4 Years For Yajamana: ಓಟಿಟಿಗೂ ಬಂದ್ರು 100 ದಿನ ಪ್ರದರ್ಶನ: ಡೈಲಾಗ್ಸ್, ಸಾಂಗ್ಸ್ ಗುಂಗಲ್ಲಿ ಫ್ಯಾನ್ಸ್
ಚಾಲೆಂಜಿಂಗ್ ದರ್ಶನ್ ನಟನೆಯ ಸೂಪರ್ ಹಿಟ್ 'ಯಜಮಾನ' ಸಿನಿಮಾ 4 ವರ್ಷ ಪೂರೈಸಿದೆ. ಅಭಿಮಾನಿಗಳು ಮಾತ್ರ ಈ ಸಿನಿಮಾ ಸಾಂಗ್ಸ್, ಡೈಲಾಗ್ಸ್‌ನ ಇನ್ನು ಮರೆತ್ತಿಲ್ಲ. 2019, ಮಾರ್ಚ್ 1ರಂದು ತೆರೆಕಂಡಿದ್ದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಕಮರ್ಷಿಯಲ್ ಅಂಶಗಳ ಜೊತೆ ಸಿನಿಮಾ ಒಂದೊಳ್ಳೆ ಸಂದೇಶ ಹೊತ್ತು ಬಂದಿತ್ತು.
ಮೋಷನ್ ಪೋಸ್ಟರ್‌ನಿಂದಲೇ ಸೌಂಡ್ ಮಾಡಲು ಆರಂಭಿಸಿದ ಸಿನಿಮಾ 100 ಡೇಸ್ ಕಂಪ್ಲೀಟ್ ಆಗುವವರೆಗೂ ಸದ್ದು ಮಾಡಿತ್ತು. ಎಣ್ಣೆ ಗಾಣ ನಂಬಿಕೊಂಡು ಬದುಕುವ ಹಳ್ಳಿ ಜನರ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿತ್ತು. ಕಲಬೆರಕೆ ಎಣ್ಣೆ ದಂಧೆಕೋರರ ವಿರುದ್ಧ ನಿಲ್ಲುವ ನಾಯಕ, ತಮ್ಮದೇ ಊರಿನ ಸ್ವಂತ ಬ್ರ್ಯಾಂಡ್ ಅನ್ನು ಉಳಿಸಿಕೊಳ್ಳುವ ನಡೆಸುವ ಹೋರಾಟದ ಕಥೆ ಚಿತ್ರದಲ್ಲಿತ್ತು. ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು.

ದರ್ಶನ್ ಅಲ್ಲಿವರೆಗೂ ಮಾಡಿದ್ದ ಸಿನಿಮಾಗಳಿಗಿಂತ ಬಹಳ ವಿಭಿನ್ನವಾದ ಕಥೆಯನ್ನು ಯಜಮಾನ ಚಿತ್ರದಲ್ಲಿ ಆಯ್ಕೆ ಮಾಡಿಕೊಂಡಿದ್ದರು. ಪೊನ್ ಕುಮಾರ್ ಹಾಗೂ ವಿ. ಹರಿಕೃಷ್ಣ ಇಬ್ಬರು ಕತೆ ಚಿತ್ರಕಥೆ ಬರೆದು ಸಿನಿಮಾ ನಿರ್ದೇಶನ ಮಾಡಿದ್ದರು. ಕಾರಣಾಂತರಗಳಿಂದ ಪೊನ್ ಕುಮಾರ್ ಅರ್ಧಕ್ಕೆ ಚಿತ್ರದಿಂದ ಹೊರನಡೆದಿದ್ದರು. ನಂತರ ಸಂಗೀತ ನಿರ್ದೇಶಕ ಹರಿಕೃಷ್ಣ ಸಿನಿಮಾ ಶೂಟಿಂಗ್ ಮುಗಿಸಿ ರಿಲೀಸ್ ಮಾಡಿದ್ದರು.
ಯಜಮಾನ ಚಿತ್ರದ ಟೀಸರ್, ಟ್ರೈಲರ್, ಸಾಂಗ್ಸ್ ಎಲ್ಲವೂ ಸೂಪರ್ ಹಿಟ್ ಆಗಿತ್ತು. ದರ್ಶನ್ ಅವರ ವ್ಯಕ್ತಿತ್ವಕ್ಕೆ ಹೊಂದಿಕೆಯಾಗುವಂತೆ ಚಿತ್ರದ ನಾಯಕನ ಡೈಲಾಗ್ಸ್ ಹಾಗೂ ಹಾಡುಗಳನ್ನು ಬರೆಯಲಾಗಿತ್ತು. ಅದೆಲ್ಲವೂ ಅಭಿಮಾನಿಗಳ ಮನಗೆದ್ದಿತ್ತು. ಈ ನಾಲ್ಕು ವರ್ಷದಲ್ಲಿ ದರ್ಶನ್ ನಟನೆಯ ಮೂರ್ನಾಲ್ಕು ಸಿನಿಮಾಗಳು ಬಂದಿದ್ದರೂ 'ಯಜಮಾನ' ಡೈಲಾಗ್ಸ್, ಸಾಂಗ್ಸ್ ಗುಂಗಿನಿಂದ ಅಭಿಮಾನಿಗಳು ಇನ್ನು ಹೊರಬಂದಿಲ್ಲ. ಅದರಲ್ಲೂ ಚಿತ್ರದ ಟೈಟಲ್ ಸಾಂಗ್ ಅಭಿಮಾನಿಗಳ ಹಾಟ್ ಫೇವರಿಟ್.

