Exclusive: 'ಕಾಟೇರ' ಚಿತ್ರೀಕರಣಕ್ಕೆ ಸಣ್ಣ ಬ್ರೇಕ್: ತರುಣ್ ಸುಧೀರ್ ಲೆಕ್ಕಾಚಾರ ಏನು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ 70ರ ದಶಕದ ಕಥೆಯನ್ನು ಹೇಳಲಾಗುತ್ತಿದೆ. ಈಗಾಗಲೇ ಸಣ್ಣ ಶೆಡ್ಯೂಲ್‌ಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡುತ್ತಾ ಬರಲಾಗ್ತಿದೆ. ಇದೀಗ ಸಿನಿಮಾ ಚಿತ್ರೀಕರಣದಿಂದ ನಟ ದರ್ಶನ್ ಸಣ್ಣ ಬ್ರೇಕ್ ತೆಗೆದುಕೊಂಡಿದ್ದಾರೆ.
ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಚಿತ್ರೀಕರಣ ಮೊದಲು ರಾಕ್‌ಲೈನ್ ಸ್ಟುಡಿಯೋದಲ್ಲಿ ಆರಂಭವಾಗಿತ್ತು. ನಂತರ ಹೈದರಾಬಾದ್, ಕನಪುರದಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ಇತ್ತೀಚೆಗೆ ಕನಕಪುರ ಬಳಿ ಹಳ್ಳಿ ಸೆಟ್ ಕೂಡ ಚಿತ್ರದ ಪ್ರಮುಖ ಸನ್ನಿವೇಶಗಳನ್ನು ಸೆರೆ ಹಿಡಿಯಲಾಗಿತ್ತು. ಆ ಸೆಟ್‌ನ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇನ್ನು ತುಂಬನೇರಳೆ ಗ್ರಾಮದ ತೋಟದಲ್ಲೂ ಇತ್ತೀಚೆಗಷ್ಟೆ ಶೂಟಿಂಗ್ ಮಾಡಿ ಮುಗಿಸಿದೆ ಚಿತ್ರತಂಡ.

ಸದ್ಯ ರಾಜ್ಯದಲ್ಲಿ ಚುನಾವಣೆ ಪ್ರಚಾರ ಕಣ ರಂಗೇರಿದೆ. ನಟ ದರ್ಶನ್ ತಮ್ಮ ಆಪ್ತರ ಪರ ಹಲವು ಕ್ಷೇತ್ರಗಳಲ್ಲಿ ಚುನಾವಣೆ ಪ್ರಚಾರದಲ್ಲಿ ಭಾಗಿ ಆಗುತ್ತಿದ್ದಾರೆ. ಇತ್ತೀಚೆಗಷ್ಟೆ ಸ್ನೇಹಿತ ಸಚ್ಚಿದಾನಂದ ಪರ ಶ್ರೀರಂಗಪಟ್ಟಣದಲ್ಲಿ ಮತಯಾಚಿಸಿದ್ದರು. ಇಂದು(ಏಪ್ರಿಲ್ 20) ಕೂಡ ಯಲಹಂಕದ ಕಾಂಗ್ರೆಸ್ ಅಭ್ಯರ್ಥಿ ಕೇಶವ ರಾಜಣ್ಣ ಪರ ನಟ ದರ್ಶನ್ ಚುನಾವಣೆ ಪ್ರಚಾರದಲ್ಲಿ ಭಾಗಿ ಆಗಿದ್ದರು. ಇನ್ನು ಮೇಲುಕೋಟೆಯ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಹಲವರ ಪರ ದರ್ಶನ್ ಪ್ರಚಾರ ನಡೆಸಲು ಮುಂದಾಗಿದ್ದಾರೆ.
ನಟ ದರ್ಶನ್ ಚುನಾವಣೆ ಪ್ರಚಾರದಲ್ಲಿ ಭಾಗಿ ಆಗುತ್ತಿರುವುದರಿಂದ ಇನ್ನೊಂದು ತಿಂಗಳ ಕಾಲ 'ಕಾಟೇರ' ಚಿತ್ರೀಕರಣಕ್ಕೆ ಬ್ರೇಕ್ ಬೀಳ್ತಿದೆ. ಈ ಬಗ್ಗೆ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ. "ಇತ್ತೀಚೆಗೆ ತುಂಬನೇರಳೆ ಹಳ್ಳಿಯಲ್ಲಿ ಒಂದು ಶೆಡ್ಯೂಲ್ ಮುಗಿಸಿದ್ದೇವೆ. ಸಿನಿಮಾ ಬಹಳ ಚೆನ್ನಾಗಿ ಬರ್ತಿದೆ. 20 ರಿಂದ 25 ದಿನಗಳ ಕಾಲ ಹೊಸ ಶೆಡ್ಯೂಲ್ ಪ್ರಾರಂಭಿಸುತ್ತಿಲ್ಲ. ಕಾರಣ ದರ್ಶನ್ ಅವರು ಚುನಾವಣೆ ಪ್ರಚಾರ ಕೆಲಸಗಳಲ್ಲಿ ಭಾಗಿ ಆಗುತ್ತಿದ್ದಾರೆ" ಎಂದಿದ್ದಾರೆ.
"ಬೇರೆ ಬೇರೆ ಶೆಡ್ಯೂಲ್‌ಗಳಲ್ಲಿ ಸಿನಿಮಾ ಚಿತ್ರೀಕರಣ ನಡೀತಿದೆ. ಈವರೆಗೆ ಎಷ್ಟು ಭಾಗ ಕಂಪ್ಲೀಟ್ ಆಗಿದೆ ಅನ್ನೋದು ಗೊತ್ತಿಲ್ಲ. ಎಡಿಟಿಂಗ್ ಶುರು ಮಾಡಬೇಕು. ಸಿನಿಮಾ ರಿಲೀಸ್ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ರಾಕ್‌ಲೈನ್ ಕಂಬೈನ್ಸ್ ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆ. ನಿರ್ಮಾಪಕರಾದ ರಾಕ್‌ಲೈನ್ ವೆಂಕಟೇಶ್ ಅವರು ಸಿನಿಮಾ ರಿಲೀಸ್ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ. ನಾನು ಚಿತ್ರದ ಔಟ್‌ಫುಟ್ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿದ್ದೇನೆ. ಒಂದೊಳ್ಳೆ ಸಿನಿಮಾ ಅಂತೂ ಖಂಡಿತ ಬರ್ತಿದೆ" ಎಂದು ತರುಣ್ ಮಾಹಿತಿ ನೀಡಿದ್ದಾರೆ.

