ಸತ್ತಮೇಲೆ ತೋರಿಸುವ ಪ್ರೀತಿ ಬದುಕಿದ್ದಾಗ ಯಾಕೆ ತೋರಿಸಲ್ಲ; ಶಿವಣ್ಣನ ಹೇಳಿಕೆಗೆ ದರ್ಶನ್ ಫ್ಯಾನ್ಸ್ ವ್ಯಂಗ್ಯ
ಸ್ಟಾರ್ ನಟರ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕೆಸರೆರಚಾಟ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಯಾರೋ ಒಬ್ಬರು ನೀಡುವ ಹೇಳಿಕೆ ಬೇರೆ ಬೇರೆ ಸ್ವರೂಪ ಪಡೆದು ನಾನಾ ಅರ್ಥ ಕಲ್ಪಿಸಿ ಚರ್ಚೆ ಹುಟ್ಟು ಹಾಕುತ್ತದೆ. ತಮ್ಮ ನೆಚ್ಚಿನ ನಟನೇ ಹೆಚ್ಚು ಎಂದು ಬಡಾಯಿ ಕೊಚ್ಚಿಕೊಳ್ಳುವ ಭರದಲ್ಲಿ ಮತ್ತೊಬ್ಬ ನಟನನ್ನು ಆತನ ಅಭಿಮಾನಿಗಳನ್ನು ಟೀಕಿಸಿ ಟ್ರೋಲ್ ಮಾಡುತ್ತಾರೆ.
ಈ ಹಿಂದೆ 'ಕ್ರಾಂತಿ' ಸಿನಿಮಾ ಬಿಡುಗಡೆ ಸಮಯದಲ್ಲಿ ನಟ ದರ್ಶನ್ ಒಂದು ಸಂದರ್ಶನದಲ್ಲಿ ಭಾಗಿ ಆಗಿದ್ದರು. ಆಗ ತಮ್ಮ ಅಭಿಮಾನಿಗಳ ಪ್ರೀತಿ ಬಗ್ಗೆ ಒಂದು ಮಾತು ಹೇಳಿದ್ದರು. ಅದಕ್ಕೆ ಪುನೀತ್ ರಾಜ್‌ಕುಮಾರ್ ಮೇಲಿನ ಅಭಿಮಾನಿಗಳ ಪ್ರೀತಿಯನ್ನು ಉದಾಹರಿಸಿದ್ದರು. ಇದಕ್ಕೆ ಅಪ್ಪು ಫ್ಯಾನ್ಸ್ ಕೆಂಡಾಮಂಡಲವಾಗಿದ್ದರು. ದರ್ಶನ್ ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ದರು.

ಸದ್ಯ ನಟ ಶಿವರಾಜ್‌ಕುಮಾರ್ ಕೂಡ ದರ್ಶನ್ ಹೇಳಿಕೆಯ ರೀತಿಯಲ್ಲೇ ಒಂದು ಹೇಳಿಕೆ ಕೊಟ್ಟಿದ್ದಾರೆ. ಇದನ್ನು ದರ್ಶನ್ ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ. ಅಂದು ಇದೇ ಮಾತನ್ನು ದರ್ಶನ್ ಅವರು ಹೇಳಿದಾಗ ಕ್ಯಾತೆ ತೆಗೆದಿದ್ದರು. ಈಗ ಏನು ಹೇಳುತ್ತಾರೆ ಎಂದು ಪ್ರಶ್ನಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪರ -ವಿರೋಧ ಚರ್ಚೆ ಶುರುವಾಗಿದೆ.
ಶಿವಣ್ಣ ನಟನೆಯ '45' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಪ್ಯಾನ್ ಇಂಡಿಯಾ ಟೂರ್ ಮಾಡಿ ಚಿತ್ರತಂಡ ಪ್ರಚಾರ ನಡೆಸಿತ್ತು. ಆ ಸಮಯದಲ್ಲಿ ವಿಮಾನದಲ್ಲೇ ನಿರೂಪಕಿ ಅನುಶ್ರೀ ತಂಡವನ್ನು ಸಂದರ್ಶನ ಮಾಡಿದ್ದರು. ಅದರ ಎರಡನೇ ಭಾಗ ಈಗ ಬಿಡುಗಡೆಯಾಗಿದೆ. '45' ಚಿತ್ರದ ಕಥೆ ಹಾಗೂ ತಮ್ಮ ಪಾತ್ರದ ಬಗ್ಗೆ ನಟ ಶಿವರಾಜ್‌ಕುಮಾರ್ ಮಾತನಾಡಿದ್ದಾರೆ.
