ಮತ್ತೆ ಸದ್ದಿಲ್ಲದೇ ಶುರುವಾಯಿತು 'ಕಾಟೇರ' ಶೂಟಿಂಗ್: ಎಲ್ಲಿ? ಯಾರೆಲ್ಲಾ ಭಾಗಿ ಆಗಿದ್ದಾರೆ?
ಕೊನೆಗೂ ವಿಧಾನಸಭೆ ಚುನಾವಣೆ ಮುಗಿದೆ. ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ ಸರ್ಕಾರ ಬಂದಾಗಿದೆ. ನಟ ದರ್ಶನ್ ಕೂಡ ಈ ಬಾರಿ ವಿವಿಧ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಒಂದೇ ಪಕ್ಷಕ್ಕೆ ಸೀಮಿತವಾಗದೇ ಎಲ್ಲಾ ಪಕ್ಷಗಳ ಅಭ್ಯರ್ಥಿಗಳ ಪರ ಮತ ಯಾಚಿಸಿದರು. ಕೊನೆಗೆ ಸ್ವತಂತ್ರ ಅಭ್ಯರ್ಥಿಯ ಪರ ಕೂಡ ದರ್ಶನ್ ಮತ ಬೇಟೆ ನಡೆಸಿದ್ದರು.
ಚುನವಾಣೆ ಪ್ರಚಾರದ ಕಾರಣ 'ಕಾಟೇರ' ಸಿನಿಮಾ ಚಿತ್ರೀಕರಣದಿಂದ ಬಿಡುವು ಮಾಡಿಕೊಂಡಿದ್ದರು. ಪ್ರಚಾರ ಮುಗಿದು ಮತದಾನ ಮಾಡಿದ ಬಳಿಕ ದರ್ಶನ್ ನೇರವಾಗಿ ಸ್ನೇಹಿತರ ಜೊತೆ ಉತ್ತರಕಾಂಡಕ್ಕೆ ತೆರಳಿದ್ದರು. ಅಲ್ಲಿನ ಹುಲಿ ಅಭಯಾರಣ್ಯದಲ್ಲಿ ವೈಲ್ಡ್ ಲೈಫ್ ಫೋಟೊಗ್ರಫಿ ಮಾಡಿ ಖುಷಿಪಟ್ಟಿದ್ದರು. 3 ದಿನಗಳ ಹಿಂದೆ ಬೆಂಗಳೂರಿಗೆ ವಾಪಸ್ ಆಗಿದ್ದರು. ಇದೀಗ ಮತ್ತೆ ಹೈದರಾಬಾದ್‌ಗೆ ತೆರಳಿಸಿದ್ದಾರೆ. ಮತ್ತೆ ಸಿನಿಮಾ ಚಿತ್ರೀಕರಣದತ್ತ ನಟ ದರ್ಶನ್ ಮುಖ ಮಾಡಿದ್ದಾರೆ.

ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ 'ಕಾಟೇರ' ಚಿತ್ರದ ಚಿತ್ರೀಕರಣ ಪುನರಾಂಭವಾಗಿದೆ. ಹೊಸ ಶೆಡ್ಯೂಲ್‌ನಲ್ಲಿ ನಟ ದರ್ಶನ್ ಕೂಡ ಭಾಗಿ ಆಗಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. 'ಕ್ರಾಂತಿ' ನಂತರ 'ಕಾಟೇರ' ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ. ಚಿತ್ರದಲ್ಲಿ 70ರ ದಶಕದ ಕಥೆಯನ್ನು ಹೇಳಲಾಗುತ್ತಿದೆ. ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ಮೂಡಿ ಬರ್ತಿದೆ.
ಭಾರೀ ಕುತೂಹಲ ಕೆರಳಿಸಿದ 'ಕಾಟೇರ'
ಟೈಟಲ್‌ನಿಂದಲೇ 'ಕಾಟೇರ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಸೂಪರ್ ಹಿಟ್ 'ರಾಬರ್ಟ್' ಕಾಂಬಿನೇಷನ್‌ನಲ್ಲಿ ಈ ಸಿನಿಮಾ ಮೂಡಿ ಬರ್ತಿದೆ. ರಾಕ್‌ಲೈನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. 'ಉಳುವವನೇ ಭೂಮಿಯ ಒಡೆಯ' ಕಾಯ್ದೆ ಜಾರಿಗೆ ತಂದಾಗ ದೇಶದಲ್ಲಾದ ಸಂಘರ್ಷಗಳ ಹಿನ್ನೆಲೆಯಲ್ಲಿ ಈ ಸಿನಿಮಾ ಕಥೆ ಕೂಡ ಸುತ್ತತ್ತದೆ ಎನ್ನಲಾಗ್ತಿದೆ. ಈ ಬಗ್ಗೆ ನಟ ದರ್ಶನ್ ಕೂಡ ಸುಳಿವು ನೀಡಿದ್ದಾರೆ.

