ಸಿನಿಪ್ರೇಕ್ಷಕರ ಬಗ್ಗೆ 'ರಾಯಣ್ಣ' ದರ್ಶನ್ ಹೇಳಿದ್ದೇನು?

ಈ ಬಗ್ಗೆ ದರ್ಶನ್ "ಬಿಡುಗಡೆಯಾದ ದಿನ (01 ನವೆಂಬರ್ 2012) ಸಿಕ್ಕಾಪಟ್ಟೆ ಮಳೆ ಸುರಿಯುತ್ತಿತ್ತು. ಜೋರಾಗಿ ಗಾಳಿಯೂ ಬೀಸುತ್ತಿತ್ತು. ಮೈಕೊರೆಯುವ ಚಳಿ ಬೇರೆ ಜೊತೆಯಾಗಿತ್ತು. ಆವತ್ತಿನ ವಾತಾವರಣ ಹೇಗಿತ್ತು ಎಂದರೆ ಸಿಕ್ಕ ರಜೆಯಲ್ಲಿ ಮೈತುಂಬಾ ಬಟ್ಟೆ ಹಾಕಿಕೊಂಡು ಮೇಲಿಂದ ಒಂದು ರಗ್ಗು ಎಳೆದುಕೊಂಡು ಬೆಚ್ಚಗೆ ಮನೆಯಲ್ಲಿ ಮಲಗಬೇಕು ಎನಿಸುವಂತಿತ್ತು. ಆದರೂ ಜನರು ಥಿಯೇಟರ್ ಕಡೆ ಹೆಜ್ಜೆ ಹಾಕಿದ್ದಾರೆ. ಒಳ್ಳೆಯ ಚಿತ್ರ ಕೊಟ್ಟರೆ ಜನರು ಖಂಡಿತ ನೋಡುತ್ತಾರೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ.
ಜನರಿಗೆ ಈ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಯಿತ್ತು. ಜನರ ನಿರೀಕ್ಷೆಯನ್ನು 'ಸಂಗೊಳ್ಳಿ ರಾಯಣ್ಣ' ಚಿತ್ರವು ನಿರಾಸೆಗೊಳಿಸದೇ ಉಳಿಸಿದೆ. ನಿರೀಕ್ಷೆ ಮೀರಿ ಚೆನ್ನಾಗಿರುವ ಕಾರಣಕ್ಕೆ ಜನರು ಥಿಯೇಟರ್ ಗಳ ಕಡೆ ಮತ್ತೆ ಮತ್ತೆ ಹೆಜ್ಜೆಹಾಕುತ್ತಿದ್ದಾರೆ. ಆ ದಿನವಂತೂ ಬರೋಬ್ಬರಿ ಒಂದು ಥಿಯೇಟರಿಗಾಗುವಷ್ಟು ಜನರು ಟಿಕೆಟ್ ಸಿಗದೇ ವಾಪಸ್ ಹೋಗಬೇಕಾಯ್ತು. ಕನ್ನಡ ಚಿತ್ರರಂಗದಲ್ಲಿ ಇಂತಹ ಯಶಸ್ಸು ಒಳ್ಳೆಯ ಬೆಳವಣಿಗೆ" ಎಂದಿದ್ದಾರೆ.
ಬರುವ ತಿಂಗಳು ಡಿಸೆಂಬರಿನಲ್ಲಿ ದರ್ಶನ್ ರಾಜ್ಯಾದ್ಯಂತ, ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಿಗೆ ಭೇಟಿ ನೀಡಲು ತೀರ್ಮಾನಿಸಿದ್ದಾರೆ. ಅವರ ಸಾರಥಿ ಚಿತ್ರ ಬಿಡುಗಡೆಯಾದಾಗಲೂ ದರ್ಶನ್ ಹೀಗೆ ನೇರವಾಗಿ ಪ್ರೇಕ್ಷಕರ ಬಳಿಗೇ ಹೋಗಿದ್ದರು. ಈ ರೀತಿಯಲ್ಲಿ ತಮ್ಮ ಯಶಸ್ವೀ ಚಿತ್ರ 'ಸಂಗೊಳ್ಳಿ ರಾಯಣ್ಣ'ಕ್ಕೆ ಇನ್ನೂ ಹೆಚ್ಚಿನ ಪ್ರಚಾರ ಕೈಗೊಳ್ಳಲಿದ್ದಾರೆ ದರ್ಶನ್. ಒಟ್ಟಿನಲ್ಲಿ ದರ್ಶನ್ 'ಸಂಗೊಳ್ಳಿ ರಾಯಣ್ಣ' ಚಿತ್ರದ ಯಶಸ್ಸಿನಿಂದ ಖುಷಿಯಾಗಿದ್ದಾರೆ. ಇನ್ನೂ ಹೆಚ್ಚಿನ ಯಶಸ್ಸಿಗೆ ಕೈಜೋಡಿಸಲು ನಿರ್ಧರಿಸಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











