Kaatera Trailer: "ಒಂದು ಬಂದೂಕ್ ಅಲ್ಲ ನೂರ್ ಪಿರಂಗಿನೆ ಅಡ್ಡ ಬಂದ್ರು ನನ್ ತಡ್ದು ನಿಲ್ಸಕ್ಕಾಗಲ್ಲ"
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಚಿತ್ರದ ಆಕ್ಷನ್ ಪ್ಯಾಕ್ಡ್ ಟ್ರೈಲರ್ ರಿಲೀಸ್ ಆಗಿದೆ. ಹುಬ್ಬಳ್ಳಿಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಟ್ರೈಲರ್ ಲೋಕಾರ್ಪಣೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ದರ್ಶನ್ ಆರ್ಭಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದು ಟ್ರೈಲರ್ ಧೂಳೆಬ್ಬಿಸಿದೆ.
ಎಲಿವೇಷನ್ ಸೀನ್ಸ್, ಜಬರ್ದಸ್ತ್ ಡೈಲಾಗ್ಸ್, ದರ್ಶನ್ ಖಡಕ್ ಪರ್ಫಾರ್ಮೆನ್ಸ್ ಟ್ರೈಲರ್ ನೋಡುಗರಿಗೆ ಮಜಾ ಕೊಡ್ತಿದೆ. ಬಹಳ ವಿಭಿನ್ನವಾದ ಸಿನಿಮಾ ಎಂದು ಚಿತ್ರತಂಡ ಹೇಳ್ತಾ ಬರ್ತಿತ್ತು. ಹೇಳಿದಂತೆ ಒಂದು ವಿಭಿನ್ನ ಕಥೆಯನ್ನು ಚಿತ್ರದಲ್ಲಿ ಕಟ್ಟಿಕೊಟ್ಟಿರುವುದು ಗೊತ್ತಾಗುತ್ತಿದೆ. ಭೀಮನಳ್ಳಿ ಎನ್ನುವ ಹಳ್ಳಿಯೊಂದರಲ್ಲಿ ನಡೆಯುವ ಕಥೆಯನ್ನು ಚಿತ್ರದಲ್ಲಿ ತರುಣ್ ಸುಧೀರ್ ಹೇಳೋಕೆ ಬರ್ತಿದ್ದಾರೆ.

ಕುಲುಮೆಯಲ್ಲಿ ಮಚ್ಚು ತಟ್ಟುವ ನಾಯಕ ನನ್ನವರಿಗಾಗಿ ತನ್ನ ಊರಿಗಾಗಿ ಒದೆ ತಿನ್ನೋಕು ಸಿದ್ಧ, ಒದೆ ಕೊಡೋಕು ಸಿದ್ಧ. ಊರಿನಲ್ಲಿ ಜಮೀನ್ದಾರರ ಆರ್ಭಟ ಹೆಚ್ಚಾಗಿ ರೈತರು ಸಂಕಷ್ಟಕ್ಕೆ ಸಿಲುಕಿದಾಗ ನಾಯಕ ತಿರುಗಿ ಬೀಳ್ತಾನೆ. ನಾವು ನಡೀಬೇಕು ಅಂದ್ರೆ ಅವರನ್ನು ತುಳಿಬೇಕು ಎಂದುಕೊಂಡ ಜಮೀನ್ದಾರರ ಮಟ್ಟಹಾಕುವ ನಾಯಕನಾಗಿ ದರ್ಶನ್ ಅಬ್ಬರಿಸಿದ್ದಾರೆ.
ತಮಗೆ ಕಂಟಕವಾಗಿದ್ದ ನಾಯಕನನ್ನು ಮೋಸದ ಪ್ರಕರಣದಲ್ಲಿ ಜೈಲಿಗೆ ಹೋಗುವಂತೆ ಮಾಡಿರುತ್ತಾರೆ ಎರುರಾಳಿಗಳು. ಆತನ ಅನುಪಸ್ಥಿತಿಯಲ್ಲಿ ಊರನ್ನೇ ಸ್ಮಶಾನ ಮಾಡಿ ಮೆರೆಯುತ್ತಿರುತ್ತಾರೆ. ಮತ್ತೆ ಜೈಲಿನಿಂದ ತಿರುಗಿ ಬರುವ ನಾಯಕ ಅವರನ್ನೆಲ್ಲಾ ಹೇಗೆ ಮೆಟ್ಟಿ ನಿಲ್ತಾನೆ ಅನ್ನೋದೇ ಚಿತ್ರದ ಒನ್‌ಲೈನ್ ಕಥೆ ಅನ್ನಿಸ್ತಿದೆ. ಅದನ್ನೇ ಫ್ಲ್ಯಾಶ್‌ಬ್ಯಾಕ್ ತಂತ್ರ ಅಳವಡಿಸಿ ಹೇಳುವ ಪ್ರಯತ್ನ ನಡೆದಿದೆ.
ಹಳ್ಳಿ ಹೈದನಾಗಿ ಖಡಕ್ ಲುಕ್‌ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕಾಗಿ ಮಾತನಾಡುವ ಶೈಲಿ ಬದಲಿಸಿಕೊಂಡು ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ವಿಭಿನ್ನ ಶೇಡ್‌ಗಳಿರೋ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ನಾಯಕನ ಅಕ್ಕ, ಭಾವ ಆಗಿ ಕುಮಾರ್ ಗೋವಿಂದ್, ಶ್ರುತಿ ನಟಿಸಿದ್ದಾರೆ. ಊರಿನ ಜಮೀನ್ದಾರನಾಗಿ ನೆಗೆಟೀವ್ ರೋಲ್‌ನಲ್ಲಿ ಜಗಪತಿ ಬಾಬು ಮಿಂಚಿರೋದು ಗೊತ್ತಾಗುತ್ತಿದೆ. ಇನ್ನುಳಿದಂತೆ ಅಚ್ಯುತ್ ಕುಮಾರ್, ವಿನೋದ್ ಆಳ್ವ, ಅವಿನಾಶ್, ಬಿರಾದಾರ್ ತಾರಾಗಣದಲ್ಲಿದ್ದಾರೆ.
ರೆಗ್ಯೂಲರ್ ಕಮರ್ಷಿಯಲ್ ಸಿನಿಮಾಗಳನ್ನು ಬಿಟ್ಟು ದರ್ಶನ್ ಒಂದು ವಿಭಿನ್ನ ಪ್ರಯತ್ನ ಮಾಡಿದ್ದಾರೆ. ಅವರಿಗೆ ತರುಣ್ ಸುಧೀರ್ ಅಂಡ್ ಟೀಮ್ ಸಾಥ್ ಕೊಟ್ಟಿದೆ. ಮಾಸ್ತಿ ಹರಿತವಾದ ಸಂಭಾಷಣೆ ಚಿತ್ರಕ್ಕೆ ಪ್ಲಸ್ ಆಗುವ ಸಾಧ್ಯತೆಯಿದೆ. "ಒಂದು ಬಂದೂಕ್ ಅಲ್ಲ ನೂರ್ ಪಿರಂಗಿನೆ ಅಡ್ಡ ಬಂದ್ರು ನನ್ ತಡ್ದು ನಿಲ್ಸಕ್ಕಾಗಲ್ಲ" ಡೈಲಾಗ್ ಅಭಿಮಾನಿಗಳಿಗೆ ಹೇಳಿ ಮಾಡಿಸಿದಂತಿದೆ.

