'ವಾಮನ' ಸಿನಿಮಾ ವೀಕ್ಷಿಸುವಾಗ ದರ್ಶನ್ ಎಡವಟ್ಟು? ಇದೇ ಕಂಟಕವಾಗುತ್ತಾ?
ನಟ ದರ್ಶನ್ ಮತ್ತೆ ಸಹಜ ಜೀವನದತ್ತ ಮರಳುತ್ತಿದ್ದಾರೆ. ನಿನ್ನೆ(ಏಪ್ರಿಲ್ 10) ರಾತ್ರಿ ನಗರದ ಜಿಟಿ ಮಾಲ್‌ನಲ್ಲಿ 'ವಾಮನ' ಸಿನಿಮಾ ವೀಕ್ಷಿಸಿದ್ದಾರೆ. ಧನ್ವೀರ್ ಗೌಡ ನಟನೆಯ ಆಕ್ಷನ ಥ್ರಿಲ್ಲರ್ ಸಿನಿಮಾ ಈ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. ದರ್ಶನ್ ಆಪ್ತ ಬಳಗದಲ್ಲಿ ಧನ್ವೀರ್ ಗುರ್ತಿಸಿಕೊಂಡಿದ್ದಾರೆ. ಹಾಗಾಗಿ ಆತನ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ.
ಧನ್ವೀರ್ ಪೋಷಕರು, ಹಾಸ್ಯನಟ ಚಿಕ್ಕಣ್ಣ ಜೊತೆ ದರ್ಶನ್ 'ವಾಮನ' ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದಿದ್ದರು. ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಕುಟುಂತ್ತಲೇ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋ ವೈರಲ್ ಆಗುತ್ತಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಹಾಗೂ ಉಳಿದ ಆರೋಪಿಗಳು ಜಾಮೀನು ಪಡೆದು ಹೊರಬಂದಿದ್ದಾರೆ. ಆ ಜಾಮೀನು ಪ್ರಶ್ನಿಸಿ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ಇನ್ನು ಮುಗಿದಿಲ್ಲ. ಕೋರ್ಟ್‌ನಲ್ಲಿ ಆಗಾಗ್ಗೆ ವಿಚಾರಣೆ ನಡೆಯುತ್ತಿದೆ. ಮಂಗಳವಾರ ಸಿಸಿಹೆಚ್ 57ನೇ ನ್ಯಾಯಾಲಯದಲ್ಲಿ ನಡೆದ ವಿಚಾರಣೆಗೆ ದರ್ಶನ್ ಗೈರಾಗಿದ್ದರು. ಬೆನ್ನು ನೋವಿನ ಕಾರಣ ನೀಡಿ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ವಕೀಲರ ಮೂಲಕ ದರ್ಶನ್ ಹೇಳಿಸಿದ್ದರು. ಇದಕ್ಕೆ ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ ಮುಂದಿನ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚನೆ ನೀಡಿದ್ದಾರೆ.
ಕೋರ್ಟ್ ವಿಚಾರಣೆಗೆ ಹಾಜರಾಗದ ದರ್ಶನ್ ಇದೀಗ 'ವಾಮನ' ಸಿನಿಮಾ ವೀಕ್ಷಿಸಿದ್ದಾರೆ. ರೇಣುಕಾಸ್ವಾಮಿ ಪ್ರಕರಣದ ಸಾಕ್ಷಿ ಆಗಿರುವ ಚಿಕ್ಕಣ್ಣನ ಜೊತೆಗೆ ದರ್ಶನ್ ಕಾಣಿಸಿಕೊಂಡಿದ್ದಾರೆ. ಒಟ್ಟಿಗೆ ಸಿನಿಮಾ ವೀಕ್ಷಿಸಿದ್ದಾರೆ. ಇದು ಸಹಜವಾಗಿಯೇ ಚರ್ಚೆಗೆ ಗ್ರಾಸವಾಗಿದೆ. ಜಾಮೀನು ಪಡೆದು ಹೊರಬಂದ ಆರೋಪಿಗಳು ಪ್ರಕರಣದ ಸಾಕ್ಷಿಗಳನ್ನು ಭೇಟಿ ಮಾಡುವಂತಿಲ್ಲ. ಆರೋಪಿ ಸಾಕ್ಷಿಯ ಮೇಲೆ ಪ್ರಭಾವ ಬೀರಬಹುದು ಎನ್ನುವ ಕಾರಣಕ್ಕೆ ಈ ನಿಯಮ ಇದೆ.

