68th Kannada Rajyotsava: ಕನ್ನಡ ರಾಜ್ಯೋತ್ಸವ ಶುಭಾಶಯ ಕೋರಿದ ಸಿನಿಮಾ ತಾರೆಯರು
ರಾಜ್ಯದಲ್ಲಿ 68ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಕನ್ನಡ ಧ್ವಜ ಆಗಸದಲ್ಲಿ ಹಾರಾಡುತ್ತಿದೆ. ವಿವಿಧ ಸಂಘ ಸಂಸ್ಥೆಗಳು, ಸರ್ಕಾರಿ ಕಚೇರಿಗಳು ಸೇರಿದಂತೆ ಹಲವು ಭಾಗಗಳಲ್ಲಿ ಧ್ವಜಾರೋಹಣ ಮಾಡಿ ರಾಜ್ಯೋತ್ಸವದ ಸಂಭ್ರಮವನ್ನ ಅದ್ದೂರಿಯಾಗಿ ಆಚರಿಸಲಾಗುತ್ತಿದೆ.
ಕನ್ನಡಿಗರ ಮನೆ ಮನಗಳಲ್ಲಿ ಕನ್ನಡ ಪ್ರೇಮ ಉಕ್ಕುತ್ತಿದೆ. ಸೋಶಿಯಲ್ ಮೀಡಿಯಾ ತುಂಬೆಲ್ಲಾ ಕನ್ನಡ ನುಡಿ, ಧ್ವಜ ರಾರಾಜಿಸುತ್ತಿದೆ. 1973ರ ನವೆಂಬರ್ 1 ರಂದು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿ ಇಂದಿಗೆ ೫೦ ವರ್ಷಗಳು ಪೂರೈಸಿದೆ. ಕನ್ನಡ ಭಾಷೆ ಬೆಳವಣಿಗೆಗೆ ಕನ್ನಡ ಸಿನಿಮಾಗಳ ಕೊಡುಗೆಯನ್ನು ಮರೆಯುವಂತಿಲ್ಲ. ಸಿನಿಮಾ ತಾರೆಯರು ಕೂಡ ನಾಡಿನ ಜನತೆಗೆ ರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ.

ನಟ ದರ್ಶನ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ "ಕನ್ನಡ ಕಲಿಸೋಣ, ಕನ್ನಡ ಬೆಳೆಸೋಣ, ಕನ್ನಡದ ನೆಲದ ಅಭಿವೃದ್ಧಿಗೆ ಶ್ರಮಿಸೋಣ. ಬದುಕು ಕಲಿಸಿದ ಈ ಮಾತೃಭೂಮಿಯ ಹಬ್ಬದಂದು ಕನ್ನಡ ಪ್ರೀತಿ ಮೆರೆವ ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು" ಎಂದು ಬರೆದು ಶುಭಾಶಯ ತಿಳಿಸಿದ್ದಾರೆ.
"ಹಸಿರಾಗಲಿ ಕರ್ನಾಟಕ.. ಉಸಿರಾಗಲಿ ಕನ್ನಡ.. ವಿಶ್ವದೆಲ್ಲೆಡೆ ಹಬ್ಬಿರುವ ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು" ಎಂದು ನಟ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. "ಕನ್ನಡ ನನ್ನ ಕನಸು, ಕನ್ನಡ ನನ್ನ ಮನಸ್ಸು, ಕನ್ನಡಿಗನೆಂಬ ಹೆಮ್ಮೆ ಸೊಗಸು, ನಮ್ಮಲ್ಲಿ ಕನ್ನಡವನ್ನು ಉಳಿಸು, ಎಲ್ಲೆಲ್ಲೂ ಕನ್ನಡವನ್ನು ಬೆಳೆಸು" ಎಂದು ನವರಸ ನಾಯಕ ಜಗ್ಗೇಶ್ ರಾಜ್ಯೋತ್ಸವ ಶುಭಾಶಯ ಕೋರಿದ್ದಾರೆ.
"ನೆಲೆ ಕೊಟ್ಟ ಜಾಗಕ್ಕೆ..ಬೆಲೆ ಕೊಟ್ಟ ಭಾಷೆಗೆ ಎಂದಿಗೂ ಅಭಿಮಾನವಿರಲಿ. ಕರ್ನಾಟಕದಲ್ಲಿ ಸಂಕ್ರಾಂತಿ, ರಂಜಾನ್, ಓಣಂ goodfriday..Hallowen ಆಚರಿಸದವರೆಲ್ಲರೂ ಹಚ್ಚಿರಿ ಕನ್ನಡ ದೀಪ.. ಹಾರಿಸಿ ಕನ್ನಡ ಧ್ವಜ.. ಬಳಸಿ ಕನ್ನಡ... ಬೆಳಸಿ ಕನ್ನಡ.. ಸಿರಿಗನ್ನಡಂ ಗೆಲ್ಗೆ.. ಸಿರಿಗನ್ನಡಂ ಬಾಳ್ಗೆ
ಕನ್ನಡವೇ ಸತ್ಯ.. ಕನ್ನಡವೇ ನಿತ್ಯ" ಎಂದು ನಿರ್ದೇಶಕ ಸಿಂಪಲ್ ಸುನಿ ಕರೆ ನೀಡಿದ್ದಾರೆ.

