ನಿಮ್ ಅಪ್ಪನ್ ಹೆಸ್ರು ಉಳುಸ್ಬುಟ್ಟೆ ಕಣಯ್ಯ; ದರ್ಶನ್ ಹುಟ್ಟುಹಬ್ಬಕ್ಕೆ ಇಂಟ್ರೆಸ್ಟಿಂಗ್ ಸಿಡಿಪಿ ಬಿಟ್ಟ ಫ್ಯಾನ್ಸ್
ಬಾಕ್ಸಾಫೀಸ್ ಸುಲ್ತಾನ್ ದರ್ಶನ್ ಹುಟ್ಟುಹಬ್ಬಕ್ಕೆ ಇನ್ನೊಂದು ದಿನ ಮಾತ್ರ ಬಾಕಿಯಿದೆ. ಈಗಾಗಲೇ ಅಭಿಮಾನಿಗಳ ಸಂಭ್ರಮಾಚರಣೆ ಶುರುವಾಗಿದೆ. ಸದ್ಯ ಈ ವರ್ಷದ ದರ್ಶನ್ ಬರ್ತ್‌ಡೇ ಕಾಮನ್ ಡಿಪಿ ಸಖತ್ ಸೌಂಡ್ ಮಾಡ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ರಾರಾಜಿಸುತ್ತಿದೆ.
ಸ್ಟಾರ್ ನಟರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸ್ಪೆಷಲ್ ಡಿಪಿ ಮಾಡೋದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ದರ್ಶನ್ ಅಭಿಮಾನಿಗಳಂತೂ ಇದನ್ನು ಮಿಸ್ ಮಾಡುವುದಿಲ್ಲ. ದೊಡ್ಡಮಟ್ಟದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿ ದಾಖಲೆ ಬರೆದಿರುವುದು ಇದೆ. ಈ ವರ್ಷವೂ ಇಂಟ್ರೆಸ್ಟಿಂಗ್ ಡಿಪಿ ಸಿದ್ಧಪಡಿಸಿದ್ದಾರೆ. ಸ್ಯಾಂಡಲ್‌ವುಡ್ ತಾರೆಯರು ಸಹ ಅದನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ.

ಇತ್ತೀಚೆಗೆ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಬಿಡುಗಡೆಯಾಗಿ ಭರ್ಜರಿ ಸಕ್ಸಸ್ ಕಂಡಿದೆ. ಸದ್ಯ ಓಟಿಟಿಯಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಈ ಚಿತ್ರದ ಹಿರಣ್ಯ ಕಶಿಪು ನಾಟಕ ಸನ್ನಿವೇಶದಲ್ಲಿನ ದರ್ಶನ್ ಫೋಟೊ ಬಳಸಿಕೊಂಡು ಕಾಮನ್ ಡಿಪಿ ಸಿದ್ಧಪಡಿಸಲಾಗಿದೆ. ಅದು ಅಭಿಮಾನಿಗಳಿಗೆ ಬಹಳ ಇಷ್ಟವಾಗಿದೆ.
ಪರಿವರ್ತನ್ ಎನ್ನುವ ಡಿಸೈನರ್ ಈ ಸ್ಪೆಷಲ್ ಸಿಡಿಪಿ ಡಿಸೈನ್ ಮಾಡಿದ್ದಾರೆ. 'ಕಾಟೇರ' ಚಿತ್ರದಲ್ಲಿ ಚೊಂಗ್ಲಾ ಪಾತ್ರದಲ್ಲಿ ಹಿರಿಯ ನಟ ಬಿರಾದಾರ್ ನಟಿಸಿದ್ದರು. ಮಾತು ಬಾರದ ವಿಶೇಷ ಚೇತನ ಚೊಂಗ್ಲಗೆ ನಾಟಕದಲ್ಲಿ ನಟಿಸಬೇಕು. ಅದರಲ್ಲೂ ಹಿರಣ್ಯ ಕಶಿಪು ಆಗಿ ಲೀಡ್ ರೋಲ್ ಮಾಡಬೇಕು ಎನ್ನುವ ಆಸೆ ಇರುತ್ತದೆ. ಆದರೆ ಮಾತನಾಡಲು ಸಾಧ್ಯವಾಗದ ಕಾರಣ ಆ ಅವಕಾಶ ಸಿಕ್ಕಿರುವುದಿಲ್ಲ. ಆದರೆ ಆತನ ಆಸೆ ಅರಿತ ಕಾಟೇರ ವೇದಿಕೆ ಹಿಂದೆ ನಿಂತು ಹಿರಣ್ಯ ಕಶಿಪು ಡೈಲಾಗ್ ಹೇಳಿದರೆ ವೇದಿಕೆ ಮೇಲೆ ಲಿಪ್‌ಸಿಂಕ್ ಮಾಡಿ ನಟಿಸಿ ಚೊಂಗ್ಲ ಚಪ್ಪಾಳೆ ಗಿಟ್ಟಿಸುತ್ತಾನೆ.
ಆ ನಾಟಕದಲ್ಲಿ ನಿಜವಾಗಿಯೂ ಹಿರಣ್ಯಕಶಿಪು ಆಗಿ ನಟಿಸಬೇಕಿದ್ದದ್ದು ಕಾಟೇರನ ಬಾವ ಮಾದೇವಣ್ಣ. ಆತನನ್ನು ಕಟ್ಟಿಹಾಕಿ ಕಾಟೇರ ಚೊಂಗ್ಲ ಆಸೆ ನೆರವೇರಿಸುತ್ತಾನೆ. ವೇದಿಕೆಯಲ್ಲಿ ಚೊಂಗ್ಲನ ಅಭಿನಯ ನೋಡಿದ ಊರಿನ ಜನ ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಾರೆ. ದರ್ಶನ್ ಹಿರಣ್ಯಕಶಿಪು ಡೈಲಾಗ್‌ಗೆ ಥಿಯೇಟರ್‌ಗಳಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ನಾಟಕದ ಬಳಿಕ ಮಾದೇವಣ್ಣ ಬಂದು ಬಾಮೈದ ನಿಮ್ಮ ಅಪ್ಪನ ಹೆಸರು ಉಳಿಸಿಬಿಟ್ಟೆ ಕಣ್ಲಾ ಎಂದು ಹೇಳುತ್ತಾನೆ.

