ದರ್ಶನ್ 'ಡೆವಿಲ್' ರಾಜಸ್ಥಾನ ಶೂಟಿಂಗ್ ಅಪ್‌ಡೇಟ್; ಯಾರೆಲ್ಲಾ ಇದ್ರು, ಏನೆಲ್ಲಾ ಸೆರೆ ಹಿಡಿದ್ರು?
ನಟ ದರ್ಶನ್ ಅಭಿನಯದ 'ಡೆವಿಲ್' ಸಿನಿಮಾ 3ನೇ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಮೈಸೂರಿನಲ್ಲಿ 2ನೇ ಶೆಡ್ಯೂಲ್ ಮುಗಿಸಿ ಚಿತ್ರತಂಡ 10 ದಿನಗಳ ಹಿಂದೆ ಜೈಪುರಕ್ಕೆ ತಂಡ ತೆರಳಿತ್ತು. ಇದೀಗ ಅಲ್ಲಿ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್ ಜೊತೆ ದರ್ಶನ್ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷ ದಸರಾ ವೇಳೆಗೆ 'ಡೆವಿಲ್' ಸಿನಿಮಾ ತೆರೆಗೆ ಬರಬೇಕಿತ್ತು. ಬಳಿಕ ಡಿಸೆಂಬರ್‌ನಲ್ಲಿ ಸಿನಿಮಾ ರಿಲೀಸ್ ಎಂದು ಚಿತ್ರತಂಡ ಹೇಳಿತ್ತು. ಅಷ್ಟರಲ್ಲಿ ರೇಣುಕಾಸ್ವಾಮಿ ಪ್ರಕರಣ ಬೆಳಕಿಗೆ ಬಂದು ಎಲ್ಲಾ ಉಲ್ಟಾ ಆಗಿತ್ತು. ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಜೈಲು ಸೇರಿದ್ದರು. 5 ತಿಂಗಳ ಬಳಿಕ ಜಾಮೀನು ಪಡೆದು ಬಿಡುಗಡೆ ಆಗಿದ್ದರು.

ಜೈಲಿನಿಂದ ಹೊರಬಂದ ಬಳಿಕ ಬೆನ್ನು ನೋವಿನ ಸಮಸ್ಯೆಯಿಂದ ದರ್ಶನ್ ಬಳಲುತ್ತಿದ್ದಾರೆ. 4 ತಿಂಗಳ ಕಾಲ ವಿಶ್ರಾಂತಿ ಪಡೆದ ದರ್ಶನ್ ಬಳಿಕ ಸಿನಿಮಾ ಚಿತ್ರೀಕರಣಕ್ಕೆ ಸೈ ಎಂದಿದ್ದರು. ಮೈಸೂರಿನ ಲಲಿತ್ ಮಹಲ್‌ನಲ್ಲಿ ನಾಲ್ಕೈದು ದಿನ ಒಂದಷ್ಟು ದೃಶ್ಯಗಳನ್ನು ಸೆರೆ ಹಿಡಿಯಲಾಗಿತ್ತು. ನಟಿ ಶರ್ಮಿಳಾ ಮಾಂಡ್ರೆ ಕೂಡ ತಂಡವನ್ನು ಸೇರಿಕೊಂಡಿದ್ದರು.
10 ತಿಂಗಳ ಬಳಿಕ ದರ್ಶನ್ ಬಣ್ಣ ಹಚ್ಚಿ ನಟಿಸಿದ್ದರು. ಆ ನಂತರ ಚಿತ್ರತಂಡ ರಾಜಸ್ಥಾನಕ್ಕೆ ಹೊರಟಿತ್ತು. ಉದಯ್‌ಪುರದ ರಾಫೆಲ್ಸ್(Raffles) ಹೋಟೆಲ್‌ನಲ್ಲಿ ಒಂದು ವಾರದ ಕಾಲ ಒಂದಷ್ಟು ಮಾತಿನ ಭಾಗದ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ದರ್ಶನ್ ಜೊತೆಗೆ ನಾಯಕಿ ರಚನಾ ರೈ, ಅಚ್ಯುತ್ ಕುಮಾರ್ ಹಾಗೂ ಮಹೇಶ್ ಮಂಜ್ರೇಕರ್ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು.
ಸದ್ಯ ವಿಜಯಲಕ್ಷ್ಮಿ ದರ್ಶನ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿರುವುದು ಕೂಡ ಉದಯ್‌ಪುರದ ರಾಫೆಲ್ಸ್ ಹೋಟೆಲ್ ಫೋಟೊ ಎನ್ನಲಾಗ್ತಿದೆ. ಅಲ್ಲೇ ಚಿತ್ರೀಕರಣ ನಡೆದಿದೆ. 35ಕ್ಕೂ ಹೆಚ್ಚು ಜನರ ತಂಡ ಅಲ್ಲಿ ಬೀಡು ಬಿಟ್ಟಿತ್ತು. ಬಹಳ ಅದ್ಧೂರಿಯಾಗಿ ಪ್ರಕಾಶ್ ಚಿತ್ರವನ್ನು ಕಟ್ಟಿಕೊಡುತ್ತಿದ್ದಾರೆ. ತಾವೇ ನಿರ್ಮಾಪಕರು ಆಗಿದ್ದು ಯಾವುದೇ ವಿಚಾರದಲ್ಲಿ ರಾಜಿಯಾಗದೇ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ.

