ಕರಿಯ ಚಿತ್ರಕ್ಕೆ 5000 ಪಡೆದಿದ್ದ ದರ್ಶನ್ ಮೊದಲ ಸಿನಿಮಾ ಮೆಜೆಸ್ಟಿಕ್‌ಗೆ ಪಡೆದ ಹಣವೆಷ್ಟು?
ಸದ್ಯ ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್ ಆಗಿ ಮಿಂಚುತ್ತಿರುವ ನಟ ದರ್ಶನ್ ಎಂದರೆ ನಿರ್ಮಾಪಕರಿಗೆ ಫೇವರಿಟ್. ದರ್ಶನ್ ಸಿನಿಮಾ ಎಂದರೆ ಎಷ್ಟೇ ಖರ್ಚು ಮಾಡಿದರೂ ಹಣ ವಾಪಸ್ ಕೈಸೇರಲಿದೆ ಎನ್ನುವ ಖಾತರಿ ನಿರ್ಮಾಪಕರಲ್ಲಿದೆ. ಹೀಗಾಗಿಯೇ ದರ್ಶನ್ ಸಿನಿಮಾಗೆ ಬಂಡವಾಳ ಹೂಡಲು ನಿರ್ಮಾಪಕರು ಮುಗಿಬೀಳುತ್ತಾರೆ.
ಹೀಗೆ ಇಂದು ಬಾಕ್ಸ್ ಆಫೀಸ್ ಸುಲ್ತಾನನಾಗಿ ಮೆರೆಯುತ್ತಿರುವ ದರ್ಶನ್ ಸಿನಿ ಜರ್ನಿ ಸುಲಭದ್ದಾಗಿರಲಿಲ್ಲ. ಕನ್ನಡ ಚಲನಚಿತ್ರರಂಗದ ಅನೇಕ ದೊಡ್ಡ ಸಿನಿಮಾಗಳಲ್ಲಿ ನಟಿಸಿ, ಬಹುತೇಕ ಎಲ್ಲಾ ದಿಗ್ಗಜ ನಟರ ಜತೆಯೂ ಕೆಲಸ ಮಾಡಿದ್ದಂತಹ ಹಿರಿಯ ಕಲಾವಿದ ತೂಗುದೀಪ ಶ್ರೀನಿವಾಸ್ ಅವರ ಪುತ್ರನಾಗಿದ್ದರೂ ಸಹ ದರ್ಶನ್ ಸಿನಿಮಾ ಕ್ಷೇತ್ರ ಪ್ರವೇಶಿಸಬೇಕೆಂದುಕೊಂಡಾಗ ಯಾರೂ ಸಹ ರೆಡ್ ಕಾರ್ಪೆಟ್ ಹಾಸಲಿಲ್ಲ.
ಮೊದಲಿಗೆ ಲೈಟ್ ಬಾಯ್ ಆಗಿ ಸಿನಿಮಾ ಕ್ಷೇತ್ರಕ್ಕೆ ಧುಮುಕಿದ ದರ್ಶನ್ ಬಳಿಕ ಬಣ್ಣ ಹಚ್ಚಿ ಕ್ಯಾಮೆರಾ ಎದುರಿಸಿದರು. 1997ರಲ್ಲಿ ಮಹಾಭಾರತ ಎಂಬ ಚಿತ್ರದಲ್ಲಿ ನಟಿಸುವ ಮೂಲಕ ಕಲಾವಿದನಾಗಿ ತನ್ನ ಸಿನಿ ಜರ್ನಿಯನ್ನು ಆರಂಭಿಸಿದ ದರ್ಶನ್ ಬಳಿಕ ದೇವರ ಮಗ, ವಲ್ಲರಸು, ಎಲ್ಲರ ಮನೆ ದೋಸೇನೂ, ಮಿಸ್ಟರ್ ಹರಿಶ್ಚಂದ್ರ ಹಾಗೂ ಭೂತಯ್ಯನ ಮಕ್ಕಳು ಚಿತ್ರಗಳಲ್ಲಿ ದರ್ಶನ್ ಪುಟ್ಟ ಪಾತ್ರಗಳನ್ನು ನಿರ್ವಹಿಸಿದರು. ಹೀಗೆ ಒಟ್ಟು ಆರು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸಿದ ನಟ ದರ್ಶನ್ 2002ರ ಫೆಬ್ರವರಿ 8ರಂದು ಬಿಡುಗಡೆಗೊಂಡ ಮೆಜೆಸ್ಟಿಕ್ ಸಿನಿಮಾ ಮೂಲಕ ನಾಯಕ ನಟನಾಗಿ ಬಡ್ತಿ ಪಡೆದುಕೊಂಡರು. ಇನ್ನು ಈ ಚಿತ್ರ ತೆರೆಕಂಡು 21 ವರ್ಷಗಳು ಕಳೆದಿದ್ದು, ದರ್ಶನ್ ಅಭಿಮಾನಿಗಳು ಚಿತ್ರದ ವಾರ್ಷಿಕೋತ್ಸವದ ಕುರಿತು ವಿಶೇಷ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಕೋಟಿ ಕೋಟಿ ಸಂಭಾವನೆ ಪಡೆದುಕೊಳ್ಳುತ್ತಿರುವ ದರ್ಶನ್ ನಾಯಕನಾಗಿ ನಟಿಸಿದ ಮೊದಲ ಚಿತ್ರ ಮೆಜೆಸ್ಟಿಕ್‌ಗೆ ಪಡೆದಿದ್ದ ಸಂಭಾವನೆಯನ್ನು ಎಷ್ಟು ಎಂಬುದನ್ನು ಕೇಳಿದ್ರೆ ಒಮ್ಮೆ ಆಶ್ಚರ್ಯವಾಗುವುದಂತೂ ಖಚಿತ. ಇನ್ನು ಈ ಚಿತ್ರಕ್ಕಾಗಿ ಎಷ್ಟು ಸಂಭಾವನೆ ಪಡೆದಿದ್ದೆ ಎಂಬುದನ್ನು ಸ್ವತಃ ದರ್ಶನ್ ಅವರೇ ಈ ಹಿಂದಿನ ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ಮೆಜೆಸ್ಟಿಕ್ ಶೂಟಿಂಗ್ ನಡೆಯುವಾಗಲೇ ನಾಲ್ಕೈದು ಸಿನಿಮಾ ಕೈನ್ಲಲಿತ್ತು!
ಕ್ರಾಂತಿ ಸಿನಿಮಾ ಬಿಡುಗಡೆಯಾಗುವ ಮುನ್ನ ಡೆಕ್ಕನ್ ಹೆರಾಲ್ಡ್ ನಡೆಸಿದ್ದ ಸಂದರ್ಶನದಲ್ಲಿ ಭಾಗವಹಿಸಿದ್ದ ದರ್ಶನ್ ಚಿತ್ರವೊಂದು ಬ್ರೇಕ್ ನೀಡಿದರೆ ಅದು ಮುಂದಿನ ಸಿನಿಮಾಗಳ ಮೇಲೆ ಪ್ರಭಾವ ಬೀರುತ್ತಿತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ದರ್ಶನ್ ತಾನು ಯಾವಾಗಲೂ ಸಿನಿಮಾ ಬಿಡುಗಡೆಗಾಗಿ, ಅದರ ಫಲಿತಾಂಶಕ್ಕಾಗಿ ಕಾದವನಲ್ಲ ಎಂದರು. ಮೊದಲ ಚಿತ್ರದಿಂದಲೂ ಇದು ರೂಢಿಯಲ್ಲಿದ್ದು, ಮೆಜೆಸ್ಟಿಕ್ ಚಿತ್ರ ಬಿಡುಗಡೆಯಾಗುವ ಮುನ್ನವೇ ತನ್ನ ಬಳಿ ನಾಲ್ಕೈದು ಸಿನಿಮಾಗಳಿದ್ದವು ಎಂದಿದ್ದರು ದರ್ಶನ್. ಜನರಿಗೆ ನನ್ನ ಮುಖ ಗೊತ್ತಾಗಬೇಕಿತ್ತು, ಇವನ್ಯಾರೋ ಹೀರೊ ಬಂದಿದ್ದಾನೆ ಎಂದು ತಿಳಿಯಬೇಕಿತ್ತು, ಹಾಗಾಗಿಯೇ ತಾನು ಈ ರೀತಿ ನಟಿಸಿದ್ದ ಸಿನಿಮಾ ಫಲಿತಾಂಶ ಹೊರಬೀಳುವ ಮುನ್ನವೇ ಮುಂದಿನ ಚಿತ್ರಗಳನ್ನು ಒಪ್ಪಿಕೊಳ್ತಿದ್ದೆ ಎಂದು ದರ್ಶನ್ ತಿಳಿಸಿದ್ದರು.

