ಆಕ್ಟೀವ್ ಆಯ್ತು ನಟ ದರ್ಶನ್ ಸೋಶಿಯಲ್ ಮೀಡಿಯಾ ಅಕೌಂಟ್; ಅದು ಹೇಗೆ?
ನಟ ದರ್ಶನ್ ಮತ್ತೆ ಜೈಲು ಸೇರಿ ಎರಡು ದಿನ ಕಳೆದಿದೆ. ಅಭಿಮಾನಿಗಳು ಬೇಸರದಲ್ಲಿದ್ದಾರೆ. ಜೈಲಿನಿಂದಲೇ ಪತ್ನಿ ವಿಜಯಲಕ್ಷ್ಮಿ ಮೂಲಕ ದರ್ಶನ್ ತಮ್ಮ ಸಂದೇಶ ರವಾನಿಸುತ್ತಿದ್ದಾರೆ. ಮುಖ್ಯವಾಗಿ 'ಡೆವಿಲ್' ಸಿನಿಮಾ ಬಿಡುಗಡೆಗೆ ಯಾವುದೇ ಅಡೆತಡೆ ಆಗಬಾರದು ಎಂದು ತಿಳಿಸಿದ್ದಾರೆ. ಈ ಬಗ್ಗೆ ವಿಜಯಲಕ್ಷ್ಮಿ ಇತ್ತೀಚೆಗೆ ಪೋಸ್ಟ್ ಮಾಡಿದ್ದರು. ಇದೀಗ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲೇ ದರ್ಶನ್‌ಗೆ ಹಿನ್ನಡೆಯಾಗಿದೆ. ಹಾಗಾಗಿ ಸದ್ಯಕ್ಕೆ ಜೈಲಿನಿಂದ ಹೊರ ಬರುವುದು ಕಷ್ಟಕಷ್ಟ. ಹೊಸದಾಗಿ ಜಾಮೀನು ಸಲ್ಲಿಸಿ ಮುಂದಿನ ದಿನಗಳಲ್ಲಿ ಜಾಮೀನು ಪಡೆಯುವ ಅವಕಾಶ ಇದೆ ಎನ್ನಲಾಗ್ತಿದೆ. ಸದ್ಯಕ್ಕೆ ವಿಜಯಲಕ್ಷ್ಮಿ ಅಂತಹ ಯಾವುದೇ ಪ್ರಯತ್ನ ಮಾಡಿದಂತೆ ಕಾಣುತ್ತಿಲ್ಲ. ನಾಲ್ಕೈದು ತಿಂಗಳು ದರ್ಶನ್ ಜೈಲಿನಲ್ಲೇ ಇರಬೇಕಾಗುತ್ತದೆ ಎನ್ನಲಾಗ್ತಿದೆ.

ಅಂದಹಾಗೆ ದರ್ಶನ್ ಸೋಶಿಯಲ್ ಮೀಡಿಯಾದಲ್ಲಿ ಕೂಡ ಆಕ್ಟೀವ್ ಆಗಿದ್ದರು. ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ಟ್ವಿಟರ್ ಅಕೌಂಟ್‌ಗಳನ್ನು ಹೊಂದಿದ್ದಾರೆ. ಅಭಿಮಾನಿಗಳಿಗೆ ಏನಾದರೂ ಹೇಳಬೇಕು ಅಂದಾಗ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಿದ್ದರು. ತಮ್ಮ ಸಿನಿಮಾಗಳ ಅಪ್‌ಡೇಟ್ ಕೊಡುತ್ತಿದ್ದರು. ಕಳೆದ ವರ್ಷ 5 ತಿಂಗಳು ಜೈಲು ಸೇರಿದ್ದಾಗ ಯಾವುದೇ ಪೋಸ್ಟ್ ಬಂದಿರಲಿಲ್ಲ. ಜೈಲಿನಿಂದ ಹೊರಬಂದು ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದರು. ಇದೀಗ ಮತ್ತೆ ಜೈಲು ಸೇರಿದ್ದು ಈಗ ಆ ಅಕೌಂಟ್‌ಗಳನ್ನು ಪತ್ನಿ ವಿಜಯಲಕ್ಷ್ಮಿ ನಿರ್ವಹಿಸಲಿದ್ದಾರೆ.
ವಿಜಯಲಕ್ಷ್ಮಿ ದರ್ಶನ್ ಟ್ವೀಟ್ ಮಾಡಿ "ನನ್ನ ನೆಚ್ಚಿನ ಡಿಬಾಸ್ ಸೆಲೆಬ್ರೆಟಿಗಳೇ, ನಿಮ್ಮ ಚಾಲೆಂಜಿಂಗ್ ಸ್ಟಾರ್ ನಿಮ್ಮೆಲ್ಲರನ್ನೂ ತನ್ನ ಹೃದಯದಲ್ಲಿ ಹೊತ್ತುಕೊಂಡಿದ್ದಾರೆ. ಅವರು ನಿಮ್ಮೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಹಿಂತಿರುಗುವವರೆಗೆ, ನಾನು ಅವರ ಸಾಮಾಜಿಕ ಮಾಧ್ಯಮವನ್ನು ನಿರ್ವಹಿಸುತ್ತೇನೆ, ಅವರ ಯಾವುದೇ ಅಪ್‌ಡೇಟ್ ಮತ್ತು ಸಿನಿಮಾ ಪ್ರಚಾರಕ್ಕೆ ಸಂಬಂಧಿಸಿದ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತೇನೆ" ಎಂದು ಬರೆದುಕೊಂಡಿದ್ದಾರೆ.
