ಮಗನ ಸ್ಕೂಲ್ ಟೀಚರ್ ಹೇಳಿದ ಆ ಮಾತಿಗೆ ಪಿತ್ತ ನೆತ್ತಿಗೇರಿತ್ತು ಎಂದ್ರು ದರ್ಶನ್!
ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಿದ್ದ ರಾಬರ್ಟ್ ಚಿತ್ರದ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಾವ ಚಿತ್ರವೂ ಸಹ ಬೆಳ್ಳಿ ತೆರೆಗೆ ಅಪ್ಪಳಿಸಿಲ್ಲ. ಈ ವರ್ಷದ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ದರ್ಶನ್ ನಟನೆಯ ಕ್ರಾಂತಿ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ ಚಿತ್ರೀಕರಣ ವಿಳಂಬವಾದ ಕಾರಣ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿತ್ತು. ಸದ್ಯ ಕ್ರಾಂತಿ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು ಜನವರಿ 26ರ ಗಣರಾಜ್ಯೋತ್ಸವ ದಿನದಂದು ಬೆಳ್ಳಿತೆರೆ ಮೇಲೆ ಕ್ರಾಂತಿ ಮಾಡಲಿದೆ.
ಹೀಗೆ ದಿನಾಂಕ ಘೋಷಣೆಗೊಂಡ ಬೆನ್ನಲ್ಲೇ ಕ್ರಾಂತಿ ಚಿತ್ರತಂಡ ಪ್ರಚಾರ ಕಾರ್ಯಗಳನ್ನು ಆರಂಭಿಸಿದೆ. ವಿಶೇಷವಾಗಿ ಚಿತ್ರದ ನಾಯಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂದರ್ಶನಗಳಲ್ಲಿ ಭಾಗವಹಿಸುವುದರ ಮೂಲಕ ಚಿತ್ರದ ಪ್ರಚಾರವನ್ನು ಆರಂಭಿಸಿದ್ದಾರೆ. ಚಿತ್ರ ಶಿಕ್ಷಣದ ಕುರಿತಾಗಿರುವುದರಿಂದ ಹೆಚ್ಚಾಗಿ ಶಾಲೆಗಳ ಕುರಿತಾಗಿ ಸಂದರ್ಶನಗಳಲ್ಲಿ ಮಾತನಾಡಿದ್ದಾರೆ.
ಇನ್ನು ನಮ್ಮ ಫಿಲ್ಮಿಬೀಟ್ ಕನ್ನಡದ ಜತೆ ಕೂಡ ದರ್ಶನ್ ಮಾತನಾಡಿದ್ದು ಕೇವಲ ಕ್ರಾಂತಿ ಚಿತ್ರದ ಕುರಿತು ಮಾತ್ರವಲ್ಲದೇ ತಮ್ಮ ಬಾಲ್ಯದ ಬಗ್ಗೆ, ಶಾಲಾ ದಿನಗಳ ಬಗ್ಗೆ ಹಾಗೂ ತಮ್ಮ ಮಗನ ಈಗಿನ ಶಾಲಾ ವ್ಯವಸ್ಥೆ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ತಮ್ಮ ಮಗನ ಶಾಲೆಗೆ ಪೋಷಕರ ಸಭೆಗೆಂದು ತೆರಳಿದ್ದಾಗ ಶಿಕ್ಷಕಿ ಹೇಳಿದ ಮಾತಿನಿಂದ ತಾವು ಕೋಪಗೊಂಡದ್ದರ ಬಗ್ಗೆಯೂ ಸಹ ದರ್ಶನ್ ತಿಳಿಸಿದ್ದಾರೆ.

ಶಿಕ್ಷಕಿಯ ಮಾತಿನಿಂದ ಕೋಪಗೊಂಡಿದ್ದ ದರ್ಶನ್
ಮಗನ ಓದುವ ಶಾಲೆಯಲ್ಲಿ ಪೋಷಕರ ಸಭೆಯಲ್ಲಿ ಯಾವಾಗಲಾದರೂ ಭಾಗವಹಿಸಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ದರ್ಶನ್ ದೊಡ್ಡ ಶಾಲೆಯೊಂದರಲ್ಲಿ ಪೋಷಕರ ಸಭೆಗೆ ಹಾಜರಾಗಲೇಬೇಕು ಎಂದು ವಿನೀಶ್ ಹಠ ಹಿಡಿದಿದ್ದ ಹಾಗಾಗಿ ಹೋಗಿದ್ದೆ ಎಂದರು. "ಈ ಸಮಯದಲ್ಲಿ ಟೀಚರ್ ನಿವೇನು ಮಾಡಿಕೊಂಡಿದ್ದೀರ ಎಂದು ಕೇಳಿದರು, ನಾನು ಕಲಾವಿದನಾಗಿ ಕೆಲಸ ಮಾಡ್ತಾ ಇದ್ದೇನೆ ಎಂದೆ. ಮಗನಿಗೆ ಪ್ರತಿದಿನ ಎಷ್ಟು ಗಂಟೆ ಸಮಯ ಕೊಡ್ತೀರ ಎಂದು ಕೇಳಿದರು ಪ್ರತಿದಿನ ಎರಡು ಗಂಟೆ ಎಂದು ಹೇಳಿದೆ. ಅದಕ್ಕೆ ಇಲ್ಲ ಅದಕ್ಕಿಂತ ಹೆಚ್ಚು ಸಮಯ ಕೊಡಬೇಕು ಎಂದು ಅವರು ಹೇಳಿದರು ಆಗಲೇ ನನಗೆ ಪಿತ್ತ ನೆತ್ತಿಗೇರಿತ್ತು" ಎಂದು ದರ್ಶನ್ ತಿಳಿಸಿದರು.

