Kranti Movie Trailer : ಬಹುನಿರೀಕ್ಷಿತ ಕ್ರಾಂತಿ ಚಿತ್ರದ ಟ್ರೈಲರ್ ಬಿಡುಗಡೆ ದಿನಾಂಕ ಘೋಷಣೆ
ಎರಡು ವರ್ಷಗಳಲ್ಲಿ ಕೊರೊನಾ ಲಾಕ್‌ಡೌನ್ ಸಮಸ್ಯೆಯನ್ನು ಎದುರಿಸಿ ಹಿನ್ನಡೆ ಅನುಭವಿಸಿದ್ದ ಸಿನಿಮಾ ಕ್ಷೇತ್ರ 2022ರಲ್ಲಿ ಕಮ್ ಬ್ಯಾಕ್ ಮಾಡಿದೆ. ಅದರಲ್ಲಿಯೂ ಕನ್ನಡ ಚಿತ್ರರಂಗ ಒಳ್ಳೊಳ್ಳೆ ಚಿತ್ರಗಳನ್ನು ನಿರ್ಮಿಸುವ ಮೂಲಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಬಹುತೇಕ ಎಲ್ಲಾ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾದ 2022ರಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಾವುದೇ ಚಿತ್ರ ಸಹ ಬಿಡುಗಡೆಯಾಗಿರಲಿಲ್ಲ.
ಎಲ್ಲಾ ಯೋಜನೆ ಪ್ರಕಾರವೇ ನಡೆದಿದ್ದರೆ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಎರಡನೇ ಚಿತ್ರ ಕ್ರಾಂತಿ 2022ರ ಕನ್ನಡ ರಾಜ್ಯೋತ್ಸವದ ದಿನದಂದೇ ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಉಳಿದಿದ್ದ ಕಾರಣ ಚಿತ್ರ ಆ ದಿನದಂದು ಬಿಡುಗಡೆಯಾಗಲಿದೆ ಎಂಬುದು ಘೋಷಣೆಯಾಗಲಿಲ್ಲ.
ಇನ್ನು ಕ್ರಾಂತಿ ಚಿತ್ರತಂಡ ಚಿತ್ರ ಜನವರಿ 26ರಂದು ಗಣರಾಜ್ಯೋತ್ಸವದಂದು ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ಘೋಷಿಸಿತು. ಹೀಗಾಗಿ ಚಿತ್ರತಂಡ ಚಿತ್ರದ ಹೈಪ್ ಹೆಚ್ಚಿಸಲು ಚಿತ್ರದ ಒಂದೊಂದೇ ಹಾಡನ್ನು ಬಿಡುಗಡೆ ಮಾಡುತ್ತಾ ಬರುತ್ತಿದ್ದು, ಟ್ರೈಲರ್ ಅನ್ನು ಯಾವಾಗ ಬಿಡುಗಡೆ ಮಾಡಬಹುದು ಎಂಬ ಕುತೂಹಲ ಹಾಗೂ ಪ್ರಶ್ನೆ ದರ್ಶನ್ ಅಭಿಮಾನಿಗಳಲ್ಲಿ ಹಾಗೂ ಸಿನಿ ರಸಿಕರಲ್ಲಿ ಮೂಡಿತ್ತು. ಈ ಪ್ರಶ್ನೆಗೆ ಇದೀಗ ಕ್ರಾಂತಿ ಚಿತ್ರತಂಡ ಉತ್ತರ ನೀಡಿದ್ದು, ಟ್ರೈಲರ್ ದಿನಾಂಕವನ್ನು ಘೋಷಣೆ ಮಾಡಿದೆ.

