Devil: "ಅಭಿಮಾನಿಗಳಿಗೆ ಹೇಳಿ ಮಾಡಿಸಿದಂತ ಪಕ್ಕಾ ಆಕ್ಷನ್ ಸಿನಿಮಾ 'ಡೆವಿಲ್'": ಮಿಲನಾ ಪ್ರಕಾಶ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 57ನೇ ಸಿನಿಮಾ ಮುಹೂರ್ತ ಇತ್ತೀಚೆಗೆ ನೆರವೇರಿತ್ತು. ಚಿತ್ರಕ್ಕೆ 'ಡೆವಿಲ್' ಎನ್ನುವ ಟೈಟಲ್ ಫಿಕ್ಸ್ ಆಗಿದೆ. ನಗರದ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ಪೂಜೆ ನೆರವೇರಿಸಿ ಸಿನಿಮಾ ಆರಂಭಿಸಲಾಗಿದೆ. ಆದರೆ ಸದ್ಯಕ್ಕೆ ಚಿತ್ರೀಕರಣ ಶುರುವಾಗುವುದಿಲ್ಲ ಎಂದು ನಿರ್ದೇಶಕ ಪ್ರಕಾಶ್ ಮಾಹಿತಿ ನೀಡಿದ್ದಾರೆ.
ದರ್ಶನ್ ನಟನೆಯ ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ಊಹಾಪೋಹಗಳಿತ್ತು. ಆದರೆ ಕೆಲ ದಿನಗಳ ಹಿಂದೆಯೇ ಮಿಲನಾ ಪ್ರಕಾಶ್ ನಿರ್ದೇಶನದ ಚಿತ್ರದಲ್ಲಿ ನಟಿಸೋದಾಗಿ ದರ್ಶನ್ ಮಾಹಿತಿ ನೀಡಿದ್ದರು. ಆ ಬಳಿಕ ಪ್ರೇಮ್ ನಿರ್ದೇಶನದ ಕೆವಿಎನ್ ಪ್ರೊಡಕ್ಷನ್ ಸಿನಿಮಾ ಕೂಡ ಅನೌನ್ಸ್ ಆಗಿತ್ತು. ಆದರೂ ಹೇಳಿದಂತೆ ಪ್ರಕಾಶ್ ನಿರ್ದೇಶನದ ಚಿತ್ರದಲ್ಲಿ ಮೊದಲು ದರ್ಶನ್ ನಟಿಸುತ್ತಿದ್ದಾರೆ. ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಚಿತ್ರದ ಹಾಡುಗಳ ಚಿತ್ರೀಕರಣ ಬಾಕಿಯಿದೆ.

'ಡೆವಿಲ್' ಸಿನಿಮಾ ಬಗ್ಗೆ ನಿರ್ದೇಶಕ ಪ್ರಕಾಶ್ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ. "ಕಾಟೇರ ಸಿನಿಮಾ ಶೂಟಿಂಗ್ ಸಂಪೂರ್ಣವಾಗಿ ಮುಗಿದ ಮೇಲೆಯೇ ನಾವು ಸೆಟ್‌ಗೆ ಹೋಗುವುದು. ನವೆಂಬರ್ 2ರಂದು ಒಳ್ಳೆಯ ದಿನ ಎನ್ನುವ ಕಾರಣಕ್ಕೆ ಸರಳವಾಗಿ ಪೂಜೆ ನೆರವೇರಿಸಿದ್ದೇವೆ ಅಷ್ಟೆ. ಅದೇ ಕಾರಣಕ್ಕೆ ಯಾವುದೇ ಸುದ್ದಿಗೋಷ್ಠಿ ಕೂಡ ನಡೆಸಲಿಲ್ಲ. ಮುಂದೆ ಸುದ್ದಿಗೋಷ್ಠಿ ನಡೆಸಿ ಸಿನಿಮಾ ಬಗ್ಗೆ ಮಾಹಿತಿ ನೀಡುತ್ತೇವೆ" ಎಂದಿದ್ದಾರೆ.
ಫ್ಯಾಮಿಲಿ ಎಮೋಷನ್ ಇರುವಂತಹ ಸಿನಿಮಾಗಳನ್ನು ಪ್ರಕಾಶ್ ಮಾಡುತ್ತಾ ಬರ್ತಿದ್ದಾರೆ. ಈ ಹಿಂದೆ ದರ್ಶನ್ ಹಾಗೂ ಪ್ರಕಾಶ್ ಕಾಂಬಿನೇಷನ್‌ನಲ್ಲಿ 'ತಾರಕ್' ಸಿನಿಮಾ ಬಂದಿತ್ತು. ಅದರಲ್ಲೂ ತಾತ ಮೊಮ್ಮಗನ ಬಾಂಧವ್ಯದ ಕತೆ ಇತ್ತು. ಹಾಗಾಗಿ ದರ್ಶನ್ ಮುಂದಿನ ಸಿನಿಮಾ ಕತೆ ಏನು ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. 'ಡೆವಿಲ್' ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ ಎನ್ನುವ ಗುಸುಗುಸು ಕೂಡ ಕೇಳಿಬಂದಿತ್ತು. ಈ ಬಗ್ಗೆ ಪ್ರಕಾಶ್ ಮಾತನಾಡಿ "'ಡೆವಿಲ್' ಟೈಟಲ್‌ಗೆ ತಕ್ಕಂತೆ ಪಕ್ಕಾ ಆಕ್ಷನ್ ಸಿನಿಮಾ. ಅಭಿಮಾನಿಗಳು ಕೇಳುವಂತಹ ಮನರಂಜನೆಯ ಅಂಶಗಳು ಈ ಚಿತ್ರದಲ್ಲಿ ಇರಲಿದೆ. ಇದು ಅಭಿಮಾನಿಗಳಿಗಾಗಿಯೇ ಮಾಡುತ್ತಿರುವ ಸಿನಿಮಾ" ಎಂದಿದ್ದಾರೆ.
