ತರುಣ್- ಸೋನಲ್ ಜೋಡಿಗೆ ಆಶೀರ್ವದಿಸಿದ ದರ್ಶನ್; ಫೋಟೋ ವೈರಲ್
ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮಂಥೆರೋ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿದೆ. 3 ದಿನಗಳ ಕಾಲ ವಿವಿಧ ಮದುವೆ ಶಾಸ್ತ್ರಗಳು ನಡೆದವು. ಚಿತ್ರರಂಗದ ಹಲವರು ಮದುವೆ ಸಮಾರಂಭಕ್ಕೆ ಹಾಜರಾಗಿ ನವ ವಧು-ವರರನ್ನು ಆಶೀರ್ವದಿಸಿದರು. ಕೆಂಗೇರಿ ಬಳಿಯ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ತಾರಾಲೋಕವೇ ಧರೆಗಿಳಿದಿತ್ತು.
'ರಾಬರ್ಟ್' ಚಿತ್ರದಲ್ಲಿ ತರುಣ್ ಹಾಗೂ ಸೋನಲ್ ಒಟ್ಟಿಗೆ ಕೆಲಸ ಮಾಡಿದ್ದರು. ಅದೇ ಸಮಯದಲ್ಲಿ ಇಬ್ಬರ ನಡುವೆ ಪರಿಚಯ ಶುರುವಾಗಿತ್ತು. ಆ ಸ್ನೇಹ ಮುಂದೆ ಪ್ರೀತಿ ತಿರುಗಿ ಇದೀಗ ಮದುವೆಯ ಮುದ್ರೆ ಬಿದ್ದಿದೆ. ಆದರೆ 'ರಾಬರ್ಟ್' ಸಿನಿಮಾ ಸಮಯದಲ್ಲಿ ನಮ್ಮಿಬ್ಬರನ್ನು ದರ್ಶನ್ ರೇಗಿಸುತ್ತಿದ್ದರು. ಆಗ ನಮ್ಮಿಬ್ಬರ ನಡುವೆ ಯಾವುದೇ ಪ್ರೀತಿ ಇರಲಿಲ್ಲ. 'ಕಾಟೇರ' ಸಿನಿಮಾ ಸಮಯದಲ್ಲಿ ಇಬ್ಬರೂ ಒಬ್ಬರನ್ನು ಒಬ್ಬರು ಅರ್ಥಮಾಡಿಕೊಂಡೆವು ಎಂದು ತರುಣ್ ಹೇಳಿದ್ದರು.

ತರುಣ್ ಹಾಗೂ ಸೋನಲ್ ಮದುವೆ ನೆರವೇರಿದೆ. ಬಹಳ ಅದ್ಧೂರಿಯಾಗಿ ಮದುವೆ ಕಾರ್ಯಕ್ರಮ ನಡೆಯಿತು. ಆದರೆ ಇಡೀ ಸಮಾರಂಭದಲ್ಲಿ ಅದೊಂದು ಕೊರತೆ ಎದ್ದು ಕಾಣುತ್ತಿತ್ತು ಎನ್ನುವುದು ಕೆಲವರ ಅಭಿಪ್ರಾಯ. ಅದು ನಟ ದರ್ಶನ್ ಉಪಸ್ಥಿತಿ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದಾರೆ. ಪ್ರಕರಣದಲ್ಲಿ ಆರೋಪಿಯಾಗಿ 50 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ದರ್ಶನ್- ತರುಣ್ ಸ್ನೇಹ ಎಂಥದ್ದು ಎನ್ನುವುದು ಗೊತ್ತೇಯಿದೆ. ಇನ್ನು ಸೋನಾಲ್ ಮಂಥೆರೊಗೂ ದರ್ಶನ್ ಆಪ್ತರಾಗಿದ್ದರು. ಹಾಗಾಗಿ ಮದುವೆ ಮನೆಯಲ್ಲಿ ಅವರು ಇದ್ದದ್ದರೆ ಚೆನ್ನಾಗಿತ್ತು ಎಂದು ತರುಣ್, ಸೋನಲ್, ನಂದಕಿಶೋರ್ ಆದಿಯಾಗಿ ಹಲವರು ಹೇಳಿದ್ದಾರೆ. ದರ್ಶನ್ ಅಭಿಮಾನಿಗಳಂತೂ ಮದುವೆ ಸಮಾರಂಭದಲ್ಲಿ ನಮ್ಮ ಬಾಸ್ ಇದ್ದಿದ್ದರೆ ಚೆನ್ನಾಗಿತ್ತು ಎಂದು ಬೇಸರಿಸಿಕೊಂಡಿದ್ದಾರೆ.
ಈ ಅದ್ಧೂರಿ ಮದುವೆ ಸಮಾರಂಭದಲ್ಲಿ ದರ್ಶನ್ ಓಡಾಡಿಕೊಂಡು ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು. ಮದುವೆ ಫೋಟೊ, ವೀಡಿಯೋಗಳಲ್ಲಿ ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಅಭಿಮಾನಿಗಳು ಕಾಮೆಂಟ್ಸ್ ಮಾಡುತ್ತಿದ್ದಾರೆ. ಒಂದರ್ಥದಲ್ಲಿ ತರುಣ್- ಸೋನಲ್ ಮದುವೆಗೆ ದರ್ಶನ್ ಮುಖ್ಯ ಕಾರಣ ಎನ್ನಬಹುದು. ತರುಣ್ ತಾಯಿ ಅವರನ್ನು ಕೂಡ ಮದುವೆಗೆ ದರ್ಶನ ಒಪ್ಪಿಸಿದ್ದರು.