ಜನವರಿ 7ಕ್ಕೆ ಟ್ರೈಲರ್
ಜನವರಿ 7ರ ಶುಕ್ರವಾರದಂದು ಕ್ರಾಂತಿ ಚಿತ್ರದ ಟ್ರೈಲರ್ ಅನ್ನು ಬಿಡುಗಡೆಗೊಳಿಸಲಾಗುವುದು ಎಂದು ನಟ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಹೊಸ ವರ್ಷದ ಶುಭಾಶಯಗಳನ್ನು ಕೋರಿ ಬರೆದುಕೊಂಡಿರುವ ದರ್ಶನ್ ಈ ದಿನಾಂಕವನ್ನು ಘೋಷಿಸಿದ್ದಾರೆ. ದರ್ಶನ್ ಬರೆದುಕೊಂಡಿರುವ ಪೋಸ್ಟ್ ಹೀಗಿದೆ: "ಹೊಸ ವರ್ಷದ ಪ್ರತಿಕ್ಷಣವೂ ಸಂತಸದಿಂದ ಕೂಡಿರಲಿ. ಇನ್ನು ಹೆಚ್ಚು ಆತ್ಮವಿಶ್ವಾಸದೊಂದಿಗೆ ನಿಮ್ಮ ಕನಸುಗಳೆಲ್ಲಾ ಈಡೇರಲಿ. ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಕ್ರಾಂತಿ ಚಿತ್ರದ ಟ್ರೈಲರ್ ಜನವರಿ 7ಕ್ಕೆ ಬಿಡುಗಡೆಯಾಗಲಿದೆ ಗುರುತು ಮಾಡಿ ಇಟ್ಟುಕೊಳ್ಳಿ"

ಒಟ್ಟು ಐದು ಹಾಡುಗಳು
ಇನ್ನು ಜನವರಿ ಏಳರಂದು ಟ್ರೈಲರ್ ಅನ್ನು ಬಿಡುಗಡೆಗೊಳಿಸಲಿರುವ ಕ್ರಾಂತಿ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿಗದ್ದು, ಈಗಾಗಲೇ ಚಿತ್ರದ ಮೂರು ಹಾಡುಗಳನ್ನು ರಾಜ್ಯದ ವಿವಿಧ ನಗರಗಳಲ್ಲಿ ಬಿಡುಗಡೆ ಮಾಡಿರುವ ಚಿತ್ರತಂಡ ಉಳಿದ ಹಾಡುಗಳನ್ನು ಎಲ್ಲಿ ಬಿಡುಗಡೆ ಮಾಡಲಿದೆ ಎಂಬುದನ್ನು ಘೋಷಿಸಿಲ್ಲ. ಇನ್ನು ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ ಎಂಬುದನ್ನು ಮಾತ್ರ ಚಿತ್ರತಂಡ ಘೋಷಿಸಿದ್ದು, ಎಲ್ಲಾ ಹಾಡುಗಳನ್ನೂ ಒಂದೊಂದು ಊರಿನಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿಕೊಂಡಿತ್ತು.

ಕ್ರಾಂತಿ ವಿವಾದ
ಇನ್ನು ದರ್ಶನ್ ಅವರು 'ಅದೃಷ್ಟ ದೇವತೆ' ಎಂದು ನೀಡಿದ್ದ ವಿವಾದಾತ್ಮಕ ಹೇಳಿಕೆ ಕೇಳಿದ್ದ ನೆಟ್ಟಿಗರು ಕ್ರಾಂತಿ ಚಿತ್ರವನ್ನು ಬಾಯ್‌ಕಾಟ್ ಮಾಡಬೇಕು ಎಂದು ಟ್ವಿಟರ್ ಹಾಗೂ ಇತರೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಹೀಗೆ ವಿರೋಧ ಕಟ್ಟಿಕೊಂಡಿದ್ದ ಕ್ರಾಂತಿ ಚಿತ್ರತಂಡಕ್ಕೆ ಹೊಸಪೇಟೆಯಲ್ಲಿ ಮತ್ತೊಂದು ವಿವಾದ ಹುಟ್ಟಿಕೊಂಡಿತು. ಈ ವಿವಾದದಿಂದ ಪುನೀತ್ ರಾಜ್‌ಕುಮಾರ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಫ್ಯಾನ್ ವಾರ್ ಉಂಟಾಗಿದ್ದು, ಇದರ ಪರಿಣಾಮ ಚಿತ್ರದ ಮೇಲೆ ಭೀರಲಿದೆಯಾ ಎಂಬ ಪ್ರಶ್ನೆ ಎದ್ದಿದೆ..


Click it and Unblock the Notifications











