'ಕಬ್ಜ' ರಿಲೀಸ್ ಹೊತ್ತಲ್ಲಿ ದರ್ಶನ್ ಫ್ಯಾನ್ಸ್ ಸಂಭ್ರಮಕ್ಕೆ ಸಿಕ್ತು ಕಾರಣ
ಉಪೇಂದ್ರ, ಸುದೀಪ್, ಶಿವರಾಜ್‌ಕುಮಾರ್ ನಟನೆಯ ಕಬ್ಜ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಆರ್. ಚಂದ್ರು ಈ ಸಿನಿಮಾ ನಿರ್ಮಾಣ ಮಾಡಿ ಆಕ್ಷನ್ ಕಟ್ ಹೇಳಿದ್ದಾರೆ. 'ಕಬ್ಜ' ಚಿತ್ರಕ್ಕೆ ಗ್ರ್ಯಾಂಡ್ ಓಪನಿಂಗ್ ಸಿಗುವ ನಿರೀಕ್ಷೆ ಇದೆ. ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಹಬ್ಬ ಶುರುವಾಗಿದೆ. ಇದೇ ಸಮಯದಲ್ಲಿ 'ಕ್ರಾಂತಿ' ಸಿನಿಮಾ 50 ದಿನ ಪೂರೈಸಿದೆ.
ಜನವರಿ 26ಕ್ಕೆ ಬಿಡುಗಡೆಯಾಗಿ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಯಶಸ್ವಿಯಾಗಿ 50 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಓಟಿಟಿಗೆ ಬಂದರೂ ಸಿನಿಮಾ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ವಿ. ಹರಿಕೃಷ್ಣ ಈ ಆಕ್ಷನ್ ಎಂಟರ್‌ಟ್ರೈನರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಬಹುಕೋಟಿ ವೆಚ್ಚದಲ್ಲಿ ಶೈಲಜಾ ನಾಗ್ ಹಾಗೂ ಬಿ. ಸುರೇಶ ಸಿನಿಮಾ ನಿರ್ಮಾಣ ಮಾಡಿದ್ದರು. ಹತ್ತು ಹಲವು ಕಾರಣಗಳಿಂದ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ರಚಿತಾ ರಾಮ್ ಮಿಂಚಿದ್ದಾರೆ.

ಒಂದೊಳ್ಳೆ ಮೆಸೇಜ್ ಜೊತೆಗೆ ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಸೇರಿಸಿ 'ಕ್ರಾಂತಿ' ಸಿನಿಮಾ ನಿರ್ಮಾಣ ಮಾಡಲಾಗಿತ್ತು. ಚಿತ್ರದಲ್ಲಿ ಕ್ರೇಜಿಸ್ಟಾರ್ ವಿ. ರವಿಚಂದ್ರನ್, ಮುಖ್ಯಮಂತ್ರಿ ಚಂದ್ರು, ಅಚ್ಯುತ್ ಕುಮಾರ್, ಸುಮಲತಾ ಅಂಬರೀಶ್, ಸಂಯುಕ್ತಾ ಹೊರನಾಡ್, ಸಂಪತ್ ರಾಜ್, ಉಮಾಶ್ರೀ ಚಿತ್ರದ ತಾರಾಗಣದಲ್ಲಿದ್ದಾರೆ. ಕಳೆದೆರಡು ವರ್ಷಗಳಿಂದ 'ಕ್ರಾಂತಿ' ಸಿನಿಮಾ ಸದ್ದು ಮಾಡ್ತಾ ಬಂದಿತ್ತು. ಸರ್ಕಾರಿ ಶಾಲೆಗಳ ಸ್ಥಿತಿಗತಿಯ ಬಗ್ಗೆ ಈ ಸಿನಿಮಾದಲ್ಲಿ ಚರ್ಚಿಸಲಾಗಿತ್ತು. ಚಿತ್ರದಲ್ಲಿ ದರ್ಶನ್ ಎನ್‌ಆರ್‌ಐ ಕ್ರಾಂತಿ ರಾಯಣ್ಣ ಆಗಿ ನಟಿಸಿದ್ದಾರೆ.
ಅಭಿಮಾನಿಗಳೇ ದೊಡ್ಡಮಟ್ಟದಲ್ಲಿ 'ಕ್ರಾಂತಿ' ಸಿನಿಮಾ ಪ್ರಚಾರ ಮಾಡಿದ್ದರು. ಅಡ್ವಾನ್ಸ್ ಬುಕ್ಕಿಂಗ್‌ಗೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಮೊದಲ ದಿನವೇ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಆದರೆ ಪ್ರೇಕ್ಷಕರಿಂದ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನಂತರ ಸಿನಿಮಾ ಕಲೆಕ್ಷನ್ ಬಗ್ಗೆ ಕೂಡ ಊಹಾಪೋಹಗಳು ಶುರುವಾಗಿತ್ತು. ಆದರೆ ಸಿನಿಮಾ ರಿಲೀಸ್ ಆದ 4 ದಿನಕ್ಕೆ ಚಿತ್ರತಂಡ ಸಕ್ಸಸ್ ಮೀಟ್ ಮಾಡಿತ್ತು. 108 ಕೋಟಿ ಎನ್ನುವ ಡಿಸೈನ್‌ನಲ್ಲಿದ್ದ ಕೇಕ್ ಕಟ್ ಮಾಡಿ ಸಂಭ್ರಮಿಸಿತ್ತು.
'ಕ್ರಾಂತಿ' ಸಿನಿಮಾ ಬಗ್ಗೆ ನೆಗೆಟಿವ್ ಮಾತನಾಡಿದವರಿಗೆ ದರ್ಶನ್ ತಿರುಗೇಟು ನೀಡಿದ್ದರು. ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಪ್ರಚಾರ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದ್ದರು. ನಿರ್ಮಾಪಕಿ ಶೈಲಜಾ ನಾಗ್ ಕೂಡ ಸಿನಿಮಾ ಸಕ್ಸಸ್ ಬಗ್ಗೆ ಸಂತಸ ಹಂಚಿಕೊಂಡಿದ್ದರು. ಇನ್ನು 'ಕ್ರಾಂತಿ' ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ 28 ದಿನಕ್ಕೆ ಓಟಿಟಿಗೆ ಬಂದಿದ್ದು ಕೆಲವರಿಗೆ ಅಚ್ಚರಿ ಮೂಡಿಸಿತ್ತು. ಯಾವುದೇ ಸಿನಿಮಾ ರಿಲೀಸ್ ಆದ 48 ದಿನಗಳ ನಂತರ ಓಟಿಟಿ ಸ್ಟ್ರೀಮಿಂಗ್‌ಗೆ ಒಪ್ಪಂದ ಆಗಿರುತ್ತದೆ. ಆದರೆ 'ಕ್ರಾಂತಿ' ಚಿತ್ರವನ್ನು ಯಾಕೆ ಇಷ್ಟು ಬೇಗ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬಿಟ್ರು ಎಂದು ಅಚ್ಚರಿಗೊಂಡಿದ್ದರು.

