ಸ್ವಯಂಕೃತ ಅಪರಾಧಗಳಿಂದ ಹಾಳಾದ ಸಾರಥಿ ; ಡೆವಿಲ್ ಇಮೇಜ್ ಕಂಪ್ಲೀಟ್ ಡ್ಯಾಮೇಜ್...!
ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಎಂಬ ಮಾತು ದರ್ಶನ್‌ಗೆ ಅಕ್ಷರಶಃ ಅನ್ವಯವಾಗುತ್ತದೆ. ಯಾಕೆಂದರೆ ಸಾರಥಿ ನಂತರ ದರ್ಶನ್ ಯಾವತ್ತು ಸಜ್ಜನರ ಸಹವಾಸವನ್ನ ಮಾಡ್ಲೇ ಇಲ್ಲ. ಮಾಡಿದ್ದರೆ ಈ ದಯನೀಯ ಸ್ಥಿತಿಯಲ್ಲಿ ಖಂಡಿತವಾಗಿಯೂ ಇರುತ್ತಿರಲಿಲ್ಲ.
ಹೌದು. ನಿಮಗೆ ಗೊತ್ತಿರಲಿ, ದರ್ಶನ್ ಮೊದಲು ಈ ತರ ಇರಲಿಲ್ಲ. ಅವರ ಮುಖದಲ್ಲಿ ಒಂದು ಮುಗ್ದತೆ ಇತ್ತು. ಕಳೆ ಇತ್ತು. ಕೆಟ್ಟ ಹವ್ಯಾಸ ಇರಲಿಲ್ಲ. ಬೇರೆ ಅಭ್ಯಾಸವೂ ಇರಲಿಲ್ಲ.ಎಲ್ಲರನ್ನೂ ಗೌರವದಿಂದ ಕಾಣುವ ವ್ಯಕ್ತಿತ್ವ ಈತನದ್ದಾಗಿತ್ತು.

ಇನ್ನೂ ಆ ಕಾಲದಲ್ಲಿ ಇವರ ಸುತ್ತ ಮುತ್ತ ಇದ್ದವರು ಕೂಡ ದರ್ಶನ್ ಅವರ ಒಳಿತನ್ನೇ ಬಯಸುತ್ತಿದ್ದರು. ಯಾವುದು ಸರಿ .. ಯಾವುದು ತಪ್ಪು .. ಎನ್ನುವುದನ್ನ ದರ್ಶನ್‌ಗೆ ಹೇಳುತ್ತಿದ್ದರು. ಆದರೆ .. ಹಣ ಬಲ.. ಅಧಿಕಾರದ ಬಲ.. ಎಂಥವರ ತಲೆಯನ್ನೂ ತಿರುಗಿಸುತ್ತೆ. ಇದಕ್ಕೆ ಜ್ವಲಂತ ಉದಾಹರಣೆಯಂತೆ ಇರುವ ದರ್ಶನ್‌ಗೆ 2004ರಲ್ಲಿ ಯೋಗ ಮತ್ತೊಮ್ಮೆ ಕೈ ಹಿಡಿದಿತ್ತು. ಚಿತ್ರಾನ್ನಾದಂತೆ ಇದ್ದ ಕಲಾಸಿಪಾಳ್ಯ ಎಂಬ ಸಿನಿಮಾ ಸೂಪರ್ ಸ್ಟಾರ್ ಪಟ್ಟಕ್ಕೇರಿಸಿತ್ತು. ದರ್ಶನ್‌ಗೆ ಆಗ ಕೇವಲ 27-28ರ ಹರೆಯವಷ್ಟೇ.
