ದರ್ಶನ್ ಜೊತೆ ವೀರ ಸಿಂಧೂರ ಲಕ್ಷ್ಮಣ ಚಿತ್ರ ಮಾಡಲ್ವಾ ತರುಣ್ ಸುಧೀರ್ ? ಹೊಸ ಫೋಸ್ಟರ್ ಹೇಳಿದ ಕಥೆ ಏನು ?
ದರ್ಶನ್ ಕನ್ನಡ ಚಿತ್ರರಂಗದ ನಂಬರ್ ಓನ್ ಹೀರೋ. ವರ್ಷಕ್ಕೆ ಎರಡು ಚಿತ್ರಗಳನ್ನು ಖಾಯಂ ಆಗಿ ಮಾಡುವ ಸ್ಟಾರ್. ಈ ಕಾರಣಕ್ಕೆ ದರ್ಶನ್ ಜೈಲು ಪಾಲಾದ ದಿನದಿಂದ ಅನೇಕರು ದರ್ಶನ್ ಅನುಪಸ್ಥಿತಿ ಕನ್ನಡ ಚಿತ್ರರಂಗಕ್ಕೆ ತುಂಬಾ ಕಾಡುತ್ತಿದೆ ಎಂದು ಅಲವತ್ತುಕೊಂಡಿದ್ದರು. ಕನ್ನಡ ಚಿತ್ರರಂಗ ಉದ್ಧಾರವಾಗಲಿ ಎಂದು ಪೂಜೆ ಪುನಸ್ಕಾರ ಮಾಡಿದರು. ದರ್ಶನ್ ಜೈಲಿನಲ್ಲಿರುವ ಕಾರಣದಿಂದ ಚಿತ್ರರಂಗವನ್ನೇ ನಂಬಿಕೊಂಡ ಅನೇಕ ಕುಟುಂಬಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಕೂಡ ಹೇಳಿದರು. ಇವರೆಲ್ಲರ ಪ್ರಾರ್ಥನೆಯ ಫಲವಾಗಿ ದರ್ಶನ್ ಸದ್ಯ ಹೊರಗಡೆ ಇದ್ದಾರೆ. ಇಂದು ತಮ್ಮ ಬರ್ತ್ ಡೇಯನ್ನು ಕೂಡ ಆಚರಿಸಿಕೊಳ್ಳುತ್ತಿದ್ದಾರೆ.
ಇನ್ನು, ಸ್ಟಾರ್‌ಗಳ ಜನುಮದಿನದ ಪ್ರಯುಕ್ತ ಹೊಸ ಚಿತ್ರಗಳ ಘೋಷಣೆಯಾಗುವುದು, ವರ್ಷಗಳ ಹಿಂದೆ ಘೋಷಣೆಯಾದ ಚಿತ್ರದ ಮಾಹಿತಿಯನ್ನು ನೀಡುವುದು ಚಿತ್ರರಂಗದ ವಾಡಿಕೆ. ಅದ್ರಂತೆ ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕೂಡ ಕೆಲ ಮಹತ್ವದ ಅಪ್‌ಡೇಟ್‌ಗಳನ್ನು ಆಯಾ ಚಿತ್ರತಂಡದವರು ನೀಡುತ್ತಿದ್ದಾರೆ. ಆ ಪೈಕಿ ತರುಣ್ ಸುಧೀರ್ ಕೂಡ ಒಬ್ಬರು.

ಹೌದು, ಅಸಲಿಗೆ ಕಳೆದ ವರ್ಷ ದರ್ಶನ್ ಅವರ ನಾಯಕತ್ವದಲ್ಲಿ ತರುಣ್ ಸುಧೀರ್ ತಮ್ಮ ಮತ್ತು ದರ್ಶನ್ ಕಾಂಬಿನೇಷನ್‌ನ ನಾಲ್ಕನೇ ಚಿತ್ರ ಅನೌನ್ಸ್ ಮಾಡಿದ್ದರು. ವೀರ ಸಿಂಧೂರ ಲಕ್ಷ್ಮಣನ ಕಥೆಯನ್ನು ಹೇಳಲು ರೆಡಿಯಾಗಿದ್ದರು. ಕಳೆದ ವರ್ಷದ ಫೋಸ್ಟರ್ ತೀವೃ ಕುತೂಹಲ ಕೆರಳಿಸಿತ್ತು ಕೂಡ.
ಆದರೆ, ಆ ನಂತರ ಉಮಾಪತಿ ಶ್ರೀನಿವಾಸ್ ಚಕಾರ ಎತ್ತಿದರು. ವೀರ ಸಿಂಧೂರ ಲಕ್ಷ್ಮಣನ ಶೀರ್ಷಿಕೆ ನನ್ನ ಬಳಿ ಇದೆ ಎಂದು ಹೇಳಿದ್ದರು. ದರ್ಶನ್ ಮತ್ತು ಉಮಾಪತಿ ಶ್ರೀನಿವಾಸ್ ನಡುವೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಈ ಸಮಯದಲ್ಲಿಯೇ ಮಾತಿನ ಚಕಮಕಿ ಕೂಡ ನಡೆದಿತ್ತು. ಆ ನಂತರ ದರ್ಶನ್ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾದರು. ಈ ಹಿನ್ನೆಲೆ ಅನೇಕರು ವೀರ ಸಿಂಧೂರ ಲಕ್ಷ್ಮಣನ ಕಥೆ ಮುಗೀತು ಎಂದೇ ಅಂದುಕೊಂಡಿದ್ದರು.
