'ಕಾಟೇರ' ರನ್ ಟೈಮ್ ರಿವೀಲ್: ತರುಣ್ ಸುಧೀರ್ ಈ ವಿಚಾರದಲ್ಲಿ ರಿಸ್ಕ್ ತಗೋತ್ತಿದ್ದಾರಾ?
ವರ್ಷದ ಬಹುನಿರೀಕ್ಷಿತ 'ಕಾಟೇರ' ಸಿನಿಮಾ ಬಿಡುಗಡೆಗೆ ಕೌಂಟ್‌ಡೌನ್ ಸ್ಟಾರ್ಟ್ ಆಗಿದೆ. ದರ್ಶನ್ ಅಭಿಮಾನಿಗಳು ಬಹಳ ಕಾತರದಿಂದ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಈಗಾಗಲೇ ಥಿಯೇಟರ್‌ಗಳ ಮುಂದೆ ಚಾಲೆಂಜಿಂಗ್ ಸ್ಟಾರ್ ಕಟೌಟ್‌ಗಳು ಎದ್ದು ನಿಂತಿವೆ. ಅಭಿಮಾನಿಗಳು ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿದ್ದಾರೆ.
ಸ್ಯಾಂಪಲ್‌ಗಳಿಂದಲೇ ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಸಿನಿಮಾ ಭಾರೀ ಸದ್ದು ಮಾಡ್ತಿದೆ. ಸದ್ಯ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಕೂಡ ಸಿಕ್ಕಿದೆ. 'ರಾಬರ್ಟ್' ಚಿತ್ರಕ್ಕೆ ಕೆಲಸ ಮಾಡಿದ ಹಲವರು 'ಕಾಟೇರ'ನ ಬಳಗದಲ್ಲಿದ್ದಾರೆ. ಒಂದೊಳ್ಳೆ ಕಲಾವಿದರು, ತಂತ್ರಜ್ಞರ ತಂಡ ಕಟ್ಟಿಕೊಂಡು ರಾಕ್‌ಲೈನ್ ವೆಂಕಟೇಶ್ ಸಿನಿಮಾ ನಿರ್ಮಿಸಿದ್ದಾರೆ. ಚಿತ್ರದ 3ನೇ ಹಾಡು ಬಿಡುಗಡೆಗೆ ಸಜ್ಜಾಗಿದೆ.

ಮಂಡ್ಯದಲ್ಲಿ ಪ್ರೀ ರಿಲೀಸ್ ಈವೆಂಟ್ ನಡೀತಿದೆ. ರೈತರ ದಿನದ ವಿಶೇಷವಾಗಿ ಚಿತ್ರದಲ್ಲಿರೋ ರೈತರ ಕುರಿತ ಹಾಡನ್ನು ವೇದಿಕೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. 70ರ ದಶಕದ ಕಥೆ ಆಧರಿಸಿ 'ಕಾಟೇರ' ಸಿನಿಮಾ ಕಟ್ಟಿಕೊಡಲಾಗಿದೆ. ಅಂದಿನ ಕಾಲಘಟ್ಟ ತೆರೆಗೆ ತರಲು ಚಿತ್ರತಂಡ ಬಹಳ ಶ್ರಮಪಟ್ಟಿದೆ. ಟ್ರೈಲರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದು ಸಿನಿಮಾ ನೋಡೋಕೆ ಕಾಯುತ್ತಿದ್ದಾರೆ.
ಭೀಮನಳ್ಳಿ ಎನ್ನುವ ಊರಿನಲ್ಲಿ ನಡೆಯುವ ಕಥೆಯನ್ನು 'ಕಾಟೇರ' ಚಿತ್ರದಲ್ಲಿ ತರುಣ್ ಹೇಳುತ್ತಿದ್ದಾರೆ. ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಜಡೇಶ್ ಹಂಪಿ ಹಾಗೂ ತರುಣ್ ಸುಧೀರ್ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಊರಿನ ಧಣಿಗಳ ವಿರುದ್ಧ ತಿರುಗಿ ಬೀಳುವ ಅಸಹಾಯಕ ಜನರ ಕಥೆ ಚಿತ್ರದ ಒನ್‌ಲೈನ್ ಸ್ಟೋರಿ. ಹಳ್ಳಿ ಹೈದನಾಗಿ ದರ್ಶನ್ ಊರಿನ ಜನರ ಪರ ನಿಲ್ಲುವ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
'ಕಾಟೇರ' ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಜೊತೆಗೆ ಚಿತ್ರದ ರನ್‌ಟೈಮ್ ಕೂಡ ರಿವೀಲ್ ಆಗಿದೆ. ಇವತ್ತಿನ ಕಾಲಕ್ಕೆ ಚಿತ್ರದ ರನ್‌ಟೈಮ್ ಜಾಸ್ತಿ ಆಯ್ತಾ? ಎನ್ನುವ ಪ್ರಶ್ನೆ ಮೂಡುವುದು ಸಹಜ. ಅಂದಹಾಗೆ 'ಕಾಟೇರ' ಚಿತ್ರದ ಕಾಲಾವಧಿ ಬರೋಬ್ಬರಿ 2 ಗಂಟೆ 59 ನಿಮಿಷ ಎನ್ನುವ ಮಾಹಿತಿ ಫಿಲ್ಮಿಬೀಟ್‌ಗೆ ಲಭ್ಯವಾಗಿದೆ.