"ನೀವು ತೋರಿಸುತ್ತಿರುವ ಪ್ರೀತಿ, ಪ್ರಾರ್ಥನೆಗಳು ಮತ್ತು ತಾಳ್ಮೆ ಅವರಿಗೆ ಮತ್ತು ನಮ್ಮ ಕುಟುಂಬಕ್ಕೆ ಅಪಾರ ಶಕ್ತಿಯನ್ನು ನೀಡುತ್ತದೆ. ಆ ಏಕತೆ ಮತ್ತು ಸಕಾರಾತ್ಮಕತೆಯನ್ನು ಉಳಿಸಿಕೊಳ್ಳೋಣ. ಅದೇ ಪ್ರೀತಿ ಮತ್ತು ಶಕ್ತಿಯೊಂದಿಗೆ ಅವರು ಶೀಘ್ರದಲ್ಲೇ ಹಿಂತಿರುಗುತ್ತಾರೆ " ಎಂದು ಪೋಸ್ಟ್ ಮಾಡಿದ್ದಾರೆ. ಈಗಾಗಲೇ 'ಡೆವಿಲ್' ಸಿನಿಮಾ ಬಿಡುಗಡೆ ಬಗ್ಗೆ ದರ್ಶನ್ ಪ್ರತಿಕ್ರಿಯಿಸಿದ್ದಾರೆ. ಪತ್ನಿಯ ಮೂಲಕ ಸಿನಿಮಾ ಬಿಡುಗಡೆಗೆ ಯಾವುದೇ ಸಮಸ್ಯೆ ಆಗಬಾರದು ಎಂದು ತಿಳಿಸಿದ್ದಾರೆ.
"ಪ್ರಸಕ್ತ ವಿದ್ಯಮಾನ ಏನೇ ಇದ್ದರು, ನನ್ನ ನಂಬಿ ಕನಸು ಕಂಡಿರುವ ನಿರ್ದೇಶಕರ ಹಾಗು ನನ್ನ ಮೇಲೆ ಕೊಟ್ಯಂತರ ಹಣ ಹೂಡಿರುವ ನಿರ್ಮಾಪಕರ ಬೆಂಬಲವಾಗಿ ನಿಲ್ಲಬೇಕಾದ್ದು ನನ್ನ ಆದ್ಯ ಕರ್ತವ್ಯ , ಹಾಗಾಗಿ ನನ್ನ " ದಿ ಡೆವಿಲ್ " ಚಿತ್ರದ ಎಲ್ಲಾ ಕೆಲಸ ಕಾರ್ಯಗಳು ಯಾವುದೆ ಅಡೆತಡೆಇಲ್ಲದೆ ಸಾಗಲಿ ಎಂಬುಂದು ನನ್ನ ಆಶಯ, ಹಾಗಾಗಿ ಅದಕ್ಕೆ ನನ್ನ ಸಂಪೂರ್ಣಸಹಕಾರವಿದೆ ಎಂದು ಈ ಮೂಲಕ ತಿಳಿಸುತ್ತೇದ್ದೇನೆ. ಹಾಗು ಇದಕ್ಕೆ ನನ್ನ ಸೆಲೆಬ್ರಿಟಿಗಳ ಸಹಮತವಿದೆಯೆಂದು ಧೃಡವಾಗಿನಂಬಿದ್ದೇನೆ" ಎಂದು ದರ್ಶನ್ ಹೇಳಿರುವುದನ್ನು ವಿಜಯಲಕ್ಷ್ಮಿ ತಿಳಿಸಿದ್ದರು.
ಮಿಲನಾ ಪ್ರಕಾಶ್ ನಿರ್ದೇಶಿಸಿ, ನಿರ್ಮಾಣ ಮಾಡಿರುವ 'ಡೆವಿಲ್' ಸಿನಿಮಾ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ರಚನಾ ರೈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ಫಸ್ಟ್ ಸಾಂಗ್ ಬಿಡುಗಡೆಗೆ ಇತ್ತೀಚೆಗೆ ಚಿತ್ರತಂಡ ಸಿದ್ಧತೆ ನಡೆದಿತ್ತು. ಅಷ್ಟರಲ್ಲೇ ದರ್ಶನ್ ಜಾಮೀನ ರದ್ದಾಗಿ ಮತ್ತೆ ಜೈಲಿಗೆ ಹೋಗುವಂತಾಗಿತ್ತು. ಹಾಗಾಗಿ ಸಾಂಗ್ ರಿಲೀಸ್ ಆಗಿರಲಿಲ್ಲ. ಇದೀಗ ದರ್ಶನ್ ಒಪ್ಪಿರುವುದರಿಂದ ಶೀಘ್ರದಲ್ಲೇ "ಇದ್ರೇ ನೆಮ್ಮದಿಯಾಗಿರ್ಬೇಕು" ಸಾಂಗ್ ಬಿಡುಗಡೆ ಆಗಲಿದೆ.
ಅಕ್ಟೋಬರ್ ಕೊನೆ ವಾರದಲ್ಲಿ 'ಡೆವಿಲ್' ಸಿನಿಮಾ ಬಿಡುಗಡೆ ಆಗಬಹುದು ಎನ್ನಲಾಗ್ತಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುಧಾಕರ್ ರಾಜ್ ಛಾಯಾಗ್ರಹಣವಿದೆ.


Click it and Unblock the Notifications











