ಎರಡು ದಶಕದ ನಂತರ ಚಿತ್ರಮಂದಿರದ ಅಂಗಳಕ್ಕೆ ಮತ್ತೆ ಬರುತ್ತಿದ್ದಾನೆ 'ನಮ್ಮ ಪ್ರೀತಿಯ ರಾಮು'...!
ಒಂದು ಕಡೆ ಜೈಲಿನಲ್ಲಿ ದರ್ಶನ್ ನೆಮ್ಮದಿಯಾಗಿದ್ದಾರೆ. ಮತ್ತೊಂದು ಕಡೆ ದರ್ಶನ್ ಪ್ರಭಾವಳಿಯನ್ನು ಬಳಸಿಕೊಂಡು ಅವರ ಗತಕಾಲದ ಸಿನಿಮಾಗಳನ್ನು ಕೆಲವರು ಮರು ಬಿಡುಗಡೆ ಮಾಡುತ್ತಿದ್ದಾರೆ. ಇದಕ್ಕೆ ನಮ್ಮ ಪ್ರೀತಿಯ ರಾಮು ಮತ್ತೊಂದು ಉದಾಹರಣೆ.
ಹೌದು, ಈಗಾಗಲೇ ದರ್ಶನ್ ಅಭಿನಯದ ಕರಿಯ, ಶಾಸ್ತ್ರೀ, ಮರುಬಿಡುಗಡೆಯಾಗಿವೆ. ಭಾರೀ ಜನಾಭಿಪ್ರಾಯದ ಮೇರೆಗೆ ನವಗ್ರಹ ಚಿತ್ರವನ್ನು ಮತ್ತೊಮ್ಮೆ ಬಿಡುಗಡೆ ಮಾಡುವ ಆಲೋಚನೆ ಕೂಡ ನಡೆದಿದೆ. ಹೀಗಿರುವಾಗ ಈಗ ದರ್ಶನ್ ಅಭಿನಯದ ನಮ್ಮ ಪ್ರೀತಿಯ ರಾಮು ಚಿತ್ರವನ್ನು ರೀ ರಿಲೀಸ್ ಮಾಡುವ ಯೋಚನೆಯನ್ನು ಚಿತ್ರತಂಡ ಮಾಡಿದೆ.

ಅಂದ್ಹಾಗೇ ನಮ್ಮ ಪ್ರೀತಿಯ ರಾಮು ದರ್ಶನ್ ಅಭಿನಯದ ಒಂಬತ್ತನೇ ಚಿತ್ರ. ಎಲ್ಲರೂ ಇವರ ಕೈಯಲ್ಲಿ ಲಾಂಗ್ ಕೊಡುತ್ತಿದ್ದ ಸಂದರ್ಭದಲ್ಲಿ ನಿರ್ದೇಶಕರಾದ ಸಂಜಯ್ ಮತ್ತು ವಿಜಯ್ ದರ್ಶನ್ ಅವರಲ್ಲಿರುವ ನಿಜವಾದ ಕಲಾವಿದನನ್ನು ಹೊರತರುವ ಪ್ರಯತ್ನ ಮಾಡಿದ್ದರು. ದರ್ಶನ್ ಕೂಡ ಈ ಚಿತ್ರಕ್ಕೆ ತಮ್ಮ ತನು-ಮನ ಅರ್ಪಿಸಿ ಕೆಲಸ ಮಾಡಿದ್ದರು. ಕಣ್ಣಿನ ಗುಡ್ಡೆಗಳನ್ನು ಮೇಲಕ್ಕೆ ಮಾಡಿ ಪಾತ್ರಕ್ಕೆ ಜೀವ ತುಂಬಿದರು. ಆದರೆ, ದುರಾದೃಷ್ಟ .. ದರ್ಶನ್ ಅವರನ್ನು ಹೊಡಿ, ಬಡಿ, ಕಡಿ ಚಿತ್ರದಲ್ಲಿ ನೋಡಿ ಮೆಚ್ಚಿಕೊಂಡಿದ್ದ ಅನೇಕರು ನಮ್ಮ ಪ್ರೀತಿಯ ರಾಮು ಚಿತ್ರದಲ್ಲಿ ದರ್ಶನ್ ಸುರಿಸಿದ್ದ ಬೆವರಿಗೆ ಬೆಲೆ ನೀಡಲಿಲ್ಲ. ಬಾಕ್ಸಾಫೀಸ್‌ನಲ್ಲಿ ಚಿತ್ರ ಗೆಲ್ಲಲಿಲ್ಲ. ಜನರ ಹೃದಯ ಗೆದ್ದಿದ್ದು ಇಳಯರಾಜಾ ಸಂಗೀತದಲ್ಲಿ ಬಂದಿದ್ದ ಹಾಡುಗಳು ಮಾತ್ರ.
