದರ್ಶನ ಸಾಧ್ಯವಾಗುತ್ತಿಲ್ಲ, ಗ್ರಿಲ್(ಮೆಶ್) ಅಡ್ಡ ಇದೆ ಎಂದು ದರ್ಶನ್ ಇತ್ತೀಚೆಗೆ ಜಾಮೀನು ಅರ್ಜಿಯಲ್ಲಿ ತಿಳಿಸಿದ್ದರು. ಹೀಗಾಗಿ ಸಹಜವಾಗಿ ಕುಟುಂಬಸ್ಥರ ಜೊತೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದರು. ಇದೇ ಕಾರಣಕ್ಕೆ ಈಗ ಪತ್ರ ಬರೆದು ಕೊಠಡಿ ಒಳಗೆ ಸಂದರ್ಶನಕ್ಕೆ ದರ್ಶನ್ ಮನವಿ ಮಾಡಿದ್ದಾರೆ.

ಮೇ 15ರಂದು ದರ್ಶನ್ ಪರಪ್ಪನ ಅಗ್ರಹಾರ ಕಾರಾಗೃಹದ ಎಸ್‌ಪಿಗೆ ಪತ್ರ ಬರೆದಿದ್ದಾರೆ. ಮೇ 16ರಂದು ಡಿಜಿಪಿ ಅಲೋಕ್ ಕುಮಾರ್ ಅವರನ್ನು ವಿಜಯಲಕ್ಷ್ಮಿ ದರ್ಶನ್ ಭೇಟಿಯಾಗಿ ಮನವಿ ಮಾಡಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆಯಾಗಿರುವ ಕಾರಣ ದರ್ಶನ್ ಪತ್ರ ಬರೆದು ಪತ್ನಿ, ಮಗನ ಭೇಟಿಗೆ ಮನವಿ ಮಾಡುವಂತಾಗಿದೆ. 2003ರ ಮೇ 19ರಂದು ಧರ್ಮಸ್ಥಳದಲ್ಲಿ ದರ್ಶನ್ ಹಾಗೂ ವಿಜಯಲಕ್ಷ್ಮಿ ಮದುವೆ ನಡೆದಿತ್ತು. ಆಗಷ್ಟೆ ನಾಲ್ಕೈದು ಸಿನಿಮಾಗಳಲ್ಲಿ ದರ್ಶನ್ ಹೀರೊ ಆಗಿ ನಟಿಸಿದ್ದರು. ಧರ್ಮಸ್ಥಳದ ವಸಂತ ಮಹಲ್ ಕಲ್ಯಾಣ ಮಂಟಪದಲ್ಲಿ ಮದುವೆ ಶಾಸ್ತ್ರಗಳು ನಡೆದಿತ್ತು. ಅಂದು ಕಲ್ಯಾಣೋತ್ಸವದಲ್ಲಿ ಚಿತ್ರರಂಗದ ಕೆಲ ತಾರೆಯರು ಭಾಗಿ ಆಗಿ ಜೋಡಿಗೆ ಶೂಬ ಕೋರಿದ್ದರು.
ದರ್ಶನ್ ಜೈಲು ಸೇರಿದ ದಿನದಿಂದಲೂ ಪತ್ನಿ ವಿಜಯಲಕ್ಷ್ಮಿ ನೋವಲ್ಲೇ ಕಾಲ ಕಳೆಯುತ್ತಿದ್ದಾರೆ. ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಲೇ ಇದ್ದಾರೆ. ಹೈಕೋರ್ಟ್‌ನಲ್ಲಿ ಜಾಮೀನು ಸಿಕ್ಕಿ ದರ್ಶನ್ ಹೊರ ಬಂದಾಗ ದೇವರಿಗೆ ಕೃತಜ್ಞತೆ ಸಲ್ಲಿಸಿದ್ದರು. ಬಳಿಕ ಪತಿಯನ್ನು ಕರೆದುಕೊಂಡು ಕೆಲ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಆದರೆ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾಗಿ ದರ್ಶನ್ ಮತ್ತೆ ಜೈಲು ಸೇರುವಂತಾಯಿತು. ಕಾನೂನು ಹೋರಾಟದಲ್ಲಿ ಪದೇ ಪದೆ ಹಿನ್ನಡೆ ಆಗ್ತಿದ್ದು ವಿಜಯಲಕ್ಷ್ಮಿ ದೇವರ ಮೇಲೆ ಭಾರ ಹಾಕಿದ್ದಾರೆ.


Click it and Unblock the Notifications