"ಎಲ್ಲಾ ಹಾವುಗಳು ತಲೆ ಎತ್ತುತಾವೆ ಧಣಿ, ಕಾಳಿಂಗ ಸರ್ಪ ಮಾತ್ರ ಹೆಡೆ ಎತ್ತೋದು" ಅನ್ನೋ ಮತ್ತೊಂದು ಡೈಲಾಗ್ ಕೂಡ ಮಜವಾಗಿದೆ. ಇನ್ನು ಟ್ರೈಲರ್ ಕೊನೆಗೆ ದರ್ಶನ್ ಕೋಣ ಹಿಡಿದು ವಯಸ್ಸಾದ ವ್ಯಕ್ತಿಯ ಲುಕ್‌ನಲ್ಲಿ ಬರುವ ಸನ್ನಿವೇಶ ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲ ಕೆರಳಿಸುವಂತೆ ಮಾಡುತ್ತದೆ. ಮೊದಲ ನೋಟದಲ್ಲೇ ಟ್ರೈಲರ್ ಗಮನ ಸೆಳೆಯುತ್ತಿದೆ.
ಅಭಿಮಾನಿಗಳು ರಿಪೀಟ್ ಮೋಡ್‌ನಲ್ಲಿ 'ಕಾಟೇರ' ಟ್ರೈಲರ್ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಡಿಸೆಂಬರ್ 29ಕ್ಕೆ ಫಸ್ಟ್ ಡೇ ಫಸ್ಟ್ ಫಿಕ್ಸ್ ಎನ್ನುತ್ತಿದ್ದಾರೆ. ಸಿಕ್ಕಾಪಟ್ಟೆ ಲೈಕ್ಸ್ ಹಾಗೂ ವೀವ್ಸ್ ಸಾಧಿಸಿ ಟ್ರೈಲರ್ ಸದ್ದು ಮಾಡ್ತಿದೆ.
ವರ್ಷದ ಕೊನೆಗೆ 'ಕಾಟೇರ' ಸಿನಿಮಾ ಬಿಡುಗಡೆಯಾಗುತ್ತಿದೆ. ಅದಕ್ಕೂ ಒಂದು ವಾರ ಮುನ್ನ ಪ್ರಭಾಸ್ ನಟನೆಯ 'ಸಲಾರ್' ಹಾಗೂ ಶಾರುಖ್ ಖಾನ್ ಅಭಿನಯದ 'ಡಂಕಿ' ಸಿನಿಮಾ ತೆರಗಪ್ಪಳಿಸಲಿದೆ. ಈ ಎರಡೂ ಸಿನಿಮಾಗಳ ನಡುವೆ 'ಕಾಟೇರ' ಸಿನಿಮಾ ಯಾವ ರೀತಿ ಸದ್ದು ಮಾಡುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ.


Click it and Unblock the Notifications











