ಸಿನಿಮಾಗೂ ಮುಂಚೆ ದರ್ಶನ್, ಯಶ್, ಗಣೇಶ್ ಅಭಿನಯಿಸಿದ್ದ ಧಾರಾವಾಹಿ.?
ಸದ್ಯ, ಸ್ಯಾಂಡಲ್ ವುಡ್ ಇಂಡಸ್ಟ್ರಿ ಅಂದ್ರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ರಾಕಿಂಗ್ ಸ್ಟಾರ್ ಯಶ್, ಸುದೀಪ್, ಶಿವಣ್ಣ ಹೀಗೆ ಈ ನಟರು ಮೊದಲ ಸಾಲಿನಲ್ಲಿ ಬರ್ತಾರೆ.
ಈ ನಟರ ಹೆಸರುಗಳ ಹಿಂದೆ ಬಂದಿರುವ ಸ್ಟಾರ್ ಗಿರಿ ಸುಮ್ಮನೇ ಒಂದೇ ಸಿನಿಮಾದಲ್ಲಿ ಅಭಿನಯಿಸಿದ್ದಕ್ಕಾಗಿ ಬಂದಿದ್ದಲ್ಲ. ಅದರ ಹಿಂದೆ ಆ ನಟರ ಶ್ರಮ-ಪರಿಶ್ರಮ ಇದೆ.
ವಿಶೇಷ ಅಂದ್ರೆ ದರ್ಶನ್, ಗಣೇಶ್, ಯಶ್ ಸೇರಿದಂತೆ ಮತ್ತೆ ಕೆಲವರು ಸಿನಿಮಾ ಇಂಡಸ್ಟ್ರಿಯಲ್ಲಿ ನೆಲೆ ಕಾಣುವುದಕ್ಕೂ ಮುಂಚೆ ಕಿರುತೆರೆಯಲ್ಲಿ ಕೆಲಸ ಮಾಡಿದ್ದರು. ಪೋಷಕ ಪಾತ್ರಗಳಲ್ಲಿ ಬಣ್ಣಹಚ್ಚಿದ್ದರು. ಯಾವ ಧಾರಾವಾಹಿಗಳಲ್ಲಿ ಇವರೆಲ್ಲರು ನಟಿಸಿದ್ದರು ಎಂಬುದು ನೆನಪಿರಬಹುದು. ಆದ್ರೂ, ನಿಮಗಾಗಿ ಮತ್ತೊಮ್ಮೆ ಅದನ್ನ ನೆನಪಿಸುವ ಪ್ರಯತ್ನ. ಯಾರು, ಯಾವ ಧಾರಾವಾಹಿಯಲ್ಲಿ ನಟಿಸಿದ್ರು.? ಮುಂದೆ ಓದಿ....

'ಚಂದ್ರಿಕಾ'ದಲ್ಲಿ ದರ್ಶನ್
ಎಲ್ಲರಿಗೂ ಗೊತ್ತಿದೆ ದರ್ಶನ್ ನಾಯಕನಾಗುವ ಮೊದಲು ಹಲವು ಚಿತ್ರಗಳಲ್ಲಿ ಪೋಷಕ ಕಲಾವಿದನಾಗಿ ನಟಿಸಿದ್ದರು. 'ಮೆಜೆಸ್ಟಿಕ್' ಚಿತ್ರಕ್ಕೂ ಮುಂಚೆ 'ದೇವರ ಮಗ', 'ಮಹಾಭಾರತ' ಅಂತ ಸಿನಿಮಾದಲ್ಲಿ ನಟಿಸಿದ್ದರು. ಆದ್ರೆ, ಅದಕ್ಕೂ ಮುಂಚೆ 'ಚಂದ್ರಿಕಾ' ಎಂಬ ಧಾರಾವಾಹಿಯಲ್ಲಿ ದರ್ಶನ್ ಬಣ್ಣ ಹಚ್ಚಿದ್ದರು.

'ನಂದ ಗೋಕುಲ'ದಲ್ಲಿ ಯಶ್
ರಾಕಿಂಗ್ ಸ್ಟಾರ್ ಯಶ್ 'ಜಂಭದ ಹುಡುಗಿ', 'ಮೊಗ್ಗಿನ ಮನಸು' ಚಿತ್ರಗಳಲ್ಲಿ ಅಭಿನಯಿಸುವ ಮುಂಚೆ ಧಾರಾವಾಹಿಯಲ್ಲಿ ನಟಿಸಿದ್ದರು. ಅಶೋಕ್ ಕಶ್ಯಪ್ ನಿರ್ದೇಶನದ 'ನಂದ ಗೋಕುಲ' ಸೀರಿಯಲ್ ನಲ್ಲಿ ಮುಖ್ಯಪಾತ್ರವನ್ನ ನಿರ್ವಹಿಸುತ್ತಿದ್ದರು.

