ಗೆಳೆಯ ವಿನೋದ್ ಪ್ರಭಾಕರ್ ಬಗ್ಗೆ ದರ್ಶನ್ ಭಾವುಕ ಮಾತು
ದರ್ಶನ್ ಅವರ ಗೆಳೆಯರ ಬಳಗ ಬಹು ದೊಡ್ಡದು. ದರ್ಶನ್ ಗೆ ಅಭಿಮಾನಿಗಳು, ಗೆಳೆಯರು ಸಹ ಕುಟುಂಬದವರಂತೆಯೇ.
Recommended Video
ರಾಬರ್ಟ್ ಸಿನಿಮಾದಲ್ಲಿ ದರ್ಶನ್ ಅವರ ಗೆಳೆಯರಲ್ಲೊಬ್ಬರಾದ ವಿನೋದ್ ಪ್ರಭಾಕರ್ ಬಹು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ನಿನ್ನೆ ಹೈದರಾಬಾದ್‌ನಲ್ಲಿ ನಡೆದ ರಾಬರ್ಟ್ ಪ್ರೀ ರಿಲೀಸ್ ಅದ್ಧೂರಿ ಕಾರ್ಯಕ್ರಮದಲ್ಲಿ ವಿನೋದ್ ಪ್ರಭಾಕರ್ ಹಾಜರಿದ್ದರು.
ದರ್ಶನ್ ಅವರು ಮಾತನಾಡುವ ಸಂದರ್ಭ ವಿನೋದ್ ಪ್ರಭಾಕರ್ ಅವರ ಬಗ್ಗೆ ವಿಶೇಷವಾಗಿ ಮಾತನಾಡಿದರು. ತಾವೇಕೆ ಗೆಳೆಯರಿಗೆ ಮೆಚ್ಚಿನ ಗೆಳೆಯ ಎಂಬುದನ್ನು ಸಾಬೀತು ಮಾಡಿದರು ದರ್ಶನ್.

ವೇದಿಕೆ ಮೇಲಿದ್ದ ಎಲ್ಲರಿಗೂ ಧನ್ಯವಾದ ಹೇಳಿದ ನಟ ದರ್ಶನ್ ಸಹನಟ ವಿನೋದ್ ಪ್ರಭಾಕರ್ ಬಗ್ಗೆ ತುಸು ಹೆಚ್ಚಿಗೆ ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ದರ್ಶನ್ ಅವರ ಜೀವನದ ಬಗ್ಗೆ ಅವರ ತಂದೆಯ ಬಗ್ಗೆ ವಿಡಿಯೋ ಒಂದನ್ನು ವೇದಿಕೆ ಮೇಲೆ ಪ್ರದರ್ಶಿಸಲಾಯಿತು. ಆ ನಂತರ ತಾವು ಮಾತನಾಡುವ ಸಂದರ್ಭ ಬಂದಾಗ, 'ವಿಡಿಯೋ ನೋಡಬೇಕಿರುವುದು ನನ್ನ ಪಯಣದಲ್ಲ, ವಿನೋದ್ ಪ್ರಭಾಕರ್ ಅವರದ್ದು' ಎಂದರು ದರ್ಶನ್.
'ವಿನಾದ್ ಪ್ರಭಾಕರ್ ಅವರ ತಂದೆ ದೊಡ್ಡ ನಟ. ಮೊದಲಿಗೆ ಫೈಟರ್ ಆಗಿ. ಆ ನಂತರ ವಿಲನ್ ಅಸಿಸ್ಟೆಂಟ್ ಪಾತ್ರಗಳನ್ನು ಮಾಡಿ, ಆ ನಂತರ ವಿಲನ್, ಹೀರೋ ಆಗಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದವರು ಟೈಗರ್ ಪ್ರಭಾಕರ್. ನನ್ನ ವಿಡಿಯೋ ಏನು ನೀವು ನೋಡಿದ್ದಿರಿ ಈಗ ಅದಕ್ಕಿಂತಲೂ ದೊಡ್ಡ ಮಟ್ಟದ ಜೀವನ ಅವರದ್ದು' ಎಂದರು ದರ್ಶನ್.

'ಕನ್ನಡ ಉದ್ಯಮದಲ್ಲಿ ಸಾಧಾರಣ ಫೈಟರ್ ಆಗಿ ಬಂದು ಕನ್ನಡ ಸಿನಿಮಾ ಉದ್ಯಮವನ್ನು ಆಳುವ ಹಂತಕ್ಕೆ ಬೆಳೆದರು. ನಂತರ ತೆಲುಗು, ತಮಿಳಿನಲ್ಲಿಯೂ ಸಹ ಸಾಕಷ್ಟು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಆ ದೊಡ್ಡ ನಟ ಟೈಗರ್ ಪ್ರಭಾಕರ್ ಅವರ ಪುತ್ರ ವಿನೋದ್ ಪ್ರಭಾಕರ್ ಇಂದು ನಮ್ಮ ಜೊತೆ ಇದ್ದಾರೆ. ಇದು ನಮಗೆ ದೊಡ್ಡ ಗೌರವ. ವಿನೋದ್ ಪ್ರಭಾಕರ್ ಅವರಿಗೆ ನನ್ನ ವಂದನೆಗಳು' ಎಂದರು ದರ್ಶನ್.

ವಿನೋದ್ ಪ್ರಭಾಕರ್ ಅವರು ರಾಬರ್ಟ್ ಸಿನಿಮಾದಲ್ಲಿ ದರ್ಶನ್ ಜೊತೆಗೆ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅವರದ್ದು ದರ್ಶನ್ ಅವರ ಗೆಳೆಯನ ಪಾತ್ರ ಎನ್ನಲಾಗುತ್ತಿದೆ. ಈ ಹಿಂದೆ ದರ್ಶನ್ ನಟಿಸಿದ್ದ 'ನವಗ್ರಹ' ಸಿನಿಮಾದಲ್ಲಿಯೂ ವಿನೋದ್ ಪ್ರಭಾಕರ್ ನಟಿಸಿದ್ದರು.

ನಿನ್ನೆಯ ಕಾರ್ಯಕ್ರಮದಲ್ಲಿ ನಟ ದೇವರಾಜ್ ಬಗ್ಗೆಯೂ ಆಪ್ತವಾಗಿ ಮಾತನಾಡಿದ ದರ್ಶನ್, ''ದೇವರಾಜ್ ಅವರು ನನಗೆ ತಂದೆ ಸಮಾನ. ನನ್ನನ್ನು ಹೊಡೆಯುವ, ಬೈಯುವ ಎಲ್ಲ ಅಧಿಕಾರ ಅವರಿಗೆ ಇದೆ. ನನ್ನ ತಂದೆಯ ಜೊತೆ ಕೆಲಸ ಮಾಡಿದ ಹಲವರು ನನಗೆ ತಂದೆ ಸಮಾನರು, ಹಿರಿಯರು' ಎಂದರು ದರ್ಶನ್.


Click it and Unblock the Notifications











