ಎಷ್ಟೇ ಜನ ನಿಮ್ಮನ್ನು ಕೆಳಗೆ ಬೀಳಿಸಿದ್ರು, ದೇವ್ರು ಕೈ ಬಿಡಲ್ಲ; ವಿಜಯಲಕ್ಷ್ಮಿ ದರ್ಶನ್
ನಟಿ ರಮ್ಯಾ ಹಾಗೂ ದರ್ಶನ್ ಫ್ಯಾನ್ಸ್ ವಾರ್ ಭಿನ್ನ ವಿಭಿನ್ನ ಸ್ವರೂಪ ಪಡೆದುಕೊಂಡಿರುವುದು ಗೊತ್ತೇಯಿದೆ. ಈಗಾಗಲೇ ದರ್ಶನ್ ಅಭಿಮಾನಿಗಳ ವಿರುದ್ಧ ರಮ್ಯಾ ದೂರು ನೀಡಿದ್ದಾರೆ. ತಮ್ಮ ಅಭಿಮಾನಿಗಳಿಗೆ ದರ್ಶನ್ ತಿಳಿ ಹೇಳಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ ಎಂದಿದ್ದಾರೆ. ಆದರೆ ದರ್ಶನ್ ಮಾತ್ರ ಈ ಬಗ್ಗೆ ಪ್ರತಿಕ್ರಿಯಿಸುವ ಗೋಜಿಗೆ ಹೋಗುತ್ತಿಲ್ಲ.
ದರ್ಶನ್ ಅಭಿಮಾನಿಗಳು ತಮಗೆ ಕೆಟ್ಟದಾಗಿ ಮಸೇಜ್ ಮಾಡಿದ್ದಾರೆ ಎಂದು ರಮ್ಯಾ ಸ್ಕ್ರೀನ್‌ಶಾಟ್ ಸಮೇತ ಬಹಿರಂಗಪಡಿಸಿದ್ದರು. ಆದರೆ ಆ ರೀತಿ ಮೆಸೇಜ್ ಮಾಡಿರುವುದು ದರ್ಶನ್ ಫ್ಯಾನ್ಸ್ ಎನ್ನುವುದಕ್ಕೆ ಯಾವ ಆಧಾರ ಇದೆ ಎಂದು ಕೆಲವರು ಕೇಳಿದ್ದರು. ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥ ಆಗಿಲ್ಲ, ದರ್ಶನ್ ದೋಷಿ ಎಂದು ಸಾಬೀತಾಗಿಲ್ಲ. ಆದರೆ ರಮ್ಯಾ ಪ್ರಕರಣದ ಬಗ್ಗೆ ಕಾಮೆಂಟ್ ಮಾಡಿದ್ದು ಸರಿಯಲ್ಲ, ಈ ಬಗ್ಗೆ ವಿಜಯಲಕ್ಷ್ಮಿ ದರ್ಶನ್ ದೂರು ನೀಡಲು ಮುಂದಾಗಿದ್ದಾರೆ ಎನ್ನುವ ಊಹಾಪೋಹ ಶುರುವಾಗಿತ್ತು. ಆದರೆ ಅದು ನಿಜವಾಗಲಿಲ್ಲ.

