ಐತಿಹಾಸಿಕ ಪಾತ್ರದಲ್ಲಿ ನಟ ದರ್ಶನ್, ಯಾವ ಸಿನಿಮಾ? ಫೋಟೊಗಳು ಲೀಕ್
ನಟ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಈ ವರ್ಷ ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಲು ಸಾಧ್ಯವಾಗಲಿಲ್ಲ. ಆಪ್ತರ ಜೊತೆ ಸಂಭ್ರಮಾಚರಣೆ ಮಾಡಿದ್ದಾರೆ. ಇನ್ನು 'ಡೆವಿಲ್' ಚಿತ್ರದ ಟೀಸರ್ ಬಿಡುಗಡೆ ಆಗಿ ಸದ್ದು ಮಾಡ್ತಿದೆ.
ಅಭಿಮಾನಿಗಳು ಕಾಮನ್ ಡಿಪಿ ಕ್ರಿಯೇಟ್ ಮಾಡಿ ವೈರಲ್ ಮಾಡಿದ್ದರು. ಅದನ್ನು ದರ್ಶನ್ ಪತ್ನಿ ವಿಜಯಲಕ್ಷ್ಮಿ ಲಾಂಚ್ ಮಾಡಿದ್ದರು. ಅಭಿಮಾನಿಗಳ ವಾಟ್ಸಪ್, ಇನ್‌ಸ್ಟಾ, ಫೇಸ್‌ಬುಕ್ ಅಕೌಂಟ್ ಡಿಪಿಯಲ್ಲಿ ಫೋಟೊ ರಾರಾಜಿಸುತ್ತಿದೆ. ಇನ್ನು ಹುಟ್ಟುಹಬ್ಬದ ಸಂಭ್ರಮದಲ್ಲಿ D58 ಹಾಗೂ D59 ಚಿತ್ರತಂಡಗಳು ಶುಭಾಶಯ ಕೋರಿ ಪೋಸ್ಟರ್ ಬಿಟ್ಟಿದ್ದಾರೆ. ಕೆವಿಎನ್ ಬ್ಯಾನರ್‌ನಲ್ಲೇ ಪ್ರೇಮ್ ನಿರ್ದೇಶನದ ಸಿನಿಮಾ ಬರುವುದು ಪಕ್ಕಾ ಆಗಿದೆ.

ಶೀಘ್ರದಲ್ಲೇ ದರ್ಶನ್ 'ಡೆವಿಲ್' ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ. ಸಾಮಾಜಿಕ ಸಿನಿಮಾಗಳು ಮಾತ್ರವಲ್ಲ ಐತಿಹಾಸಿಕ, ಪೌರಾಣಿಕ ಪಾತ್ರಗಳಲ್ಲಿ ಕೂಡ ದರ್ಶನ್ ನಟಿಸಿ ಗೆದ್ದಿದ್ದಾರೆ. 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಬಳಿಕ 'ಕುರುಕ್ಷೇತ್ರ' ಚಿತ್ರದಲ್ಲಿ ದರ್ಶನ್ ಅಬ್ಬರಿಸಿದ್ದರು. ಎರಡೂ ಚಿತ್ರಗಳು ಗೆದ್ದಿದ್ದವು. ಬಳಿಕ 'ರಾಜಾವೀರಮದಕರಿ ನಾಯಕ' ಚಿತ್ರದಲ್ಲಿ ನಟಿಸಿದ್ದರು. ಆದರೆ ಒಂದು ವಾರ ಚಿತ್ರೀಕರಣದ ಬಳಿಕ ಸಿನಿಮಾ ನಿಂತು ಹೋಗಿತ್ತು.
ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ರಾಕ್‌ಲೈನ್ ವೆಂಕಟೇಶ್ 'ರಾಜಾವೀರಮದಕರಿ ನಾಯಕ' ಚಿತ್ರವನ್ನು ನಿರ್ಮಾಣ ಮಾಡಬೇಕಿತ್ತು. ಆ ಸಿನಿಮಾ ನಿಂತ ಬಳಿಕ ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಲ್ಲೇ ತರುಣ್ ನಿರ್ದೇಶನದಲ್ಲಿ 'ಕಾಟೇರ' ಸಿನಿಮಾ ಮಾಡಿ ಗೆದ್ದರು. 'ರಾಜಾವೀರಮದಕರಿ ನಾಯಕ' ಸಿನಿಮಾ ಬರುತ್ತಾ ಇಲ್ವಾ? ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ ದರ್ಶನ್ ಮಾತ್ರ ಮದಕರಿ ನಾಯಕರ ಪಾತ್ರದಲ್ಲಿ ನಟಿಸೋಕೆ ಉತ್ಸುಕರಾಗಿದ್ದಾರೆ.