'ಪಾಪ ಪಾಂಡು' ಗಣೇಶ್
'ಕಾಮಿಡಿ ಟೈಂ' ಮೂಲಕ ಸ್ಟಾರ್ ಆಗಿ ಗುರುತಿಸಿಕೊಂಡಿದ್ದ ಗಣೇಶ್ ನಂತರ ಇಂಡಸ್ಟ್ರಿಯಲ್ಲಿ ಗೋಲ್ಡನ್ ಸ್ಟಾರ್ ಆದರು. ಆದ್ರೆ, ಗಣೇಶ್ ಕೂಡ ಹಲವು ಸೀರಿಯಲ್ ನಲ್ಲಿ ನಟಿಸಿದ್ದರು. ಸಿಹಿ ಕಹಿ ಚಂದ್ರು ನಿರ್ದೇಶನದ 'ಪಾಪ ಪಾಂಡು', ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಯದ್ವ ತದ್ವಾ', 'ವಠಾರ' ಅಂತ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು.

'ಗುಡ್ಡದ ಭೂತ'ದಲ್ಲಿ ಪ್ರಕಾಶ್ ರೈ
ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಖಳನಾಯಕನಾಗಿ ಮಿಂಚುತ್ತಿರುವ ಪ್ರಕಾಶ್ ರೈ, ತಮ್ಮ ಬಣ್ಣದ ವೃತ್ತಿ ಆರಂಭಿಸಿದ್ದೇ ಧಾರಾವಾಹಿ ಮೂಲಕ. ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ 'ಬಿಸಿಲು ಕುದರೆ', 'ಗುಡ್ಡದ ಭೂತ'ದಲ್ಲಿ ಗಮನ ಸೆಳೆದಿದ್ದರು. ತದನಂತರವೇ ಸಿನಿಮಾ ಅವಕಾಶಗಳು ಹುಡುಕಿಕೊಂಡು ಬಂದಿತ್ತು.

'ಲಕ್ಷ್ಮಿ ಬಾರಮ್ಮ'ದಲ್ಲಿ ಚಂದನ್
'ಪ್ರೇಮಬರಹ' ಚಿತ್ರದ ನಾಯಕ ಚಂದನ್ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಚಂದನ್ ಸಿನಿಮಾ ಇಂಡಸ್ಟ್ರಿಗೆ ಪರಿಚಯಾಗಲು ವೇದಿಕೆಯಾಗಿದ್ದು, ಕಿರುತೆರೆಯ 'ಲಕ್ಷ್ಮಿ ಬಾರಮ್ಮ' ಧಾರಾವಾಹಿ. ಈ ಧಾರಾವಾಹಿ ಮೂಲಕವೇ ಚಂದನ್ ಗೆ ಅದೃಷ್ಟ ಸಿಕ್ಕಿತ್ತು.

'ಅಗ್ನಿಸಾಕ್ಷಿ'ಯಲ್ಲಿ ವಿಜಯ್ ಸೂರ್ಯ
'ಇಷ್ಟಕಾಮ್ಯ', 'ಸ', 'ಕ್ರೇಜಿಸ್ಟಾರ್' ಅಂತಹ ಚಿತ್ರಗಳಲ್ಲಿ ಮಿಂಚಿದ ನಟ ವಿಜಯ್ ಸೂರ್ಯ ಕಿರುತರೆಯಲ್ಲಿ ಹೆಚ್ಚು ಖ್ಯಾತಿ ಮತ್ತು ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ. 'ಅಗ್ನಿಸಾಕ್ಷಿ' ಧಾರಾವಾಹಿಯ ಮೂಲಕ ಜನಪ್ರಿಯತೆ ಪಡೆದುಕೊಂಡ ವಿಜಯ್ ಸೂರ್ಯ ಈಗಲೂ ಆ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ.

ಡಾರ್ಲಿಂಗ್ ಕೃಷ್ಣ
'ಹುಚ್ಚ-2', 'ಮದರಂಗಿ', 'ಮುಂಬೈ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿರುವ ಡಾರ್ಲಿಂಗ್ ಕೃಷ್ಣ ಅಲಿಯಾಸ್ ಸುನಿಲ್ ನಾಗಪ್ಪ 'ಕೃಷ್ಣ ರುಕ್ಮಿಣಿ' ಧಾರಾವಾಹಿ ಮೂಲಕವೇ ಜನಪ್ರಿಯತೆ ಗಳಿಸಿಕೊಂಡಿರುವುದು.


Click it and Unblock the Notifications