ಮೆಜೆಸ್ಟಿಕ್‌ಗಾಗಿ ಪಡೆದ ಸಂಭಾವನೆ ಎಷ್ಟು?
ಇನ್ನೂ ಮುಂದುವರಿದು ಮಾತನಾಡಿದ್ದ ದರ್ಶನ್ ಮೆಜೆಸ್ಟಿಕ್ ಸಿನಿಮಾ ಹಿಟ್ ಆಯಿತು ಎಂದ ಕೂಡಲೇ ತಾನು ಸಂಭಾವನೆ ಹೆಚ್ಚಿಸಿಕೊಳ್ಳೋಣ ಎಂದುಕೊಳ್ಳಲಿಲ್ಲ, ಮೆಜೆಸ್ಟಿಕ್‌ಗೆ ಜೀರೋ, ಕರಿಯಗೆ 5000 ರೂಪಾಯಿ, ಧ್ರುವ ಹತ್ತು ಸಾವಿರ ರೂಪಾಯಿ, ನಿನಗೋಸ್ಕರ ಚಿತ್ರಕ್ಕೆ 12000 ರೂಪಾಯಿಗಳನ್ನು ಸಂಭಾವನೆಯನ್ನಾಗಿ ಪಡೆದಿದ್ದೆ ಎಂದರು. ಈ ಮೂಲಕ ದರ್ಶನ್ ತಾನು ನಟನಾಗಿ ನಟಿಸಿದ ಮೊದಲ ಚಿತ್ರ ಮೆಜೆಸ್ಟಿಕ್‌ಗೆ ಯಾವುದೇ ಸಂಭಾವನೆಯನ್ನೇ ಪಡೆದಿರಲಿಲ್ಲ ಎಂದು ತಿಳಿಸಿದ್ದರು.

ಲಕ್ಷ ನೋಡಿದ್ದೇ ಒಂಬತ್ತು ಸಿನಿಮಾಗಳ ಬಳಿಕ
ಹೀಗೆ ಮೊದಲ ಚಿತ್ರಗಳಲ್ಲಿ ಸಾವಿರ ಲೆಕ್ಕದಲ್ಲಿ ಸಂಭಾವನೆ ಪಡೆದಿದ್ದ ನಟ ದರ್ಶನ್ ಲಕ್ಷ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯಲು ಒಂಬತ್ತು ಸಿನಿಮಾಗಳಲ್ಲಿ ನಟಿಸಬೇಕಾಯಿತು ಎಂದೂ ಸಹ ತಿಳಿಸಿದ್ದರು. ಹೀಗೆ ಅಂಬೆಗಾಲಿಡುತ್ತಾ ಬಂದ ದರ್ಶನ್ ಈಗ ಆನೆಯಾಗಿ ಬೆಳೆದಿದ್ದು ಕೋಟ್ಯಂತರ ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದಾರೆ.


Click it and Unblock the Notifications