ಉದಯ್‌ಪುರ್ ಶೆಡ್ಯೂಲ್ ಬಳಿಕ ಮತ್ತೊಂದು ಶೆಡ್ಯೂಲ್ ಚಿತ್ರೀಕರಣಕ್ಕೆ 'ಡೆವಿಲ್' ಚಿತ್ರತಂಡ ತಯಾರಿ ನಡೆಸುತ್ತಿದೆ. ಮುಂದೆ ಹೈದರಾಬಾದ್‌ಗೆ ಚಿತ್ರೀಕರಣಕ್ಕೆ ತೆರಳಲು ತಂಡ ಪ್ಲ್ಯಾನ್ ಮಾಡುತ್ತಿದೆ. ಮತ್ತೊಂದು ಕಡೆ ಬೆಂಗಳೂರಿನಲ್ಲೇ ಸೆಟ್ ಹಾಕಿ ಫೈಟ್ ಶೂಟ್ ಮಾಡುವ ಲೆಕ್ಕಾಚಾರ ನಡೀತಿದೆ. ರಾಮ್ ಲಕ್ಷ್ಮಣ್ ಮಾಸ್ಟರ್ ಸ್ಟಂಟ್ ಕಂಪೋಸ್ ಮಾಡಲಿದ್ದಾರೆ. ಆದರೆ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಆಕ್ಷನ್ ಸನ್ನಿವೇಶ ಚಿತ್ರೀಕರಣಕ್ಕೆ ಇನ್ನು ಗ್ರೀನ್ ಸಿಗ್ನಲ್ ಕೊಟ್ಟಿಲ್ಲ ಎನ್ನಲಾಗ್ತಿದೆ.
ಶತಾಯ ಗತಾಯ ಇದೇ ವರ್ಷ 'ಡೆವಿಲ್' ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ದಸರಾ ತಪ್ಪಿದರೆ ಕ್ರಿಸ್‌ಮಸ್ ವೇಳೆಗೆ ಸಿನಿಆ ಬಿಡುಗಡೆ ಆಗಲಿದೆ. 2023ರಲ್ಲಿ ವರ್ಷದ ಕೊನೆಗೆ 'ಕಾಟೇರ' ಸಿನಿಮಾ ಬಂದು ಬಾಕ್ಸಾಫೀಸ್ ಶೇಕ್ ಮಾಡಿತ್ತು. ಕಳೆದ ವರ್ಷ 'ಡೆವಿಲ್' ಚಿತ್ರವನ್ನು ಅದೇ ಲೆಕ್ಕಾಚಾರದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿತ್ತು. ಆದರೆ ಈ ವರ್ಷ ಮಿಸ್ ಆಗೋದಿಲ್ಲ.
ಮಿಲನಾ ಪ್ರಕಾಶ್ ಹಾಗೂ ದರ್ಶನ್ ಕಾಂಬಿನೇಷನ್‌ನಲ್ಲಿ ಈ ಹಿಂದೆ 'ತಾರಕ್' ಸಿನಿಮಾ ಬಂದು ಗೆದ್ದಿತ್ತು. ಬಳಿಕ ಪ್ರಕಾಶ್ ಯಾವುದೇ ಸಿನಿಮಾ ಮಾಡಿರಲಿಲ್ಲ. 8 ವರ್ಷಗಳ ಬಳಿಕ ಮತ್ತೆ ದರ್ಶನ್ ಜೊತೆಗೆ ಕೈಜೋಡಿಸಿದ್ದಾರೆ. ಕಳೆದ ವರ್ಷ ಮಾರ್ಚ್‌ನಲ್ಲಿ ನಗರದ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಪಬ್ ಸೆಟ್ ಹಾಕಿ ಆಕ್ಷನ್ ಸನ್ನಿವೇಶ ಸೆರೆ ಹಿಡಿಯಲಾಗಿತ್ತು. ಈಗಾಗಲೇ 'ಡೆವಿಲ್' ಟೀಸರ್‌ನಲ್ಲಿ ಅದ್ರ ಝಲಕ್ ನೋಡಿದ್ದೇವೆ.


Click it and Unblock the Notifications