ಘಟಾನುಘಟಿ ಕಲಾವಿದರು
ತರುಣ್ ಸುಧೀರ್ 70ರ ಕಾಲಘಟ್ಟವನ್ನು ಕಟ್ಟಿಕೊಡಲು ಬಹಳ ಶ್ರಮಿಸುತ್ತಿದ್ದಾರೆ. ಸಾಕಷ್ಟು ಸೆಟ್‌ಗಳನ್ನು ಹಾಕಿ ಚಿತ್ರೀಕರಣ ನಡೆಸಲಾಗುತ್ತಿದೆ. 70ರ ದಶಕವನ್ನು ನೆನಪಿಸುವ ಲೊಕೇಶನ್‌ಗಳಲ್ಲಿ ಕೂಡ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದಾರೆ. ಇನ್ನು ಜಗಪತಿ ಬಾಬು, ಶ್ರೀನಿವಾಸ್ ಮೂರ್ತಿ, ಕುಮಾರ್ ಗೋವಿಂದ್‌ರಂತಹ ಅನುಭವಿ ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಕುಮಾರ್ ಗೋವಿಂದ್ ಮಾದೇವಣ್ಣ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಅವರ ಹುಟ್ಟುಹಬ್ಬದ ದಿನ ಚಿತ್ರತಂಡವೇ ಈ ಬಗ್ಗೆ ಮಾಹಿತಿ ನೀಡಿದೆ.
ನುರಿತ ತಂತ್ರಜ್ಞರ ದಂಡು
ಚಿತ್ರದಲ್ಲಿ ರಾಧನಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಾಲಾಶ್ರೀ ಪುತ್ರಿಗೆ ಮೊದಲ ಚಿತ್ರದಲ್ಲೇ ದೊಡ್ಡ ಅವಕಾಶ ಸಿಕ್ಕಿದೆ. 'ರಾಬರ್ಟ್' ಚಿತ್ರಕ್ಕಾಗಿ ಕೆಲಸ ಮಾಡಿದ ಬಹುತೇಕ ತಂತ್ರಜ್ಞರು 'ಕಾಟೇರ' ಚಿತ್ರದಲ್ಲಿದ್ದಾರೆ. ಸುಧಾಕರ್ ರಾಜ್ ಛಾಯಾಗ್ರಹಣ, ವಿ. ಹರಿಕೃಷ್ಣ ಸಂಗೀತ ಚಿತ್ರಕ್ಕಿದೆ. ಇನ್ನು ಮಾಸ್ತಿ ಸಂಭಾಷಣೆ, ವಿ. ಹರಿಕೃಷ್ಣ ಸಂಗೀತ ನಿರೀಕ್ಷೆ ಹುಟ್ಟಾಕ್ಕಿದೆ. ತಮಿಳಿನ ಆರ್ಟ್ ಡೈರೆಕ್ಟರ್ ಗುಣ ಚಿತ್ರಕ್ಕಾಗಿ ಸೆಟ್‌ಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.
ಸಂಕ್ರಾಂತಿಗೆ ಸಿನಿಮಾ ರಿಲೀಸ್
ಚಿತ್ರದಲ್ಲಿ ದರ್ಶನ್ ಲುಂಗಿ ಉಟ್ಟು ರಗಡ್ ಲುಕ್‌ನಲ್ಲಿ ದರ್ಶನ ಕೊಡುತ್ತಿದ್ದಾರೆ. ಇನ್ನು 'ಕಾಟೇರ' ಸಿನಿಮಾ ರಿಲೀಸ್ ಡೇಟ್ ಬಗ್ಗೆ ಕೂಡ ಅಭಿಮಾನಿಗಳಲ್ಲಿ ಕುತೂಹಲ ಇದೆ. ವರ್ಷಾಂತ್ಯದ ವೇಳೆಗೆ ಸಿನಿಮಾ ಶೂಟಿಂಗ್ ಮುಕ್ತಾಯವಾಗುವ ಸಾಧ್ಯತೆಯಿದೆ. ಎಲ್ಲಾ ಅಂದುಕೊಂಡಂತೆ ಆದರೆ ಸಂಕ್ರಾಂತಿ ವೇಳೆಗೆ ತೆರೆಮೇಲೆ 'ಕಾಟೇರ'ನ ಆರ್ಭಟ ಶುರುವಾಗುವ ಸಾಧ್ಯತೆಯಿದೆ.


Click it and Unblock the Notifications