"ನಾಯಕಿ ಸೇರಿದಂತೆ ಇನ್ನುಳಿದ ಕಲಾವಿದರು ಹಾಗೂ ತಂತ್ರಜ್ಞರ ಆಯ್ಕೆ ನಡೆಯುತ್ತಿದೆ. ಈ ತಿಂಗಳಾಂತ್ಯಕ್ಕೆ ನಮ್ಮ ಸಂಪೂರ್ಣ ತಂಡ ಸಿದ್ಧವಾಗಲಿದೆ. 'ಕಾಟೇರ' ಸಿನಿಮಾ ಚಿತ್ರೀಕರಣದ ಬಳಿಕ 'ಡೆವಿಲ್' ಶೂಟಿಂಗ್ ಶುರುವಾಗುತ್ತದೆ" ಎಂದರು. ಅಂದಹಾಗೆ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಇರಲಿದೆ. ಇನ್ನುದ ದೇಶ ವಿದೇಶದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ತಯಾರಿ ನಡೆಸುತ್ತಿರುವುದಾಗಿ ಮಾಹಿತಿ ಸಿಗುತ್ತಿದೆ.
ದರ್ಶನ್- ಪ್ರಕಾಶ್ ಜೋಡಿಯ 'ತಾರಕ್' ಸಿನಿಮಾ ಬಂದೋಗಿ ಬರೋಬ್ಬರಿ 6 ವರ್ಷ ಕಳೆದಿದೆ. ಈ ನಡುವೆ ಪ್ರಕಾಶ್ ಮತ್ಯಾವುದೇ ಸಿನಿಮಾ ಕೈಗೆತ್ತಿಕೊಳ್ಳಲಿಲ್ಲ. ನಡುವೆ ಕೊರೋನಾ ಲಾಡ್‌ಡೌನ್ ಕೂಡ ಕೊಂಚ ಹಿನ್ನಡೆ ಮಾಡಿತ್ತು. ಇದೀಗ ಅಂತೂ ಇಂತೂ ಹೊಸ ಸಿನಿಮಾ ಶುರುವಾಗಿದೆ. ಮುಹೂರ್ತದ ದಿನವೇ ಜಬರ್ದಸ್ತ್ ಟೈಟಲ್ ಕೂಡ ರಿವೀಲ್ ಆಗಿದೆ.
ದರ್ಶನ್ ನಟಿಸಿದ 'ಕ್ರಾಂತಿ' ಸಿನಿಮಾ ಈ ವರ್ಷದ ಆರಂಭದಲ್ಲಿ ರಿಲೀಸ್ ಆಗಿತ್ತು. ದೊಡ್ಡಮಟ್ಟದಲ್ಲಿ ಓಪನಿಂಗ್ ಪಡೆದುಕೊಂಡಿದ್ದ ಸಿನಿಮಾ 100 ಕೋಟಿಗೂ ಅಧಿಕ ಬ್ಯುಸಿನೆಸ್ ಮಾಡಿತ್ತು. 'ಕಾಟೇರ'ಗೂ ಮುನ್ನ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದರುವ 'ಗರಡಿ' ಸಿನಿಮಾ ತೆರೆಗೆ ಬರಲಿದೆ. ಮುಂದಿನ ವಾರವೇ ಯಶಸ್ ಸೂರ್ಯ ನಟನೆಯ 'ಗರಡಿ' ಸಿನಿಮಾ ತೆರೆಗಪ್ಪಳಿಸಲಿದೆ.
ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಚಿತ್ರದಲ್ಲಿ ನಾಯಕ ಸೂರಿ ಸಹೋದರ ಶಂಕರನ ಪಾತ್ರದಲ್ಲಿ ದರ್ಶನ್ ಮಿಂಚಿದ್ದಾರೆ. ಕೆಲವೇ ನಿಮಿಷಗಳು ಸಿನಿಮಾದಲ್ಲಿದ್ದರೂ ಪಾತ್ರಕ್ಕೆ ಬಹಳ ಮಹತ್ವ ಇದೆ ಎನ್ನಲಾಗ್ತಿದೆ. ಬಿ. ಸಿ ಪಾಟೀಲ್ 'ಗರಡಿ' ಸಿನಿಮಾ ನಿರ್ಮಿಸಿ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ. ಸೋನಲ್ ಮಂತೆರೋ ನಾಯಕಿಯಾಗಿ ಮಿಂಚಿದ್ದು ಸದ್ಯ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ.


Click it and Unblock the Notifications











