RCB vs CSK: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದರ್ಶನ್ ಪುತ್ರ; ಆರ್‌ಸಿಬಿ ಗೆಲುವಿಗೆ ಸಂಭ್ರಮಿಸಿದ ವಿನೀಶ್-ವಿಡಿಯೋ
ಚೆನ್ನೈ ಸೂಪರ್ ಕಿಂಗ್ ವಿರುದ್ಧ ನಿನ್ನೆ(ಏಪ್ರಿಲ್ 5) ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸಿದೆ. ಹೈವೋಲ್ಟೇಜ್ ಪಂದ್ಯದಲ್ಲಿ ಧೋನಿ ಹುಡುಗರಿಂದ ಭಾರೀ ಮುಖಭಂಗವಾಗಿದೆ. ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗರು ಐಪಿಎಲ್‌ನಲ್ಲಿ ಬದ್ಧವೈರಿಗಳು ಎಂಬಂತೆ ಬಿಂಬಿತವಾಗಿವೆ. ಹಾಗಾಗಿ ನಿನ್ನೆಯ ಪಂದ್ಯ ಬಹಳ ಕುತೂಹಲ ಮೂಡಿಸಿತ್ತು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಿದರು. ನಟ ದರ್ಶನ್ ಪುತ್ರ ವಿನೀಶ್ ಕೂಡ ಪ್ರೇಕ್ಷಕರ ಗ್ಯಾಲರಿಯಲ್ಲಿ ಕಾಣಿಸಿಕೊಂಡಿದ್ದರು.
ಟಿಮ್ ಡೇವಿಡ್, ದೇವದತ್ತ ಪಡಿಕ್ಕಲ್ ಹಾಗೂ ರಜತ್ ಪಾಟಿದಾರ್ ಅದ್ಭುತ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ ತಂಡ 251 ರನ್‌ಗಳ ಭಾರೀ ಗುರಿಯನ್ನು ಸಿಎಸ್‌ಕೆ ಮುಂದಿಟ್ಟಿತ್ತು. ಈ ಗುರಿಯನ್ನು ಮುಟ್ಟಲು ಧೋನಿ ಹುಡುಗರಿಂದ ಸಾಧ್ಯವಾಗಲಿಲ್ಲ. 19.4 ಓವರ್‌ಗಳಲ್ಲಿ 207 ರನ್‌ಗಳಿಗೆ ತಂಡ ಆಲ್‌ಔಟ್ ಆಗಿತ್ತು. ಆ ಮೂಲಕ ಐಪಿಎಲ್-2026 ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ತನ್ನ ಎರಡನೇ ಪಂದ್ಯ ಗೆದ್ದು ಬೀಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬರೀ 5 ಪಂದ್ಯಗಳನ್ನು ಮಾತ್ರ ಈ ಬಾರಿ ಆರ್‌ಸಿಬಿ ತಂಡ ಆಡಲಿದೆ. ಹಾಗಾಗಿ ಟಿಕೆಟ್‌ಗೆ ಭಾರೀ ಡಿಮ್ಯಾಂಡ್ ಇದೆ. 3,750 ರೂಪಾಯಿಯಿಂದ ಶುರುವಾಗಿ 47,000 (ಪ್ರೀಮಿಯಂ/ವಿಐಪಿ) ರೂಪಾಯಿವರೆಗೆ ಟಿಕೆಟ್ ದರ ನಿಗದಿಯಾಗಿತ್ತು. ಆದರೂ ಅಭಿಮಾನಿಗಳು ಟಿಕೆಟ್ ಖರೀದಿಸಿ ಪಂದ್ಯವನ್ನು ಕಣ್ತುಂಬಿಕೊಳ್ಳಲು ಮುಗಿಬಿದ್ದಿದ್ದಾರೆ. ನಿನ್ನೆ ಕೂಡ ದೊಡ್ಡ ಸಂಖ್ಯೆಯಲ್ಲಿ ಕ್ರಿಕೆಟ್ ಪ್ರೇಮಿಗಳು ಕ್ರೀಡಾಂಗಣದಲ್ಲಿ ನೆರೆದಿದ್ದರು. ಪ್ರೇಕ್ಷಕರ ಗ್ಯಾಲರಿಯಲ್ಲಿ ವಿನೀಶ್ ದರ್ಶನ್ ಗಮನ ಸೆಳೆದಿದ್ದಾರೆ. ರೋಷಕ ಪಂದ್ಯ ನೋಡಿ ಎಂಜಾಯ್ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗ್ತಿದೆ.
ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿ ಕ್ರೀಡಾಂಗಣದಲ್ಲಿ ದರ್ಶನ್ ಮಗ.. 'ಕರಿಯ' ಚಿತ್ರದಲ್ಲಿ ಹಳೆಯ ದರ್ಶನ್ ತರಹ ಕಾಣುತ್ತಿದ್ದಾನೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಸದ್ಯ ವಿನೀಶ್ ಬಿಜಿಎಸ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ. ಇತ್ತೀಚೆಗೆ ಬಿಜಿಎಸ್ ಉತ್ಸವ 2025 ಕಾರ್ಯಕ್ರಮದಲ್ಲಿ ಆತ ಡ್ಯಾನ್ಸ್ ಮಾಡಿದ್ದ ವೀಡಿಯೋ ವೈರಲ್ ಆಗಿತ್ತು. ವಿಜಯಲಕ್ಷ್ಮಿ ದರ್ಶನ್ ಕೂಡ ಮಗನ ಡ್ಯಾನ್ಸ್ ಪರ್ಫಾರ್ಮನ್ಸ್ ಕಣ್ತುಂಬಿಕೊಂಡಿದ್ದರು.
ಕೆಲ ದಿನಗಳ ಹಿಂದೆ ಬಿಜಿಎಸ್ ಕಾಲೇಜು ಆವರಣದಲ್ಲಿ ನಟ ಶಿವರಾಜ್‌ಕುಮಾರ್ ಹಾಗೂ ದರ್ಶನ್ ಪುತ್ರ ವಿನೀಶ್ ಭೇಟಿ ಆಗಿದ್ದರು. ಆ ವಿಡಿಯೋ ಸಖತ್ ವೈರಲ್ ಆಗಿತ್ತು. 'ಡ್ಯಾಡ್' ಸಿನಿಮಾ ಚಿತ್ರೀಕರಣಕ್ಕಾಗಿ ಶಿವಣ್ಣ ಅಲ್ಲಿಗೆ ತೆರಳಿದ್ದರು. ಈ ವಿಚಾರ ಗೊತ್ತಾಗಿ ವಿನೀಶ್ ಹೋಗಿ ಮಾತನಾಡಿಸಿದ್ದ. ಇಬ್ಬರೂ ಉಭಯಕುಶಲೋಪರಿ ವಿಚಾರಿಸಿದ್ದರು. ವಿಡಿಯೋ ವೈರಲ್ ಆಗಿತ್ತು. "ಶಿವಣ್ಣ ಇಲ್ಲೇನಾ ಓದುತ್ತಿರೋದು" ಎಂದು ಶಿವಣ್ಣ ಕೇಳಿದ್ದಕ್ಕೆ "ಹೌದು, ಹತ್ತನೇ ಕ್ಲಾಸ್ ಮುಗೀತು, ಇಲ್ಲೇ ಓದುತ್ತಿದ್ದೇನೆ" ಎಂದಿದ್ದ. "ನೀವು ಚೆನ್ನಾಗಿದ್ದೀರಾ?' ಶಿವಣ್ಣನನ್ನು ವಿನೀಶ್ ಕೇಳಿದ್ದು "ನಾನ್ ಚೆನ್ನಾಗಿದ್ದೀನಿ, ಮನೆಯಲ್ಲಿ ಎಲ್ರೂ ಚೆನ್ನಾಗಿದ್ದಾರಾ?" ಎಂದು ಮಾತನಾಡಿ ಬಳಿಕ ಹಸ್ತಲಾಘವ ಮಾಡಿದ್ದರು.
ತಂದೆ ದರ್ಶನ್ ಅವರೊಟ್ಟಿಗೆ ಚಿಕ್ಕಂದಿನಿಂದಲೂ ಆಗೊಮ್ಮೆ ಈಗೊಮ್ಮೆ ವಿನೀಶ್ ಸಿನಿಮಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ. ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುವ ಇಂಗಿತವನ್ನು ದರ್ಶನ್ ವ್ಯಕ್ತಪಡಿಸಿದ್ದಾರೆ. ಈಗಾಗಲೇ 'ಮಿ. ಐರಾವತ' ಹಾಗೂ 'ಯಜಮಾನ' ಚಿತ್ರದ ಸಣ್ಣ ಸಣ್ಣ ಝಲಕ್‌ನಲ್ಲಿ ವಿನೀಶ್ ಕಾಣಿಸಿಕೊಂಡಿದ್ದಾನೆ. ಮಗನನ್ನು ಹೀರೊ ಮಾಡಲು ದರ್ಶನ್ ಮನಸ್ಸು ಮಾಡಿದ್ದಾರೆ. ಕ್ಯಾಮರಾ ಮುಂದೆ ಬರುವ ಮುನ್ನ ಕ್ಯಾಮರಾ ಹಿಂದೆ ಅವನು ಕೆಲಸ ಕಲಿಯಬೇಕು ಎಂದು ಆಗಾಗ್ಗೆ ಹೇಳುತ್ತಿರುತ್ತಾರೆ. ಅಭಿಮಾನಿಗಳು ಈಗಾಗಲೇ ಜ್ಯೂನಿಯರ್ ಬಾಸ್ ಎಂದು ಮೆರೆಸಲು ಆರಂಭಿಸಿದ್ದಾರೆ.


Click it and Unblock the Notifications











