ಕ್ರಾಂತಿ ಮೊದಲ ದಿನದ ಬುಕ್ ಮೈ ಶೋ, ಐಎಂಡಿಬಿ, ಗೂಗಲ್ ರೇಟಿಂಗ್; ಹಿಟ್ಟಾ, ಫ್ಲಾಪಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಎರಡನೇ ಚಿತ್ರ ಕ್ರಾಂತಿ ಇಂದು ( ಜನವರಿ 26 ) ಬಿಡುಗಡೆಗೊಂಡಿದೆ. ಶಿಕ್ಷಣದ ಮಹತ್ವ ಹಾಗೂ ಸರ್ಕಾರಿ ಶಾಲೆಗಳ ಮಹತ್ವವನ್ನು ಸಾರುವ ಕಥಾಹಂದರವನ್ನು ಹೊಂದಿರುವ ಚಿತ್ರಕ್ಕೆ ದರ್ಶನ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನು 2021ರ ಮಾರ್ಚ್ ಬಳಿಕ ಬರೋಬ್ಬರಿ 22 ತಿಂಗಳುಗಳ ಅಂತರದ ನಂತರ ಬಿಡುಗಡೆಗೊಂಡಿರುವ ದರ್ಶನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರ ಇದಾಗಿದ್ದು, ದೊಡ್ಡ ಮಟ್ಟದ ಹೈಪ್ ಹುಟ್ಟುಹಾಕಿ ದೊಡ್ಡ ಓಪನಿಂಗ್ ಅನ್ನೇ ಪಡೆದುಕೊಂಡಿದೆ.
ಇನ್ನು ಬಿಡುಗಡೆಗೂ ನಾಲ್ಕು ದಿನಗಳ ಮುನ್ನವೇ ಕ್ರಾಂತಿ ಚಿತ್ರದ ಬುಕಿಂಗ್ ಓಪನ್ ಆಗಿತ್ತು. ಚಿತ್ರದ ಟಿಕೆಟ್‌ಗಳನ್ನು ಖರೀದಿಸುವುದಕ್ಕಾಗಿ ದರ್ಶನ್ ಅಭಿಮಾನಿಗಳು ಮುಗಿಬಿದ್ದ ಕಾರಣ ಚಿತ್ರ ಮುಂಗಡ ಬುಕಿಂಗ್‌ನಲ್ಲಿಯೇ 5.41 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಹೀಗೆ ಅಡ್ವಾನ್ಸ್ ಬುಕಿಂಗ್‌ನಲ್ಲಿಯೇ ಕೋಟಿ ಕೋಟಿ ಬಾಚಿದ ಕ್ರಾಂತಿ ಚಿತ್ರದ ಮೊದಲ ದಿನದ ಕಲೆಕ್ಷನ್ ಸುಮಾರು 15 ಕೋಟಿ ರೂಪಾಯಿಗೂ ಹೆಚ್ಚಿರಲಿದೆ ಎಂದು ಸಿನಿ ಪಂಡಿತರು ಊಹಿಸಿದ್ದಾರೆ.
ಹೀಗೆ ಮೊದಲ ದಿನ ಬಹುತೇಕ ಕಡೆ ಹೌಸ್‌ಫುಲ್ ಪ್ರದರ್ಶನಗಳನ್ನು ಪಡೆದುಕೊಂಡು ಒಳ್ಳೆಯ ಓಪನಿಂಗ್ ಪಡೆದುಕೊಂಡಿರುವ ಕ್ರಾಂತಿ ಚಿತ್ರ ಸಿನಿಮಾ ರೇಟಿಂಗ್‌ಗಳ ಪ್ರಮುಖ ವೆಬ್‌ತಾಣಗಳಾದ ಬುಕ್ ಮೈ ಶೋ, ಐಎಂಡಿಬಿ ಹಾಗೂ ಗೂಗಲ್‌ಗಳಲ್ಲಿ ಎಷ್ಟು ರೇಟಿಂಗ್ ಪಡೆದುಕೊಂಡಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ರೇಟಿಂಗ್ ಹೇಗಿದೆ?
ಕ್ರಾಂತಿ ಚಿತ್ರ ಮೊದಲ ದಿನ ಎಲ್ಲೆಡೆ ಒಳ್ಳೆಯ ರೇಟಿಂಗ್‌ಗಳನ್ನೇ ಪಡೆದುಕೊಂಡಿದೆ. ಗೂಗಲ್‌ನಲ್ಲಿ ಕ್ರಾಂತಿ ಚಿತ್ರಕ್ಕೆ ಮೊದಲ ದಿನ 2500 ಬಳಕೆದಾರರು ವೋಟ್ ಮಾಡಿದ್ದು, ಚಿತ್ರ ಇಲ್ಲಿ 5ಕ್ಕೆ 4.5 ಸ್ಟಾರ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನುಳಿದಂತೆ ಜನಪ್ರಿಯ ಬುಕಿಂಗ್ ಅಪ್ಲಿಕೇಶನ್ ಬುಕ್ ಮೈ ಶೋನಲ್ಲಿ 10ಕ್ಕೆ ಕ್ರಾಂತಿ 6100 ಮತಗಳೊಂದಿಗೆ 9.5 ಅಂಕಗಳನ್ನು ಪಡೆದುಕೊಂಡಿದೆ. ಐಎಂಡಿಬಿಯಲ್ಲಿ ಮೊದಲ ದಿನ 1500 ಮತಗಳನ್ನು ಪಡೆದುಕೊಂಡಿರುವ ಕ್ರಾಂತಿ 10ಕ್ಕೆ 8.3 ಅಂಕಗಳನ್ನು ಪಡೆದುಕೊಂಡಿದೆ. ಈ ಮೂಲಕ ಮೊದಲ ದಿನ ಕ್ರಾಂತಿ ಹಿಟ್ ಓಪನಿಂಗ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲೂ ಇದೇ ರೀತಿಯ ರೇಟಿಂಗ್ ಅನ್ನು ಉಳಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.