ಇನ್ನು ಮೊನ್ನೆ ಮೊನ್ನೆ ನಿರ್ಮಾಪಕರಿಗೆ ದರ್ಶನ್ ಅಡ್ವಾನ್ಸ್ ಹಣ ಮರಳಿ ನೀಡಿದ್ದಾರೆ ಎಂಬ ಸುದ್ದಿ ಹಬ್ಬಿದ್ದ ಹಿನ್ನೆಲೆ ಅನೇಕರು ದರ್ಶನ್ ವೀರ ಸಿಂಧೂರ ಲಕ್ಷ್ಮಣ ಚಿತ್ರದ ನಿರ್ಮಾಪಕರಾದ ಬಿ.ಸುರೇಶ್ ಮತ್ತು ಶೈಲಜಾ ನಾಗ್ ಅವರಿಗೆ ಹಣ ನೀಡಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಈಗ ಎಲ್ಲದಕ್ಕೂ ತರುಣ್ ಸುಧೀರ್ ಉತ್ತರ ನೀಡಿದ್ದಾರೆ. ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ವಿಶೇಷವಾದ ಫೋಸ್ಟರ್ ಬಿಟ್ಟಿದ್ದಾರೆ. ತಮ್ಮ ನೆಚ್ಚಿನ ನಾಯಕನಿಗೆ ಈ ಮೂಲಕ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಆದರೆ ಇದೇ ಸಮಯದಲ್ಲಿ ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದ್ದಾರೆ ತರುಣ್ ಸುಧೀರ್.
ಹೌದು, ಆಗಲೇ ಹೇಳಿದಂತೆ ಕಳೆದ ವರ್ಷ ತರುಣ್ ಸುಧೀರ್ ವೀರ ಸಿಂಧೂರ ಲಕ್ಷ್ಮಣ ಚಿತ್ರವನ್ನು ಘೋಷಿಸಿದ್ದರು. ಆದರೆ ಇಂದು ಬಿಡುಗಡೆ ಮಾಡಲಾದ ದರ್ಶನ್ ಅಭಿನಯದ 59ನೇ ಚಿತ್ರದ ಪೋಸ್ಟರ್‌ನಲ್ಲಿ ಎಲ್ಲಿಯೂ ವೀರ ಸಿಂಧೂರ ಲಕ್ಷ್ಮಣನ ಉಲ್ಲೇಖ ಇಲ್ಲ. ಬದಲಿಗೆ ರಕ್ತ ಸಿಕ್ತವಾದ ಕೈ ಇದೆ ಅಷ್ಟೇ. ಹೀಗಾಗಿಯೇ ದರ್ಶನ್ ಅವರಿಗೆ ತರುಣ್ ಸುಧೀರ್ ಈಗ ಬೇರೆ ಕಥೆ ಮಾಡಿದ್ದಾರಾ ಅಥವಾ ಬಿಡುಗಡೆ ಮಾಡಲಾದ ಫೋಸ್ಟರ್ ವೀರ ಸಿಂಧೂರ ಲಕ್ಷ್ಮಣ ಚಿತ್ರಕ್ಕೆ ಸಂಬಂಧಿಸಿದ್ದಾ ? ಎನ್ನುವ ಪ್ರಶ್ನೆ ಈಗ ಅನೇಕರನ್ನು ಕಾಡುತ್ತಿದೆ. ವೀರ ಸಿಂಧೂರ ಲಕ್ಷ್ಮಣ ಚಿತ್ರವನ್ನು ಕೈ ಬಿಟ್ಟು ಮತ್ತೊಂದು ಕಮರ್ಷಿಯಲ್ ಚಿತ್ರಕ್ಕೆ ತರುಣ್ ಸುಧೀರ್ ಕೈ ಹಾಕಿದ್ದಾರಾ ಎನ್ನುವ ಅನುಮಾನಕ್ಕೆ ಕೂಡ ಈ ಫೋಸ್ಟರ್ ಎಡೆ ಮಾಡಿ ಕೊಟ್ಟಿದೆ. ನಿಜಕ್ಕೂ ದರ್ಶನ್ ಅವರನ್ನು ತರುಣ್ ಸುಧೀರ್ ವೀರ ಸಿಂಧೂರ ಲಕ್ಷ್ಮಣನ ರೂಪದಲ್ಲಿ ಬೆಳ್ಳಿ ಪರದೆಯ ಮೇಲೆ ತೋರಿಸುತ್ತಾರಾ ? ಉತ್ತರ ಖುದ್ದು ತರುಣ್ ಸುಧೀರ್ ಅವರೇ ನೀಡಬೇಕು.


Click it and Unblock the Notifications











