ಅಂದುಕೊಂಡಿದ್ದಕ್ಕಿಂತ ಬೇಗ ಬರ್ತಾನೆ 'ಕಾಟೇರ': ದರ್ಶನ್ ಫ್ಯಾನ್ಸ್‌ಗೆ ನಿರ್ಮಾಪಕರಿಂದ ಸಿಹಿಸುದ್ದಿ
ಬಾಕ್ಸಾಫೀಸ್ ಸುಲ್ತಾನ್ ದರ್ಶನ್ ನಟನೆಯ 'ಕಾಟೇರ' ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬರ್ತಿದೆ. ತರುಣ್ ಸುಧೀರ್ ಬಹಳ ಮುತುವರ್ಜಿ ವಹಿಸಿ ಚಿತ್ರವನ್ನು ತಿದ್ದಿ ತೀಡುತ್ತಿದ್ದಾರೆ. ವರ್ಷಾಂತ್ಯಕ್ಕೆ 'ಕಾಟೇರ' ಸಿನಿಮಾ ರಿಲೀಸ್ ಆಗುತ್ತದೆ ಎನ್ನುವ ನಿರೀಕ್ಷೆ ಇತ್ತು. ಇದೀಗ ನಿರ್ಮಾಪಕರೇ ಸಿನಿಮಾ ರಿಲೀಸ್ ಬಗ್ಗೆ ಮಾತನಾಡಿದ್ದಾರೆ.
'ಉಳುವವನೆ ಭೂಮಿಯ ಒಡೆಯ' ಕಾಯ್ದೆಯಿಂದ ಹಳ್ಳಿಗಳಲ್ಲಿ ಆದ ಬದಲಾವಣೆ, ಸಂಘರ್ಷಗಳ ಬಗ್ಗೆ 'ಕಾಟೇರ' ಚಿತ್ರದಲ್ಲಿ ಚರ್ಚಿಸಲಾಗುತ್ತಿದೆ. ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ 70ರ ದಶಕದ ಕಥೆಯನ್ನು ತೆರೆಗೆ ತರಲಾಗುತ್ತಿದೆ. ಚಿತ್ರದಲ್ಲಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಶ್ರೀನಿವಾಸ್ ಮೂರ್ತಿ, ಜಗಪತಿ ಬಾಬು, ಕುಮಾರ್ ಗೋವಿಂದ್, ಬಿರಾದಾರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಕಳೆದ ವರ್ಷ ವರಮಹಾಲಕ್ಷ್ಮಿ ಹಬ್ಬಕ್ಕೆ ಮುಹೂರ್ತ ಮಾಡಿ ಸಿನಿಮಾ ಆರಂಭಿಸಲಾಗಿತ್ತು.

ರಾಕ್‌ಲೈನ್ ಸ್ಟುಡಿಯೋ, ರಾಮೋಜಿ ಫಿಲ್ಮ್ಸ್ ಸಿಟಿ ಸೇರಿದಂತೆ ಹಲವೆಡೆ ಸಿನಿಮಾ ಚಿತ್ರೀಕರಣ ನಡೀತಿದೆ. ಒಂದು ಹಳ್ಳಿ ಸೆಟ್ ಕೂಡ ಹಾಕಿ ಚಿತ್ರದ ಪ್ರಮುಖ ದೃಶ್ಯಗಳನ್ನು ಸೆರೆಹಿಡಿಯಲಾಗ್ತಿದೆ. ತುಂಬ ನೇರಳೆ, ಕನಕಪುರ ಬಳಿ ಕೂಡ 'ಕಾಟೇರ'ನ ಆರ್ಭಟವನ್ನು ಕಟ್ಟಿಕೊಡಲಾಗಿದೆ. ಟೈಟಲ್‌ನಿಂದಲೇ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ.
