2025ರಲ್ಲಾದರೂ ಆಗುತ್ತಾ 'ಡೆವಿಲ್' ದರ್ಶನ ? ಜೈಲಿಂದ ಹೊರ ಬಂದ ಚಾಲೆಂಜಿಂಗ್ ಸ್ಟಾರ್ ಲೆಕ್ಕಾಚಾರವೇನು..?
ವರ್ಷಕ್ಕೆ ಎರಡು ಚಿತ್ರಗಳನ್ನು ಕಡ್ಡಾಯವಾಗಿ ಮಾಡುತ್ತಾ ಬಂದವರು ದರ್ಶನ್. ಆದರೆ, ಹಣೆಬರಹ.. ಈ ವರ್ಷ ದರ್ಶನ್ ಅಭಿನಯದ ಯಾವೊಂದು ಚಿತ್ರ ಕೂಡ ತೆರೆಗೆ ಬಂದಿಲ್ಲ. ಕಾರಣ ಎಲ್ಲರಿಗೆ ಗೊತ್ತಿರುವಂತಹದ್ದೇ.
ಆದರೆ ಈಗ ದರ್ಶನ್ ಜೈಲಿಂದ ಹೊರ ಬಂದಿದ್ದಾರೆ. ಜಾಮೀನು ಪಡೆದು ಮನೆ ಸೇರಿದ್ದಾರೆ. ತಮ್ಮ ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದಾರೆ. ಸಹಜವಾಗಿ ಈ ಬೆಳವಣಿಗೆ ದರ್ಶನ್ ಅವರ ಅಸಂಖ್ಯಾತ ಅಗಣಿತ ಅಭಿಮಾನಿಗಳಿಗೆ ಖುಷಿಯನ್ನು ನೀಡಿದೆ. ಕನ್ನಡ ಚಿತ್ರರಂಗಕ್ಕೂ ಕೂಡ ಸಮಾಧಾನವನ್ನು ನೀಡಿದೆ. ಇದರ ನಡುವೆ ದರ್ಶನ್ ತಮ್ಮ ಡೆವಿಲ್ ಚಿತ್ರಕ್ಕೆ ಮರುಚಾಲನೆಯನ್ನು ಯಾವತ್ತು ನೀಡುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ದರ್ಶನ್ ಜೈಲು ಪಾಲಾಗುವ ಮುನ್ನ ಡೆವಿಲ್ ಎಂಬ ಚಿತ್ರವನ್ನು ಶುರು ಮಾಡಿದ್ದರು. ಮಿಲನಾ ಪ್ರಕಾಶ್ ಈ ಚಿತ್ರದ ನಿರ್ದೇಶಕರು. ಆರಂಭದಿಂದ ಕುತೂಹಲವನ್ನು ಕೆರಳಿಸುತ್ತಾನೇ ಬಂದ ಈ ಚಿತ್ರದ ಚಿತ್ರೀಕರಣ ಶುರುವಾದಾಗ ದರ್ಶನ್ ಅಭಿಮಾನಿಗಳು ರಣಕೇಕೆ ಹಾಕಿದ್ದರು. ಚಿಕ್ಕ ತುಣುಕು ನೋಡಿ ಸಂಭ್ರಮಿಸಿದ್ದರು.
ಆದರೆ, ಅದ್ಯಾರ ಕಣ್ಣು ಬಿತ್ತೋ, ದರ್ಶನ್ ಜೈಲು ಸೇರಿದರು. ಈ ಕಾರಣಕ್ಕೆ ಡೆವಿಲ್ ಅಡ್ಡಕತ್ತರಿಯಲ್ಲಿ ಸಿಲುಕಿತ್ತು. ಮಿಲನಾ ಪ್ರಕಾಶ್ ಮತ್ತು ತಂಡದ ಮುಖದಲ್ಲಿ ಚಿಂತೆಯ ಗೆರೆ ಮೂಡಿತ್ತು.ಆದರೀಗ ದರ್ಶನ್ ಹೊರ ಬಂದಿದ್ದಾರೆ. ಆದರೆ ಡೆವಿಲ್ ಚಿತ್ರದ ಕುರಿತು ಯಾವ ಮಾಹಿತಿ ಇಲ್ಲ. ಹೀಗಾಗಿ ಚಿಂತಾಕ್ರಾಂತವಾಗಿರುವ ಅನೇಕರು ಮುಂಬರು 2025ರಲ್ಲಾದರೂ ಡೆವಿಲ್ ಬರುತ್ತಾ ಎನ್ನುವ ಪ್ರಶ್ನೆ ಕೇಳಲು ಶುರು ಮಾಡಿದ್ದಾರೆ. ಇದಕ್ಕೆ ಉತ್ತರವೆನ್ನುವಂತೆ ಡೆವಿಲ್ ಕುರಿತ ಒಂದು ಸುದ್ದಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಾಟ್ಸಾಫ್ ಯುನಿವರ್ಸಿಟಿಗಳಲ್ಲಿ ಹರಿದಾಡುತ್ತಿದೆ.