"ಸತ್ತಮೇಲೆ ತೋರಿಸುವ ಪ್ರೀತಿಯನ್ನು ಯಾಕೆ ಬದುಕಿರುವಾಗ ತೋರಿಸಬಾರದು ಎನ್ನುವ ಡೈಲಾಗ್ ಚಿತ್ರದಲ್ಲಿದೆ. ಇದನ್ನು ನಾವು ನೋಡಿದ್ದೇವೆ. ಬದುಕಿದ್ದಾಗಲೇ ಆ ಪ್ರೀತಿ ತೋರಿಸಿ. ಸತ್ತ ಮೇಲೆ ಅದು ಇದು ಯಾಕೆ. ಬದುಕಿದ್ದಾಗ ಅವರು ಅದಕ್ಕೆಲ್ಲಾ ಅರ್ಹರು ಅಲ್ಲವೇ? ಅದನ್ನೇ ನಾನು ಕೇಳುವುದು. ಆದ ನಿದ್ದೆ ಮಾಡುತ್ತಿದ್ರಾ? ಸಾಯಲೇಬೇಕಾ ಮನುಷ್ಯ ಪ್ರಶಂಸೆ ಪಡೆಯೋಕೆ?" ಎಂದು ಶಿವಣ್ಣ ಪ್ರಶ್ನಿಸಿದ್ದಾರೆ.
"ನಾನು ಹೇಳುವುದು ತಪ್ಪು ಎನಿಸಿದರೆ ನೀವು ಸರಿ ಮಾಡಿ. ನಾನು ನನ್ನ ಮನಸ್ಸಿನಿಂದ ಮಾತನಾಡುತ್ತೇನೆ. ಇವತ್ತು ಇವರ ಬಗ್ಗೆ ಗೊತ್ತಾಗಬೇಕಾ? ನಮಗೆ ಯಾವತ್ತೋ ಗೊತ್ತಾಯಿತು. ನಾನು ಒಬ್ಬ ವ್ಯಕ್ತಿ ಬಗ್ಗೆ ಮಾತನಾಡುತ್ತಿಲ್ಲ. ಸಾಮಾನ್ಯವಾಗಿ ಹೇಳುತ್ತಿದ್ದೇನೆ. ಹೋದಮೇಲೆ ಪ್ರೀತಿ ಅಭಿಮಾನ ತೋರಿಸುವುದಲ್ಲ, ಇದ್ದಾಗಲೂ ತೋರಿಸಬೇಕು. ಇಂತಹ ವಿಚಾರಗಳನ್ನು '45' ಚಿತ್ರದಲ್ಲಿ ಚೆನ್ನಾಗಿ ಹೇಳಿದ್ದಾರೆ" ಎಂದು ಶಿವಣ್ಣ ನೆನಪಿಸಿಕೊಂಡಿದ್ದಾರೆ.
ಶಿವಣ್ಣನ ಈ ಹೇಳಿಕೆಯನ್ನು ದರ್ಶನ್ ಅಂದು ನೀಡಿದ್ದ ಹೇಳಿಕೆಗೆ ಹೋಲಿಗೆ ದರ್ಶನ್ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಇದೇ ಮಾತನ್ನು ಅಂದು ದರ್ಶನ್ ಅವರು ಹೇಳಿದಾಗ ರಂಪ ರಾದ್ಧಾಮತ ಮಾಡಿದರು. ಕ್ಷಮೆ ಕೇಳುವಂತೆ ಪಟ್ಟು ಹಿಡಿದರು. ಈಗ ಏನು ಹೇಳ್ತಾರೆ ಎಂದು ಕುಟುಕಿದ್ದಾರೆ.
ಎರಡು ವರ್ಷಗಳ ಹಿಂದೆ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಬಿಡುಗಡೆ ಆಗಿತ್ತು. ಆಗ ಮಾಧ್ಯಮಗಳು ಜೊತೆ ದರ್ಶನ್ ನಡುವೆ ಬಿರುಕು ಮೂಡಿತ್ತು. ಮಾಧ್ಯಮಗಳ ಬಗ್ಗೆ ದರ್ಶನ್ ಲಘುವಾಗಿ ಮಾತನಾಡಿದ್ದ ಆಡಿಯೋ ವೈರಲ್ ಆಗಿ ಈ ಸಮಸ್ಯೆ ತಲೆದೋರಿತ್ತು. ಅಂತಹ ಸಮಯದಲ್ಲಿ ನನ್ನ ಅಭಿಮಾನಿಗಳು ನನ್ನ ಬೆಂಬಲಕ್ಕೆ ನಿಂತರು ಎಂದು ದರ್ಶನ್ ಸಂದರ್ಶನದಲ್ಲಿ ಹೇಳಿದ್ದರು.
"ಸತ್ತಮೇಲೆ ಅಭಿಮಾನಿಗಳ ಅಭಿಮಾನ ಏನು ಎನ್ನುವುದನ್ನು ನೋಡಿದ್ದೇವೆ. ಪುನೀತ್ ರಾಜ್‌ಕುಮಾರ್ ಅವರದ್ದು ಅದಕ್ಕೆ ಉದಾಹರಣೆ. ಆದರೆ ನನ್ನ ಅಭಿಮಾನಿಗಳು ನಾನು ಬದುಕಿದ್ದಾಗಲೇ ಅಭಿಮಾನ ಏನು ಎನ್ನುವುದನ್ನು ತೋರಿಸಿದರು. ಸಾಕು ಬಿಡಯ್ಯ ಎಂಬಂತಾಗಿದೆ ಎಂದು ದರ್ಶನ್ ಹೇಳಿದ್ದರು. ಅದೇ ಮಾತು ಪುನೀತ್ ಅಭಿಮಾನಿಗಳು ಕೆರಳುವಂತೆ ಮಾಡಿತ್ತು.


Click it and Unblock the Notifications











