ಶಿವಣ್ಣನಿಗೆ ಇರುವ ಈ ದೊಡ್ಡ ಬಿರುದನ್ನು ಅಂದು ವೇದಿಕೆ ಮೇಲೆ ಅಪ್ಪಿಕೊಂಡು ಇಟ್ಟಿದ್ದೇ ದರ್ಶನ್!
ಸ್ಟಾರ್ ವಾರ್.. ಪ್ರತೀ ಇಂಡಸ್ಟ್ರಿಗಳಲ್ಲಿಯೂ ಈ ಸ್ಟಾರ್ ವಾರ್ ಎಂಬ ಪದ ಸಹಜವಾಗಿ ಕೇಳಿ ಬರುತ್ತಲೇ ಇರುತ್ತದೆ. ಅದರಲ್ಲೂ ಚಿತ್ರರಂಗವೊಂದರ ಮುಂಚೂಣಿಯಲ್ಲಿರುವ ನಟರ ನಡುವಿನ ನೇರ ಹಾಗೂ ಪರೋಕ್ಷ ಪೈಪೋಟಿಗಳನ್ನು ಸ್ಟಾರ್ ವಾರ್ ಎಂದೇ ಕರೆಯುತ್ತಾರೆ.
ಆದರೆ ಬಹುತೇಕ ಸ್ಟಾರ್ ನಟರು ಇಬ್ಬರು ನಟರ ನಡುವೆ ಬಾಕ್ಸ್ ಆಫೀಸ್ ಪೈಪೋಟಿ ಇರುವುದು ಸಹಜ, ಹಾಗೆಂದ ಮಾತ್ರಕ್ಕೆ ಅದನ್ನು ಸ್ಟಾರ್ ವಾರ್ ಎನ್ನಲಾಗುವುದಿಲ್ಲ, ಅದು ಆರೋಗ್ಯಕರ ಪೈಪೋಟಿ ಅಷ್ಟೇ ಎಂದು ಹೇಳಿಕೆ ನೀಡಿದ್ದಾರೆ.

ನಾವು ನಟರೆಲ್ಲಾ ಚೆನ್ನಾಗಿಯೇ ಇದ್ದೇವೆ, ಒಳ್ಳೆ ಸ್ನೇಹಿತರಾಗಿದ್ದೇವೆ, ಆದರೆ ಅಭಿಮಾನಿಗಳು ಮಾತ್ರ ಅಭಿಮಾನದ ಹೆಸರಿನಲ್ಲಿ ಪರಸ್ಪರ ಕಿತ್ತಾಡಿಕೊಂಡು ಫ್ಯಾನ್ ವಾರ್ ಮಾಡುವುದನ್ನು ಬಿಡಬೇಕು ಎಂದೂ ಸಹ ಬುದ್ಧಿವಾದ ಹೇಳಿದ್ದಾರೆ.
ಆದರೆ ಅಭಿಮಾನಿಗಳು ಮಾತ್ರ ತಮ್ಮ ಕಿತ್ತಾಟವನ್ನು ನಿಲ್ಲಿಸಿಯೇ ಇಲ್ಲ. ಈ ಹಿಂದೆ ಸಿನಿಮಾಗಳು ಬಿಡುಗಡೆಯಾದಾಗ ಕಲೆಕ್ಷನ್ ವಿಚಾರವಾಗಿ ತಮ್ಮ ನಟನ ಚಿತ್ರವೇ ಹೆಚ್ಚು ಗಳಿಕೆ ಮಾಡಿತು ಎಂಬ ವಿಚಾರಕ್ಕೆ ಕಿತ್ತಾಡುತ್ತಿದ್ದ ಅಭಿಮಾನಿಗಳು ಈಗ ಸಿನಿಮಾದಾಚೆಗಿನ ತಮ್ಮ ನಟರ ವಿಚಾರಗಳನ್ನು ಇಟ್ಟುಕೊಂಡೂ ಸಹ ಫ್ಯಾನ್ ವಾರ್ ಮಾಡುತ್ತಿದ್ದಾರೆ. ಕೇವಲ ನಟರನ್ನು ಮಾತ್ರವಲ್ಲದೇ ಕೆಲ ಅಭಿಮಾನಿಗಳು ನಟರ ಪತ್ನಿ ಹಾಗೂ ಮಕ್ಕಳನ್ನೂ ಸಹ ಎಳೆತಂದು ತಮ್ಮ ನೀಚ ಮನಸ್ಥಿತಿ ಎಂಥದ್ದು ಎಂಬುದನ್ನು ತೋರಿಸಿಕೊಂಡು ಅಸಹ್ಯ ಉಂಟಾಗುವ ರೀತಿ ನಡೆದುಕೊಳ್ಳುತ್ತಿದ್ದಾರೆ.
ಹೀಗೆ ಚಂದನವನದಲ್ಲಿ ದಿನದಿಂದ ದಿನಕ್ಕೆ ಫ್ಯಾನ್ ವಾರ್ ಮಿತಿ ಮೀರುತ್ತಿದ್ದು, ಸದ್ಯ ದರ್ಶನ್ ಹಾಗೂ ರಾಜ್ ಕುಟುಂಬದ ಅಭಿಮಾನಿಗಳ ನಡುವೆ ಈ ಕಿತ್ತಾಟ ದೊಡ್ಡ ಮಟ್ಟದಲ್ಲಿಯೇ ಇದೆ. ಹೌದು, ಸಾಮಾಜಿಕ ಜಾಲತಾಣದಲ್ಲಿ ಈ ಇಬ್ಬರ ಅಭಿಮಾನಿಗಳ ನಡುವೆ ಎಷ್ಟು ಕೆಳ ಮಟ್ಟದ ಟ್ರೋಲ್ ನಡೆಯುತ್ತಿದೆ ಎಂಬುದನ್ನು ಬರೆವಣಿಗೆ ಮೂಲಕ ಹೇಳುವುದಕ್ಕೂ ಸಹ ಆಗುವುದಿಲ್ಲ.

