For Quick Alerts
  ALLOW NOTIFICATIONS  
  For Daily Alerts

  ತೂಗುದೀಪ ಪುತ್ರ ದರ್ಶನ್‌ಗೆ ನಾಯಕ ಪಟ್ಟ

  By Staff
  |

  ತಾರಾಪುತ್ರರು ಒಬ್ಬೊಬ್ಬರಾಗಿ ಬಣ್ಣ ಹಚ್ಚುತ್ತಿದ್ದಾರೆ. ರಾಜ್‌ ಕೊನೇ ಪುತ್ರ ಪುನೀತ್‌ 'ಅಪ್ಪು " ಆಗುವ ಸನ್ನಾಹದಲ್ಲಿದ್ದಾರೆ, ಶ್ರೀನಿವಾಸ ಮೂರ್ತಿ ಪುತ್ರ ಈಗಾಗಲೇ ಸೆಕೆಂಡ್‌ ಹೀರೋ ಆಗಿ ಕಾಣಿಸಿಕೊಂಡಿದ್ದಾಗಿದೆ. ರಾಜೇಂದ್ರ ಸಿಂಗ್‌ ಬಾಬು ಪುತ್ರ ದುಶ್ಯಂತ್‌ ಮುಂದಿನ ತಿಂಗಳಲ್ಲಿ ನಾಯಕನಾಗುತ್ತಾನೆ, ಜಗ್ಗೇಶ್‌ ಮಗ ಈಗಾಗಲೇ ಜಿಮ್‌, ಕರಾಟೆ ಅಂತ ತಾಲೀಮು ನಡೆಸುತ್ತಿದ್ದಾನೆ. ರವಿಚಂದ್ರನ್‌ ಸೋದರ ಬಾಲಾಜಿ ಚಿತ್ರಕ್ಕೆ ಕೊನೆಗೂ ಮುಹೂರ್ತ ಸಿಕ್ಕಿದೆ. ಹೆಸರು 'ಪ್ರೀತ್ಸೋಣ ಬಾ". ಲೋಕೇಶ್‌ ಪುತ್ರ ಈಗಾಗಲೇ ಟೀವಿ ಸೀರಿಯಲ್‌ಗಳಲ್ಲಿ ನಟಿಸಿದ್ದಾಗಿದೆ. ಗಿರೀಶ್‌ ಕಾಸರವಳ್ಳಿ ಪುತ್ರಿಗೆ ಬಹಳ ಬೇಡಿಕೆ ಇದೆ. ಮಮತಾರಾವ್‌ ಪುತ್ರಿಯೂ ಚೆಂದ ಇದ್ದಾಳೆ ಅಂತ ಉದ್ಯಮದಲ್ಲಿ ಟಾಕ್‌ ಇದೆ. ದ್ವಾರಕೀಶ್‌ ಪುತ್ರ ಗಿರಿ ಈಗ ಎರಡು ಚಿತ್ರಗಳನ್ನು ಮುಗಿಸಿದ್ದಾಗಿದೆ. ಚಿನ್ನೇಗೌಡರ ಮಗನ ಚಿತ್ರ ವಿ.ಮನೋಹರ್‌ ಕೊರಳಿಗೆ ಬಿದ್ದಿದೆ.

  ಇವೆಲ್ಲಾ ಬೆಳವಣಿಗೆಗಳ ನಡುವೆ ಸದ್ದಿಲ್ಲದೇ ದರ್ಶನ್‌ ನಾಯಕನಾಗಿದ್ದಾನೆ. ಚಿತ್ರದ ಹೆಸರು 'ಮೆಜೆಸ್ಟಿಕ್‌". ಒಂದು ಕಾಲದಲ್ಲಿ ಖಳನಾಗಿ ಹೆಣ್ಮಕ್ಕಳ ಎದೆಯಲ್ಲಿ ಮೃದಂಗ ಬಾರಿಸಿದ್ದ ತೂಗುದೀಪ ಶ್ರೀನಿವಾಸ್‌ ಪುತ್ರನೇ ದರ್ಶನ್‌. ದುರದೃಷ್ಟವಶಾತ್‌ ಅಪ್ಪ ಬದುಕಿದ್ದಾಗ ದರ್ಶನ್‌ಗೆ ಈ ರಂಗದ ಪರಿಚಯ ಇರಲಿಲ್ಲ. ಆಗಿನ್ನೂ ಸಣ್ಣ ವಯಸ್ಸು. ತಮ್ಮ ಮಗ ಯಾವುದೇ ಕಾರಣಕ್ಕೂ ನಟಿಸಬಾರದು ಅನ್ನುತ್ತಿದ್ದರಂತೆ ತೂಗುದೀಪ. ಚಿತ್ರರಂಗದಲ್ಲಿ ಭಯಂಕರ ರಾಜಕೀಯ ಇದೆ ಮಗಾ, ನೀನು ಬೇರೆಯೇ ಕ್ಷೇತ್ರವನ್ನು ಆರಿಸಿಕೋ ಎಂದು ಬಹಳ ಸಾರಿ ಹೇಳಿದ್ದರಂತೆ. ಆದರೆ ರಕ್ತದ ಗುಣವೋ ಏನೋ ದರ್ಶನ್‌ ಇಲ್ಲಿಗೇ ಬಂದರು.