30 ದಾಟುವ ಮೊದಲು ಸಿಕ್ಕ ಈ ಜನಪ್ರಿಯತೆಯಿಂದ ಆಕಾಶಕ್ಕೆ ಏಣಿ ಹಾಕಿದ ದರ್ಶನ್, ಛಾಯಾಗ್ರಾಹಕ ಮತ್ತು ನಿರ್ಮಾಪಕ ಅಣಜಿ ನಾಗರಾಜ್ ಸೇರಿ ತನ್ನ ಸುತ್ತ ಇದ್ದಅನೇಕ ಹಿತೈಶಿಗಳಿಂದ ದೂರವಾದ. ಹಣದ ಅಮಲು .. ಅಳತೆಗೂ ಮೀರಿದ ಜನಪ್ರಿಯತೆ .. ಸುತ್ತಲು ಮೊಳಗುವ ಜೈಕಾರದ ನಶೆಯಲ್ಲಿ ತೂರಾಡಲು ಶುರು ಮಾಡಿದ ದರ್ಶನ್, ಆ ನಂತರ ಹೆಣ್ಣಿನ ಹಿಂದೆ ಬಿದ್ದ. ತನ್ನ ಚಿತ್ರಕ್ಕೆ ಬಣ್ಣ ಹಚ್ಚಿದ್ದ ನಾಯಕಿ ಜೊತೆ ಲವ್ವು-ಡವ್ವು ಅಂತ ಶುರು ಮಾಡಿದ. ಇದನ್ನ ಪ್ರಶ್ನಿಸಿದ ಹೆಂಡ್ತಿ ವಿಜಯ ಲಕ್ಷ್ಮೀಗೆ ಸಾಯುವಂತೆ ಹೊಡೆದು ತನ್ನ ಪೌರುಷದ ಪ್ರದರ್ಶನವನ್ನಷ್ಟೇ ಅಲ್ಲ ತನ್ನ ವಿಕೃತಿಯ ಪ್ರದರ್ಶನವನ್ನೂ ಕೂಡ ಮಾಡಿದ್ದ. ಜೈಲು ಪಾಲಾಗಿ ಮತ್ತೆ ಮರಳಿ ಬಂದ.

ಜೈಲಿಂದ ಹೊರ ಬಂದ ನಂತರ ದರ್ಶನ್ ಬದಲಾಗ್ತಾನೇ ಎಂದೇ ಎಲ್ಲರು ಅಂದುಕೊಂಡಿದ್ದರು. ಆದರೆ.. ಆಗಿದ್ದೇ ಬೇರೆ. ಜೈಲಿಂದ ಹೊರಗೆ ಬಂದ ನಂತರ ದರ್ಶನ್‌ಗೆ ಭವ್ಯ ಸ್ವಾಗತ ಸಿಕ್ತು. ಸಾರಥಿ ಇತಿಹಾಸ ಬರೆಯಿತು. ಇದನ್ನೆಲ್ಲ ಕಂಡು ಹಿರಿ ಹಿರಿ ಹಿಗ್ಗಿದ ದರ್ಶನ್, ನಾನೇನು ಮಾಡಿದರೂ ಬಚಾವ್ ಆಗ್ಬಿಡ್ತೀನಿ ಎಂಬ ಭ್ರಮೆಯಲ್ಲಿ ತೇಲಲು ಶುರು ಮಾಡಿದ. ಇದಕ್ಕೆ ಪೂರಕ ಎಂಬಂತೆ ದರ್ಶನ್ ಕಾಲಿಟ್ಟ ಜಾಗದಲ್ಲಿ ಎಲ್ಲ ವಿವಾದದ ಕುರುಹುಗಳೇ ಸಿಗುತ್ತವೆ.