UI ಚಿತ್ರತಂಡದಿಂದ "ಹಸಿರಾಗಲಿ ಕರ್ನಾಟಕ, ಉಸಿರಾಗಲಿ ಕನ್ನಡ, ತಾಯಿ ಕನ್ನಡಾಂಬೆಗೆ ಜಯವಾಗಲಿ" ಎಂದು ನಟ, ನಿರ್ದೇಶಕ ಉಪೇಂದ್ರ ಶೂಭ ಕೋರಿದ್ದಾರೆ. "ಎಲ್ಲಾದರು ಇರು ಎಂತಾದರು ಇರು. ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ ಕನ್ನಡವೇ ನಿತ್ಯ. ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು" ಎಂದು ಕುವೆಂಪು ಸಾಲುಗಳನ್ನು ಬರೆದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.
"ಇದೆ ನಾಡು ಇದೆ ಭಾಷೆ, ಎಂದೆಂದೂ ನಮ್ಮದಾಗಿರಲಿ. ಎಲ್ಲೇ ಇರಲಿ ಹೇಗೆ ಇರಲಿ, ಕನ್ನಡವೇ ನಮ್ಮ ಉಸಿರಲ್ಲಿ. ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು" ಎಂದು ಆರ್.ಎನ್ ಜಯಗೋಪಾಲ್ ಬರೆದ ಸಿನಿಮಾ ಹಾಡಿನ ಸಾಲುಗಳನ್ನು ಬರೆದು ಬಹುಭಾಷಾ ನಟ ಸಾಯಿಕುಮಾರ್ ಶುಭ ಕೋರಿದ್ದಾರೆ.
ಇನ್ನುಳಿದಂತೆ ನಟರಾದ ಶಿವರಾಜ್‌ಕುಮಾರ್, ರಮೇಶ್ ಅರವಿಂದ್, ಶ್ರೀಮುರಳಿ, ನಿರ್ದೇಶಕ ಯೋಗರಾಜ್ ಭಟ್, ನಟಿ ರಮ್ಯಾ ಸೇರಿದಂತೆ ಕನ್ನಡ ಸಿನಿಮಾ ತಾರೆಯರು ಕನ್ನಡಿಗರಿಗೆ ರಾಜ್ಯೋತ್ಸವ ಶುಭಾಶಯ ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಹುಟ್ಟಿ ಬೆಳೆದ ನಟಿ ಪೂಜಾ ಗಾಂಧಿ ಈಗ ಕರ್ನಾಟಕದಲ್ಲೇ ನೆಲೆ ಕಂಡುಕೊಂಡಿದ್ದಾರೆ. 'ಮುಂಗಾರುಮಳೆ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದ ಚೆಲುವೆ ಈಗ ಕನ್ನಡ ಕಲಿತು ಕನ್ನಡತಿ ಆಗಿಬಿಟ್ಟಿದ್ದಾರೆ. ತಮ್ಮ ಮನೆಯ ನೆರೆಹೊರೆಯವರ ಜೊತೆ ಬೆರೆತು ಮಳೆ ಹುಡುಗಿ ಕನ್ನಡ ರಾಜ್ಯೋತ್ಸವ ಆಚರಿಸಿದ್ದಾರೆ.


Click it and Unblock the Notifications