ಕ್ರಾಂತಿ ನಂಬರ್ 1 ಆಗಲು ಎಷ್ಟು ಗಳಿಸಬೇಕು?
ಇನ್ನು ಕ್ರಾಂತಿ ಚಿತ್ರತಂಡ ಮೊದಲ ದಿನ ಅತಿಹೆಚ್ಚು ಗಳಿಸಿದ ಕನ್ನಡ ಚಿತ್ರ ಎನಿಸಿಕೊಳ್ಳಬೇಕೆಂದರೆ 36 ಕೋಟಿ ಗಳಿಸಬೇಕಿದೆ. ಹೌದು, ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಶನ್‌ನ ಕೆಜಿಎಫ್ ಚಾಪ್ಟರ್ 2 ಚಿತ್ರ 35 ಕೋಟಿ ಗಳಿಸಿ ಅಗ್ರಸ್ಥಾನದಲ್ಲಿದ್ದು, ಕ್ರಾಂತಿ ಈ ಸ್ಥಾನ ಪಡೆಯಬೇಕೆಂದರೆ 36 ಕೋಟಿ ಗಳಿಸಬೇಕಿದೆ. ಪುನೀತ್ ರಾಜ್‌ಕುಮಾರ್ ನಟನೆಯ ಜೇಮ್ಸ್ ಚಿತ್ರ 19 ಕೋಟಿ ಗಳಿಸುವ ಮೂಲಕ ಈ ಸ್ಥಾನದಲ್ಲಿ ಎರಡನೇ ಸ್ಥಾನದಲ್ಲಿದೆ.

ಟಾಪ್ 5 ಪ್ರವೇಶಿಸುತ್ತಾ ಕ್ರಾಂತಿ?
ಸದ್ಯ ಕರ್ನಾಟಕದಲ್ಲಿ ಮೊದಲ ದಿನ ಅತಿಹೆಚ್ಚು ಕಲೆಕ್ಷನ್ ಮಾಡುತ್ತಾ ಎಂಬ ಕುತೂಹಲ ಸಿನಿ ರಸಿಕರಲ್ಲಿ ಮೂಡಿದೆ. ಬಿಡುಗಡೆ ದಿನ ಅತಿಹೆಚ್ಚು ಗಳಿಸಿರುವ ಕನ್ನಡ ಚಿತ್ರಗಳ ಟಾಪ್ 5 ಪಟ್ಟಿಯಲ್ಲಿ ಕ್ರಾಂತಿ ಯಾವ ಸ್ಥಾನ ಪಡೆಯಬಹುದು ಎಂಬ ಕುತೂಹಲವೂ ಸಹ ಮೂಡಿದೆ. ಹಾಗಿದ್ದರೆ ಈ ಪಟ್ಟಿಯಲ್ಲಿ ಇಲ್ಲಿಯವರೆಗೂ ಯಾವ ಚಿತ್ರಗಳು ಯಾವ ಸ್ಥಾನವನ್ನು ಪಡೆದುಕೊಂಡಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ.
1. ಕೆಜಿಎಫ್ ಚಾಪ್ಟರ್ 2 - 35 ಕೋಟಿ ರೂಪಾಯಿ
2. ಜೇಮ್ಸ್ - 28 ಕೋಟಿ ರೂಪಾಯಿ
3. ವಿಕ್ರಾಂತ್ ರೋಣ - 18 ಕೋಟಿ ರೂಪಾಯಿ
4. ಕೆಜಿಎಫ್ ಚಾಪ್ಟರ್ 1 - 17 ಕೋಟಿ ರೂಪಾಯಿ
5. ರಾಬರ್ಟ್ - 16 ಕೋಟಿ ರೂಪಾಯಿ


Click it and Unblock the Notifications











