ದರ್ಶನ್ ಅಭಿಮಾನಿಗಳಿಗೆ ಸಿಹಿಸುದ್ದಿ: ಕೊನೆಗೂ ಆ ಪರೀಕ್ಷೆ ಪಾಸ್ ಆಗಿ ಬಂದ 'ಕಾಟೇರ'
'ಸಲಾರ್', 'ಡಂಕಿ' ಸಿನಿಮಾಗಳ ರಿಲೀಸ್ ಬೆನ್ನಲ್ಲೇ ಮುಂದಿನ ವಾರ 'ಕಾಟೇರ' ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಕಾತರದಿಂದ ಚಿತ್ರವನ್ನು ಸ್ವಾಗತಿಸಲು ಕಾಯುತ್ತಿದ್ದಾರೆ. ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಚಿತ್ರತಂಡ ಕೂಡ ಕೊನೆ ಕ್ಷಣದ ಕೆಲಸಗಳಲ್ಲಿ ನಿರತವಾಗಿದೆ.
ತರುಣ್ ಸುಧೀರ್ ನಿರ್ದೇಶನದ ಹಳ್ಳಿ ಸೊಗಡಿನ ಸಿನಿಮಾ 'ಕಾಟೇರ'. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದಲ್ಲಿ ಆರಾಧನಾ ನಾಯಕಿಯಾಗಿ ನಟಿಸಿದ್ದಾರೆ. ಇತ್ತೀಚೆಗೆ ಬಂದ ಚಿತ್ರದ ಟ್ರೈಲರ್ ಸೂಪರ್ ಹಿಟ್ ಆಗಿದೆ. ಒಂದು ಕೋಟಿ 70 ಲಕ್ಷಕ್ಕೂ ಅಧಿಕ ವೀವ್ಸ್ ಸಾಧಿಸಿದೆ. ಸಾಕಷ್ಟು ಸರ್‌ಪ್ರೈಸ್ ಎಲಿಮೆಂಟ್ಸ್ ಜೊತೆಗೆ ಟ್ರೈಲರ್ ಅಭಿಮಾನಿಗಳ ಮನಗೆದ್ದಿತ್ತು. ಇದೀಗ ಚಿತ್ರದ 3ನೇ ಹಾಡಿನ ಬಿಡುಗಡೆಗೆ ವೇದಿಕೆ ಸಿದ್ಧವಾಗುತ್ತಿದೆ. ಮಂಡ್ಯದಲ್ಲಿ ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

'ಕ್ರಾಂತಿ' ಸಿನಿಮಾ ಬಳಿಕ 'ಕಾಟೇರ' ಸಿನಿಮಾ ತೆರೆಗೆ ಬರ್ತಿದೆ. ಸಿನಿಮಾ ಔಟ್‌ಫುಟ್ ನೋಡಿ ಖುಷಿಯಾಗಿರುವ ನಿರ್ಮಾಪಕರು ಮುಂದಿನ ವರ್ಷ ಬರಬೇಕಿದ್ದ ಚಿತ್ರವನ್ನು ಈ ವರ್ಷವೇ ತೆರೆಗೆ ತರಲು ಮನಸ್ಸು ಮಾಡಿದ್ದಾರೆ. ಇದೀಗ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಕೂಡ ಸಿಕ್ಕಿದೆ. ಕೊಂಚ ಹಿಂಸೆ ಇದ್ದರೂ ಮನೆಮಂದಿಯೆಲ್ಲಾ ಸಿನಿಮಾ ನೋಡಬಹುದು ಎಂದು ಸೆನ್ಸಾರ್ ಮಂಡಳಿ ಹೇಳಿದೆ.
ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿರುವ ಸಿನಿಮಾ ಡಿಸೆಂಬರ್ 29ಕ್ಕೆ ಬಿಡುಗಡೆಗೆ ಸಜ್ಜಾಗುತ್ತಿದೆ. ಬೆಂಗಳೂರಿನ ಸೆನ್ಸಾರ್ ಮಂಡಳಿ ಕಚೇರಿಯಲ್ಲಿ ಕನ್ನಡ ಸಿನಿಮಾಗಳು ಸೆನ್ಸಾರ್ ಆಗುವ ವಿಚಾರದಲ್ಲಿ ಇತ್ತೀಚೆಗೆ ಗೊಂದಲ ಶುರುವಾಗಿತ್ತು. ಲಂಚ ಪಡೆಯುತ್ತಿದ್ದ ಆರೋಪದಲ್ಲಿ ಸೆನ್ಸಾರ್ ಮಂಡಳಿ ಅಧಿಕಾರಿಯಾಗಿದ್ದ ಪ್ರಶಾಂತ್ ಕುಮಾರ್ ಸೇರಿ ಮೂವರನ್ನು ಬಂಧಿಸಲಾಗಿತ್ತು. ಹಾಗಾಗಿ ಸೆನ್ಸಾರ್ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. 'ಕಾಟೇರ' ಸಿನಿಮಾ ಸೆನ್ಸಾರ್‌ಗಾಗಿ ಅಪ್ಲೇ ಮಾಡಿದ್ದ ಸಂದರ್ಭದಲ್ಲೇ ಈ ರೀತಿ ಆಗಿದ್ದು ಕೊಂಚ ಗೊಂದಲಕ್ಕೆ ಕಾರಣವಾಗಿತ್ತು.