ಜನವರಿ 26ಕ್ಕೆ ಬಿಡುಗಡೆಯಾಗಿದ್ದ ಸಿನಿಮಾ ಫೆಬ್ರವರಿ 23ಕ್ಕೆ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆಗಿತ್ತು. ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ ವರ್ಷನ್ ಓಟಿಟಿಗೆ ಬಂತು. ಆದರೆ ಹಿಂದಿ ವರ್ಷನ್ ಮಾತ್ರ ಬಿಡುಗಡೆ ಆಗಲಿಲ್ಲ. ಸಿನಿಮಾ ಅಷ್ಟು ಬೇಗ ಓಟಿಟಿಗೆ ಬಂದರೂ ಕೂಡ ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಮುಂದುವರೆಸಿತ್ತು. ಇದೀಗ ಯಶಸ್ವಿಯಾಗಿ 50 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಇದು ದರ್ಶನ್ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. 'ಕ್ರಾಂತಿ' ನಂತರ ದರ್ಶನ್ 'ಕಾಟೇರ' ಚಿತ್ರದಲ್ಲಿ ನಟಿಸ್ತಿದ್ದಾರೆ.
ದರ್ಶನ್ ಮೂರ್ನಾಲ್ಕು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸದ್ಯಕ್ಕೆ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ 'ಕಾಟೇರ' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ತರುಣ್ ಸುಧೀರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಾಧನಾ ರಾಮ್ ನಾಯಕಿಯಾಗಿ ನಟಿಸ್ತಿದ್ದು 70ರ ದಶಕದಲ್ಲಿ ನಡೆದ ನೈಜ ಘಟನೆಗಳನ್ನುಆಧರಿಸಿ ಸಿನಿಮಾ ನಿರ್ಮಾಣ ಆಗುತ್ತಿದೆ. ದರ್ಶನ್ ವಿಭಿನ್ನ ಲುಕ್‌ನಲ್ಲಿ ನಟಿಸ್ತಿದ್ದಾರೆ. ಇನ್ನು ಈ ಸಿನಿಮಾ ನಂತರ ಆಪ್ತರಾದ ಸಚ್ಚಿದಾನಂದ, ನಿರ್ಮಾಪಕರ ಸೂರಪ್ಪ ಬಾಬು ಸೇರಿದಂತೆ ಮೂರ್ನಾಲ್ಕು ನಿರ್ಮಾಪಕರ ಚಿತ್ರಗಳಲ್ಲಿ ನಟಿಸಲು ಒಪ್ಪಿದ್ದಾರೆ.


Click it and Unblock the Notifications