ಒಂದು ವಾರ ಕೇರಳದ ಅತಿರಪಲ್ಲಿ ಫಾಲ್ಸ್ ಬಳಿ 'ರಾಜಾವೀರಮದಕರಿ ನಾಯಕ' ಶೂಟಿಂಗ್ ನಡೆದಿತ್ತು. ಸದ್ಯ ದರ್ಶನ್ ಜಟಾಧಾರಿಯಾಗಿ ಕುರುಚಲು ಗಡ್ಡ ಬಿಟ್ಟು ಹಣೆಗೆ ವಿಭೂತಿ ಬಳಿದುಕೊಂಡು ಕಚ್ಚೆ, ಅಂಗಿ ಧರಿಸಿ ಫಾಲ್ಸ್ ಮುಂದೆ ಕಾಣಿಸಿಕೊಂಡಿರುವ ಫೋಟೊಗಳು ವೈರಲ್ ಆಗುತ್ತಿದೆ. ಇದು 'ರಾಜಾವೀರಮದಕರಿ ನಾಯಕ' ಸಿನಿಮಾ ಚಿತ್ರೀಕರಣದ ವೇಳೆ ಕ್ಲಿಕ್ಕಿಸಿರುವ ಫೋಟೊಗಳು ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.
ಒಂದು ವಾರ ಚಿತ್ರೀಕರಣ ನಡೆಸಿದರೂ ಯಾವುದೇ ಫೋಟೊ, ವೀಡಿಯೋ ಲೀಕ್ ಆಗದಂತೆ ಚಿತ್ರತಂಡ ಎಚ್ಚರಿಕೆ ವಹಿಸಿತ್ತು. ಆದರೆ ಬಹಳ ದಿನಗಳ ಬಳಿಕ ಈ ಫೋಟೊಗಳು ವೈರಲ್ ಆಗುತ್ತಿದೆ. ಅಭಿಮಾನಿಗಳಂತೂ ನೆಚ್ಚಿನ ನಟನನ್ನು ಐತಿಹಾಸಿಕ ಪಾತ್ರದ ಲುಕ್‌ನಲ್ಲಿ ನೋಡಿ ಖುಷಿಯಾಗಿದ್ದಾರೆ. 'ರಾಜಾವೀರಮದಕರಿ ನಾಯಕ' ಸಿನಿಮಾ ಮೂಡಿ ಬಂದರೆ ಚೆನ್ನಾಗಿರುತ್ತದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಅಂದಹಾಗೆ ಮದಕರಿ ನಾಯಕರ ಜೀವನಾಧರಿತ ಚಿತ್ರದಲ್ಲಿ ನಟಿಸಲು ಸುದೀಪ್ ಹಾಗೂ ದರ್ಶನ್ ನಡುವೆ ಪೈಪೋಟಿ ನಡೆದಿತ್ತು. ಸುದೀಪ್ ಸಹ ಮದಕರಿ ನಾಯಕರ ಜೀವನಾಧರಿತ ಸಿನಿಮಾ ಮಾಡಲು ಮನಸ್ಸು ಮಾಡಿದ್ದರು. ಅದಕ್ಕಾಗಿ ತಯಾರಿ ನಡೆಸಿದ್ದರು. ಅಷ್ಟರಲ್ಲೇ ದರ್ಶನ್ ಹೀರೊ ಸಿನಿಮಾ ಘೋಷಣೆ ಆಗಿತ್ತು. ಸುದೀಪ್ ತಾವು ಕೂಡ ಸಿನಿಮಾ ಮಾಡುವ ಬಗ್ಗೆ ಮಾತನಾಡಿದ್ದರು. ಕೊನೆಗೆ ನೀವೇ ಮಾಡಿ ಎಂದು ಬಿಟ್ಟುಕೊಟ್ಟರು.
ನಗರದ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ 'ರಾಜಾವೀರಮದಕರಿ ನಾಯಕ' ಚಿತ್ರಕ್ಕೆ ಚಾಲನೆ ನೀಡಲಾಗಿತ್ತು. ರಾಜಮಾತೆಯ ಪಾತ್ರದಲ್ಲಿ ಸುಮಲತಾ ಅಂಬರೀಶ್ ನಟಿಸಬೇಕಿತ್ತು. ಹಂಸಲೇಖ ಸಂಗೀತ, ಸಾಹಿತ್ಯ ಒದಗಿಸಲು ಒಪ್ಪಿದ್ದರು. ಘಟಾನುಘಟಿ ಕಲಾವಿದರನ್ನು ಕಾಸ್ಟ್ ಮಾಡಲು ಚಿತ್ರತಂಡ ಮುಂದಾಗಿತ್ತು. ಆದರೆ ಅಷ್ಟರಲ್ಲೇ ಸಿನಿಮಾ ನಿಂತು ಹೋಯಿತು. ಒಂದು ವಾರ ಚಿತ್ರೀಕರಣದ ಬಳಿಕ ಯಾಕೋ ಹಿಡಿತ ಸಿಗಲಿಲ್ಲ. ಅದಕ್ಕೆ ಸಿನಿಮಾ ನಿಲ್ಲಿಸಿದೆವು ಎಂದು ದರ್ಶನ್ ಹೇಳಿದ್ದರು.


Click it and Unblock the Notifications











