ಬೆಂಗಳೂರಿನ 2 ಸಿಂಗಲ್ ಸ್ಕ್ರೀನ್, 1 ಮಲ್ಟಿಪ್ಲೆಕ್ಸ್‌ನಲ್ಲಿ 6ನೇ ವಾರಕ್ಕೆ ಕಾಲಿಟ್ಟ ಕ್ರಾಂತಿ; ಉಳಿದ ಊರುಗಳ ಕಥೆ ಏನು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಎರಡನೇ ಚಿತ್ರ ಕ್ರಾಂತಿ ಬಿಡುಗಡೆಯಾಗಿ 35 ದಿನಗಳನ್ನು ಪೂರೈಸಿ ಈಗ ಆರನೇ ವಾರಕ್ಕೆ ಕಾಲಿಟ್ಟಿದೆ. ಬಿಡುಗಡೆಗೂ ಮುನ್ನ ಹುಟ್ಟಿಸಿದ್ದ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ವಿ ಹರಿಕೃಷ್ಣ ನಿರ್ದೇಶನದ ಈ ಚಿತ್ರ ವಿಫಲಗೊಂಡಿದೆ. ದರ್ಶನ್ ಅಭಿಮಾನಿಗಳು ಚಿತ್ರವನ್ನು ಇಷ್ಟಪಟ್ಟರೆ ಉಳಿದ ಸಿನಿ ರಸಿಕರಿಗೆ ಸಿನಿಮಾ ಇಷ್ಟವಾಗಿಲ್ಲ.
ಬಿಡುಗಡೆಯಾಗ 45 ದಿನಗಳ ನಂತರ ಓಟಿಟಿಗೆ ಬರಬೇಕಿದ್ದ ಕ್ರಾಂತಿ ಹೀಗೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡು ಎಡವಿದ ಕಾರಣ 28 ದಿನಗಳ ಥಿಯೇಟ್ರಿಕಲ್ ರನ್ ಪೂರೈಸಿ 29ನೇ ದಿನಕ್ಕೆ ಓಟಿಟಿಗೆ ಲಗ್ಗೆ ಇಟ್ಟಿತ್ತು. ಈ ರೀತಿ ಬೇಗನೆ ಓಟಿಟಿಗೆ ಬಂದ ನಂತರವೂ ಸಹ ಕ್ರಾಂತಿ ಚಿತ್ರಮಂದಿರಗಳಲ್ಲಿ ತನ್ನ ಓಟವನ್ನು ಮುಂದುವರಿಸಿದೆ.