ಆ ಪ್ರಕಾರ ನೋಡುವುದಾದರೆ ದರ್ಶನ್ ಅಭಿನಯದ ಡೆವಿಲ್ ಚಿತ್ರದ ಚಿತ್ರೀಕರಣ ಇದೇ ಜನವರಿ 20ರಿಂದ ಆರಂಭವಾಗಲಿದೆ. ಇನ್ನೂ ಗಾಂಧಿನಗರದಲ್ಲಿ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ದರ್ಶನ್ ಫೆಬ್ರವರಿಯ ನಂತರವಷ್ಟೇ ಡೆವಿಲ್ ಅವತಾರವನ್ನು ಎತ್ತಲಿದ್ದಾರೆ. ಈಗಾಗಲೇ ಈ ಕುರಿತು ಚಿತ್ರತಂಡದ ಜೊತೆ ದರ್ಶನ್ ಚರ್ಚೆಯನ್ನು ಕೂಡ ಮಾಡಿದ್ದಾರೆ ಎನ್ನುವ ಸುದ್ದಿ ಸದ್ಯಕ್ಕೆ ಕೇಳಿ ಬರುತ್ತಿದ್ದು ಫೆಬ್ರವರಿ ಹದಿನಾರರಂದು ದರ್ಶನ್ ಬರ್ತ್‌ಡೇ ಪ್ರಯುಕ್ತ ಈ ಕುರಿತು ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಸದ್ಯ 'ಕುಂಟು' ನೆಪವನ್ನು ಹೇಳುತ್ತಿರುವ ದರ್ಶನ್ ನಿಜಕ್ಕೂ ತಮ್ಮ ಡೆವಿಲ್ ಚಿತ್ರದ ಚಿತ್ರೀಕರಣವನ್ನು ಜನವರಿ ಅಥವಾ ಫೆಬ್ರವರಿಯಲ್ಲಿ ಶುರು ಮಾಡಲಿದ್ದಾರಾ ಗೊತ್ತಿಲ್ಲ. ಆದರೆ ಸದ್ಯ ಈ ಸುದ್ದಿಯನ್ನು ಕೇಳಿ ಡಿ ಕಂಪನಿಯಲ್ಲಿ ಸಂಭ್ರಮದ ವಾತಾವರಣವಂತೂ ಮನೆ ಮಾಡಿದೆ.
ಇನ್ನುಳಿದಂತೆ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರುವ ಮಾಡೆಲ್ ಹಾಗೂ ಉತ್ತಮ ಭರತನಾಟ್ಯ ಕಲಾವಿದೆಯಾಗಿ ಕೂಡ ಹೆಸರು ಮಾಡಿರುವ ಮಂಗಳೂರು ಚೆಲುವೆ ರಚನಾ ರೈ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ.. ಸುಧಾಕರ್ ಜೆ ರಾಜ್ ಛಾಯಾಗ್ರಹಣ ಡೆವಿಲ್ ಚಿತ್ರಕ್ಕೆ ಇದೆ. ಬಾಲಿವುಡ್ ನಟ ಮಹೇಶ್ ಮಂಜ್ರೇಕರ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಒಟ್ನಲ್ಲಿ ಸದ್ಯ ದರ್ಶನ್ ಮುಂಬರುವ 2025ರ ಆರಂಭದ ಎರಡು ತಿಂಗಳಿನಲ್ಲಿ ತಮ್ಮ ಡೆವಿಲ್ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಡೆವಿಲ್ ಅಂಗಳಕ್ಕೆ ನಿಜಕ್ಕೂ ದರ್ಶನ್ ಧುಮುಕುವುದು ಯಾವಾಗ ಉತ್ತರ ಸದ್ಯದಲ್ಲಿಯೇ ಅಧಿಕೃತವಾಗಿ ಸಿಗುವ ನಿರೀಕ್ಷೆ ಇದೆ.


Click it and Unblock the Notifications