ಇತ್ತೀಚಿನ ದಿನಗಳಲ್ಲಿ ದೊಡ್ಡ ಸಿನಿಮಾಗಳ ರನ್‌ಟೈಮ್ ಎರಡೂವರೆ ಗಂಟೆ ಮೀರುತ್ತಿದೆ. ಅಷ್ಟು ಹೊತ್ತು ಪ್ರೇಕ್ಷಕರನ್ನು ಚಿತ್ರಮಂದಿರದಲ್ಲಿ ಕೂರಿಸಿಕೊಳ್ಳಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡುತ್ತದೆ. ಆದರೆ ಕೆಲ ಸಿನಿಮಾಗಳು ಇದನ್ನು ಸುಳ್ಳಾಗಿಸಿವೆ. ಅದಕ್ಕೆ ತಾಜಾ ಉದಾಹರಣೆ ಬಾಲಿವುಡ್ ಸಿನಿಮಾ 'ಅನಿಮಲ್'. ರಣ್‌ಬೀರ್ ಕಪೂರ್ ನಟನೆಯ ಈ ಸಿನಿಮಾ ಕಾಲಾವಧಿ 3 ಗಂಟೆ 22 ನಿಮಿಷ. ಆದರೆ ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ.
ಸದ್ಯ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ರಿಲೀಸ್ ಆಗಿ ಸದ್ದು ಮಾಡ್ತಿದೆ. ಈ ಚಿತ್ರ 2 ಗಂಟೆ 52 ನಿಮಿಷಗಳಷ್ಟು ಸುದೀರ್ಘವಾಗಿದೆ. ಇನ್ನು ಶಾರುಖ್ ಖಾನ್ 'ಡಂಕಿ' ಸಿನಿಮಾ ರನ್‌ಟೈಮ್ 2 ಗಂಟೆ 40 ನಿಮಿಷ. ಅದೇ ರೀತಿ 'ಕಾಟೇರ' ಸಿನಿಮಾ ಕೂಡ ಬಹಳ ದೊಡ್ಡ ಸಿನಿಮಾ. ಆದರೆ ಸಿನಿಮಾ ಚೆನ್ನಾಗಿದ್ದರೆ, ಪ್ರೇಕ್ಷಕರನ್ನು ರಂಜಿಸುವ ಶಕ್ತಿ ಇದ್ದರೆ 2 ಗಂಟೆ 59 ನಿಮಿಷ ಜಾಸ್ತಿ ಎನಿಸುವುದಿಲ್ಲ. ಚಿತ್ರತಂಡ ಇಂತಾದೊಂದು ನಿರ್ಧಾರ ತೆಗೆದುಕೊಂಡಿದೆ ಅಂದ್ರೆ ಅದಕ್ಕೆ ಬಲವಾದ ಕಾರಣ ಇದ್ದೇ ಇರುತ್ತದೆ.
ಒಂದೊಳ್ಳೆ ಕಥೆಯನ್ನು ಚಿತ್ರತಂಡ ಆಯ್ಕೆ ಮಾಡಿಕೊಂಡಿದ್ದು ಅದನ್ನು ಪ್ರೇಕ್ಷಕರಿಗೆ ಸರಿಯಾದ ರೀತಿಯಲ್ಲಿ ಹೇಳಲು ಕೊಂಚ ಹೆಚ್ಚು ಸಮಯದ ತೆಗೆದುಕೊಂಡಂತೆ ಕಾಣುತ್ತಿದೆ. ಎಲ್ಲದಕ್ಕೂ ಡಿಸೆಂಬರ್ 29ರಂದು ಉತ್ತರ ಸಿಗಲಿದೆ. 'ಉಳುವವನೆ ಭೂಮಿಯ ಒಡೆಯ ಕಾಯ್ದೆ'ಯ ಹಿನ್ನೆಲೆಯಲ್ಲಿ 'ಕಾಟೇರ' ಚಿತ್ರದ ಕಥೆ ಸಾಗಲಿದೆ. ಇನ್ನು ದರ್ಶನ್ ಅಭಿಮಾನಿಗಳು ಕೇಳುವ ಎಲ್ಲಾ ಮಾಸ್ ಅಂಶಗಳು ಚಿತ್ರದಲ್ಲಿದೆ.


Click it and Unblock the Notifications











