'ಕ್ರಾಂತಿ' ಚಿತ್ರದ ಹೊಸ ಅಪ್ಡೇಟ್: ರಾಜ್ಯ ಬಿಟ್ಟು ಹೊರಟ ನಟ ದರ್ಶನ್!
'ರಾಬರ್ಟ್' ಸಿನಿಮಾದ ಯಶಸ್ಸಿನ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೈಗೆತ್ತಿಕೊಂಡಿರುವ ಚಿತ್ರ 'ಕ್ರಾಂತಿ'. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಈ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದೆ. 'ಯಜಮಾನ' ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ 'ಕ್ರಾಂತಿ' ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಇದು ದರ್ಶನ್ ಅವರ 55ನೇ ಸಿನಿಮಾ ಎನ್ನುವುದು ವಿಶೇಷ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ದೊಡ್ಡ ಮಟ್ಟದಲ್ಲಿ ಟ್ರೆಂಡ್ ಹುಟ್ಟು ಹಾಕಿದೆ. ದರ್ಶನ್ ಅವರು ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕ್ರಾಂತಿ ಚಿತ್ರದ ಮೂಲಕ ಚಿತ್ರರಂಗದಲ್ಲಿ ದರ್ಶನ್ ಹೊಸ ಕ್ರಾಂತಿ ಮಾಡಲು ಹೊರಟಿದ್ದಾರೆ. ಸದ್ಯ ಚಿತ್ರದ ಹೊಸ ಅಪ್ಡೇಟ್ ಸಿಕ್ಕಿದೆ. ಮುಂದಿನ ಹಂತದ ಶೂಟಿಂಗ್ ಆರಂಭಿಸಿದೆ ಚಿತ್ರ ತಂಡ.

ಹೈದ್ರಾಬಾದ್‌ನಲ್ಲಿ ದರ್ಶನ್ 'ಕ್ರಾಂತಿ' ಚಿತ್ರೀಕರಣ!
ಕ್ರಾಂತಿ ಚಿತ್ರದ ಶೂಟಿಂಗ್ ಈಗಾಗಲೇ ಆರಂಭ ಆಗಿದೆ. ಮೊದಲ ಹಲವು ದಿನಗಳ ಶೂಟಿಂಗ್ ಮುಗಿಸಿದೆ ಚಿತ್ರ ತಂಡ. ಈಗ ಮುಂದಿನ ಹಂತದ ಚಿತ್ರೀಕರಣಕ್ಕಾಗಿ ಕ್ರಾಂತಿ ತಂಡ ಹೈದ್ರಾಬಾದ್‌ಗೆ ತೆರಳಿದೆ. ಹೈದ್ರಾಬಾದ್‌ನಲ್ಲಿ ಕೆಲವು ದಿನಗಳ ಶೂಟಿಂಗ್ ಮಾತ್ರ ಪ್ಲ್ಯಾನ್ ಮಾಡಲಾಗಿದೆ. ಇದು ಸಣ್ಣ ಶೆಡ್ಯೂಲ್ ಆಗಿದ್ದು, ಆದಷ್ಟು ಬೇಗ ಚಿತ್ರೀಕರಣ ಮುಗಿಸಿ ಚಿತ್ರ ತಂಡ ವಾಪಸ್ಸಾಗಲಿದೆ.