ಇನ್ನೂ ನಮ್ಮ ಪ್ರೀತಿಯ ರಾಮು ಚಿತ್ರದ ನಂತರ ದರ್ಶನ್ ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಈ ಚಿತ್ರದ ನಂತರ ಕಣ್ಣಿನ ಆಪರೇಷನ್ ಮಾಡಿಸಿಕೊಂಡ ದರ್ಶನ್ ಅವರಿಗೆ ಈಗಲೂ ಕೂಡ ಎಡಗಣ್ಣಿನಲ್ಲಿ ಆಗಾಗ ನೋವು ಕಾಣಿಸಿಕೊಳ್ಳುತ್ತೆ. ಈ ವಿಚಾರವನ್ನು ಮಹಾ ನಟಿ ಕಾರ್ಯಕ್ರಮದಲ್ಲಿ ಹಿಂದೊಮ್ಮೆ ಹೇಳಿದ್ದ ದರ್ಶನ್ ಅವರ ಅತ್ಯಾಪ್ತ ತರುಣ್ ಸುಧೀರ್, ಮತ್ತೊಂದು ಸಂದರ್ಶನದಲ್ಲಿ ತಮಿಳು, ಮಲಯಾಳಂ ಎಲ್ಲಾ ಭಾಷೆಯಲ್ಲೂ ರಿಮೇಕ್ ಆಗಿದ್ದಂತಹ ಸಿನಿಮಾ ಅದು. ಮಲಯಾಳಂ ಫಸ್ಟ್, ತಮಿಳು ಸೆಕೆಂಡ್ ಆಮೇಲೆ ಕನ್ನಡ. ಎಲ್ಲೇ ನೋಡಿದರನೂ ಎಲ್ಲರೂ ನ್ಯಾಚುರಲ್ ಆಗಿಯೇ ಮಾಡಿದ್ದಾರೆ. ಇವರದ್ದು ಬೆಸ್ಟ್ ಆಗಿ ಕಾಣಿಸುತ್ತೆ. ಎಲ್ಲರ ಕಣ್ಣುಗಳಲ್ಲೂ ಕಪ್ಪು ಕಾಣಿಸುತ್ತೆ. ಇವರದ್ದು ಒಂದು ಚೂರು ಕಾಣಿಸುವುದಿಲ್ಲ. ಅವರು ಅಷ್ಟು ಎಫರ್ಟ್ ಹಾಕಿದ್ದರು ಎಂದು ಹೇಳಿದ್ದರು. ಚಿತ್ರ ರೀಚ್ ಆಗಲಿಲ್ಲ ಎಂದು ತಮ್ಮ ಬೇಸರವನ್ನು ಹೊರ ಹಾಕಿದ್ದರು.
ಇಂತಹ ನಮ್ಮ ಪ್ರೀತಿಯ ರಾಮು ಈಗ ಇನ್ನೊಮ್ಮೆ ಮರು ಬಿಡುಗಡೆಯಾಗುತ್ತಿದೆ. 5.1 ಸೌಂಡ್‌ನೊಂದಿಗೆ ತಾಂತ್ರಿಕ ಶ್ರೀಮಂತಿಕೆಯೊಂದಿಗೆ ಈ ನವೆಂಬರ್ ಒಂದರಂದು ರಾಜ್ಯೋತ್ಸವದ ಪ್ರಯುಕ್ತ ಕರುನಾಡಿನೆಲ್ಲೆಡೆ ತೆರೆಗೆ ಬರಲಿದೆ. ಅಮೆರಿಕಾ ಅಮೆರಿಕಾ ಚಿತ್ರ ನಿರ್ಮಾಣ ಮಾಡಿದ್ದ ಜೆ.ನಂದಕುಮಾರ್ ನಿರ್ಮಾಣದಲ್ಲಿ ಮೂಡಿ ಬಂದಿದ್ದ ಈ ಚಿತ್ರದಲ್ಲಿ ನವ್ಯಾ ನಟರಾಜನ್ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ದೊಡ್ಡಣ್ಣ, ಉಮಾಶ್ರೀ, ಕರಿಬಸವಯ್ಯ, ಪವಿತ್ರಾ ಲೋಕೇಶ್, ರಮೇಶ್ ಪಂಡಿತ್ ಚಿತ್ರದ ತಾರಾಬಳಗದಲ್ಲಿದ್ದರು.
ಬೆಂಗಳೂರು, ಮೈಸೂರು, ಶ್ರೀರಂಗ ಪಟ್ಟಣ, ಕರಿಘಟ್ಟ ಮುಂತಾದ ಕಡೆ ಚಿತ್ರದ ಚಿತ್ರೀಕರಣವನ್ನು ಮಾಡಲಾಗಿತ್ತು. ಈಗ ಈ ಚಿತ್ರವನ್ನು ದಿಲೀಪ್ ಕುಮಾರ್ ಭರ್ತಿ ಎರಡು ದಶಕದ ನಂತರ ಮತ್ತೊಮ್ಮೆ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಕರಿಯ, ಶಾಸ್ತ್ರೀ ಚಿತ್ರಕ್ಕೆ ಅಭಿಮಾನಿಗಳಿಂದ ಸಿಕ್ಕ ಸ್ವಾಗತ ಈ ಚಿತ್ರಕ್ಕೆ ಸಿಗುತ್ತಾ ಅನ್ನುವುದನ್ನು ಕಾದು ನೋಡಬೇಕಿದೆ. ನಮ್ಮ ಪ್ರೀತಿಯ ರಾಮು ಮತ್ತೊಮ್ಮೆ ತೆರೆಗೆ ಬರುವಷ್ಟರಲ್ಲಿ ದರ್ಶನ್ ಕೂಡ ಜೈಲಿಂದ ಆಚೆ ಬರುತ್ತಾರಾ ಎನ್ನುವುದನ್ನು ಕೂಡ ಕಾದು ನೋಡಬೇಕಿದೆ


Click it and Unblock the Notifications











