ಮಂಡ್ಯದಲ್ಲಿ ಅಭಿ- ಅವಿವಾ ಬೀಗರೂಟ: ಬೆಂಗಳೂರಿನಲ್ಲಿ ದರ್ಶನ್ ಕೈಯಲ್ಲಿ ರೈತ ಬಾವುಟ
ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಮದುವೆ ಸಂಭ್ರಮದ ಕಾರ್ಯಕ್ರಮಗಳು ಮುಂದುವರೆದಿದೆ. ಇಂದು ಮಂಡ್ಯದಲ್ಲಿ ಸಾವಿರಾರು ಅಭಿಮಾನಿಗಳಿಗೆ ಬೀಗರ ಔತಣ ಕೂಟ ಏರ್ಪಡಿಸಲಾಗಿದೆ. ಅಲ್ಲಿಗೆ ಸಿನಿಮಾ ತಾರೆಯರು ಕೂಡ ಬರುವ ನಿರೀಕ್ಷೆ ಇತ್ತು. ಅಂಬಿ ಮನೆಯ ಸದಸ್ಯರಾಗಿ ಸ್ಯಾಂಡಲ್‌ವುಡ್ ತಾರೆಯರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹೇಳಿದ್ದರು.
ಮಂಡ್ಯದ ಗಜ್ಜಲಗೆರೆಯಲ್ಲಿ ಬಹಳ ದೊಡ್ಡಮಟ್ಟದಲ್ಲಿ ಅಂಬಿ ಕುಟುಂಬದಿಂದ ಬೀಗರ ಔತಣಕೂಟ ವ್ಯವಸ್ಥೆ ಮಾಡಲಾಗಿತ್ತು. ಆದರೆ ನಿರೀಕ್ಷೆಗಿಂತ ಹೆಚ್ಚು ಜನ ಒಮ್ಮೆಲೆ ಬಂದಿದ್ದರಿಂದ ನೂಕುನುಗ್ಗಲು ಉಂಟಾಗಿ ಪೊಲೀಸರು ಲಾಠಿ ಪ್ರಹಾರ ಕೂಡ ನಡೆಸುವಂತಾಯಿತು. ಇನ್ನು ಇದು ಅಭಿಮಾನಿಗಳಿಗಾಗಿ ಏರ್ಪಡಿಸಿದ್ದ ಕಾರ್ಯಕ್ರಮ. ಹಾಗಾಗಿ ಸಿನಿಮಾ ತಾರೆಯರು ಯಾರು ಭಾಗಿ ಆಗಲಿಲ್ಲ. ಅಂಬಿ ಕುಟುಂಬಕ್ಕೆ ಬಹಳ ಆಪ್ತರಾದ ದರ್ಶನ್ ಪಾಲ್ಗೊಳ್ಳುವ ನಿರೀಕ್ಷೆಯಿತ್ತು. ಆದರೆ ದರ್ಶನ್ 'ಕಾಟೇರ' ಚಿತ್ರೀಕರಣ ಶುರು ಮಾಡಿದ್ದಾರೆ.

ವಿಧಾನಸೌಭೆ ಚುನಾವಣೆ ಹಿನ್ನೆಲೆಯಲ್ಲಿ ಒಂದೂವರೆ ತಿಂಗಳ ಕಾಲ 'ಕಾಟೇರ' ಚಿತ್ರೀಕರಣದಿಂದ ದರ್ಶನ್ ಬಿಡುವು ಪಡೆದುಕೊಂಡಿದ್ದರು. ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರ ದರ್ಶನ್ ಚುನಾವಣೆ ಪ್ರಚಾರದಲ್ಲಿ ಭಾಗಿ ಆಗಿದ್ದರು. ಇನ್ನು ಮತದಾನದ ನಂತರ ದರ್ಶನ್ ವಲ್ಡ್‌ಲೈಫ್ ಫೋಟೊಗ್ರಫಿಗಾಗಿ ಉತ್ತರಕಾಂಡ್‌ಗೆ ಹೋಗಿದ್ದರು. ಅಲ್ಲಿಂದ ವಾಪಸ್ ಬಂದ ಬಳಿಕ ಹೈದರಾಬಾದ್ ರಾಮೋಜಿ ಫಿಲ್ಮ್‌ಸಿಟಿಯಲ್ಲಿ'ಕಾಟೇರ' ಚಿತ್ರದ ಒಂದು ಸಣ್ಣ ಶೆಡ್ಯೂಲ್ ಮುಗಿಸಲಾಗಿತ್ತು.
ಮತ್ತೆ 'ಕಾಟೇರ' ಶೂಟಿಂಗ್
ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಮಂಡ್ಯದಲ್ಲಿ ನಡೆಯುತ್ತಿರುವ ಅಭಿ- ಅವಿವಾ ಬೀಗರ ಔತಣಕೂಟದಲ್ಲಿ ದರ್ಶನ್ ಭಾಗಿ ಆಗಲಿಲ್ಲ. ಅದೇ ಸಮಯದಲ್ಲಿ ದರ್ಶನ್ 'ಕಾಟೇರ' ಚಿತ್ರದ ಚಿತ್ರೀಕರಣಕ್ಕೆ ಹಾಜರ್ ಆಗಿದ್ದಾರೆ. ಬೆಂಗಳೂರಿನಲ್ಲೇ ಸಿನಿಮಾ ಚಿತ್ರೀಕರಣದ ಮತ್ತೆ ಆರಂಭವಾಗಿದೆ. ನಟ ದರ್ಶನ್ ಹಸಿರು ಬಾವುಟ(ದಂಡಕ್ಕೆ ಹಸಿರು ಬಣ್ಣದ ಟವೆಲ್ ಕಟ್ಟಿರುವ) ಹಿಡಿದು ಹಿಂದಕ್ಕೆ ತಿರುಗಿ ನಿಂತಿರುವ ಫೋಟೊ ವೈರಲ್ ಆಗ್ತಿದೆ.

