ತೆಲುಗು ಭಾಷೆಯಲ್ಲೂ ತೆರೆಗೆ ಬರುತ್ತಿದೆ ಡಿ ಬಾಸ್ 'ರಾಬರ್ಟ್'
ಚಾಲೆಂಜಿಂಗ್ ಸ್ಟಾರ್ ದರ್ಶನ್ ತೆಲುಗು ಚಿತ್ರರಂಗದಲ್ಲೂ ಅಬ್ಬರಿಸಲು ಸಜ್ಜಾಗಿದ್ದಾರೆ. ಬಹುನಿರೀಕ್ಷೆಯ ರಾಬರ್ಟ್ ಸಿನಿಮಾ ಮೂಲಕ ದರ್ಶನ್ ಮತ್ತೆ ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.
ಹೌದು, ರಾಬರ್ಟ್ ಸಿನಿಮಾ ಕನ್ನಡದ ಜೊತೆಗೆ ತೆಲುಗಿನಲ್ಲಿಯೂ ರಿಲೀಸ್ ಆಗುತ್ತಿದೆಯಂತೆ. ಏಕಕಾಲಕ್ಕೆ ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿಯೂ ತೆರೆಗೆ ಬರುತ್ತಿದೆಯಂತೆ. ಬಹು ನಿರೀಕ್ಷೆಯ ರಾಬರ್ಟ್ ಸಿನಿಮಾ ತೆಲುಗಿನಲ್ಲಿ ರಿಲೀಸ್ ಆಗುತ್ತಿರುವುದಾಗಿ ನಿರ್ದೇಶಕ ತರುಣ್ ಸುಧೀರ್ 'ಫಿಲ್ಮಿ ಬೀಟ್ ಕನ್ನಡ'ಗೆ ಸ್ಪಷ್ಟಪಡಿಸಿದ್ದಾರೆ.
ಸದ್ಯ ತೆಲುಗಿನಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ತಮಿಳು ಮತ್ತು ಹಿಂದಿಯಲ್ಲಿಯೂ ಬಿಡುಗಡೆ ಮಾಡುವ ಪ್ಲಾನ್ ಮಾಡುತ್ತಿದೆಯಂತೆ. ಈ ಹಿಂದೆ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಕೂಡ ತೆಲುಗು ಭಾಷೆಯಲ್ಲಿ ತೆರೆಗೆ ಬಂದಿತ್ತು. ಈಗ ದರ್ಶನ್ ಮತ್ತೊಂದು ಸಿನಿಮಾ ಮೂಲಕ ತೆಲುಗು ಪ್ರೇಕ್ಷಕರ ಮುಂದೆ ಹೋಗುತ್ತಿದ್ದಾರೆ.

ಈಗಾಗಲೆ ಚಿತ್ರೀಕರಣ ಮುಗಿಸಿ ರಾಬರ್ಟ್ ತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಫಸ್ಟ್ ಲುಕ್ ಮತ್ತು ಟೀಸರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಮಟ್ಟವನ್ನು ಹೆಚ್ಚಿಸಿರುವ ರಾಬರ್ಟ್ ಏಪ್ರಿಲ್ ನಲ್ಲಿ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ದರ್ಶನ್ ಮೂರು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗೆ ರಿಲೀಸ್ ಆದ ಆಂಜನೇಯನ ಟೀಸರ್ ಮತ್ತು ಹುಟ್ಟು ಹಬ್ಬದ ದಿನ ರಿಲೀಸ್ ಆದ ಟೀಸರ್ ಅಭಿಮಾನಿಗಳ ನಿದ್ದೆಗೆಡಿಸಿದ್ದು, ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂದು ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ.
ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ಆಶಾ ಭಟ್ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಆಶಾ ಭಟ್ ಕನ್ನಡ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇನ್ನು ಜಗಪತಿ ಬಾಬು ವಿಲನ್ ಆಗಿ ದರ್ಶನ್ ಎದುರು ಅಬ್ಬರಿಸಿದ್ದಾರೆ. ಚಿತ್ರಕ್ಕೆ ಉಮಾಪತಿ ಬಂಡವಾಳ ಹೂಡಿದ್ದಾರೆ. ಸಧ್ಯದಲ್ಲೇ ಚಿತ್ರದ ಟ್ರೈಲರ್ ಮತ್ತು ಹಾಡುಗಳು ತೆರೆಗೆ ಬರುವ ಸಾಧ್ಯತೆ ಇದೆ.


Click it and Unblock the Notifications











