ದರ್ಶನ್ ಬೇಸರ : ಅಯ್ಯೋ..ಅಂತ ಕನ್ನಡ ಸಿನಿಮಾಗೆ ಬರ್ತಾರೆ
Recommended Video

''ನಾವು ಕನ್ನಡಿಗರಲ್ಲವೋ... ವಿಶಾಲ ಹೃದಯದವರು... ಕನ್ನಡ ಸಿನಿಮಾಗಳಿಗಿಂತ ಬೇರೆ ಭಾಷೆಯ ಸಿನಿಮಾಗಳನ್ನು ಜಾಸ್ತಿ ನೋಡುತ್ತೇವೆ..'' ಎನ್ನುವ ಉಪೇಂದ್ರ ಅವರ ಡೈಲಾಗ್ ನೂರಕ್ಕೆ ನೂರರಷ್ಟು ನಿಜ.
ಕನ್ನಡಿಗರು ಬರೀ ಕನ್ನಡ ಸಿನಿಮಾಗಳ ಪ್ರೇಕ್ಷಕರಾಗಿದೆ, ಎಲ್ಲ ಭಾಷೆಯ ಸಿನಿಮಾಗಳನ್ನು ನೋಡುತ್ತಾರೆ. ಒಳ್ಳೆಯ ಸಿನಿಮಾ ಯಾವ ಭಾಷೆಯಿಂದ ಬಂದರೂ ಪ್ರೋತ್ಸಾಹ ನೀಡುವ ಗುಣ ನಮಗಿದೆ. ಆದರೆ, ಮತ್ತೊಂದು ಕಡೆ ಕೆಲವರಿಗೆ ಕನ್ನಡ ಸಿನಿಮಾದ ಮೇಲಿನ ಅಭಿಮಾನ ಕಡಿಮೆಯಾಗುತ್ತಿದೆ. ಕನ್ನಡದಲ್ಲಿ ಎಷ್ಟೇ ವಿಭಿನ್ನ ಪಯತ್ನಗಳು ಬಂದರೂ ಬೇರೆ ಸಿನಿಮಾಗಳನ್ನೆ ಹೊಗಳುತ್ತಾರೆ. ಹಿತ್ತಲ ಗಿಡ ಮದ್ದಲ್ಲ ಎನ್ನುವ ಮನಸ್ಥಿತಿ ಹೊಂದಿರುತ್ತಾರೆ.
ಇಂತವರಿಗೆ ಈಗ ನಟ ದರ್ಶನ್ ಉತ್ತರ ನೀಡಿದ್ದಾರೆ. ನಿನ್ನೆ 'ಅನುಕ್ತ' ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

ಪ್ರಯೋಗಾತ್ಮಕ ಸಿನಿಮಾಗಳು ಬರುತ್ತಿವೆ
''ಬೇರೆ ಭಾಷೆಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಪ್ರಯೋಗಾತ್ಮಕ ಸಿನಿಮಾಗಳು ಕಡಿಮೆ ಇತ್ತು. ಆದರೆ, ಈಗ ನಮ್ಮ ಇಂಡಸ್ಟ್ರಿಯಲ್ಲಿ ಒಳ್ಳೆ ಒಳ್ಳೆಯ ಸಿನಿಮಾಗಳು ಬರುತ್ತಿವೆ. ಕಮರ್ಶಿಯಲ್ ಅಂಶಗಳನ್ನು ಬಿಟ್ಟು ಬೇರೆ ಹೊಸತನದ ಸಿನಿಮಾ ಮಾಡುತ್ತೇನೆ ಅಂತ ಒಂದಷ್ಟು ತಂಡಗಳು ಮೇಲೆ ಏಳುತ್ತಿವೆ.'' - ದರ್ಶನ್, ನಟ

ಎಲ್ಲ ಸಿನಿಮಾಗಳನ್ನು ನೋಡುತ್ತೇವೆ
''ನಾವೆಲ್ಲ ಕಮರ್ಶಿಯಲ್ ಸಿನಿಮಾಗಳನ್ನು ಮಾಡುತ್ತಿದ್ದೇವೆ. ಆದರೆ, ಈ ರೀತಿಯ ಸಿನಿಮಾಗಳು ಇನ್ನೂ ಹೆಚ್ಚು ಬರಲಿ. ನೋಡುವರಿಗೂ ಒಂದು ಒಳ್ಳೆಯ ಸಿನಿಮಾ ನೋಡಬೇಕು ಅಂತ ಇರುತ್ತದೆ. ನಮ್ಮಲ್ಲಿ ಎಲ್ಲ ಭಾಷೆಯವರು ಇದ್ದೇವೆ. ಎಲ್ಲ ಭಾಷೆಗಳಲ್ಲಿ ಮಾತನಾಡುತ್ತೇವೆ. ಎಲ್ಲ ಸಿನಿಮಾಗಳನ್ನು ನೋಡುತ್ತೇವೆ.'' - ದರ್ಶನ್, ನಟ

ಬೇರೆ ಭಾಷೆಯ ಚಿತ್ರಗಳನ್ನು ನೋಡಿ ನೋಡಿ..
''ನಮಗೆ ಬೇರೆ ಭಾಷೆಯ ಸಿನಿಮಾಗಳನ್ನು ನೋಡಿ ನೋಡಿ ಅಭ್ಯಾಸ ಆಗಿದೆ. ಒಬ್ಬ ಸಾಮಾನ್ಯ ಕನ್ನಡ ಪ್ರೇಕ್ಷಕ ತುಂಬ ಪ್ರಯೋಗಾತ್ಮಕ ಸಿನಿಮಾ ಬೇಕು ಅಂತ ತಮಿಳು ಸಿನಿಮಾ ನೋಡುತ್ತಾನೆ. ಮಾಸ್, ಫೈಟ್ ಸಿನಿಮಾ ಅಂದರೆ ತೆಲುಗು ಸಿನಿಮಾಗೆ ಹೋಗುತ್ತಾನೆ. ಹೊರದೇಶ ನೋಡಬೇಕು ಅಂದರೆ ಹಿಂದಿ ಸಿನಿಮಾ ನೋಡುತ್ತಾನೆ.'' - ದರ್ಶನ್, ನಟ

ಅಯ್ಯೋ ನೋಡೋಣ ಅಂತ ಬರ್ತಾರೆ
''ಎಲ್ಲ ಭಾಷೆಯ ಸಿನಿಮಾಗಳನ್ನು ನೋಡಿದ ಮೇಲೆ ಅಯ್ಯೋ ನೋಡೋಣ... ಅಂತ ಕನ್ನಡ ಸಿನಿಮಾಗೆ ಕನ್ನಡ ಪ್ರೇಕ್ಷಕರು ಬರುತ್ತಾರೆ. ಈ ರೀತಿಯ ಪರಿಸ್ಥಿತಿ ನಮಗೆ ಬರುತ್ತಿದೆ. ಇದರ ನಡುವೆಯೇ ಕನ್ನಡದಲ್ಲಿ ಈಗ ಟ್ರೆಂಡ್ ಬದಲಾಗುತ್ತಿದೆ. ಈಗ ವಿಭಿನ್ನ ಸಿನಿಮಾಗಳು ಬರುತ್ತಿದೆ. ಒಳ್ಳೆಯ ಸಿನಿಮಾ ನೋಡುತ್ತೇನೆ ಎಂದವರಿಗೆ ಇಷ್ಟ ಆಗುತ್ತದೆ.'' - ದರ್ಶನ್, ನಟ


Click it and Unblock the Notifications