ಕುತೂಹಲ ಕೆರಳಿಸಿದ ಸಿನಿಮಾ
'ಕಾಟೇರ' ಮಾಮೂಲಿ ಕಮರ್ಷಿಯಲ್ ಸಿನಿಮಾ ಅಲ್ಲ. ಈ ರೆಟ್ರೋ ಶೈಲಿಯ ಚಿತ್ರದಲ್ಲಿ 70ರ ದಶಕದ ಕಥೆಯನ್ನು ಹೇಳಲಾಗ್ತಿದೆ. 'ಉಳುವವನೆ ಭೂಮಿಯ ಒಡೆಯ' ಕಾಯ್ದೆ ಜಾರಿಗೆ ತಂದಾಗ ಹಳ್ಳಿಗಳಲ್ಲಿ ನಡೆದ ಸಂಘರ್ಷಗಳ ಹಿನ್ನಲೆಯಲ್ಲಿ ಈ ಕಥೆಯನ್ನು ಕಟ್ಟಿಕೊಡಲಾಗುತ್ತಿದೆ. ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ನಿರ್ಮಾಣ ಮಾಡುತ್ತಿರುವುದು ವಿಶೇಷ. ರಾಕ್‌ಲೈನ್ ವೆಂಕಟೇಶ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಒಂದೊಳ್ಳೆ ಕಲಾವಿದರು ಹಾಗೂ ತಂತ್ರಜ್ಞರ ತಂಡ ಕಟ್ಟಿಕೊಂಡು ತರುಣ್ ಸುಧೀರ್ ಈ ಸಿನಿಮಾ ತೆರೆಗೆ ತರ್ತಿದ್ದಾರೆ.
ಅಭಿ ಕಲ್ಯಾಣದಲ್ಲಿ ದರ್ಶನ್
ದರ್ಶನ್ ನನ್ನ ದೊಡ್ಡಮಗ ಇದ್ದಂತೆ ಎಂದು ಸುಮಲತಾ ಅಂಬರೀಶ್ ಹೇಳುತ್ತಿರುತ್ತಾರೆ. ಅಂಬರೀಶ್ ಅವರನ್ನು ಕೂಡ ದರ್ಶನ್ ಅಪ್ಪಾಜಿ ಅಂತಲೇ ಕರೆಯುತ್ತಿದ್ದರು. ಇನ್ನು ಸಹೋದರ ಅಭಿ ಮದುವೆ ಸಂಭ್ರಮದಲ್ಲಿ ದರ್ಶನ್ ಭಾಗಿ ಆಗಿದ್ದರು. ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸಿ ಭಾರೀ ಉಡುಗೊರೆ ನೀಡಿದ್ದರು. ಸಂಗೀತ್ ಪಾರ್ಟಿಯಲ್ಲಿ ಪಾಲ್ಗೊಂಡು ಭರ್ಜರಿ ಸ್ಟೆಪ್ಸ್ ಹಾಕಿದ್ದರು. ದರ್ಶನ್- ಯಶ್ ಹೆಜ್ಜೆ ಹಾಕಿದ್ದ ವಿಡಿಯೋಗಳಂತೂ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇನ್ನು ವೈರಲ್ ಆಗುತ್ತಲೇಯಿದೆ.
ವರ್ಷಾಂತ್ಯಕ್ಕೆ 'ಕಾಟೇರ'?
ಕಳೆದ ವರ್ಷ ವರಲಕ್ಷ್ಮಿ ಹಬ್ಬದಂದು 'ಕಾಟೇರ' ಚಿತ್ರದ ಮುಹೂರ್ತ ನೆರವೇರಿತ್ತು. ನಂತರ ರಾಕ್‌ಲೈನ್ ಸ್ಟುಡಿಯೋದಲ್ಲಿ ಫಸ್ಟ್ ಶೆಡ್ಯೂಲ್ ಶೂಟಿಂಗ್ ನಡೆದಿತ್ತು. ನಂತರ ಕನಕಪುರ, ತುಂಬನೆರಳೆ ಹಳ್ಳಿ ಸೇರಿದಂತೆ ಕೆಲವೆಡೆ ಚಿತ್ರವನ್ನು ಸೆರೆಹಿಡಿಲಾಗಿತ್ತು. ಹಳ್ಳಿಯ ಸೆಟ್ ನಿರ್ಮಾಣ ಮಾಡಿ ಕೂಡ ಒಂದಷ್ಟು ಸನ್ನಿವೇಶಗಳನ್ನು ಕಟ್ಟಿಕೊಡಲಾಗಿದೆ. ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.


Click it and Unblock the Notifications