ದಸರಾಗೆ 'ಕಾಟೇರ' ಎಂಟ್ರಿ
ಈ ವರ್ಷದ ಕೊನೆಗೆ ಅಥವಾ ಮುಂದಿನ ವರ್ಷ 'ಕಾಟೇರ' ಸಿನಿಮಾ ರಿಲೀಸ್ ಆಗುತ್ತದೆ ಎನ್ನುವ ಅಂದಾಜಿತ್ತು. ಆದರೆ ಅಚ್ಚರಿ ಎನ್ನುವಂತೆ ದಸರಾ ಸಂಭ್ರಮದಲ್ಲೇ ಸಿನಿಮಾ ತೆರೆಗೆ ತರಲು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮನಸ್ಸು ಮಾಡಿದ್ದಾರೆ. ಈಗಾಗಲೇ ಚಿತ್ರತಂಡಕ್ಕೂ ಸೂಚನೆ ನೀಡಿದ್ದು ನಾಡಹಬ್ಬದ ವೇಳೆಗೆ ಸಿನಿಮಾ ಸಿದ್ಧಪಡಿಸುವಂತೆ ಹೇಳಿದ್ದಾರಂತೆ. ಈ ಬಗ್ಗೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ 'ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ದರ್ಶನ್ ಫ್ಯಾನ್ಸ್ ದಿಲ್‌ಖುಷ್
'ಕ್ರಾಂತಿ' ನಂತರ ದರ್ಶನ್ ನಾಯಕ ನಟರಾಗಿ ನಟಿಸುತ್ತಿರುವ ಸಿನಿಮಾ 'ಕಾಟೇರ'. ಐತಿಹಾಸಿಕ ಕಥಾಹಂದರದ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಬಿಟ್ಟರೆ ದರ್ಶನ್ ಈ ಜಾನರ್ ಟಚ್ ಮಾಡಿರಲಿಲ್ಲ. ಹಾಗಾಗಿ ಸಹಜವಾಗಿಯೇ ಸಿನಿಮಾ ಬಗ್ಗೆ ಹೈಪ್ ಕ್ರಿಯೇಟ್ ಆಗ್ತಿದೆ. ಈ ವರ್ಷ ಬಿಡುಗಡೆಯಾಗಿದ್ದ 'ಕ್ರಾಂತಿ' ಸಿನಿಮಾ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಹಾಗಾಗಿ ಅಭಿಮಾನಿಗಳು 'ಕಾಟೇರ' ಸಿನಿಮಾ ಮೇಲೆ ಬಹಳ ನಂಬಿಕೆಯಿಂದ ಇದ್ದಾರೆ. ದಸರಾಗೆ ಸಿನಿಮಾ ರಿಲೀಸ್ ಎಂದು ಕೇಳಿ ಖುಷಿಯಾಗಿದ್ದಾರೆ.
ಹೊಸ ಅವತಾರದಲ್ಲಿ ದರ್ಶನ್
D56 ಥೀಮ್ ಪೋಸ್ಟರ್ ರಿಲೀಸ್ ಆದಾಗಲೇ ಸಿನಿಮಾ ಬಗ್ಗೆ ಭಾರೀ ಕುತೂಹಲ ಮೂಡಿತ್ತು. ಕುರಿ ಮಂದೆ ಮುಂದೆ ನಿಂತ ನಾಯಿಯ ಪೋಸ್ಟರ್‌ನಲ್ಲಿ "ಹಿಂದಿರೋವ್ರಿಗೆ ದಾರಿ ಮುಂದಿರೋವ್ನದ್ದು ಜವಾಬ್ದಾರಿ" ಎನ್ನುವ ಸಾಲು ಗಮನ ಸೆಳೆದಿತ್ತು. ಇನ್ನು ಮೋಷನ್ ಪೋಸ್ಟರ್‌ನಲ್ಲಿದ್ದ "ಪ್ರತಿ ಮಚ್ಚು ಎರಡ್ ದಪ ಕೆಂಪಾಗತೈತೆ, ಒಂದು ಬೆಂಕಿಲಿ ಬಂದಾಗ, ಇನ್ನೊಂದು ರಕ್ತದಲ್ಲಿ ನೆಂದಾಗ" ಡೈಲಾಗ್ ಹಿಟ್ ಆಗಿತ್ತು. 'ಕಾಟೇರ' ಚಿತ್ರದಲ್ಲಿ ದರ್ಶನ್ ಲುಂಗಿ ಉಟ್ಟು ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳಿಗೆ ಹೇಳಿಮಾಡಿಸಿದ ಸಿನಿಮಾ ಅನ್ನೋದು ಗೊತ್ತಾಗುತ್ತಿದೆ.
'ಕಾಟೇರ'ಗೂ ಮುನ್ನ 'ಗರಡಿ'
ಸಿಲ್ವರ್ ಸ್ಕ್ರೀನ್ ಮೇಲೆ ಚಾಲೆಂಜಿಂಗ್ ಸ್ಟಾರ್‌ನ ನೋಡೊಕೆ ಅಭಿಮಾನಿಗಳು ದಸರಾವರೆಗೂ ಕಾಯಬೇಕಿಲ್ಲ. ಅದಕ್ಕು ಮುನ್ನ 'ಗರಡಿ' ಚಿತ್ರದ ಮೂಲಕ ದರ್ಶನ್ ಥಿಯೇಟರ್‌ಗೆ ಬರ್ತಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಗರಡಿ' ಚಿತ್ರದಲ್ಲಿ ಯಶಸ್ ಸೂರ್ಯ ನಾಯಕ ಸೂರಿ ಆಗಿ ನಟಿಸಿದ್ದಾರೆ. ಸೂರಿಯ ಅಣ್ಣನ ಪಾತ್ರದಲ್ಲಿ ದರ್ಶನ್ ಅಬ್ಬರಿಸೋಕೆ ಬರ್ತಿದ್ದಾರೆ. ಅಖಾಡಕ್ಕಿಳಿದು ಕುಸ್ತಿ ಪಟ್ಟುಗಳನ್ನು ಹಾಕಲಿದ್ದಾರೆ.


Click it and Unblock the Notifications