'ಯಜಮಾನ' ಚಿತ್ರದಲ್ಲಿ ದರ್ಶನ್ ಎಂಟ್ರಿ ಸೀನ್, ಬಿಜಿಎಂ ಎಲ್ಲವೂ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿತ್ತು. ಫ್ಯಾಮಿಲಿ ಸಮೇತರಾಗಿ ಪ್ರೇಕ್ಷಕರು ಸಿನಿಮಾ ನೋಡಿ ಎಂಜಾಯ್ ಮಾಡಿದ್ದರು. ಸಿನಿಮಾ 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಸಾಹಸಸಿಂಹ ಡಾ. ವಿಷ್ಣುವರ್ಧನ್ ಸಿನಿಮಾ ಟೈಟಲ್ ಇಟ್ಟಾಗ ಮೊದಲಿಗೆ ಕೆಲವರು ಬೇಡ ಎಂದಿದ್ದರು. ಆದರೆ ಚಿತ್ರದಲ್ಲಿ ರೈತನೇ 'ಯಜಮಾನ' ಎಂದು ತೋರಿಸಿ ಚಿತ್ರತಂಡ ಗೆದ್ದಿತ್ತು.
'ಯಜಮಾನ' ಸಿನಿಮಾ ಬಿಡುಗಡೆಯಾಗಿ 49 ದಿನಕ್ಕೆ ಅಮೇಜಾನ್ ಪ್ರೈಮ್‌ಗೆ ಬಂದಿತ್ತು. ಆದರೂ ಕೂಡ ಸಿನಿಮಾ 100 ದಿನ ಪ್ರದರ್ಶನ ಕಂಡಿತ್ತು. ಸ್ಯಾಂಪಲ್‌ಗಳಿಂದ ಬಹಳ ಹೈಪ್ ಕ್ರಿಯೇಟ್ ಆಗಿದ್ದ ಹಿನ್ನೆಲೆಯಲ್ಲಿ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿತ್ತು. ತೆರೆಕಂಡ 3 ದಿನಕ್ಕೆ ಸಿನಿಮಾ 30 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಅಂದಾಜಿಲಾಗಿತ್ತು. ಬಾಕ್ಸಾಫೀಸ್ ಶೇಕ್ ಮಾಡಿದ್ದು ಮಾತ್ರವಲ್ಲ. 8 ಸೈಮಾ ಪ್ರಶಸ್ತಿಗಳನ್ನು ಸಿನಿಮಾ ಬಾಚಿಕೊಂಡಿತ್ತು.

24 ಗಂಟೆಗಳಲ್ಲಿ 1 ಕೋಟಿ ವೀವ್ಸ್ ಸಾಧಿಸಿ 'ಯಜಮಾನ' ಟ್ರೈಲರ್ ದಾಖಲೆ ಬರೆದಿತ್ತು. ಈ ಸಾಧನೆ ಮಾಡಿದ ಮೊದಲ ಕನ್ನಡ ಸಿನಿಮಾ ಟ್ರೈಲರ್ ಎನಿಸಿಕೊಂಡಿತ್ತು. ಇನ್ನು ಚಿತ್ರದ ಎಲ್ಲಾ ಸಾಂಗ್ಸ್ 1 ಕೋಟಿಗೂ ಅಧಿಕ ವೀವ್ಸ್, 1 ಲಕ್ಷಕ್ಕೂ ಅಧಿಕ ಲೈಕ್ಸ್ ಗಿಟ್ಟಿಸಿಕೊಂಡಿತ್ತು.10 ಥಿಯೇಟರ್‌ಗಳಲ್ಲಿ ಸಿನಿಮಾ 100 ದಿನ ಪ್ರದರ್ಶನ ಕಂಡಿತ್ತು. ಮೀಡಿಯಾ ಹೌಸ್ ಬ್ಯಾನರ್ ಅಡಿಯಲ್ಲಿ ಶೈಲಜಾ ನಾಗ್, ಬಿ. ಸುರೇಶ ದಂಪತಿ 'ಯಜಮಾನ' ಸಿನಿಮಾ ನಿರ್ಮಿಸಿದ್ದರು. ಇದೇ ತಂಡ ಇತ್ತೀಚೆಗೆ 'ಕ್ರಾಂತಿ' ಸಿನಿಮಾ ಮಾಡಿತ್ತು.


Click it and Unblock the Notifications











