"ದರ್ಶನ್ ಪತ್ನಿ ಅಲ್ಲ ಪವಿತ್ರಾ ಗೌಡ"; ನಗರ ಪೊಲೀಸ್ ಆಯುಕ್ತರಿಗೆ ದರ್ಶನ್ ಪತ್ನಿ ಪತ್ರ
ರೇಣುಕಾಸ್ವಾಮಿ ಕೊಲೆ ಪ್ರಕರಣ ದರ್ಶನ್‌ಗೆ ಕಗ್ಗಂಟಾಗಿದೆ. ಆರೋಪಿಯಾಗಿ ಜೈಲು ಸೇರುವುದಕ್ಕಿಂತ ಮುಂಚೆ ಇದ್ದ ಸಂಕಷ್ಟಗಳು ಒಂದೆಡೆಯಾದರೆ, ಜೈಲು ಸೇರಿದ ಮೇಲೆ ಇನ್ನೊಂಥರಾ ಸಂಕಷ್ಟು ಎದುರಾಗುತ್ತಿವೆ. ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಅವರ 14 ದಿನಗಳ ಅವಧಿ ನಾಳೆಗೆ (ಜುಲೈ 4) ಮುಗಿಯಲಿದೆ.
ಈ ಕಾರಣಕ್ಕೆ ನಾಳೆ (ಜುಲೈ 4) ದರ್ಶನ್‌ರನ್ನು ನ್ಯಾಯಾಲಯದ ಮುಂದೆ ಮತ್ತೆ ಹಾಜರು ಪಡಿಸುವ ಸಾಧ್ಯತೆಯಿದೆ. ದರ್ಶನ್ ಪರ ವಕೀಲರು ನ್ಯಾಯಾಲಯದ ಮುಂದೆ ಜಾಮೀನು ನೀಡಬೇಕೆಂದು ಮನವಿ ಮಾಡಿಕೊಳ್ಳಬಹುದು. ಈ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆಂದು ವರದಿಯಾಗಿದೆ.

ನ್ಯಾಯಾಂಗ ಅವಧಿ ಮುಗಿಯುವುದಕ್ಕೆ ಒಂದು ದಿನ ಮುನ್ನ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪತ್ರ ಬರೆದರಾ? ಆ ಪತ್ರದಲ್ಲಿ ಏನು ಹೇಳಿದ್ದಾರೆ? ಪವಿತ್ರಾ ಗೌಡ ಬಗ್ಗೆ ಆ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರಾ? ಈ ಎಲ್ಲಾ ವಿಷಯಗಳ ಬಗ್ಗೆ ತಿಳಿಯಲು ಮುಂದೆ ಓದಿ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರುತ್ತಿದ್ದಂತೆ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಭೇಟಿಯಾಗಿ ಬಂದಿದ್ದರು. ಅಲ್ಲಿಂದ ಪತಿ ಪರ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಈ ಕಾರಣಕ್ಕೆ ನಾಳೆ (ಜುಲೈ 4) ನ್ಯಾಯಾಧೀಶರು ಆದೇಶ ಏನಿರುತ್ತೆ? ಅನ್ನೋದರ ಗಮನವಿದೆ.
ಇದೇ ವೇಳೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ ಎಂದು ನ್ಯೂಸ್ 18 ಕನ್ನಡ ವರದಿ ಮಾಡಿದೆ. ಇದರಲ್ಲಿ ಪವಿತ್ರಾ ಗೌಡ ಬಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಉಲ್ಲೇಖ ಮಾಡಿದ್ದಾರೆ. ಪವಿತ್ರಾ ಗೌಡ ದರ್ಶನ್ ಪತ್ನಿ ಅಲ್ಲ. ನಾನು ಹಾಗೂ ದರ್ಶನ್ ಅವರು 2013ರಲ್ಲಿ ವಿವಾಹವಾಗಿದ್ದೇವೆ. ನಮಗೆ ವಿನೀಶ್ ಎಂಬ ಮಗನಿದ್ದಾನೆ ಎಂದು ಬರೆದಿರುವ ಬಗ್ಗೆ ವರದಿ ಆಗಿದೆ.

ಹಾಗೆಯೇ ಪವಿತ್ರಾ ಗೌಡ ಕೂಡ ಸಂಜಯ್ ಸಿಂಗ್ ಎಂಬುವವರನ್ನು ವಿವಾಹವಾಗಿದ್ದರು. ಇವರಿಬ್ಬರಿಗೆ ಒಬ್ಬಳು ಹೆಣ್ಣು ಮಗಳಿದ್ದಾಳೆ ಎಂದು ನಗರ ಪೊಲೀಸ್ ಆಯುಕ್ತರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಈ ಪತ್ರ ಬರೆಯುವುದಕ್ಕೆ ಪ್ರಮುಖ ಕಾರಣವೊಂದಿದೆ. ದರ್ಶನ್ ಕೊಲೆ ಪ್ರಕರಣದಲ್ಲಿ ದರ್ಶನ್‌ರನ್ನು ಬಂಧಿಸಿದ ವೇಳೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿರುವ ದಯಾನಂದ್ ಅವರು ಪವಿತ್ರಾ ಗೌಡ ದರ್ಶನ್ ಪತ್ನಿ ಎಂದಿದ್ದರು.
ಈ ಕಾರಣಕ್ಕೆ ವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದು, ಪೊಲೀಸ್ ರೆಕಾರ್ಡ್‌ನಲ್ಲಿ ಪವಿತ್ರಾ ಗೌಡ ಅವರನ್ನು ದರ್ಶನ್ ಪತ್ನಿ ಎಂದು ಉಲ್ಲೇಖ ಮಾಡಬೇಡ ಎಂದು ಮನವಿ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ. ಆದರೆ, ಈ ಬಗ್ಗೆ ವಿಜಯಲಕ್ಷ್ಮಿ ಎಲ್ಲಾ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ, ಇಂತಹದ್ದೊಂದು ಸುದ್ದಿ ಪೊಲೀಸ್ ವಲಯದಲ್ಲಿ ಹರಿದಾಡುತ್ತಿದೆ.


Click it and Unblock the Notifications