'ಕಾಟೇರ' ಚಿತ್ರಕ್ಕೆ ಯಾವಾಗ ಸೆನ್ಸಾರ್ ಸರ್ಟಿಫಿಕೇಟ್ ಸಿಗುತ್ತದೆ? ಹೇಳಿದಂತೆ ಡಿಸೆಂಬರ್ 29ಕ್ಕೆ ಸಿನಿಮಾ ರಿಲೀಸ್ ಆಗುತ್ತಾ? ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿತ್ತು. ಕೊನೆಗೂ ಚಿತ್ರ ಸೆನ್ಸಾರ್‌ನಲ್ಲಿ ಪಾಸ್ ಆಗಿದ್ದು ವರ್ಷಾಂತ್ಯಕ್ಕೆ 'ಕಾಟೇರ'ನ ಆರ್ಭಟಕ್ಕೆ ಯಾವುದೇ ಸಮಸ್ಯೆ ಇಲ್ಲ ಎನ್ನುವಂತಾಗಿದೆ. ದರ್ಶನ್ ಅಭಿಮಾನಿಗಳಿಗೂ ಈ ಸುದ್ದಿ ಖುಷಿ ಕೊಟ್ಟಿದೆ. ಮನೆಮಂದಿಯೆಲ್ಲಾ ಬಂದು 'ಕಾಟೇರ' ಸಿನಿಮಾ ನೋಡಿ ಎಂದು ಮನವಿ ಮಾಡುತ್ತಿದ್ದಾರೆ.
'ರಾಬರ್ಟ್' ಸಿನಿಮಾ ಬಳಿಕ ದರ್ಶನ್ ಹಾಗೂ ತರುಣ್ ಸುಧೀರ್ ಮತ್ತೊಮ್ಮೆ 'ಕಾಟೇರ' ಚಿತ್ರಕ್ಕಾಗಿ ಕೈಜೋಡಿಸಿದ್ದಾರೆ. ಇದು ರೆಗ್ಯುಲರ್ ಕಮರ್ಷಿಯಲ್ ಸಿನಿಮಾ ಅಲ್ಲ. ಮಾಸ್ ಎಲಿಮೆಂಟ್ಸ್ ಜೊತೆಗೆ ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ಕಟ್ಟಿಕೊಡಲಾಗಿದೆ. ಹಾಗಾಗಿ ಸಹಜವಾಗಿಯೇ ಸಿನಿಮಾ ನಿರೀಕ್ಷೆ ಮೂಡಿಸಿದ್ದು ಟ್ರೈಲರ್ ನೋಡಿ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ.
ನಟ ದರ್ಶನ್‌ನ ಚಿತ್ರದಲ್ಲಿ ತರುಣ್ ಬೇರೆಯದ್ದೇ ರೀತಿಯಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಬೇರೆ ಬೇರೆ ಶೇಡ್‌ಗಳಿರುವ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಕುಲುಮೆಯಲ್ಲಿ ಕೆಲಸ ಮಾಡುವ ವ್ಯಕ್ತಿ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ಮಿಂಚಿದ್ದಾರೆ. 70ರ ದಶಕದ ಕಥೆ ಚಿತ್ರದಲ್ಲಿದೆ. 2 ಹಳ್ಳಿಗಳ ಸೆಟ್ ಹಾಕಿ ಚಿತ್ರವನ್ನು ಸೊಗಸಾಗಿ ಸೆರೆ ಹಿಡಿಯಲಾಗಿದೆ.
ಅಚ್ಯುತ್ ಕುಮಾರ್, ಜಗಪತಿ ಬಾಬು, ದೊಡ್ಡಣ್ಣ, ಅವಿನಾಶ್, ಬಿರಾದಾರ್, ಕುಮಾರ್ ಗೋವಿಂದ್, ಶ್ರುತಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಹರಿಕೃಷ್ಣ ಸಂಗೀತದದಲ್ಲಿ ಚಿತ್ರದ ಎರಡು ಹಾಡುಗಳು ರಿಲೀಸ್ ಆಗಿದೆ. ರೈತರ ದಿನದ ವಿಶೇಷವಾಗಿ ಮಂಡ್ಯದಲ್ಲಿ 3ನೇ ಹಾಡು ಅನಾವರಣವಾಗಲಿದೆ. ದೊಡ್ಡದಾಗಿ ಪ್ರೀ ರಿಲೀಸ್ ಈವೆಂಟ್ ನಡೆಸಲಾಗುತ್ತಿದೆ.


Click it and Unblock the Notifications