ರೇಣುಕಾಸ್ವಾಮಿ ಹತ್ಯೆ ನಡೆದ ದಿನ ದರ್ಶನ್ ಪಟ್ಟಣಗೆರೆ ಶೆಡ್‌ಗೆ ಹೋಗುವ ಮುನ್ನ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ಹಾಸ್ಯನಟ ಚಿಕ್ಕಣ್ಣ ಕೂಡ ಭಾಗಿ ಆಗಿದ್ದರು. ಹಾಗಾಗಿ ಅವರನ್ನು ಸಾಕ್ಷಿ ಆಗಿ ಪರಿಗಣಿಸಿ ನೋಟಿಸ್ ನೀಡಿ ಪೊಲೀಸರು ವಿಚಾರಣೆ ನಡೆಸಿದ್ದರು. ಆದರೆ ಆಗಸ್ಟ್‌ನಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ದರ್ಶನ್ ಅವರನ್ನು ಚಿಕ್ಕಣ್ಣ ಭೇಟಿ ಮಾಡಿದ್ದು ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಪೊಲೀಸರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನಲಾಗಿತ್ತು.
ಇದೀಗ ದರ್ಶನ್ ಜೊತೆ ಮತ್ತೆ ಚಿಕ್ಕಣ್ಣ ಕಾಣಿಸಿಕೊಂಡಿದ್ದಾರೆ. ಇದು ಅವರಿಗೆ ಸಂಕಷ್ಟ ತಂದೊಡ್ಡುತ್ತಾ ಕಾದು ನೋಡಬೇಕಿದೆ. ಇದೇ ವಿಚಾರವನ್ನು ಮುಂದಿಟ್ಟು ದರ್ಶನ್‌ಗೆ ನೀಡಿರುವ ಜಾಮೀನು ರದ್ದು ಮಾಡುವಂತೆ ಪೊಲೀಸರು ಕೋರ್ಟ್‌ನಲ್ಲಿ ಆಗ್ರಹಿಸುವ ಸಾಧ್ಯತೆಯಿದೆ.
ಸಿನಿಮಾ ವೀಕ್ಷಿಸಿದ ಬಳಿಕ ದರ್ಶನ್ ಮಾಧ್ಯಮಗಳ ಮುಂದೆ ಮಾತನಾಡಿದರು. 10 ತಿಂಗಳ ಬಳಿಕ ಮಾಧ್ಯಮಗಳಿಗೆ ಎದುರು ಬಂದಿದ್ದರು. ಆದರೆ 'ವಾಮನ' ಸಿನಿಮಾ ಕುರಿತು ಮಾತ್ರ ಮಾತನಾಡಿ ತೆರಳಿದ್ದಾರೆ. "ಚಿತ್ರದಿಂದ ಚಿತ್ರಕ್ಕೆ ಧನ್ವೀರ್ ನಟನೆಯಲ್ಲಿ ಪಕ್ವತೆ ಕಾಣುತ್ತಿದೆ. 'ವಾಮನ' ಸಿನಿಮಾ ಬಹಳ ಚೆನ್ನಾಗಿದೆ" ಎಂದು ದರ್ಶನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟ್ರೈಲರ್ ನೀಡಿದರೆ ಬರೀ ಆಕ್ಷನ್ ಎನಿಸುತ್ತದೆ. ಆದರೆ ಚಿತ್ರದಲ್ಲಿ ಮದರ್ ಸೆಂಟಿಮೆಂಟ್ ಇದೆ. ಆಕ್ಷನ್ ಸನ್ನಿವೇಶಗಳಲ್ಲಿ ಧನ್ವೀರ್ ಪರ್ಫಾರ್ಮನ್ಸ್ ಚೆನ್ನಾಗಿದೆ. ನಾವು ಮಾಡುತ್ತಿರುವುದು ಕನ್ನಡ ಸಿನಿಮಾ. ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಕರ್ನಾಟಕ ಜನತೆಗೆ ಇಲ್ಲಿರುವ ಪ್ರೇಕ್ಷಕರಿಗಾಗಿ ಸಿನಿಮಾ ಮಾಡ್ತೀವಿ. ಒಳ್ಳೆ ಕಥೆ ಸಿಕ್ಕರೆ ಕಂಡಿತ ಧನ್ವೀರ್ ಜೊತೆ ನಟಿಸುತ್ತೇನೆ" ಎಂದು ದರ್ಶನ್ ತಿಳಿಸಿದ್ದಾರೆ.


Click it and Unblock the Notifications