ಅಂದಹಾಗೆ 'ಕಾಟೇರ' ಚಿತ್ರದಲ್ಲಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ತೆಲುಗು ನಟ ಜಗಪತಿ ಬಾಬು ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನೈಜ ಘಟನೆಗಳನ್ನು ಆಧರಿಸಿ ಚಿತ್ರಕ್ಕೆ ಕಥೆ, ಚಿತ್ರಕಥೆ ಸಿದ್ಧಪಡಿಸಲಾಗ್ತಿದೆ. ಒಂದೊಳ್ಳೆ ತಂತ್ರಜ್ಞರ ತಂಡವನ್ನು ಕಟ್ಟಿಕೊಂಡು ತರುಣ್ ಸುಧೀರ್ 'ಕಾಟೇರ'ನ ಆರ್ಭಟವನ್ನು ತೆರೆಗೆ ತರುತ್ತಿದ್ದಾರೆ. ವಿ. ಹರಿಕೃಷ್ಣ ಸಂಗೀತ, ಸುಧಾಕರ್ ರಾಜ್ ಛಾಯಾಗ್ರಹಣ, ಮಾಸ್ತಿ ಸಂಭಾಷಣೆ ಈ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕಿದೆ. ಇದು ದರ್ಶನ್ ನಟನೆಯ 56ನೇ ಸಿನಿಮಾ.
ವರ್ಷಾಂತ್ಯಕ್ಕೆ 'ಕಾಟೇರ' ಸಿನಿಮಾ ಶೂಟಿಂಗ್ ಮುಗಿಯುವ ಸಾಧ್ಯತೆಯಿದೆ. ಮುಂದಿನ ವರ್ಷ ಸಮ್ಮರ್ ವೇಳೆಗೆ ಸಿನಿಮಾ ಪ್ರೇಕ್ಷಕರ ಮುಂದೆ ಬರಬಹುದು. ಅದಕ್ಕು ಮುನ್ನ ಟೀಸರ್, ಟ್ರೈಲರ್, ಸಾಂಗ್ಸ್ ಟ್ರೀಟ್ ಸಿಗಲಿದೆ. ಹಳ್ಳಿಯ ಹಿನ್ನೆಲೆಯಲ್ಲಿ ಸಿನಿಮಾ ಮೂಡಿ ಬರ್ತಿದ್ದು, ಊರಿನ ಜನರ ರಕ್ಷಣೆಗೆ ನಿಲ್ಲುವ ನಾಯಕನಾಗಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಲುಂಗಿ ಉಟ್ಟು ಬಹಳ ವಿಭಿನ್ನ ಲುಕ್‌ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ ಕೊಡುತ್ತಿದ್ದಾರೆ.


Click it and Unblock the Notifications