  ಆರಡಿ ಮೂರಿಂಚು ಎತ್ತರದ ಈ ಅಜಾನುಬಾಹುವಿನ ಕಣ್ಣು ಥೇಟ್‌ ಅಪ್ಪನದ್ದೇ. ಮುಖದಲ್ಲೂ ಪ್ರತಿನಾಯಕನ ಛಾಯೆಯಿದೆ. ಆ ಕಾರಣಕ್ಕೇ ಮೊದಲ ನಾಲ್ಕು ಚಿತ್ರಗಳಲ್ಲೂ ಖಳನ ಪಾತ್ರಗಳೇ ಸಿಕ್ಕಿದವು. ಅದಕ್ಕೂ ಆರು ವರ್ಷ ಕಾಯಬೇಕಾಯಿತು. ತೂಗುದೀಪ ಶ್ರೀನಿವಾಸ್‌ ಅವರನ್ನು ಹೆಚ್ಚಾಗಿ ಬಳಸಿಕೊಂಡಿದ್ದ ರಾಜ್‌ ಸಂಸ್ಥೆಯ ಚಿತ್ರಗಳಲ್ಲೂ ದರ್ಶನ್‌ಗೆ ಅವಕಾಶ ಸಿಗಲಿಲ್ಲ. ಎಲ್ಲಾರ ಮನೆ ದೋಸೆ, ಮಿಸ್ಟರ್‌ ಹರಿಶ್ಚಂದ್ರದಂಥಾ ಲೋ ಬಜೆಟ್‌ ಚಿತ್ರಗಳಲ್ಲಿ ದರ್ಶನ್‌ ಕಾಣಿಸಿಕೊಂಡರು. ಅನಂತರ ಒಂದೆರಡು ಟೀವಿ ಸೀರಿಯಲ್‌.

  ಮೆಜೆಸ್ಟಿಕ್‌ ಚಿತ್ರಕ್ಕೂ ಮೊದಲು ಒಬ್ಬ ಸ್ಟಾರ್‌ ಆಯ್ಕೆಯಾಗಿದ್ದಾರಂತೆ. ಕೊನೇ ಕ್ಷಣದಲ್ಲಿ ಆತ ಹಿಂದೆ ಸರಿದಾಗ ದರ್ಶನ್‌ ಭಾಗ್ಯದ ಬಾಗಿಲು ತೆರೆಯಿತು. ಇವರನ್ನು ರೆಕಮಂಡ್‌ ಮಾಡಿದವರು ಚಿತ್ರದ ಛಾಯಾಗ್ರಾಹಕ ಅಣಜಿ ನಾಗರಾಜ್‌. ಹಣದ ಸಲುವಾಗಿ ಪ್ರೇಮಿಗಳನ್ನು ಅಗಲಿಸುವ ದಂಧೆ ಮಾಡುವ ರೌಡಿಯಾಬ್ಬನ ಕತೆಯಿದು. ಪ್ರೀತಿಯ ನಾಟಕ ಮಾಡುತ್ತಾ ತಾನೇ ಪ್ರೀತಿ ಪಾತ್ರನಾಗುವಲ್ಲಿಂದ ಚಿತ್ರಕ್ಕೊಂದು ತಿರುವು. ಮರಸುತ್ತುವ ಪಾತ್ರದ ಬಗ್ಗೆ ದ್ವೇಷ ಬೆಳೆಸಿಕೊಂಡಿರುವ ದರ್ಶನ್‌ಗೆ ಇದು ಹೊಂದುವ ಪಾತ್ರ.

  ನನ್ನ ಹೆಸರು ಅಳಿದರೂ ಪರವಾಗಿಲ್ಲ. ನಮ್ಮಪ್ಪನ ಹೆಸರ ಹಿಂದಿರುವ ತೂಗುದೀಪ ಉಳಿಯಬೇಕು ಎಂದು ಮೆಜೆಸ್ಟಿಕ್‌ ಚಿತ್ರದ ಮುಹೂರ್ತ ಸಂದರ್ಭದಲ್ಲಿ ಪತ್ರಕರ್ತರ ಮುಂದೆ ದರ್ಶನ್‌ ಹೇಳಿಕೊಂಡರು. ಮುಹೂರ್ತ ಕಳೆದ ಬುಧವಾರ ನಡೆಯಿತು. ಚಿತ್ರದ ನಿರ್ದೇಶಕರು ಟಿ.ಎನ್‌. ಸತ್ಯ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X