ಅಭಿಮಾನಿಗಳು ಇಷ್ಟರ ಮಟ್ಟಿಗೆ ಕಿತ್ತಾಡುತ್ತಿದ್ದು, ಹಲವು ಸಿನಿ ರಸಿಕರು ಇಬ್ಬರ ಅಭಿಮಾನಿಗಳ ನಡುವಿನ ಕಿತ್ತಾಟ ನಿಲ್ಲಲಿ ಎಂದು ರಾಜ್ ಹಾಗೂ ತೂಗುದೀಪ ಕುಟುಂಬದ ನಡುವಿನ ಬಾಂಧವ್ಯ ಎಂತಹದ್ದು ಎಂಬುದನ್ನು ಹಳೆಯ ವಿಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ತಿಳಿಸುವ ಯತ್ನ ಮಾಡುತ್ತಿದ್ದಾರೆ. ದರ್ಶನ್ ಬಗ್ಗೆ ಪುನೀತ್ ಮಾತನಾಡಿದ್ದು, ಪುನೀತ್ ಹಾಗೂ ರಾಜ್ ಫ್ಯಾಮಿಲಿ ಬಗ್ಗೆ ದರ್ಶನ್ ಮಾತನಾಡಿದ್ದ ವಿಡಿಯೊಗಳು ಈಗಾಗಲೇ ವೈರಲ್ ಆಗಿವೆ.
ಇದೀಗ ಈ ಸಾಲಿಗೆ ಹೊಸ ಸೇರ್ಪಡೆ ದರ್ಶನ್ ಶಿವರಾಜ್‌ಕುಮಾರ್ ಅವರಿಗೆ ಸೆಂಚುರಿ ಸ್ಟಾರ್ ಎಂದು ಬಿರುದು ಕೊಟ್ಟ ವಿಡಿಯೊ. ಹೌದು, ಚೆಲುವೆಯೇ ನಿನ್ನೇ ನೋಡಲು ಚಿತ್ರದ ಆಡಿಯೊ ಬಿಡುಗಡೆ ಸಮಾರಂಭ ನಡೆಯುತ್ತಿತ್ತು. ಈ ಕಾರ್ಯಕ್ರಮಕ್ಕೆ ದರ್ಶನ್ ಹಾಗೂ ಸುದೀಪ್ ಅತಿಥಿಗಳಾಗಿ ಆಗಮಿಸಿದ್ದರು. ಆಗ ನೂರು ಸಿನಿಮಾಗಳ ಹೊಸ್ತಿಲಿನಲ್ಲಿ ಇದ್ದ ಶಿವ ರಾಜ್‌ಕುಮಾರ್ ಅವರನ್ನು ವೇದಿಕೆ ಮೇಲೆ ಅಪ್ಪಿಕೊಂಡು ದರ್ಶನ್ ಹೇಳಿಕೆಯೊಂದನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ವೇದಿಕೆ ಮೇಲೆ ಶಿವಣ್ಣವನ್ನು ಅಪ್ಪಿಕೊಂಡು ಮಾತು ಆರಂಭಿಸಿದ್ದ ದರ್ಶನ್ "ದಯವಿಟ್ಟು ಯಾರು ಬೇಜಾರು ಮಾಡಿಕೊಳ್ಳಬಾರದು. ಶಿವಣ್ಣನೂ ಬೇಜಾರು ಮಾಡ್ಕೊಬಾರದು. ಹ್ಯಾಟ್ರಿಕ್ ಹೀರೋ ತುಂಬಾ ಸಾಕಾಗೋಗಿದೆ. ಈಗ ಸೆಂಚುರಿ ಹೀರೊ ಅಂತ ಕರಿಯೋಣ. ಯಾಕಂದ್ರೆ ನೂರನೇ ಸಿನಿಮಾ ಅವರು ಮಾಡ್ತಾರೆ. ಹೀಗಾಗಿ ಅವರನ್ನು ಸೆಂಚುರಿ ಹೀರೊ ಅಂತ ಕರೆದರೆ ಬಹಳ ಚೆನ್ನಾಗಿರುತ್ತೆ. ಅದೇ ತರ ದೇವರು ಅವರಿಗೆ ಆಯಸ್ಸು, ಆರೋಗ್ಯ ಕೊಟ್ಟು ಇನ್ನೂ ಎತ್ತರಕ್ಕೆ ಬೆಳೆಸಲಿ. ಅವರಿಗೆ ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹವನ್ನು ಇದೇ ರೀತಿ ಕೊಡ್ತಾ ಇರಿ ಅಂತ ತಲೆ ಬಾಗಿ ಬೇಡಿಕೊಳ್ತಾ ಇದ್ದೀನಿ" ಎಂದು ಹೇಳಿಕೆ ನೀಡಿದ್ದರು.
ದರ್ಶನ್ ಅವರ ಈ ಮಾತನ್ನು ಕೇಳಿ ಶಿವಣ್ಣ ನಾಚಿ ದರ್ಶನ್ ಅವರನ್ನು ಅಪ್ಪಿಕೊಂಡು ಧನ್ಯವಾದ ತಿಳಿಸಿದರೆ ನೆರೆದಿದ್ದ ಅಭಿಮಾನಿಗಳು ಹಾಗೂ ಕಲಾವಿದರು ಚಪ್ಪಾಳೆ ಹಾಗೂ ಶಿಳ್ಳೆ ಹಾಕುವುದರ ಮೂಲಕ ಸಂಭ್ರಮಿಸಿದ್ದರು.


Click it and Unblock the Notifications