ಬೆಂಗಳೂರಿನ ಗಾಂಧಿನಗರದ ಮುಖ್ಯ ಚಿತ್ರಮಂದಿರ ಅನುಪಮಾ ಸೇರಿದಂತೆ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಗೊಂಡಿದ್ದ ಕ್ರಾಂತಿ ಯಾವ ಊರಿನ ಯಾವ ಚಿತ್ರಮಂದಿರಗಳಲ್ಲಿ ಆರನೇ ವಾರವನ್ನು ಪೂರೈಸಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ.
ಬೆಂಗಳೂರಿನ ಮುಖ್ಯ ಚಿತ್ರಮಂದಿರ ಅನುಪಮಾದಲ್ಲಿ ಕ್ರಾಂತಿ ಚಿತ್ರ ಯಶಸ್ವಿಯಾಗಿ ಆರನೇ ವಾರಕ್ಕೆ ಕಾಲಿಟ್ಟಿದೆ. ಕೊರೊನಾ ಬಳಿಕ ಮುಖ್ಯ ಚಿತ್ರಮಂದಿರದಲ್ಲಿ ಕಾಂತಾರ ಹಾಗೂ ವೇದ ಬಳಿಕ ಐವತ್ತನೇ ದಿನ ಪೂರೈಸುವತ್ತ ಕ್ರಾಂತಿ ಹೆಜ್ಜೆ ಇಟ್ಟಿದೆ. ಇನ್ನುಳಿದಂತೆ ನಗರದ ಸುಲ್ತಾನ್‌ಪಾಳ್ಯದ ಪುಷ್ಪಾಂಜಲಿ ಚಿತ್ರಮಂದಿರದಲ್ಲಿ ಕ್ರಾಂತಿ ಎರಡು ಪ್ರದರ್ಶನಗಳು ಹಾಗೂ ಜಾಲಹಳ್ಳಿ ಕ್ರಾಸ್‌ನಲ್ಲಿರುವ ರಾಕ್‌ಲೈನ್ ಸಿನಿಮಾಸ್‌ನಲ್ಲಿ ಒಂದು ಪ್ರದರ್ಶನವನ್ನು ಕಾಣುತ್ತಿದೆ. ಹೀಗೆ ಬೆಂಗಳೂರಿನ ಎರಡು ಸಿಂಗಲ್ ಸ್ಕ್ರೀನ್ ಹಾಗೂ ಒಂದು ಮಲ್ಟಿಪ್ಲೆಕ್ಸ್‌ನಲ್ಲಿ ಕ್ರಾಂತಿ ಐದು ವಾರಗಳನ್ನು ಪೂರೈಸಿ, ಆರನೇ ವಾರ ತನ್ನ ಓಟವನ್ನು ಮುಂದುವರಿಸಿದೆ.
ಇನ್ನು ಮೈಸೂರಿನ ಎಲ್ಲಾ ಮಲ್ಟಿಪ್ಲೆಕ್ಸ್‌ಗಳಿಂದಲೂ ಕ್ರಾಂತಿ ಚಿತ್ರ ತನ್ನ ಪ್ರದರ್ಶನವನ್ನು ಕೊನೆಗೊಳಿಸಿದ್ದು, ನಗರದ ಲಿಡೋ ಚಿತ್ರಮಂದಿರದಲ್ಲಿ ಮಾತ್ರ ಆರನೇ ವಾರಕ್ಕೆ ಕಾಲಿಟ್ಟಿದೆ. ಉಳಿದಂತೆ ದಾವಣಗೆರೆಯ ಅಶೋಕ ಚಿತ್ರಮಂದಿರದಲ್ಲಿ (ಎರಡು ಪ್ರದರ್ಶನ), ಹುಬ್ಬಳ್ಳಿಯ ಅಪ್ಸರಾ ಚಿತ್ರಮಂದಿರದಲ್ಲಿ, ತುಮಕೂರಿನ ಗಾಯತ್ರಿ ಚಿತ್ರಮಂದಿರದಲ್ಲಿ ( ಎರಡು ಪ್ರದರ್ಶನ ) ಹಾಗೂ ಧಾರವಾಡದ ವಿಜಯ್ ಚಿತ್ರಮಂದಿರಗಳಲ್ಲಿ ಕ್ರಾಂತಿ ಚಿತ್ರ ಆರನೇ ವಾರಕ್ಕೆ ಕಾಲಿಟ್ಟಿದೆ.

ಈ ಮೂಲಕ ಸುಮಾರು ರಾಜ್ಯಾದ್ಯಂತ ಸುಮಾರು ಹತ್ತಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಕ್ರಾಂತಿ ಐದು ವಾರಗಳ ಪ್ರದರ್ಶನವನ್ನು ಪೂರೈಸಿ ಆರನೇ ವಾರಕ್ಕೆ ಕಾಲಿಟ್ಟಿದೆ. ಈ ಹಿಂದೆ ಇದೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ದೇಶಕ ವಿ ಹರಿಕೃಷ್ಣ ಕಾಂಬಿನೇಶನ್‌ನಲ್ಲಿ ಮೂಡಿ ಬಂದಿದ್ದ ಯಜಮಾನ ಚಿತ್ರ ಓಟಿಟಿಗೆ ಬಂದ ನಂತರವೂ ಸಹ ಚಿತ್ರಮಂದಿರಗಳಲ್ಲಿ ನೂರು ದಿನಗಳ ಪ್ರದರ್ಶನವನ್ನು ಕಂಡಿತ್ತು.
ಸದ್ಯ ಕ್ರಾಂತಿ ಚಿತ್ರ ನೂರು ದಿನಗಳ ಪ್ರದರ್ಶನ ಕಾಣದಿದ್ದರೂ ಐವತ್ತು ದಿನಗಳ ಪ್ರದರ್ಶನವನ್ನು ಬೆಂಗಳೂರಿನ ಮುಖ್ಯ ಚಿತ್ರಮಂದಿರ ಅನುಪಮಾ ಹಾಗೂ ಮೈಸೂರಿನಲ್ಲಿ ಐವತ್ತು ದಿನಗಳ ಪ್ರದರ್ಶನವನ್ನು ಪೂರೈಸುವ ಸಾಧ್ಯತೆಗಳು ಹೆಚ್ಚಿವೆ.


Click it and Unblock the Notifications