ಅವನಿಗೆ ಹೆಚ್ಚು ಸಮಯ ಕೊಟ್ರೆ ದುಡ್ಡು ಮೇಲಿಂದ ಉದುರುತ್ತಾ?
ಹೀಗೆ ಮಗನ ಶಿಕ್ಷಕರು ದಿನದಲ್ಲಿ ಐದಾರು ಗಂಟೆಯಾದರೂ ನೀವು ನಿಮ್ಮ ಮಗನಿಗೆ ಸಮಯ ಕೊಡಬೇಕು ಎಂದು ಹೇಳಿದ್ದನ್ನು ಖಂಡಿಸಿದ ದರ್ಶನ್ "ಪ್ರತಿದಿನ ಇವನಿಗೆ ಐದಾರು ಗಂಟೆ ಟೈಮ್ ಕೊಟ್ರೆ ವರ್ಷ ವರ್ಷ ನಿಮಗೆ ಕೊಡ್ತೀನಲ್ಲ ಲಕ್ಷ ಲಕ್ಷ ಅದು ಮೇಲಿಂದ ಉದುರುವುದಿಲ್ಲ, ನಾನು ಹೋಗಿ ಅಲ್ಲಿ ಕೆಲಸ ಮಾಡಿದರೇನೆ ಕೂಲಿ ಸಿಗುವುದು ಎಂದೆ. ಇದಕ್ಕೆ ಇಲ್ಲ ಹಂಗೆಲ್ಲಾ ಆಗಲ್ಲ ಎಂದರು. ಈ ರೀತಿ ಸಮಯ ಕೊಡಿ ಅಂತೀರಲ್ಲ ಹಾಗಾದರೆ ಮಿಲಿಟರಿಯಲ್ಲಿರುವ ಸೈನಿಕನ ಮಕ್ಕಳಿಗೆ ನಿಮ್ಮ ಶಾಲೆಯಲ್ಲಿ ಸೀಟ್ ಕೊಡಲ್ವ ಅಂತ ಕೇಳಿದೆ" ಎಂದು ಹೇಳಿದರು. ಶಿಕ್ಷಕರು ಇನ್ನೂ ಮುಂದುವರಿದು ಮಾತನಾಡಿದಾಗ ಸಿಟ್ಟುಗೊಂಡ ದರ್ಶನ್ ಈ ಶಾಲೆಯೇ ಬೇಡ ನಡಿ ಸರ್ಕಾರಿ ಶಾಲೆಯಲ್ಲಿ ಓದಿಸುತ್ತೇನೆ ಎಂದು ಸಭೆಯಿಂದ ಎದ್ದು ಹೊರಬಂದಿದ್ದರು.

ನಾನು ಹತ್ತನೇ ತರಗತಿ ಜಸ್ಟ್ ಪಾಸ್
ತಮ್ಮ ಶಾಲಾ ದಿನಗಳನ್ನು ನೆನೆದ ದರ್ಶನ್ "ನಾನು ಓದಿರೋದು ಬರೀ ಹತ್ತನೇ ತರಗತಿ, ಅದೂ ಸಹ ಜಸ್ಟ್ ಪಾಸ್. ನಾನು ಬ್ರಿಲಿಯಂಟ್ ಸ್ಟೂಡೆಂಟ್ ಅಲ್ಲ, ಏನೂ ಇಲ್ಲ. ಟೆಂತ್ ಪಾಸ್ ಅಷ್ಟೇ' ಎಂದು ತಿಳಿಸಿದರು. ಮಾತು ಮುಂದುವರಿಸಿದ ದರ್ಶನ್ ಫಸ್ಟ್ ಬೆಂಚ್ ಸ್ಟೂಡೆಂಟಾ ಅಥವಾ ಲಾಸ್ಟ್ ಬೆಂಚ್ ಸ್ಟೂಡೆಂಟಾ ಎಂಬ ಪ್ರಶ್ನಗೂ ಸಹ ಉತ್ತರಿಸಿದರು. ತಾನು ಲಾಸ್ಟ್‌ಗಿಂತ ಲಾಸ್ಟ್ ಬೆಂಚ್ ಸ್ಟೂಡೆಂಟ್ ಎಂದು ದರ್ಶನ್ ಹೇಳಿಕೊಂಡರು. ಓದಿನ ಮೇಲೆ ಹೆಚ್ಚು ಆಸಕ್ತಿ ಇರದ ಕಾರಣ ಲಾಸ್ಟ್ ಬೆಂಚ್ ಸ್ಟೂಡೆಂಟ್ ಎಂಬುದನ್ನೂ ಸಹ ದರ್ಶನ್ ತಿಳಿಸಿದರು.

ಮಗ ನನಗಿಂತ ಸ್ವಲ್ಪ ಬೆಟರ್
ಇನ್ನು ಮಗ ಫಸ್ಟ್ ಬೆಂಚಾ, ಇಲ್ಲ ನಿಮ್ಮ ಹಾಗೆ ಲಾಸ್ಟ್ ಬೆಂಚಾ ಎಂಬ ಪ್ರಶ್ನೆ ಎದುರಾದಾಗ ಮಾತನಾಡಿದ ದರ್ಶನ್ ತಮ್ಮ ಮಗ ಸ್ವಲ್ಪ ತಮ್ಮ ಹಾಗೆ, ಆದರೆ ತನಗಿಂತ ಒಂದೆರಡು ಬೆಂಚ್ ಮುಂದೆ ಎಂದು ಹೇಳಿಕೊಂಡರು.


Click it and Unblock the Notifications