ಇಷ್ಟೆಲ್ಲ ಮಾಡಿದರೂ ಇಂದಲ್ಲ, ನಾಳೆ.. ಸರಿ ಹೋಗಬಹುದು ಎಂಬ ಭಾವನೆಯಲ್ಲಿ ಅಳೆದು ಉಳಿದ ಕೆಲ ಹಿತೈಶಿಗಳು ದರ್ಶನ್ ಜೊತೆಯಲ್ಲಿಯೇ ಇದ್ದರು. ಆ ಪೈಕಿ ಪಿಸ್ತಾ ಸೀನ ಕೂಡ ಒಬ್ಬರು. ಹೌದು.. ಪಿ. ಶ್ರೀನಿವಾಸ್ ಯಾನೆ ಪಿಸ್ತಾ ಸೀನ ಎಂದು ಕರೆಸಿಕೊಳ್ಳುತ್ತಿದ್ದ ವ್ಯಕ್ತಿ, ದರ್ಶನ್ ಎನ್ನುವ ಸ್ಟಾರ್ ನಟನ ದೇಖಾರೇಖಿ ನೋಡಿಕೊಳ್ಳುತ್ತಿದ್ದರು. ಅವರ ಮನೆ, ತೋಟ, ಸಿನಿಮಾ ಸೇರಿದಂತೆ ಸಕಲ ವ್ಯವಹಾರಗಳನ್ನೂ ಗಮನಿಸಿಕೊಳ್ಳುತ್ತಿದ್ದರು.

ಇನ್ನೂ.. ಒಂದು ಕಾಲಕ್ಕೆ ದರ್ಶನ್ ಲೈಟ್ ಬಾಯ್ ಆಗಿ ಕೆಲಸ ನಿರ್ವಹಿಸುವ ಸಂದರ್ಭ ಒದಗಿಬಂದಿತ್ತಲ್ಲಾ? ಆ ಟೈಮಲ್ಲಿ ದರ್ಶನ್ ಕಸುಬು ಮಾಡಿದ್ದು ಇದೇ ಪಿಸ್ತಾ ಸೀನ ಅವರ ಕೈ ಕೆಳಗೆ. ಯಾವಾಗ ಮೆಜೆಸ್ಟಿಕ್ ಸಿನಿಮಾ ಬಂದು, ಅದು ಹಿಟ್ ಆಗಿ ದರ್ಶನ್ ಅನ್ನೋ ನಟ ಸೂಪರ್ ಸ್ಟಾರ್ ಆಗುವ ಮಟ್ಟಕ್ಕೆ ಬೆಳೆದ್ನೋ ಆಗ ಸೀನ ಅವರನ್ನು ಕರೆದು ತನ್ನೊಟ್ಟಿಗೇ ಇರಿಸಿಕೊಂಡಿದ್ದ.
ಅಲ್ಲಿಂದ ಹೋದಲ್ಲಿ ಬಂದಲ್ಲಿ ದರ್ಶನ್ ಜೊತೆಗಿರುತ್ತಿದ್ದ, ಅವರ ಮನೆ ಬಳಿ ಹೋದ ಅಭಿಮಾನಿಗಳನ್ನೂ ಸಂಭಾಳಿಸುತ್ತಿದ್ದ, ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ, ಸಾರಥಿ ಸಿನಿಮಾದಿಂದ ಕಾರ್ಯಾರಂಭ ಮಾಡಿದ್ದ 'ತೂಗುದೀಪ ಯೂನಿಟ್ಟಿ'ಗೆ ಮುಖ್ಯಸ್ಥರಾಗಿದ್ದ ಪಿಸ್ತಾ ಸೀನ, ಅನೇಕ ಸಲ ದರ್ಶನ್‌ನ ಅನಾಹುತಗಳಿಂದ ಪಾರು ಮಾಡಿದ್ದರು. ಆದರೆ ಇವರ ಮೇಲೆ ಅದ್ಯಾರು ಫಿಟ್ಟಿಂಗ್ ಇಟ್ರೋ ಗೊತ್ತಿಲ್ಲ. ವರ್ಷಾನುವರ್ಷ ತನ್ನನ್ನ ಸಂಭಾಳಿಸಿದವರು, ನೋಡಿಕೊಂಡವರು ಎನ್ನುವುದನ್ನೂ ಮರೆತು ಪಿಸ್ತಾ ಸೀನ ಅವರನ್ನ ಮನೆಯಾಚೆ ಕಳಿಸಿದ ದರ್ಶನ್.