ಇತ್ತ ತಮ್ಮ ಫ್ಯಾನ್ಸ್ ಹಾಗೂ ರಮ್ಯಾ ನಡುವೆ ಜಟಾಪಟಿ ನಡೆದು ಪೊಲೀಸ್ ದೂರು ದಾಖಲಾಗಿದ್ದರೂ ದರ್ಶನ್ ಮಾತ್ರ ಮೌನಕ್ಕೆ ಜಾರಿದ್ದಾರೆ. ಪತ್ನಿ ಜೊತೆ ಅಸ್ಸಾಂನಲ್ಲಿರುವ ಕಾಮಕ್ಯಾ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋಗಳು ವೈರಲ್ ಆಗಿತ್ತು. ಅಲ್ಲಿ ಸಿಕ್ಕ ಅಭಿಮಾನಿಗಳ ಜೊತೆ ಕ್ಲಿಕ್ಕಿಸಿಕೊಂಡಿದ್ದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.
ಎಲ್ಲಾ ಬೆಳವಣಿಗೆ ಬಗ್ಗೆ ವಿಜಯಲಕ್ಷ್ಮಿ ದರ್ಶನ್ ಪರೋಕ್ಷವಾಗಿ ಪೋಸ್ಟ್ ಮಾಡಿದ್ದಾರೆ. ಕಾಮಕ್ಯಾ ದೇವಿ ಆಲಯದಲ್ಲಿ ಪತಿ ಜೊತೆ ಕ್ಲಿಕ್ಕಿಸಿದ ಫೋಟೊವನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. "ಎಷ್ಟೇ ಜನ ನಿಮ್ಮನ್ನು ಕೆಳಗೆ ಬೀಳಿಸಲು ಪ್ರಯತ್ನಿಸಿದರೂ ಮೇಲಿರುವ ದೇವರು ನಿಮ್ಮ ಕೈ ಬಿಡುವುದಿಲ್ಲ" ಎಂದು ಅದಕ್ಕೆ ಕ್ಯಾಪ್ಷನ್ ಕೊಟ್ಟಿದ್ದಾರೆ. ಅಭಿಮಾನಿಗಳು ಅದನ್ನು ವೈರಲ್ ಮಾಡುತ್ತಿದ್ದಾರೆ.
ಕಳೆದ ವರ್ಷ ಕೂಡ ವಿಜಯಲಕ್ಷ್ಮಿ ದರ್ಶನ್ ಕಾಮಕ್ಯ ದೇವಸ್ಥಾನದಕ್ಕೆ ಭೇಟಿ ನೀಡಿದ್ದರು. ಆಗ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲಿನಲ್ಲಿದ್ದರು. ಸಂಕಷ್ಟದಿಂದ ಪಾರು ಮಾಡುವಂತೆ ಪ್ರಾರ್ಥಿಸಿದ್ದರು. ಮೈಸೂರು ಚಾಮುಂಡಿ ಬೆಟ್ಟ, ಬೆಂಗಳೂರಿನ ಬಂಡೆ ಮಹಾಕಾಳಿ ಸೇರಿದಂತೆ ಸಾಕಷ್ಟು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ದರ್ಶನ್ ಜಾಮೀನು ಪಡೆದು ಬಿಡುಗಡೆಯಾದ ಬಳಿಕ ಪತಿಯ ಜೊತೆ ವಿಜಯಲಕ್ಷ್ಮಿ ಕೆಲ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು.

ಇದೀಗ ಕಾಮಕ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದಾರೆ. ಇತ್ತೀಚೆಗೆ 'ಡೆವಿಲ್' ಸಿನಿಮಾ ಚಿತ್ರೀಕರಣಕ್ಕಾಗಿ ಪತಿಯ ಜೊತೆ ವಿಜಯಲಕ್ಷ್ಮಿ ಥಾಯ್ಲೆಂಡ್‌ಗೆ ತೆರಳಿದ್ದರು. 10 ದಿನಗಳ ಕಾಲ ಅಲ್ಲೇ ಇದ್ದರು. 4 ದಿನಗಳ ಹಿಂದೆ ಬೆಂಗಳೂರಿಗೆ ವಾಪಸ್ ಬಂದಿದ್ದರು. ಅದರ ಬೆನ್ನಲ್ಲೇ ಅಸ್ಸಾಂಗೆ ತೆರಳಿ ಕಾಮಕ್ಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಂದಿದ್ದಾರೆ.
ಪ್ರಕಾಶ್ ವೀರ್ ನಿರ್ದೇಶನದ 'ಡೆವಿಲ್' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಅಕ್ಟೋಬರ್ 31ರಂದು ಸಿನಿಮಾ ಬಿಡುಗಡೆ ಆಗುವ ನಿರೀಕ್ಷೆಯಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನು ಸಿಕ್ಕಿಲ್ಲ. ಹಾಡಿನ ಚಿತ್ರೀಕರಣಕ್ಕಾಗಿ ಚಿತ್ರತಂಡ ಸ್ವಿಟ್ಜರ್ಲೆಂಡ್‌ಗೆ ಹೋಗಲು ಪ್ರಯತ್ನಿಸಿತ್ತು. ಆದರೆ ದರ್ಶನ್‌ಗೆ ವೀಸಾ ಸಿಗಲಿಲ್ಲ. ಹಾಗಾಗಿ ಥಾಯ್ಲೆಂಡ್‌ನಲ್ಲಿ ಹೋಗಿ ಚಿತ್ರೀಕರಣ ಮಾಡಿ ಬಂದರು. ಸಂತು ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಕಲರ್‌ಫುಲ್ ಸಾಂಗ್ ಶೂಟ್ ಮಾಡಿದ್ದಾರೆ.


Click it and Unblock the Notifications