ತರುಣ್ ಸುಧೀರ್ ಮೊದಲಿಗೆ ಹೋಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಭೇಟಿ ಆಗಿ ಮದುವೆ ವಿಚಾರ ತಿಳಿಸಿದ್ದರು. ಆ ಬಳಿಕವೇ ಬಂದು ಮಾಧ್ಯಮಗಳ ಮುಂದೆ ಈ ಬಗ್ಗೆ ಮಾತನಾಡಿದ್ದರು. ಯಾವುದೇ ಕಾರಣಕ್ಕೂ ಮದುವೆ ದಿನಾಂಕ ಬದಲಿಸಬೇಕು ಎಂದು ದರ್ಶನ್ ಸರ್ ಸಲಹೆ ನೀಡಿದ್ದಾಗಿ ಹೇಳಿದ್ದರು. ಅವರು ಹೇಳಿದ್ದರೆ ಮದುವೆ ದಿನಾಂಕ ಬದಲಿಸಿಕೊಳ್ಳುತ್ತಿದ್ದೆ. ನಮ್ಮ ಮದುವೆ ವೇಳೆ ಅವರು ಹೊರ ಬರುವ ನಿರೀಕ್ಷೆ ಇದೆ ಎಂದು ತರುಣ್ ಹೇಳಿದ್ದರು.
ಮದುವೆ ಫೋಟೊಗಳಲ್ಲಿ ದರ್ಶನ್‌ನ ಮಿಸ್ ಮಾಡಿಕೊಳ್ಳುತ್ತಿರುವ ಅಭಿಮಾನಿಗಳು ಎಐ ಫೋಟೊಗಳನ್ನು ವೈರಲ್ ಮಾಡುತ್ತಿದ್ದಾರೆ. ದರ್ಶನ್ ಕೂಡ ಮದುವೆ ಸಮಾರಂಭದಲ್ಲಿ ಭಾಗಿ ಆಗಿರುವಂತೆ ಅಭಿಮಾನಿಯೊಬ್ಬರು ಮಾರ್ಪ್ ಮಾಡಿರುವ ಫೋಟೊ ವೈರಲ್ ಆಗುತ್ತಿದೆ. ನವ ವಧು-ವರರ ಜೊತೆ ನೀಲಿ ಅಂಗಿ, ಪಂಚೆಯಲ್ಲಿ ದರ್ಶನ್ ಪೋಸ್ ಕೊಟ್ಟಿರುವಂತೆ ಫೋಟೊ ಕ್ರಿಯೇಟ್ ಮಾಡಲಾಗಿದೆ. ಕೆಲವರು ಇದನ್ನು ಮೆಚ್ಚಿಕೊಳ್ಳುತ್ತಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಮತ್ತೊಂದು ಪತ್ನಿ ವಿಜಯಲಕ್ಷ್ಮಿ ಸೇರಿದಂತೆ ಆಪ್ತರು ಹಾಗೂ ಅಭಿಮಾನಿಗಳು ದರ್ಶನ್ ಶೀಘ್ರ ಬಿಡುಗಡೆಗೆ ದೇವರ ಮೊರೆ ಹೋಗುತ್ತಿದ್ದಾರೆ. ವಿವಿಧ ದೇವಸ್ಥಾನಗಳಲ್ಲಿ ಪೂಜೆ ಮಾಡಿಸಿ ಪ್ರಾರ್ಥಿಸುತ್ತಿದ್ದಾರೆ. ಶಾರ್ಜ್‌ಶೀಟ್ ಹಾಕಿದ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಎನ್ನುವ ಚರ್ಚೆಯೂ ನಡೆಯುತ್ತಿದೆ.


Click it and Unblock the Notifications