ಇದೆಲ್ಲದರ ನಡುವೆ ದರ್ಶನ್‌ಗೆ ಸುದೀಪ್ ಸಾಂಗತ್ಯ ಸಿಕ್ಕಿತ್ತು. ಆದರೆ.. ಒಣ ಅಹಂ, ಪ್ರತಿಷ್ಠೆಯಿಂದ ಆ ಸಂಬಂಧವನ್ನೂ ಕೂಡ ಕಡಿದುಕೊಂಡ. ಈ ನಡುವೆ ಆರಂಭದಲ್ಲಿ ಜೊತೆಯಲ್ಲಿದ್ದ ಓಂ ಪ್ರಕಾಶ್ ರಾವ್, ಸೃಜನ್ ಲೊಕೇಶ್, ನಿರ್ಮಾಪಕ ಸಂದೇಶ್ ನಾಗರಾಜ್ ಸೇರಿ ಅನೇಕರನ್ನ ದೂರ ತಳ್ಳಿದ. ಆನೆ ನಡೆದಿದ್ದೇ ದಾರಿ, ತಾಖತ್ತಿದ್ದರೆ ಕಟ್ಹಾಕು ಎಂಬ ಸವಾಲನ್ನ ಸಿಕ್ಕ ಸಿಕ್ಕವರಿಗೆ ಹಾಕುತ್ತಾ ಚಿತ್ರರಂಗದ ಸಭೆ-ಸಮಾರಂಭಗಳಿಂದ ಅಂತರವನ್ನೂ ಕಾಪಾಡಿಕೊಂಡ. ಎಲ್ಲಾ ಇದ್ದು ಏನೂ ಇಲ್ಲದಂತೆ ದರ್ಶನ್ ಒಬ್ಬಂಟಿಯಂತೆ ಬದುಕಲು ಶುರು ಮಾಡಿದ.
ಇನ್ನೂ ಹಿಂದೆಯೆಲ್ಲ ದರ್ಶನ್ ದಿಕ್ಕು ತಪ್ಪಿದಾಗ ಗದರಲು ರೆಬಲ್ ಸ್ಟಾರ್ ಅಂಬರೀಶ್ ಇದ್ದರು. ಆದರೆ ಈಗ ಅವರು ಇಲ್ಲ. ಹೀಗೆ ಹುಲಿ ಸಿಂಹಗಳನ್ನ ದತ್ತು ಪಡೆಯುವ, ತನ್ನನ್ನ ತಾನು ಆನೆಗೆ ಹೋಲಿಸಿಕೊಳ್ಳುವ ಮನೆ ತುಂಬ ನಾಯಿಗಳ ಜೊತೆ ದಿಕ್ಕು ತಪ್ಪಿಸುವ ನರಿಗಳನ್ನ ಸಾಕಿಕೊಂಡ ಪರಿಣಾಮ ಇವತ್ತು ಕಣ್ಮುಂದೆಯೇ ಇದೆ. ಗೊತ್ತ್ ಇಲ್ಲ ಈ ಪ್ರಕರಣದಲ್ಲಿ ಕೂಡ ದರ್ಶನ್ ಹೊರಬರಬಹುದು. ಹಿಂದೆಯಂತೆ ಈ ಬಾರಿ ಕೂಡ ಇವನ ಅಭಿಮಾನಿಗಳು ಇವನನ್ನ ತಲೆ ಮೇಲೆ ಹೊತ್ತು ಮೆರೆಸಬಹುದು. ಆದರೆ ಸದ್ಯದ ಮಟ್ಟಿಗೆ ಡೆವಿಲ್ ಇಮೇಜ್ ತೇಪೆ ಹಚ್ಚಲು ಆಗದಷ್ಟು ಡ್ಯಾಮೇಜ್ ಆಗಿರುವುದು ಮಾತ್ರ ಸತ್ಯ. ಇನ್ನಾದರೂ ದರ್ಶನ್ ಸುಧಾರಿಸಲಿ ಅನ್ನುವುದು ಎಲ್ಲರ ಆಶಯ


Click it and Unblock the Notifications