ಕಾಟೇರ ಚಿತ್ರದ ಅಷ್ಟೂ ಡೈಲಾಗ್ಸ್ ಕಥೆಗೆ ಪೂರಕವಾಗಿದೆ. ಕಥೆಯಿಂದ ಆಚೆ ಹೋಗಿರಲಿಲ್ಲ. ಆದರೆ ಇದೊಂದು ಡೈಲಾಗ್ ಮಾತ್ರ ದರ್ಶನ್ ನಿಜ ಜೀವನಕ್ಕೂ ಹತ್ತಿರವಾಗುವಂತಿತ್ತು. ಅದೇ ಕಾರಣಕ್ಕೆ ಅಭಿಮಾನಿಗಳಿಗೆ ಹೆಚ್ಚು ಇಷ್ಟವಾಗಿತ್ತು. ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ಪುತ್ರ ದರ್ಶನ್ ಇವತ್ತು ಸ್ಟಾರ್ ನಟನಾಗಿ ಮೆರೆಯುತ್ತಿದ್ದಾರೆ. ತೂಗುದೀಪ ಶ್ರೀನಿವಾಸ್ ಪೌರಾಣಿಕ ಪಾತ್ರಗಳಲ್ಲಿ ಹೆಚ್ಚು ನಟಿಸಿದ್ದರು. ತಮ್ಮ ಕಂಚಿನ ಕಂಠದಿಂದ ಪಾತ್ರಗಳಿಗೆ ಗತ್ತು ತರುತ್ತಿದ್ದರು. ದರ್ಶನ್ ಹಿರಣ್ಯಕಶಿಪು ಡೈಲಾಗ್ ಕೂಡ ಮೆಚ್ಚುಗೆಗೆ ಪಾತ್ರವಾಗಿದೆ.
ಚಿತ್ರದಲ್ಲಿ ಮಾದೇವಣ್ಣ ಹೇಳಿದ ಡೈಲಾಗ್ ಅಭಿಮಾನಿಗಳೇ ನೆಚ್ಚಿನ ನಟನಿಗೆ ಹೇಳಿದಂತಿತ್ತು. ಇದೇ ಥೀಮ್‌ನಲ್ಲಿ ಈ ವರ್ಷ ದರ್ಶನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಕಾಮನ್ ಡಿಪಿ ಮಾಡಿದ್ದಾರೆ. ನಾಟಕದ ರಂಗಸಜ್ಜಿಕೆ ಮುಂದೆ ಕಾಟೇರ ದರ್ಶನ್ ಗದೆ ಹಿಡಿದು ನಿಂತಿದ್ದಾರೆ. ಹಿಂದೆ ತೂಗುದೀಪ ಶ್ರೀನಿವಾಸ್ ಪೌರಾಣಿಕ ನಾಟಕದ ವೇಷಧಾರಿಯಾಗಿ ಕಟೌಟ್ ರಾರಾಜಿಸುತ್ತಿದೆ. 'ಮರೆಯಲಾಗದ ಮಾಣಕ್ಯ' ಎಂದು ಬರೆಯಲಾಗಿದೆ. ಇನ್ನು ನಾಟಕ ಮಂಡಲಿಗೆ ತೂಗುದೀಪ ಕಲಾಮಂಡಲಿ ಎನ್ನುವ ಹೆಸರಿದೆ. ದರ್ಶನ್‌ನ ನೋಡಿ ಅಭಿಮಾನಿಗಳು "ನಿಮ್ ಅಪ್ಪನ್ ಹೆಸ್ರು ಉಳುಸ್ಬುಟ್ಟೆ ಕಣಯ್ಯ" ಎಂದು ಕೈ ಎತ್ತಿ ಮುಗಿಯುವಂತೆ ಡಿಪಿ ಡಿಸೈನ್ ಮಾಡಲಾಗಿದೆ. ನಟನೆಯಲ್ಲಿ ತಂದೆಗೆ ತಕ್ಕ ಮಗ ಎನಿಸಿಕೊಂಡುಬಿಟ್ಟೆ ಎಂದು ಈ ಮೂಲಕ ಅಭಿಮಾನಿಗಳು ನೆಚ್ಚಿನ ನಟನನ್ನು ಕೊಂಡಾಡುತ್ತಿದ್ದಾರೆ.
ಅಭಿಮಾನಿಗಳು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ಸ್ಪೆಷಲ್ ಡಿಪಿ ಹಾಕಿಕೊಂಡಿದ್ದಾರೆ. ಜೊತೆಗೆ ಟ್ವಿಟ್ಟರ್‌ನಲ್ಲಿ #DBossBirthdayCDP ಟ್ರೆಂಡ್ ಮಾಡುತ್ತಿದ್ದಾರೆ. ಸದ್ಯ ದರ್ಶನ್ 'ಡೆವಿಲ್' ಚಿತ್ರದಲ್ಲಿ ನಟಿಸುತ್ತಿದ್ದು ಜಬರ್‌ದಸ್ತ್ ಟೀಸರ್ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ.


Click it and Unblock the Notifications