ಅಕ್ಷರ ಕ್ರಾಂತಿ ಮಾಡಲಿರುವ 'ಕ್ರಾಂತಿ'!
ಯಜಮಾನ ಸಿನಿಮಾ ಮೂಲಕ ದರ್ಶನ್ ಸಂದೇಶ ಒಂದನ್ನು ಕೊಟ್ಟಿದ್ದರು. ಈಗ ಕ್ರಾಂತಿ ಚಿತ್ರದ ಮೂಲಕ ಮತ್ತೊಂದು ಕ್ರಾಂತಿ ಮಾಡಲಿದ್ದಾರೆ. ಈ ಚಿತ್ರದ ಕಥೆಯ ಬಗ್ಗೆ ಮಾತನಾಡಿದ ನಿರ್ಮಾಪಕಿ ಶೈಲಜಾನಾಗ್ ಈ ಚಿತ್ರ ಅಕ್ಷರ ಕ್ರಾಂತಿ ಮಾಡುತ್ತದೆ ಎಂದು ಹೇಳಿದ್ದಾರೆ. ಅಂದರೆ ಈ ಚಿತ್ರದಲ್ಲಿ ನಟ ದರ್ಶನ್ ಮಾಸ್ ಎನ್ನುವ ಕ್ಲೀಷೆಗೆ ಜೋತು ಬೀಳದೆ ಹೊಸದೇನನ್ನೋ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಸೂಚನೆ ಸಿಕ್ಕಿದೆ. ಮಾಸ್ ಮಸಾಲ ಹೊರತಾಗಿಯು ದರ್ಶನ್ ಸಿನಿಮಾಗಳು ಗೆದ್ದು ಬೀಗುತ್ತವೆ. ಈ ಕ್ರಾಂತಿ ಕೂಡ ಅಂತಹದ್ದೇ ಸಿನಿಮಾ ಆಗ ಬಹುದು ಎನ್ನುವ ಸೂಚನೆ ಸಿಕ್ಕಿದೆ.

ಕ್ರಾಂತಿಯಲ್ಲಿ ಒಂದಾದ ಬುಲ್ ಬುಲ್ ಜೋಡಿ!
ರಚಿತಾ ರಾಮ್ ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾಕ್ಕೆ ದರ್ಶನ್ ಅವರೇ ನಾಯಕರಾಗಿದ್ದರು. 'ಬುಲ್-ಬುಲ್' ಸಿನಿಮಾದ ಮೂಲಕ ಸಿನಿಮಾ ನಟನೆ ಆರಂಭಿಸಿದ ರಚಿತಾ ರಾಮ್ ಇದೀಗ ಎಂಟು ವರ್ಷಗಳ ಬಳಿಕ ಮತ್ತೆ ದರ್ಶನ್ ಜೊತೆ ನಟಿಸುತ್ತಿದ್ದಾರೆ. ಇವರ ಕಾಂಬಿನೇಷನ್ ಕೂಡ ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್. ಈ ಜೋಡಿಯನ್ನು ಮತ್ತೆ ತೆರೆಯ ಮೇಲೆ ನೋಡಲು ಇಡೀ ಅಭಿಮಾನಿ ಬಳಗ ಕಾದಿತ್ತು.

'ರಾಜವೀರ ಮದಕರಿ ನಾಯಕ' ಜಾಗಕ್ಕೆ 'ಕ್ರಾಂತಿ' ಎಂಟ್ರಿ!
ದರ್ಶನ್ ನಟನೆಯ ಈ ಹಿಂದಿನ ಸಿನಿಮಾ 'ರಾಬರ್ಟ್' ದೊಡ್ಡ ಯಶಸ್ಸು ಗಳಿಸಿದೆ. ಅದಾದ ಬಳಿಕ 'ರಾಜವೀರ ಮದಕರಿ ನಾಯಕ' ಸಿನಿಮಾದ ಚಿತ್ರೀಕರಣ ಆರಂಭಿಸಿದ್ದರು ದರ್ಶನ್. ಆದರೆ ಆ ಸಿನಿಮಾದ ಚಿತ್ರೀಕರಣವನ್ನು ನಿಲ್ಲಿಸಲಾಗಿದೆ. 'ರಾಜವೀರ ಮದಕರಿ ನಾಯಕ' ಸಿನಿಮಾವನ್ನು ಹಿರಿಯ ನಿರ್ದೇಶಕ ರಾಜೇಂದ್ರ ಬಾಬು ನಿರ್ದೇಶನ ಮಾಡುತ್ತಿದ್ದು, ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಹಾಗಾಗಿ ಈಗ ಕ್ರಾಂತಿ ಸಿನಿಮಾವನ್ನು ದರ್ಶನ್ ಆರಂಭಿಸಿದ್ದು, ಶೂಟಿಂಗ್‌ನಲ್ಲಿ ಬ್ಯೂಸಿ ಆಗಿದ್ದಾರೆ.


Click it and Unblock the Notifications











